ಶುಭ್ಮನ್​ಗೆ ವಿಶ್ರಾಂತಿ, ಋತುರಾಜ್​ಗೆ ಅವಕಾಶ; 3ನೇ ಟಿ20ಗೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಶುಭ್ಮನ್​ಗೆ ವಿಶ್ರಾಂತಿ, ಋತುರಾಜ್​ಗೆ ಅವಕಾಶ; 3ನೇ ಟಿ20ಗೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ

ಶುಭ್ಮನ್​ಗೆ ವಿಶ್ರಾಂತಿ, ಋತುರಾಜ್​ಗೆ ಅವಕಾಶ; 3ನೇ ಟಿ20ಗೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ

South Africa vs India 3rd T20I: ದಕ್ಷಿಣ ಆಫ್ರಿಕಾ ಎದುರಿನ ಮಾಡು ಇಲ್ಲವೇ ಮಡಿ 3ನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ತನ್ನ ಆಡುವ 11ರ ಬಳಗದಲ್ಲಿ 3 ಬದಲಾವಣೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಅಂತಿಮ ಚುಟುಕು ಪಂದ್ಯಕ್ಕೆ ಯಾರಿಗೆಲ್ಲಾ ಸಿಗಲಿದೆ ಅವಕಾಶ? ಇಲ್ಲಿದೆ ವಿವರ.

ಶುಭ್ಮನ್​ಗೆ ವಿಶ್ರಾಂತಿ, ಋತುರಾಜ್​ಗೆ ಅವಕಾಶ.
ಶುಭ್ಮನ್​ಗೆ ವಿಶ್ರಾಂತಿ, ಋತುರಾಜ್​ಗೆ ಅವಕಾಶ.

ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಚುಟುಕು ಪಂದ್ಯ (South Africa vs India 3rd T20I) ಇಂದು ನಡೆಯಲಿದೆ. ಉಭಯ ತಂಡಗಳ ಪಾಲಿಗೂ 3ನೇ ಟಿ20 ಮಹತ್ವದ್ದಾಗಿದೆ. ಭಾರತ ಸರಣಿ ಸೋಲಿನ ಮುಖಭಂಗದಿಂದ ಪಾರಾಗಲು ತಯಾರಿ ನಡೆಸುತ್ತಿದೆ. ಮತ್ತೊಂದೆಡೆ ದ.ಆಫ್ರಿಕಾ ತವರಿನಲ್ಲಿ ಸರಣಿಗೆ ಮುತ್ತಿಕ್ಕಲು ಸಜ್ಜಾಗಿದೆ.

ಮೊದಲ ಪಂದ್ಯವು ಮಳೆಯಿಂದ ರದ್ದುಗೊಂಡಿತ್ತು. 2ನೇ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದಡಿ ಸೌತ್ ಆಫ್ರಿಕಾ ಗೆದ್ದು ಸಿರೀಸ್​ನಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ. ಹಾಗಾಗಿ ಇಂದು ಸಹ ಗೆದ್ದು ಸರಣಿ ಕೈವಶಕ್ಕೆ ಸಾಕಷ್ಟು ಯೋಜನೆ ರೂಪಿಸಿದೆ. ಇಂದಿನ ಪಂದ್ಯ ಜೋಹಾನ್ಸ್​​ಬರ್ಗ್​ನ ವಾಂಡರರ್ಸ್​​ನಲ್ಲಿ ನಡೆಯಲಿದೆ.

ಕಣಕ್ಕಿಳಿದ ಎರಡನೇ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್​ ವಿಭಾಗ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಫಾರ್ಮ್​ನಲ್ಲಿರುವ ನಾಯಕ ಸೂರ್ಯಕುಮಾರ್ ಯಾದವ್, ರಿಂಕು ಸಿಂಕ್ ತಲಾ ಅರ್ಧಶತಕ ಸಿಡಿಸಿ ಹೀನಾಯವಾಗಿ ಸೋಲುವುದರಿಂದ ತಪ್ಪಿಸಿದ್ದರು. ಆದರೆ ಅಗ್ರ ಕ್ರಮಾಂಕದ ಬ್ಯಾಟರ್​​ಗಳು ಭಾರಿ ನಿರಾಸೆ ಮೂಡಿಸಿದರು.

ಗಿಲ್ ಬದಲಿಗೆ ಋತುರಾಜ್ ಕಣಕ್ಕೆ

ಬ್ಯಾಟಿಂಗ್​ ವಿಭಾಗದ ಜೊತೆಗೆ ಬೌಲಿಂಗ್​​ನಲ್ಲೂ ಮಿಂಚಿನ ಪ್ರದರ್ಶನ ತೋರಲಿಲ್ಲ ಭಾರತ. ಇದು ಕೂಡ ತಂಡದ ಹಿನ್ನಡೆಗೆ ಕಾರಣವಾಯಿತು. ಅನುಭವಿ ಬೌಲರ್​ಗಳು ವಿಕೆಟ್ ಬೇಟೆಯಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಅಂತಿಮ ಹಾಗೂ 3ನೇ ಟಿ20 ಪಂದ್ಯಕ್ಕೆ ತಂಡದಲ್ಲಿ ಹಲವು ಬದಲಾವಣೆಗೆ ಟೀಮ್ ಮ್ಯಾನೇಜ್​ಮೆಂಟ್ ಚಿಂತಿಸಿದೆ.

ಆರಂಭಿಕರಾಗಿದ್ದ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಇಬ್ಬರೂ 2ನೇ ಪಂದ್ಯದಲ್ಲಿ ಡಕೌಟ್ ಆಗಿದ್ದರು. ಆದರೀಗ ಗಿಲ್​ಗೆ ವಿಶ್ರಾಂತಿ ನೀಡಿ ಋತುರಾಜ್ ಗಾಯಕ್ವಾಡ್​ರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ. 3ನೇ ಕ್ರಮಾಂಕದಲ್ಲಿ 29 ರನ್​ಗಳ ಕಾಣಿಕೆ ನೀಡಿದ್ದ ತಿಲಕ್​ ವರ್ಮಾ ಮತ್ತೊಮ್ಮೆ ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ.

ಜಿತೇಶ್ ಅಥವಾ ಇಶಾನ್?

ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಆಟಗಾರರನ್ನು ರೊಟೇಟ್ ಮಾಡುವ ಪ್ರಕ್ರಿಯೆಗೂ ಮ್ಯಾನೇಜ್​ಮೆಂಟ್​ ಮುಂದಾಗಿದೆ. 4ನೇ ಸ್ಲಾಟ್​ನಲ್ಲಿ ಸೂರ್ಯಕುಮಾರ್, 6ನೇ ಸ್ಲಾಟ್​ನಲ್ಲಿ ರಿಂಕು ಸಿಂಗ್ ಆಡಲಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ಜಿತೇಶ್​ ಬದಲಿಗೆ 5ನೇ ಸ್ಲಾಟ್​ಗೆ ಇಶಾನ್​ರನ್ನು ತಂದರೂ ಅಚ್ಚರಿ ಇಲ್ಲ.

ಹೆಚ್ಚುವರಿ ಸ್ಪಿನ್ನರ್​ಗೆ ಆದ್ಯತೆ

ಇನ್ನು ಆಲ್​ರೌಂಡರ್​ ರವೀಂದ್ರ ಜಡೇಜಾ ಆಡುವುದು ಬಹುತೇಕ ಖಚಿತ. ಆದರೆ ಅನುಭವಿ ಸ್ಪಿನ್ನರ್​ ಕುಲ್ದೀಪ್ ಬದಲಿಗೆ ಯುವ ಸ್ಪಿನ್ನರ್ ರವಿ ಬಿಷ್ಣೋಯ್​ಗೆ ಮಣೆ ಹಾಕಲು ಚರ್ಚೆ ನಡೆದಿದೆ. ಮತ್ತೊಂದೆಡೆ ಹೆಚ್ಚುವರಿ ಸ್ಪಿನ್ನರ್​ ಆಡಿಸಲು ಸಹ ಯೋಜನೆ ರೂಪಿಸಿದೆ. ಇದು ಸಾಧ್ಯವಾದರೆ ಮೊಹಮ್ಮದ್ ಸಿರಾಜ್​ಗೆ ವಿಶ್ರಾಂತಿ ಸಿಗಲಿದೆ.

ಕಳೆದ ಪಂದ್ಯದಲ್ಲಿ 2 ವಿಕೆಟ್ ಕಿತ್ತ ಮುಕೇಶ್ ಕುಮಾರ್ ಮತ್ತು ಅರ್ಷ್​ದೀಪ್​ ಆಡುವುದು ಖಚಿತ. ಇಂದಿನ ಪಂದ್ಯವನ್ನು ಭಾರತ ಗೆದ್ದರೆ ಸರಣಿ 1-1ರಲ್ಲಿ ಸಮಬಲದೊಂದಿಗೆ ಅಂತ್ಯಗೊಳ್ಳಲಿದೆ. ತಿರುಗಿ ಬೀಳುವ ಲೆಕ್ಕಾಚಾರದಲ್ಲಿರುವ ಯುವ ಭಾರತ ತಂಡವು, ನೆಟ್ಸ್​ನಲ್ಲಿ ಸಾಕಷ್ಟು ವರ್ಕೌಟ್ ಮಾಡಿದ್ದು ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಆದರೆ ಸೌತ್ ಆಫ್ರಿಕಾ 2ನೇ ಪಂದ್ಯಕ್ಕಿಳಿಸಿದ ತಂಡವನ್ನೇ ಆಡಿಸಲು ನಿರ್ಧರಿಸಿದೆ.

3ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ/ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್/ಜಿತೇಶ್ ಶರ್ಮಾ, ರಿಂಕು ಸಿಂಗ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್/ರವಿ ಬಿಷ್ಣೋಯ್, ಮುಕೇಶ್ ಕುಮಾರ್, ಅರ್ಷ್​ದೀಪ್ ಸಿಂಗ್.

3ನೇ ಟಿ20 ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ

ರೀಜಾ ಹೆಂಡ್ರಿಕ್ಸ್, ಮ್ಯಾಥ್ಯೂ ಬ್ರೀಟ್ಜ್ಕೆ, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಆಂಡಿಲ್ ಫೆಹ್ಲುಕ್ವಾಯೊ, ನಾಂಡ್ರೆ ಬರ್ಗರ್, ಲಿಜಾಡ್ ವಿಲಿಯಮ್ಸ್, ತ್ರಬೈಜ್ ಶಂಸಿ, ಒಟ್ನಿಯಲ್ ಬಾರ್ಟ್ಮನ್.

Whats_app_banner