ಅನ್ಸೋಲ್ಡ್ ಆಗಿದ್ದೇವೆಂದು ಚಿಂತೆ ಬೇಡ; ಐಪಿಎಲ್ ಆಡಲು ಮತ್ತೆ ಸಿಗಲಿದೆ ಅವಕಾಶ, ಮಾರಾಟವಾಗದವರು ಆಯ್ಕೆಯಾಗುವುದು ಹೇಗೆ?
IPL 2025 Auction: ಐಪಿಎಲ್ ಆಕ್ಷನ್ನಲ್ಲಿ ಮಾರಾಟವಾಗಿಲ್ಲ ಎಂದು ಆಟಗಾರರು ನಿರಾಸೆಯಾಗುವ ಅಗತ್ಯ ಇಲ್ಲ. ಅಂತಹ ಆಟಗಾರರಗೆ ಮತ್ತೊಂದು ಅವಕಾಶ ಇದೆ. ಹೇಗೆ ಎಂಬುದನ್ನು ಮುಂದೆ ತಿಳಿಯೋಣ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025 Mega Auction) ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. 10 ಫ್ರಾಂಚೈಸಿಗಳು 18 ನೇ ಆವೃತ್ತಿಗೂ ಮುನ್ನ ಅಳೆದು ತೂಗಿ ಬಲಿಷ್ಠ ತಂಡಗಳನ್ನು ಕಟ್ಟಿವೆ. ಅನೇಕರಿಗೆ ಲಾಟರಿ ಹೊಡೆದಿದೆ. ಕಳೆದ ಆವೃತ್ತಿಗಳಲ್ಲಿ ಮಿಂಚಿದ ಯುವ ಆಟಗಾರರು ಉತ್ತಮ ಮೊತ್ತಕ್ಕೆ ಸೇಲಾದರು. ಆದರೆ, ಕ್ರಿಕೆಟ್ ಲೋಕದಲ್ಲಿ ಹಲವು ವರ್ಷಗಳ ಮಿಂಚಿರುವ ಆಟಗಾರರೇ ಅನ್ಸೋಲ್ಡ್ ಆಗಿದ್ದು ಭಾರೀ ನಿರಾಸೆ ಮೂಡಿಸಿತು. ಆದರೆ ಅಂತಹ ಆಟಗಾರರು ನಿರಾಸೆಯಾಗುವ ಅಗತ್ಯ ಇಲ್ಲ. ಮಾರಾಟವಾಗದೆ ಉಳಿದ ಆಟಗಾರರಿಗೆ ಮತ್ತೊಂದು ಅವಕಾಶ ಇದೆ. ಹೇಗೆ ಎಂಬುದನ್ನು ಮುಂದೆ ತಿಳಿಯೋಣ.
ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ 62 ವಿದೇಶಿ ಆಟಗಾರರು ಸೇರಿದಂತೆ 182 ಮಂದಿ ಬಿಕರಿಯಾದರು. ಇಷ್ಟು ಮಂದಿಗೆ ಒಟ್ಟು 639.15 ಕೋಟಿ ಖರ್ಚು ಮಾಡಲಾಗಿದೆ. ರಿಷಭ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (LSG) ಪಂತ್ ಅವರನ್ನು 27 ಕೋಟಿ, ಪಂಜಾಬ್ ಕಿಂಗ್ಸ್ (PBKS) ಶ್ರೇಯಸ್ ಅವರನ್ನು 26.5 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ ವೆಂಕಟೇಶ್ ಅವರನ್ನು 23.75 ಕೋಟಿಗೆ ಖರೀದಿಸಿದೆ.
ಆದಾಗ್ಯೂ, ಬಿಡ್ ಪಡೆಯಲು ವಿಫಲವಾದ ಮತ್ತು ಮಾರಾಟವಾಗದ ಅನೇಕ ಆಟಗಾರರಿಗೆ ಭಾರೀ ನಿರಾಸೆಯಾಗಿದೆ. ಐಪಿಎಲ್‌ನ ಶ್ರೇಷ್ಠ ವಿದೇಶಿ ಆಟಗಾರರಲ್ಲಿ ಒಬ್ಬರಾಗಿರುವ ಡೇವಿಡ್ ವಾರ್ನರ್ ಅವರು ಯಾರಿಗೂ ಬೇಡವಾದರು. ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಅದೇ ನಿರಾಸೆ ಅನುಭವಿಸಿದರು. ಪೃಥ್ವಿ ಶಾ, ಸರ್ಫರಾಜ್ ಖಾನ್, ಶಾರ್ದೂಲ್ ಠಾಕೂರ್, ಮಯಾಂಕ್ ಅಗರ್ವಾಲ್, ಉಮೇಶ್ ಯಾದವ್ ಸೇರಿದಂತೆ ಪ್ರಮುಖರೇ ಒಪ್ಪಂದ ಪಡೆಯುವಲ್ಲಿ ವಿಫಲರಾದರು. ಆದರೆ ಈ ಎಲ್ಲಾ ಆಟಗಾರರಿಗೆ ಮತ್ತೊಂದು ಅವಕಾಶ ಇರಲಿದೆ.
ಮಾರಾಟವಾಗದ ಆಟಗಾರರು ಆಯ್ಕೆಯಾಗುವುದು ಹೇಗೆ?
ಹರಾಜಿನಲ್ಲಿ ಮಾರಾಟವಾಗಿಲ್ಲ ಎಂದು ನಿರಾಸೆಯಾಗಬೇಡಿ. ನಿಮಗೆ ಮತ್ತೊಂದು ಅವಕಾಶ ಸಿಗಲಿದೆ. ಆದರೆ ಇಲ್ಲೂ ಅದೃಷ್ಟ ಪರೀಕ್ಷೆ ಇದ್ದೇ ಇರುತ್ತದೆ. ಹಾಗಂತ ಮತ್ತೊಮ್ಮೆ ಹರಾಜು ನಡೆಯುತ್ತದೆ ಎಂದರ್ಥವಲ್ಲ. ಲೀಗ್‌ನ ಭಾಗವಾಗಲು 2ನೇ ಅವಕಾಶ ನೀಡಬಹುದು. ಯಾವುದೇ ಫ್ರಾಂಚೈಸಿಯ ಆಟಗಾರರ ಗಾಯಗೊಂಡರೆ, ಆ ಸ್ಥಾನಕ್ಕೆ ಹರಾಜಿಗೆ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದ ಆಟಗಾರನನ್ನು ಆಯ್ಕೆ ಮಾಡುವ ಅವಕಾಶ ಇದೆ. ಇದು ಎಲ್ಲಾ ಮಾರಾಟವಾಗದ ಭಾರತ ಮತ್ತು ವಿದೇಶಿ ಆಟಗಾರರಿಗೆ ಅನ್ವಯವಾಗುತ್ತದೆ. ಆದರೆ ಮೂಲ ಬೆಲೆ ತಂಡಕ್ಕೆ ಸೇರ್ಪಡೆಯಾಗಬೇಕಾಗುತ್ತದೆ.