8ನೇ ತರಗತಿಯ ವೈಭವ್ ಗೆ ಐಪಿಎಲ್ ಹರಾಜಿನಲ್ಲಿ 1 ಕೋಟಿ 10 ಲಕ್ಷ ರೂ ಕೊಟ್ಟು ಖರೀದಿಸಿದ್ದು ಏಕೆ? ಕಾರಣ ತಿಳಿಸಿದ ಆರ್ ಆರ್ ಕೋಚ್ ದ್ರಾವಿಡ್
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ 13 ವರ್ಷದ ವೈಭವ್ ಸೂರ್ಯವಂಶಿಯನ್ನು ಖರೀದಿಸಿದೆ ಎಂದು ರಾಜಸ್ಥಾನ್ ರಾಯಲ್ಸ್ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಸೂರ್ಯವಂಶಿ ಪ್ರಸ್ತುತ 8 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಸೂರ್ಯವಂಶಿಯನ್ನು ಖರೀದಿಸಲು ಕಾರಣವೇನು ಎಂಬುದನ್ನು ಆರ್ ಆರ್ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಹಿರಂಗಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂಬರುವ 18ನೇ ಆವೃತ್ತಿಯ ಟೂರ್ನಿಗಾಗಿ ರಾಜಸ್ಥಾನ್ ರಾಯಲ್ಸ್ ತಂಡ 13 ವರ್ಷದ ವೈಭವ್ ಸೂರ್ಯವಂಶಿ ಅವರನ್ನು 1 ಕೋಟಿ 10 ಲಕ್ಷ ರೂಪಾಯಿಗೆ ಖರೀದಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ದೊಡ್ಡ ದೊಡ್ಡ ತಾರಾ ಆಟಗಾರರ ಖರೀದಿ, ಅನ್ ಸೋಲ್ಡ್ ನಡುವೆ ಈ ಬಾರಿಯ (ಐಪಿಎಲ್ ಹರಾಜು 2025) ಹರಾಜಿನಲ್ಲಿ ವೈಭವ್ ಸೂರ್ಯ ಬಾರಿ ಕಮಾಲ್ ಮಾಡಿದರು. ಐಪಿಎಲ್ ಗುತ್ತಿಗೆ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಈ ಬಾಲಕನ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಇದರ ನಡುವೆಯೇ ಇನ್ನೂ 8ನೇ ತರಗತಿ ಓದುತ್ತಿರುವ 13 ವರ್ಷದ ವೈಭವ್ ಸೂರ್ಯವಂಶಿಯನ್ನು ರಾಜಸ್ಥಾನ ರಾಯಲ್ ತಂಡ ಐಪಿಎಲ್ ಹರಾಜಿನಲ್ಲಿ ಖರೀದಿಸಿದ್ದು ಏಕೆ ಎಂಬುದರ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಮುಕ್ತವಾಗಿ ಮಾತನಾಡಿದ್ದಾರೆ.
ವೈಭವ್ ಸೂರ್ಯವಂಶಿಯ ಖರೀದಿಯಿಂದ ಆತನು ಏಳಿಗೆ ಹೊಂದಲು ತಮ್ಮ ತಂಡವು ಉತ್ತಮ ವಾತಾವರಣವನ್ನು ಒದಗಿಸುತ್ತದೆ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಆತ ಉತ್ತಮ ಕೌಶಲ್ಯಗಳನ್ನು ಹೊಂದಿದ್ದಾನೆ ಎಂದು ನಾನು ಭಾವಿಸುತ್ತೇನೆ. ಆತನು ಅಭಿವೃದ್ಧಿ ಹೊಂದಲು ನಾವು ಉತ್ತಮ ವಾತಾವರಣವನ್ನು ಒದಗಿಸಬಹುದು ಎಂದು ನಾವು ಭಾವಿಸಿದ್ದೇವೆ ಎಂದು ದ್ರಾವಿಡ್ ಐಪಿಎಲ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ ವಿವರಿಸಿದ್ದಾರೆ.
ಇದೀಗ ವೈಭವ್ ನಮ್ಮ ತಂಡಕ್ಕೆ ಬಂದಿದ್ದಾನೆ. ಇದನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತು ಎಂದು ಹೇಳಿದ್ದಾರೆ. ಹರಾಜಿನಲ್ಲಿ ಸೂರ್ಯವಂಶಿ ಅವರ ಮೂಲ ಬೆಲೆ 30 ಲಕ್ಷ ರೂ.ಗಳಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಿಡ್ ಮಾಡಿತು. ಡೆಲ್ಲಿಯನ್ನು ಸೋಲಿಸುವ ಮೂಲಕ ರಾಜಸ್ಥಾನ್ ಈ ಆಟಗಾರನನ್ನು ಖರೀದಿಸಿತು. ಸೂರ್ಯವಂಶಿ ಇತ್ತೀಚೆಗೆ ಚೆನ್ನೈನಲ್ಲಿ ಆಸ್ಟ್ರೇಲಿಯಾ ಅಂಡರ್ -19 ತಂಡದ ವಿರುದ್ಧ ಭಾರತ ಅಂಡರ್ -19 ತಂಡದ ಯೂತ್ ಟೆಸ್ಟ್ ನಲ್ಲಿ ಶತಕ ಗಳಿಸಿದ್ದ. ಈ ಮನ್ನಣೆ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಪಂದ್ಯದಲ್ಲಿ ಸೂರ್ಯವಂಶಿ 62 ಎಸೆತಗಳಲ್ಲಿ 104 ರನ್ ಗಳಿಸಿದ್ದ.
ರಾಜಸ್ಥಾನ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರ ಪರ ಟಿ20 ಗೆ ಪಾದಾರ್ಪಣೆ ಮಾಡಿರುವ ವೈಭವ್ ಆರು ಎಸೆತಗಳಲ್ಲಿ 13 ರನ್ ಗಳಿಸಿದರು. ಜೂನಿಯರ್ ಸರ್ಕ್ಯೂಟ್ ನಲ್ಲಿ ಸುದ್ದಿಯಲ್ಲಿರುವ ಸೂರ್ಯವಂಶಿ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಯಾವುದೇ ಪ್ರಮುಖ ಇನ್ನಿಂಗ್ಸ್ ಗಳನ್ನು ಆಡಿಲ್ಲ. ಅವರು ಐದು ಪಂದ್ಯಗಳಲ್ಲಿ 10 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಬಿಹಾರದ ಸಮಸ್ತಿಪುರ ಮೂಲದ ಸೂರ್ಯವಂಶಿ 2024ರ ರಣಜಿ ಟ್ರೋಫಿ ಋತುವಿನಲ್ಲಿ ಬಿಹಾರ ಪರ ಪಾದಾರ್ಪಣೆ ಮಾಡಿದರು, ಅಧಿಕೃತ ದಾಖಲೆಯ ಪ್ರಕಾರ ಆಗ ವೈಭವ್ ಗೆ 12 ವರ್ಷ 284 ದಿನಗಳದ್ದಾಗಿತ್ತು, ರಣಜಿ ಇತಿಹಾಸದಲ್ಲಿ ಈತ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2025 ರಲ್ಲಿ ನಡೆಯಲಿರುವ ಐಪಿಎಲ್ ಮಹಾ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ವೈಭವ್ ಅಖಾಡಕ್ಕೆ ಇಳಿಯಲಿದ್ದಾರೆ. ಹೊಡಿ ಬಡಿ ಟೂರ್ನಿಯಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ, ತಂಡ ಇವರನ್ನು ಆಡುವ 11ರ ಬಳಗದಲ್ಲಿ ಕಣಕ್ಕೆ ಇಳಿಸುತ್ತಾ ಅಥವಾ ಬೆಂಚ್ ಕಾಯಿಸುತ್ತಾ ಎಂಬುದನ್ನು 2025ರ ಮಾರ್ಚ್ 14 ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಗೊತ್ತಾಗಲಿದೆ.