Sanju Samson: ಸಂಜು ಸ್ಯಾಮ್ಸನ್ ಸತತ 2ನೇ ಶತಕ; ಒಂದಲ್ಲ, ಎರಡಲ್ಲ, 7 ದಾಖಲೆ ಪುಡಿಗಟ್ಟಿದ ವಿಕೆಟ್ ಕೀಪರ್
Sanju Samson records: ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಭರ್ಜರಿ ಶತಕ ಸಿಡಿಸಿ ಹಲವು ದಾಖಲೆ ಬರೆದರು.
ಡರ್ಬನ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ, 61 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಕೆಲವು ವರ್ಷಗಳಲ್ಲಿ ಅಪರೂಪಕ್ಕೆ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದ ಸಂಜು ಸ್ಯಾಮ್ಸನ್, ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆಗಳ ಬೇಟೆಯಾಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 8 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು. ಸಂಜು 50 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್ ಸಹಿತ 107 ರನ್ ಗಳಿಸಿದರು. ಉಳಿದವರು ಯಾರೂ ಸಾಥ್ ನೀಡಲಿಲ್ಲ. ತಿಲಕ್ ವರ್ಮಾ 33 ರನ್ ಗಳಿಸಿದ್ದು ಎರಡನೇ ಗರಿಷ್ಠ ಸ್ಕೋರ್. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ, 17.5 ಓವರ್ಗಳಲ್ಲಿ 141 ರನ್ ಗಳಿಸಿ ಆಲೌಟ್ ಆಯಿತು. ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ ತಲಾ 3 ವಿಕೆಟ್ ಪಡೆದು ಎದುರಾಳಿ ತಂಡದ ಕುಸಿತಕ್ಕೆ ಕಾರಣರಾದರು. ಹೆನ್ರಿಚ್ ಕ್ಲಾಸೆನ್ 25 ರನ್ ಗಳಿಸಿದ್ದೇ ಸೌತ್ ಆಫ್ರಿಕಾ ಪರ ಗರಿಷ್ಠ ಸ್ಕೋರ್.
ಸಂಜು ಸ್ಯಾಮ್ಸನ್ ದಾಖಲೆಗಳ ಪಟ್ಟಿ
ಸಂಜು ತನ್ನ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಂಜು, ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲೂ ನೂರರ ಗಡಿ ದಾಟಿದ್ದಾರೆ. ಆ ಮೂಲಕ ಹಲವು ದಾಖಲೆ ಬರೆದಿದ್ದಾರೆ.
- ಡರ್ಬನ್‌ನಲ್ಲಿನ ಶತಕವು ಭಾರತದ ಬ್ಯಾಟರ್ ಗಳ ಗಣ್ಯರ ಪಟ್ಟಿಗೆ ಸೇರಲು ಸ್ಯಾಮ್ಸನ್‌ಗೆ ಸಹಾಯ ಮಾಡಿತು. ಸುರೇಶ್ ರೈನಾ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಚುಟುಕು ಕ್ರಿಕೆಟ್ನಲ್ಲಿ ನೂರು ಬಾರಿಸಿದ್ದರು. ಸತತ ಎರಡು ಶತಕ ಸಿಡಿಸಿದ ಮೊದಲ ಭಾರತೀಯ. (ಕೊನೆಯ ಶತಕ ಬಾಂಗ್ಲಾದೇಶ ವಿರುದ್ಧ)
- ಸ್ಯಾಮ್ಸನ್, ಸೂರ್ಯಕುಮಾರ್ ನಂತರ ದಕ್ಷಿಣ ಆಫ್ರಿಕಾದಲ್ಲಿ ಟಿ20ಐ ಶತಕ ಗಳಿಸಿದ 2ನೇ ಭಾರತೀಯ ಬ್ಯಾಟರ್ ಆಗಿದ್ದಾರೆ. 2023ರ ಡಿಸೆಂಬರ್ 14ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಸೂರ್ಯ 56 ಎಸೆತಗಳಲ್ಲಿ 100 ರನ್ ಗಳಿಸಿದರು.
- ಟಿ20ಐಗಳಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ಸ್ಯಾಮ್ಸನ್, ರೋಹಿತ್ ಶರ್ಮಾ (5), ಸೂರ್ಯಕುಮಾರ್ ಯಾದವ್ (4) ಮತ್ತು ಕೆಎಲ್ ರಾಹುಲ್ (2) ಜೊತೆ ಸೇರಿದ್ದಾರೆ.
- 29 ವರ್ಷದ ಸಂಜು ಕ್ಯಾಲೆಂಡರ್ ವರ್ಷದಲ್ಲಿ ಬಹು ಟಿ20ಐ ಶತಕ ಗಳಿಸಿದ 3ನೇ ಭಾರತೀಯರಾದರು. ರೋಹಿತ್ 2018ರಲ್ಲಿ ಇಂಗ್ಲೆಂಡ್ ವಿರುದ್ಧ 100* (ಬ್ರಿಸ್ಟಲ್, ಜುಲೈ 8) ಮತ್ತು ವೆಸ್ಟ್ ಇಂಡೀಸ್ ವಿರುದ್ಧ 111* (ಲಕ್ನೋ, ನವೆಂಬರ್ 6) ಗಳಿಸಿದ ನಂತರ ಈ ಮೈಲಿಗಲ್ಲು ಸಾಧಿಸಿದ ಮೊದಲಿಗರಾಗಿದ್ದರು. ನಂತರ ಸೂರ್ಯಕುಮಾರ್ 2022 ಮತ್ತು 2023ರಲ್ಲಿ ತಲಾ ಎರಡು ಶತಕ ಗಳಿಸಿದ್ದರು. (117 vs ಇಂಗ್ಲೆಂಡ್, 111* vs ನ್ಯೂಜಿಲೆಂಡ್) ಮತ್ತು 2023 (112* vs ಶ್ರೀಲಂಕಾ, 100 vs ಸೌತ್ ಆಫ್ರಿಕಾ).
- ಸ್ಯಾಮ್ಸನ್ 107 ರನ್ ಗಳಿಸಿದ್ದು, ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20ಐಗಳಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಈ ಹಿಂದೆ ಧರ್ಮಶಾಲಾದಲ್ಲಿ ರೋಹಿತ್ ಶರ್ಮಾ 66 ಎಸೆತಗಳಲ್ಲಿ 106 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕಾ ಪರ ಡೇವಿಡ್ ಮಿಲ್ಲರ್ ಕೂಡ ಅಕ್ಟೋಬರ್ 22 ರಂದು 106 ರನ್ ಗಳಿಸಿದ್ದರು.
- ಶತಕದ ಇನ್ನಿಂಗ್ಸ್ನಲ್ಲಿ 10 ಸಿಕ್ಸರ್ ಸಿಡಿಸಿದ ಸಂಜು, ರೋಹಿತ್ ಶರ್ಮಾ ಅವರೊಂದಿಗೆ ಜಂಟಿ ದಾಖಲೆ ಬರೆದರು. ರೋಹಿತ್ 2017ರ ಡಿಸೆಂಬರ್ನಲ್ಲಿ ಶ್ರೀಲಂಕಾ ವಿರುದ್ಧ 10 ಸಿಕ್ಸರ್ ಬಾರಿಸಿದ್ದರು.
- ಸ್ಯಾಮ್ಸನ್ ಈಗ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20ಐ ಪಂದ್ಯದಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ. ರಿಲೀ ರೊಸೊವ್ ಮತ್ತು ಸೂರ್ಯಕುಮಾರ್ ಅವರು ತಲಾ 8 ಸಿಕ್ಸರ್ ಬಾರಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ಇದೀಗ ಸಂಜು ಇವರನ್ನು ಹಿಂದಿಕ್ಕಿದ್ದಾರೆ.