ಆಸ್ಟ್ರೇಲಿಯಾ ಸೋಲಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ ಭಾರತ; ಸೆಮೀಸ್ ರೇಸ್‌ನಿಂದ ಆಸೀಸ್ ಬಹುತೇಕ ಹೊರಕ್ಕೆ
Australia vs India: ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ರೋಚಕ 24 ರನ್‌ಗಳಿಂದ ಮಣಿಸಿದ ಭಾರತ ತಂಡವು ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ. ಭಾರತ ತಂಡವು ಜೂನ್ 27ರಂದು ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಟಿ20 ವಿಶ್ವಕಪ್ 2024ರ ಆವೃತ್ತಿಯಲ್ಲಿ ಭಾರತ ತಂಡವು ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಆಸ್ಟ್ರೇಲಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದ್ದ ಪಂದ್ಯದಲ್ಲಿ ಕಾಂಗರೂಗಳನ್ನು ಸೋಲಿಸಿ ಸೆಮೀಸ್ ಟಿಕೆಟ್ ಗಿಟ್ಟಿಸಿಕೊಂಡಿದೆ. ಸೇಂಟ್ ಲೂಸಿಯಾದ ಡೇರನ್ ಸ್ಯಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೂಪರ್ 8 ಹಂತದ ಪಂದ್ಯದಲ್ಲಿ ಆಸೀಸ್ ತಂಡವನ್ನು ರೋಚಕ 24 ರನ್‌ಗಳಿಂದ ಮಣಿಸಿ, ಆಸೀಸ್ ಸೆಮೀಸ್ ಆಸೆಗೆ ತಡೆ ಒಡ್ಡಿದೆ. ಸದ್ಯ ಸೆಮೀಸ್ ಪ್ರವೇಶಿಸುವ ಅವಕಾಶ ಖಚಿತಪಡಿಸಲು ಇನ್ನೂ ಒಂದು ದಿನ ಆಸೀಸ್ ಕಾಯಬೇಕಿದೆ. ಮಂಗಳವಾರ ಬೆಳಗ್ಗೆ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ತಾನ ಸೋತರೆ ಮಾತ್ರ ಆಸೀಸ್ ಸೆಮಿ ತಲುಪಲಿದೆ. ಒಂದು ವೇಳೆ ಅಫ್ಘನ್ ಗೆದ್ದರೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳಲಿದ್ದು, ಅಫ್ಘಾನಿಸ್ತಾನ ಸೆಮೀಸ್ ಟಿಕೆಟ್ ಪಡೆಯಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ಭಾರತ, ರೋಹಿತ್ ಶರ್ಮಾ ಅವರ ಅಮೋಘ ಅರ್ಧಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಟ್ರಾವಿಸ್ ಹೆಡ್ ಅಬ್ಬರದ ಅರ್ಧಶತಕದ ಹೊರತಾಗಿಯೂ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಲಷ್ಟೇ ಶಕ್ತವಾಯ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ರೋಹಿತ್ ಶರ್ಮಾ, ಮೊದಲ ಓವರ್‌ನಲ್ಲೇ ಬೌಂಡರಿ ಬಾರಿಸುವ ಮೂಲಕ ಭಾರತ ಇನ್ನಿಂಗ್ಸ್ ಶುಭಾರಂಭ ಮಾಡಿದರು. ಆದರೆ, ಜೋಶ್ ಹೇಜಲ್‌ವುಡ್ ಎಸೆದ ಎರಡನೇ ಓವರ್‌ನ ಬೌನ್ಸರ್ ಎಸೆತಕ್ಕೆ ವಿರಾಟ್ ಕೊಹ್ಲಿ ಬಲಿಯಾದರು. ಶೂನ್ಯಕ್ಕೆ ಔಟಾದ ವಿರಾಟ್ ಭಾರತಕ್ಕೆ ಆಘಾತ ಕೊಟ್ಟರು.
ಅಬ್ಬರಿಸಿದ ಹಿಟ್‌ಮ್ಯಾನ್
ಮೊದಲ ವಿಕೆಟ್ ಪತನವಾದರೂ ನಾಯಕನ ಅಬ್ಬರ ಮುಂದುವರೆಯಿತು. ಮೂರನೇ ಓವರ್ ಎಸೆಯಲು ಬಂದ ಮಿಚೆಲ್ ಸ್ಟಾರ್ಕ್ ಎಸೆತಗಳಲ್ಲಿ ರೋಹಿತ್ ಶರ್ಮಾ 6,6,4,6,0,6 ರನ್ ಸಿಡಿಸುವ ಮೂಲಕ ಒಂದೇ ಓವರ್‌ನಲ್ಲಿ 29 ರನ್ ಕಲೆಹಾಕಿದರು. ಭಾರತದ ನಾಯಕ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಪ್ರಸಕ್ತ ಆವೃತ್ತಿಯ ಪಂದ್ಯಾವಳಿಯ ವೇಗದ ಅರ್ಧಶತಕವಾಗಿದೆ.
ಪವರ್ ಪ್ಲೇ ನಂತರ ರಿಷಭ್ ಪಂತ್ 15 ರನ್ ಗಳಿಸಿ ಔಟಾದರು. ಆದರೂ ಅಬ್ಬರ ಮುಂದುವರೆಸಿದ ರೋಹಿತ್ ಆರ್ಭಟದ ನೆರವಿಂದ ಭಾರತ 8.4 ಓವರ್‌ಗಳಲ್ಲಿ 100 ರನ್ ತಲುಪಿತು.
ಈ ನಡುವೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ನಿರ್ಣಾಯಕ ವಿಕೆಟ್ ಪಡೆದರು. ರೋಹಿತ್ ಅವರ ಸ್ಟಂಪ್ ಹಾರಿಸುವ ಮೂಲಕ ಭಾರತಕ್ಕೆ ದೊಡ್ಡ ಹೊಡೆತ ನೀಡಿದರು. ಭಾರತ ತಂಡದ ನಾಯಕ 41 ಎಸೆತಗಳಲ್ಲಿ 92 ರನ್ ಗಳಿಸಿ ಶತಕದಂಚಿನಲ್ಲಿ ಔಟಾದರು. ಸೂರ್ಯಕುಮಾರ್ ಯಾದವ್ 31 ರನ್ ಗಳಿಸಿದರೆ, ಡೆತ್ ಓವರ್‌ನಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ಅಜೇಯ 27 ರನ್ ಗಳಿಸಿದರು. 19ನೇ ಓವರ್‌ನಲ್ಲಿ ಶಿವಂ ದುಬೆ 28 ರನ್ ಗಳಿಸಿ ಮಾರ್ಕಸ್ ಸ್ಟೊಯ್ನಿಸ್‌ಗೆ ಶರಣಾದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಭಾರತದ ಮೊತ್ತವನ್ನು 200ರ ಗಡಿ ದಾಟಿಸಿದರು.
ಭಾರತವು ತನ್ನ ಇನ್ನಿಂಗ್ಸ್‌ನಲ್ಲಿ ಒಟ್ಟು 15 ಸಿಕ್ಸರ್ ಬಾರಿಸಿತು. ಇದರಲ್ಲಿ 8 ಸಿಕ್ಸರ್ ರೋಹಿತ್ ಬ್ಯಾಟ್‌ನಿಂದ ಬಂದವು.
ಆಸ್ಟ್ರೇಲಿಯಾ ಚೇಸಿಂಗ್
ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಆರಂಭದಲ್ಲೇ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 6 ರನ್ ಗಳಿಸಿದ್ದ ವಾರ್ನರ್, ಅರ್ಷದೀಪ್ ಅವರ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು. ಆದರೆ, ಭಾರತವನ್ನು ಪ್ರತಿಬಾರಿ ಕಾಡುವ ಟ್ರಾವಿಸ್ ಹೆಡ್ ಆರ್ಭಟ ಮುಂದುವರೆಸಿದರು. ಇವರ ಜೊತೆ ಸೇರಿದ ನಾಯಕ ಮಿಚೆಲ್ ಮಾರ್ಷ್ ಕೂಡಾ ಸಿಡಿಯತೊಡಗಿದರು. ಆದರೆ 37 ರನ್ ಗಳಿಸಿದ್ದಾಗ ಬೌಂಡರಿ ಲೈನ್ ಬಳಿ ಅಕ್ಷರ್ ಪಟೇಲ್ ಹಿಡಿದ ಅಮೋಘ ಕ್ಯಾಚ್‌ಗೆ ವಿಕೆಟ್ ಕೈಚೆಲ್ಲಿದರು.
ಈ ವೇಳೆ ಬಂದ ಮ್ಯಾಕ್ಸ್‌ವೆಲ್ ಆರಂಭದಿಂದಲೇ ದೊಡ್ಡ ಹೊಡೆತಕ್ಕೆ ಮುಂದಾದರು. 20 ರನ್ ಗಳಿಸಿದ್ದಾಗ ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ಕ್ಲೀನ್ ಬೋಲ್ಡ್ ಆದರು. ಮಾರ್ಕಸ್ ಸ್ಟೋಯ್ನಿಸ್ 2 ರನ್ ಗಳಿಸಿ ನಿರ್ಗಮಿಸಿದರು. ಭಾರತವು ಫೀಲ್ಡಿಂಗ್‌ನಲ್ಲಿ ತೀರಾ ಕಳಪೆ ಆಟವಾಡಿತು. ಹೀಗಾಗಿ ಕೆಲವು ಹೆಚ್ಚುವರಿ ರನ್ ಆಸೀಸ್ ಖಾತೆ ಸೇರಿದವು.
ಟ್ರಾವಿಸ್ ಹೆಡ್ ಔಟ್
17ನೇ ಓವರ್ ಎಸೆದ ಬುಮ್ರಾ ನಿರ್ಣಾಯಕ ವಿಕೆಟ್ ಪಡೆದರು. 43 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 76 ರನ್ ಗಳಿಸಿದ್ದ ಟ್ರಾವಿಸ್ ಹೆಡ್ ಕ್ಯಾಚ್ ಪಡೆದ ರೋಹಿತ್ ಶರ್ಮಾ, ಕೋಟ್ಯಾಂತರ ಅಭಿಮಾನಿಗಳು ಖುಷಿ ಪಡುವಂತೆ ಮಾಡಿದರು. ಅವರ ಬೆನ್ನಲ್ಲೇ ಮ್ಯಾಥ್ಯೂ ವೇಡ್ ಕೂಡಾ ಕೇವಲ 1 ರನ್ ಗಳಿಸಿ ನಿರ್ಗಮಿಸಿದರು. ಅರ್ಷದೀಪ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಟಿಮ್ ಡೇವಿಡ್ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಕಮಿನ್ಸ್ ಹಾಗೂ ಸ್ಟಾರ್ಕ್ ಅವರಿಂದ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಭಾರತ ತಂಡವು 27ರಂದು ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಟಿ20 ವಿಶ್ವಕಪ್ 2024ರ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಒಂದು ಟೂರ್ನಿ, 2 ಬಾರಿ ಡಕೌಟ್, ಕಳಪೆ ಸರಾಸರಿ; ಟಿ20 ವಿಶ್ವಕಪ್ನಲ್ಲಿ ಅನಗತ್ಯ ದಾಖಲೆ ಬರೆದ ವಿರಾಟ್ ಕೊಹ್ಲಿ