ಮೊಹಮ್ಮದ್ ಶಮಿ ತಂದೆ-ತಾಯಿ ಯಾರು; ಆಸ್ತಿ ಮೌಲ್ಯ, ದುಬಾರಿ ಕಾರುಗಳು ಎಷ್ಟಿವೆ, ಪಡೆಯುವ ವೇತನ ಎಷ್ಟು? ಇಲ್ಲಿದೆ ವಿವರ
Mohammed Shami: ಮೊಹಮ್ಮದ್ ಶಮಿ ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಹೆಚ್ಚು ಹುಡುಕಾಟದಲ್ಲಿದ್ದಾರೆ. ಅವರ ವೈಯಕ್ತಿಕ ಜೀವನದ ಕುರಿತು ಹೆಚ್ಚು ಹುಡುಕಾಟ ನಡೆಯುತ್ತಿದೆ. ಮೊಹಮ್ಮದ್ ಶಮಿ ಅದ್ದೂರಿ ಜೀವನಶೈಲಿಯ ಭಾಗವಾಗಿರುವ ಎಲ್ಲವೂ ಇಲ್ಲಿದೆ.
ಧರ್ಮಶಾಲಾದ ಎಚ್‌ಪಿಸಿಎ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಎದುರಿನ (India vs New Zealand) ಪಂದ್ಯದಲ್ಲಿ ಮೊಹಮ್ಮದ್ ಶಮಿ (Mohammed Shami) 5 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದರು. ಶಾರ್ದೂಲ್ ಠಾಕೂರ್ಗೆ (Shardul Thakur) ಬದಲಿಯಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಶಮಿ, ಕಿವೀಸ್ ಬ್ಯಾಟಿಂಗ್ ಲೈನಪ್ ಅನ್ನು ಧ್ವಂಸ ಮಾಡಿದರು. ಅವರ ಕರಾರುವಕ್ ಬೌಲಿಂಗ್ ಮೂಲಕ ನ್ಯೂಜಿಲೆಂಡ್ ಅನ್ನು 273 ರನ್ಗಳಿಗೆ ಕಡಿವಾಣ ಹಾಕಲು ನೆರವಾದರು. 10 ಓವರ್ಗಳಲ್ಲಿ 54 ರನ್ ಬಿಟ್ಟುಕೊಟ್ಟು 5 ವಿಕೆಟ್ ಉರುಳಿಸಿದರು.
ಮೊಹಮ್ಮದ್ ಶಮಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಗೂಗಲ್ ಟ್ರೆಂಡಿಂಗ್ನಲ್ಲಿದ್ದಾರೆ. ಅವರ ಕುರಿತು ಹೆಚ್ಚಿನ ಹುಡುಕಾಟ ನಡೆಯುತ್ತಿದೆ. ಅವರ ಕ್ರಿಕೆಟ್ ದಾಖಲೆಗಳ ಜೊತೆಗೆ ವೈಯಕ್ತಿಕ ಜೀವನದ ಕುರಿತು ಹೆಚ್ಚು ಸರ್ಚ್ ಮಾಡುತ್ತಿದ್ದಾರೆ. ಅವರ ಪತ್ನಿ ಯಾರು? ಆಸ್ತಿ ಮೌಲ್ಯ ಎಷ್ಟಿದೆ? ಎಷ್ಟೆಲ್ಲಾ ಕಾರುಗಳನ್ನು ಹೊಂದಿದ್ದಾರೆ.. ಹೀಗೆ ಪ್ರತಿಯೊಂದು ಅಂಶಗಳ ಕುರಿತು ಈ ಮುಂದೆ ತಿಳಿಯೋಣ. ಮೊಹಮ್ಮದ್ ಶಮಿ ಅದ್ದೂರಿ ಜೀವನಶೈಲಿಯ ಭಾಗವಾಗಿರುವ ಎಲ್ಲವೂ ಇಲ್ಲಿದೆ.
ಅರಮನೆಯಂತಿರುವ ಫಾರ್ಮ್‌ಹೌಸ್
ಶಮಿ ಮೈದಾನದ ಹೊರಗೆ ಐಷಾರಾಮಿ ಜೀವನಶೈಲಿ ಆನಂದಿಸುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ 2,528 ಚದರ ಮೀಟರ್ ವಿಸ್ತೀರ್ಣದಲ್ಲಿ ಅದ್ಭುತವಾದ ಫಾರ್ಮ್‌ಹೌಸ್ ಅನ್ನು ಹೊಂದಿದ್ದಾರೆ. ಶಮಿ 2015ರಲ್ಲಿ ತಮ್ಮ ಕನಸಿನ ಪ್ಲಾಟ್ ಖರೀದಿಸಿದರು. ಇದು ಸುಮಾರು 12 ರಿಂದ 15 ಕೋಟಿ ಎಂದು ಅಂದಾಜಿಸಲಾಗಿದೆ. ವಿಶೇಷ ಅಂದರೆ ಶಮಿ ತನ್ನ ಫಾರ್ಮ್‌ಹೌಸ್‌ನಲ್ಲೇ ಕೆಲವು ಅಭ್ಯಾಸ ಪಿಚ್‌ಗಳನ್ನು ನಿರ್ಮಿಸಿದ್ದಾರೆ. ಅಲ್ಲಿ ಸುರೇಶ್ ರೈನಾ, ಭುವನೇಶ್ವರ್ ಸೇರಿ ಇತರ ಆಟಗಾರರು ಲಾಕ್‌ಡೌನ್ ಸಮಯದಲ್ಲಿ ಅಭ್ಯಾಸ ನಡೆಸಿದ್ದರು.
ದುಬಾರಿ ಸವಾರಿಗಳ ಸಮೂಹ
2022ರಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಶಮಿ ವೇಗವಾಗಿ 150 ಏಕದಿನ ವಿಕೆಟ್‌ಗಳನ್ನು ಪಡೆದ ಭಾರತೀಯ ಎನಿಸಿದರು. ಆ ಪ್ರವಾಸದಿಂದ ಮರಳಿದ ನಂತರ ವೇಗಿ 98.13 ಲಕ್ಷ ರೂಪಾಯಿ ಮೌಲ್ಯದ ಜಾಗ್ವಾರ್ ಎಫ್-ಟೈಪ್ ಅನ್ನು ಖರೀದಿಸಿದ್ದರು. ಸ್ವಾಂಕಿ ರೈಡ್ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಬಲಗೈ ವೇಗದ ಬೌಲರ್ BMW 5 ಸರಣಿ, ಆಡಿ ಮತ್ತು ಟೊಯೋಟಾ ಫಾರ್ಚುನರ್ ಅನ್ನು ಸಹ ಹೊಂದಿದ್ದಾರೆ.
ಬಿಸಿಸಿಐ ಗುತ್ತಿಗೆ ಒಪ್ಪಂದ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಂಚಿಕೊಂಡ 2022-23ರ ಒಪ್ಪಂದದ ವಿವರಗಳ ಪ್ರಕಾರ, ಮೊಹಮ್ಮದ್ ಶಮಿ ಅವರು ಗ್ರೇಡ್ ಎ ಒಪ್ಪಂದವನ್ನು ಪಡೆದಿದ್ದಾರೆ. ಅದರ ಪ್ರಕಾರ ಅವರು ವಾರ್ಷಿಕ 5 ಕೋಟಿ ರೂಪಾಯಿ ವೇತನ ಪಡೆಯುತ್ತಾರೆ. ಇನ್ನು ಐಪಿಎಲ್ನಲ್ಲಿ ಪ್ರತಿ ಸೀಸನ್ಗೂ 6.25 ಕೋಟಿ ರೂಪಾಯಿಯನ್ನು ಗುಜರಾತ್ ಟೈಟಾನ್ಸ್ ತಂಡವು ನೀಡುತ್ತದೆ. ಹಾಗೆಯೇ ಅವರು ಜಾಹೀರಾತುಗಳಿಂದಲೂ ಆದಾಯ ಗಳಿಸುತ್ತಾರೆ.
ರೈಡಿಂಗ್ ಅಂದರೆ ಶಮಿಗೆ ಬಹಳ ಇಷ್ಟ
ಮೊಹಮ್ಮದ್ ಶಮಿಗೆ ರೈಡಿಂಗ್ ಹೋಗುವುದೆಂದರೆ ತುಂಬಾ ಇಷ್ಟ. ಲಾಂಗ್ ರೈಡಿಂಗ್ ಹೋಗುವುದನ್ನು ತುಂಬಾ ಆನಂದಿಸುತ್ತಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಶಮಿ ತಮ್ಮ ಇನ್ಸ್ಟ್ರಾಂನಲ್ಲಿ ಹಂಚಿಕೊಂಡಿರುವುದನ್ನು ನೋಡಬಹುದು. ಹೊಸ ಹೊಸ ಸ್ಥಳಗಳಿಗೆ ಹೆಚ್ಚು ಭೇಟಿಕೊಡುತ್ತಾರೆ. ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲೂ ತೊಡಗುತ್ತಾರೆ. ಭಾರತವಲ್ಲದೆ, ವಿದೇಶಗಳಿಗೂ ಪ್ರವಾಸ ಕೈಗೊಳ್ಳುತ್ತಾರೆ.
ನಿವ್ವಳ ಆಸ್ತಿ ಮೌಲ್ಯ
ಸ್ಪೋರ್ಟ್ಸ್ ಕ್ರೀಡಾ ವರದಿ ಪ್ರಕಾರ, ಮೊಹಮ್ಮದ್ ಶಮಿ 45 ಕೋಟಿ ರೂಪಾಯಿ ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ. ಬಿಸಿಸಿಐ ಮತ್ತು ಗುಜರಾತ್ ಟೈಟಾನ್ಸ್ (ಐಪಿಎಲ್ ಫ್ರಾಂಚೈಸ್) ಜೊತೆಗಿನ ಒಪ್ಪಂದದಿಂದ ವೇತನ ಪಡೆಯುವ 33 ವರ್ಷದ ಆಟಗಾರ, ಬ್ರ್ಯಾಂಡ್ ಅನುಮೋದನೆಗಳಿಂದ ಗಣನೀಯ ಮೊತ್ತವನ್ನು ಗಳಿಸುತ್ತಾರೆ.
ಪತ್ನಿಯಿಂದ ಡಿವೋರ್ಸ್
ಮೊಹಮ್ಮದ್ ಶಮಿ 2014ರ ಜೂನ್ 6ರಂದು ಹಸಿನ್ ಜಹಾನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ, 4 ವರ್ಷಗಳ ನಂತರ ಶಮಿಗೆ ಪತ್ನಿ ಡಿವೋರ್ಸ್ ನೀಡಿದ್ದಾರೆ. ಕ್ರಿಕೆಟಿಗ ತನಗೆ ಚಿತ್ರಹಿಂಸೆ ನೀಡಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪತ್ನಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ಪ್ರಕರಣ ಇನ್ನೂ ವಿಚಾರಣೆ ನಡೆಯುತ್ತಿದೆ. ಹಸಿನ್ ಜಹಾನ್ ಮದುವೆಗೂ ಮುನ್ನ ಮಾಡೆಲ್ ಆಗಿದ್ದರು. ಈ ದಂಪತಿಗೆ ಐರಾ ಶಮಿ ಎಂಬ ಮುದ್ದಾದ ಮಗಳಿದ್ದಾಳೆ.
ಮೊಹಮ್ಮದ್ ಶಮಿ ಜನನ
ಉತ್ತರ ಪ್ರದೇಶದ ಅಮ್ರೋಹಾದಲ್ಲಿ 1990ರ ಸೆಪ್ಟೆಂಬರ್ 33ರಂದು ತೌಸಿಫ್ ಅಲಿ, ಅಂಜುಮ್ ಆರಾ ದಂಪತಿಗೆ ಶಮಿ ಜನಿಸಿದರು. ಆದರೆ ಅವರ ತಂದೆ 2017ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಮೊಹಮ್ಮದ್ ಕೈಫ್, ಸಬೀನಾ ಅಂಜುಮ್, ಎಂಡಿ ಹಸೀಬ್ ಅಹ್ಮದ್, ಮೊಹಮ್ಮದ್ ಆಸಿಫ್ ಒಡಹುಟ್ಟಿದವರು.
ಶಮಿ ಕ್ರಿಕೆಟ್ ವೃತ್ತಿಜೀವನ
ಅಂತಾರಾಷ್ಟ್ರೀಯ ಕ್ರಿಕೆಟ್ಗೆ 2023ರಲ್ಲಿ ಕಾಲಿಟ್ಟರು. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ಗೆ 2013ರಲ್ಲಿ ಪದಾರ್ಪಣೆ ಮಾಡಿದರೆ, 2014ರಲ್ಲಿ ಟಿ20 ಕ್ರಿಕೆಟ್ಗೆ ಡೆಬ್ಯೂ ಮಾಡಿದರು. 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್, 95 ಏಕದಿನ ಪಂದ್ಯಗಳಲ್ಲಿ 176 ವಿಕೆಟ್, 23 ಟಿ20ಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಇನ್ನು ಐಪಿಎಲ್ನಲ್ಲಿ 110 ಪಂದ್ಯಗಳಲ್ಲಿ 127 ವಿಕೆಟ್ ಉರುಳಿಸಿದ್ದಾರೆ.