ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಎಲ್ಲಿ ನಡೆಯುತ್ತೆ? ಸಮಯ, ಪಿಚ್, ನೇರಪ್ರಸಾರ ಸೇರಿ ಅಗತ್ಯ ಮಾಹಿತಿ ಇಲ್ಲಿದೆ
India vs Australia: ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮುಹೂರ್ತ ನಿಗದಿಯಾಗಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಏಕದಿನ ವಿಶ್ವಕಪ್ 2023ರ (ICC ODI World Cup 2023 ಫೈನಲ್ ಪಂದ್ಯದಲ್ಲಿ ಭಾರತವನ್ನು ಎದುರಿಸುವ ತಂಡ ಯಾವುದು ಎಂಬ ಪ್ರಶ್ನೆಗೆ ಗುರುವಾರ ರಾತ್ರಿ ಉತ್ತರ ಸಿಕ್ಕಿದೆ. ನವೆಂಬರ್ 19ರ ಭಾನುವಾರ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.
ನವೆಂಬರ್ 16ರ ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ, ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್‌ಗಳಿಂದ ರೋಚಕವಾಗಿ ಸೋಲಿಸಿತು. ಆ ಮೂಲಕ ಕಮಿನ್ಸ್ ಪಡೆಯು ಎಂಟನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದೆ. ಐದು ಬಾರಿಯ ಚಾಂಪಿಯನ್‌ಗಳು ಆರನೇ ಟ್ರೋಫಿ ಗೆದ್ದು ದಾಖಲೆ ಬರೆಯಲು ಸಜ್ಜಾಗಿದ್ದಾರೆ. 2003ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇದು ಎರಡನೇ ಬಾರಿ ಏಕದಿನ ವಿಶ್ವಕಪ್ ಅಂತಿಮ ಸುತ್ತಿನಲ್ಲಿ ಜಿದ್ದಿನ ಕದನಕ್ಕೆ ಸಜ್ಜಾಗುತ್ತಿವೆ.
ತಂಡಗಳ ಬಲಾಬಲ
ಪ್ರಸಕ್ತ ವಿಶ್ವಕಪ್ ಆವೃತ್ತಿಯಲ್ಲಿ ಭಾರತ ತಂಡವು ಇಲ್ಲಿಯವರೆಗೆ ಆಡಿದ ಎಲ್ಲಾ 10 ಪಂದ್ಯಗಳನ್ನು ಗೆದ್ದು ಟೂರ್ನಿಯ ಅಜೇಯ ತಂಡವಾಗಿ ಹೊರಹೊಮ್ಮಿದೆ. ಲೀಗ್ ಹಂತದಲ್ಲಿ ಸತತ ಒಂಬತ್ತು ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನಿಯಾಗಿ ಸೆಮೀಸ್ ಪ್ರವೇಶಿದ ಭಾರತ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 70 ರನ್‌ಗಳಿಂದ ಸೋಲಿಸಿತ್ತು.
ಅತ್ತ ಬಲಿಷ್ಠ ಕಾಂಗರೂಗಳು ಪುಟಿದೆದ್ದ ವೈಖರಿಯೇ ಬಿನ್ನ. ಟೂರ್ನಿಯಲ್ಲಿ ಸತತ ಎರಡು ಸೋಲುಗಳನ್ನು ಕಂಡ ಬಳಿಕ ಪುಟಿದೆದ್ದ ಆಸೀಸ್, ಆ ಬಳಿಕ ಲೀಗ್ ಹಂತದ ಎಲ್ಲಾ ಏಳು ಪಂದ್ಯಗಳನ್ನು ಗೆದ್ದು ಸೆಮೀಸ್ ಪ್ರವೇಶಿಸಿತು. ಇದೀಗ ಸೆಮಿಕದನದಲ್ಲಿ ಹರಿಣಗಳನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ವಿಶ್ವದ ಎರಡು ಬಲಿಷ್ಠ ತಂಡಗಳು ಕಪ್ ಗೆಲ್ಲಲು ಜಿದ್ದಿಗೆ ಇಳಿಯಲು ಮುಂದಾಗಿವೆ.
ಭಾರತ vs ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್ ಪಂದ್ಯ ಯಾವಾಗ ನಡೆಯಲಿದೆ?
ನವೆಂಬರ್ 19ರ ಭಾನುವಾರ ವಿಶ್ವಕಪ್ 2023ರ ಫೈನಲ್ ಪಂದ್ಯ ನಡೆಯುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಫೈನಲ್ ಮಧ್ಯಾಹ್ನ 2:00 ಗಂಟೆಗೆ ಆರಂಭವಾಗಲಿದೆ.
ಭಾರತ vs ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್ ಪಂದ್ಯ ಎಲ್ಲಿ ನಡೆಯಲಿದೆ?
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡೋ-ಆಸೀಸ್ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.
ಭಾರತ vs ಆಸ್ಟ್ರೇಲಿಯಾ ವಿಶ್ವಕಪ್ 2023ರ ವಿಶ್ವಕಪ್ ಫೈನಲ್ ನೇರಪ್ರಸಾರ ಎಲ್ಲಿ ಇರಲಿದೆ?
ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್ ಪಂದ್ಯವನ್ನು ನೇರಪ್ರಸಾರ ಮಾಡಲಾಗುತ್ತದೆ.
ಭಾರತ vs ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಆನ್‌ಲೈನ್‌ನಲ್ಲಿ ಹೇಗೆ ಲೈವ್ ಸ್ಟ್ರೀಮ್ ವೀಕ್ಷಿಸಬಹುದು?
ಭಾರತ vs ಆಸ್ಟ್ರೇಲಿಯಾ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್ ಪಂದ್ಯವನ್ನು ಭಾರತದಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಮೊಬೈಲ್‌ನಲ್ಲಿ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು.
ಅಹಮದಾಬಾದ್ ಪಿಚ್ ರಿಪೋರ್ಟ್
ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣವು ಜಗತ್ತಿನಲ್ಲಿ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ. ಇಲ್ಲಿನ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ರನ್ ಮಳೆ ಹರಿದು ಬರುತ್ತದೆ. ಇಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸುವ ಅವಕಾಶ ತುಂಬಾ ಕಡಿಮೆ ಇದೆ. ಆದರೆ, ಲೈನ್ ಮತ್ತು ಲೆಂಗ್ತ್ ಕಾಪಾಡಿಕೊಂಡರೆ, ಬೌಲರ್‌ಗಳು ಮಿಂಚಬಹುದು. ಇದೇ ಮೈದಾನದಲ್ಲಿ ಭಾರತವು ಪಾಕಿಸ್ತಾನವನ್ನು 200 ರನ್ ಒಳಗೆ ಆಲೌಟ್ ಮಾಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬಿನಿಯಿಂದ ಬೌಲರ್‌ಗಳು ವಿಕೆಟ್ ಪಡೆಯುವುದು ಸ್ವಲ್ಪ ಕಷ್ಟವಾಗಬಹುದು.
ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ?
ಭಾರತದ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಯಾಕೆಂದರೆ ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗಾಳಿ ಗಂಟೆಗೆ 11 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ. ಆದ್ರತೆ ಶೇಕಡಾ 39 ರಷ್ಟು ಇರಲಿದೆ. ಹೀಗಾಗಿ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವು ಸಾಧ್ಯತೆ ಇಲ್ಲ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ವಿಶ್ವಕಪ್ ನಾಕೌಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಇತಿಹಾಸ
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಹಿಂದೆ ಒಟ್ಟು ಮೂರು ಬಾರಿ ವಿಶ್ವಕಪ್‌ನ ನಾಕೌಟ್ ಹಂತಗಳಲ್ಲಿ ಮುಖಾಮುಖಿಯಾಗಿದ್ದವು. ಅದರಲಿ 2003ರ ವಿಶ್ವಕಪ್ ಆವೃತ್ತಿಯಲ್ಲಿ ಫೈನಲ್ ಪಂದ್ಯದಲ್ಲೇ ಎದುರಾಗಿವೆ. ಅದರಲ್ಲಿ ಭಾರತ ಸೋಲನುಭವಿಸಿತ್ತು. 2011ರ ವಿಶ್ವಕಪ್ ಕ್ವಾರ್ಟರ್-ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಮಣಿಸಿ ಸೆಮೀಸ್ ಪ್ರವೇಶಿಸಿತ್ತು. ಆ ಬಳಿಕ 2015ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತವನ್ನು ಆಸ್ಟ್ರೇಲಿಯಾ ಸೋಲಿಸಿ ಫೈನಲ್ ತಲುಪಿತ್ತು. ಅಲ್ಲದೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.