ಯಶಸ್ವಿ ಜೈಸ್ವಾಲ್ ಶತಕ, ಶುಭ್ಮನ್ ಗಿಲ್ ಅರ್ಧಶತಕ; ಇಂಗ್ಲೆಂಡ್ಗೆ ಬೃಹತ್ ಗುರಿ ನೀಡುವತ್ತ ಭಾರತ ಹೆಜ್ಜೆ
India vs England 3rd Test Day 3 : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 126 ರನ್ಗಳ ಮುನ್ನಡೆ ಸಾಧಿಸಿದ ಭಾರತ ಪ್ರವಾಸಿ ತಂಡಕ್ಕೆ ಬೃಹತ್ ಗುರಿ ನೀಡುವ ಲೆಕ್ಕಾಚಾರದಲ್ಲಿದೆ. ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ಯಶಸ್ವಿ ಜೈಸ್ವಾಲ್ (Yashavi Jaiswal) ಅವರ ಭರ್ಜರಿ ಶತಕ (114*) ಮತ್ತು ಶುಭ್ಮನ್ ಗಿಲ್ (Shubman Gill) ಅವರ ಅರ್ಧಶತಕದ (65) ನೆರವಿನಿಂದ ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್ನಲ್ಲೂ ಮೇಲುಗೈ ಸಾಧಿಸುತ್ತಿದ್ದು, ದೊಡ್ಡ ಮೊತ್ತದ ಗುರಿ ನೀಡಲು ಸಜ್ಜಾಗುತ್ತಿದೆ. 126 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ, ಮೂರನೇ ದಿನದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 322 ರನ್ ಕಲೆ ಹಾಕಿದೆ.
ಎರಡು ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದ್ದಲ್ಲಿಂದ 3ನೇ ದಿನದಾಟ ಮುಂದುವರೆಸಿದ ಇಂಗ್ಲೆಂಡ್, ನೀರಸ ಪ್ರದರ್ಶನ ನೀಡಿತು. 133 ರನ್ ಗಳಿಸಿ ಕ್ರೀಸ್ನಲ್ಲಿದ್ದ ಬೆನ್ ಡಕೆಟ್ (153) ಕೂಡ ಹೆಚ್ಚು ಹೊತ್ತು ಇರಲಿಲ್ಲ. ಜೋ ರೂಟ್ 18 ರನ್, ಬೈರ್ಸ್ಟೋ 0, ಬೆನ್ಫೋಕ್ಸ್ 13, ಬೆನ್ಸ್ಟೋಕ್ಸ್ 43, ರೆಹಾನ್ ಅಹ್ಮದ್ 6, ಟಾಮ್ ಹಾರ್ಟ್ಲೆ 9 ರನ್ ಗಳಿಸಿ ನಿರಾಸೆ ಮೂಡಿಸಿದರು. ಭೋಜನ ವಿರಾಮದ ನಂತರ ಇಂಗ್ಲೆಂಡ್ 319 ರನ್ ಗಳಿಸಿ ಆಲೌಟ್ ಆಯಿತು.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ 445 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 319 ರನ್ಗಳಿಗೆ ಆಲೌಟ್ ಆಗಿ 126 ರನ್ಗಳ ಹಿನ್ನಡೆ ಅನುಭವಿಸಿತು. ಇಷ್ಟು ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ, ಮತ್ತೆ ಹಿಡಿತ ಸಾಧಿಸುತ್ತಿದೆ. ಪ್ರಥಮ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ, ದ್ವಿತೀಯ ಇನ್ನಿಂಗ್ಸ್ನಲ್ಲಿ 19 ರನ್ಗಳಿಗೆ ಆಟ ಮುಗಿಸಿದರು.
ಆ ಬಳಿಕ ಜೊತೆಯಾದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಮಿಂಚಿನ ಪ್ರದರ್ಶನ ನೀಡಿದರು. ಇಂಗ್ಲೆಂಡ್ ಬೌಲರ್ಗಳಿಗೆ ಬೆಂಡೆತ್ತಿದರು. 195 ಎಸೆತಗಳಲ್ಲಿ 155 ರನ್ಗಳ ಪಾಲುದಾರಿಕೆ ನೀಡಿದರು. ಪ್ರಥಮ ಇನ್ನಿಂಗ್ಸ್ನಲ್ಲಿ ಜೈಸ್ವಾಲ್ 10, ಗಿಲ್ ಸೊನ್ನೆ ಸುತ್ತಿದ್ದರು. ಇದೀಗ ಯಶಸ್ವಿ ಶತಕ ಸಿಡಿಸಿದರೆ, ಶುಭ್ಮನ್ ಅರ್ಧಶತಕ ಸಿಡಿಸಿ ಟೀಮ್ ಇಂಡಿಯಾ ಬೃಹತ್ ಮೊತ್ತದತ್ತ ಸಾಗಲು ನೆರವಾಗುತ್ತಿದ್ದಾರೆ.
ಜೈಸ್ವಾಲ್ 3ನೇ ಶತಕ, ಸೆಂಚುರಿಯತ್ತ ಗಿಲ್
ಇಂಗ್ಲೆಂಡ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ಜೈಸ್ವಾಲ್ ತನ್ನ ಮೂರನೇ ಟೆಸ್ಟ್ ಶತಕ ಸಿಡಿಸಿದರು. ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ನಡೆಸಿದರೂ ನಂತರ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಪರಿಣಾಮ 122 ಎಸೆತಗಳಲ್ಲೇ ನೂರರ ಗಡಿ ದಾಟಿದರು. ಸದ್ಯ ಅವರು 133 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಬಾರಿಸಿ 104 ರನ್ ಗಳಿಸಿ ರಿಟೈರ್ಡ್ ಹರ್ಟ್ ಆಗಿದ್ದಾರೆ. 4ನೇ ದಿನದಾಟವೂ ಬ್ಯಾಟಿಂಗ್ ಮಾಡಲಿದ್ದಾರೆ. ಈ ಸರಣಿಯಲ್ಲಿ ಇದು ಅವರ 2ನೇ ಶತಕವಾಗಿದೆ. 2ನೇ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ದ್ವಿಶತಕ ಬಾರಿಸಿದ್ದರು.
ಶುಭ್ಮನ್ ಗಿಲ್ ಸದ್ಯ ಫಾರ್ಮ್ಗೆ ಮರಳಿದ್ದಾರೆ. ಕಳೆದ ಟೆಸ್ಟ್ನಲ್ಲಿ ಶತಕ ಸಿಡಿಸಿ ಹಳಿಗೆ ಮರಳಿದ್ದ ಗಿಲ್, ಮೂರನೇ ಟೆಸ್ಟ್ನಲ್ಲೂ ಸೊಗಸಾದ ಬ್ಯಾಟಿಂಗ್ ನಡೆಸುತ್ತಿದ್ದಾರೆ. 120 ಎಸೆತಗಳನ್ನು ಎದುರಿಸಿದ್ದು ಆರು ಬೌಂಡರಿ, 2 ಸಿಕ್ಸರ್ ಸಹಿತ 65 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಆದರೆ ರಜತ್ ಪಾಟೀದಾರ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. 10 ಎಸೆತಗಳಲ್ಲಿ ಶೂನ್ಯಕ್ಕೆ ಔಟಾದರು. ಕುಲ್ದೀಪ್ ಯಾದವ್ ಕ್ರೀಸ್ನಲ್ಲಿದ್ದು 4 ರನ್ ಗಳಿಸಿದ್ದಾರೆ.