ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಟೆಸ್ಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್; ಅಶ್ವಿನ್-ಜಡೇಜಾ ಇಲ್ಲ, ಅಚ್ಚರಿಯ ಆಡುವ ಬಳಗ
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಪಂದ್ಯಕ್ಕೆ ಭಾರತ ಅಚ್ಚರಿಯ ಆಡುವ ಬಳಗವನ್ನು ಆಯ್ಕೆ ಮಾಡಿಕೊಂಡಿದೆ. ಅನುಭವಿ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಂಡದಲ್ಲಿಲ್ಲ. ವಾಷಿಂಗ್ಟನ್ ಸುಂದರ್ ಏಕೈಕ ಸ್ಪಿನ್ನರ್ ಆಗಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನವೆಂಬರ್ 22ರ ಶುಕ್ರವಾರವಾದ ಇಂದು ಪರ್ತ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಜಸ್ಪ್ರೀತ್ ಬುಮ್ರಾ ನಾಯಕತ್ವದ ತಂಡ ಮೊದಲು ಬ್ಯಾಟ್ ಬೀಸಲಿದೆ. ಆದರೆ, ಎಲ್ಲಾ ನಿರೀಕ್ಷೆ ಹಾಗೂ ಲೆಕ್ಕಾಚಾರಗಳಿಗೆ ವ್ಯತಿರಿಕ್ತವಾಗಿ ಭಾರತವು ಆಡುವ ಬಳಗವನ್ನು ಕಣಕ್ಕಿಳಿಸುತ್ತಿದೆ. ಟೀಮ್ ಇಂಡಿಯಾಗೆ ಇಬ್ಬರು ಕ್ರಿಕೆಟಿಗರು ಪದಾರ್ಪಣೆ ಮಾಡುತ್ತಿದ್ದು, ಮತ್ತೊಂದೆಡೆ ಇಬ್ಬರು ಅನುಭವಿ ಸ್ಪಿನ್ನರ್‌ಗಳು ಆಡುವ ಬಳಗದಿಂದ ಸ್ಥಾನ ಕಳೆದುಕೊಂಡಿದ್ದಾರೆ.
ಕೆಕೆಆರ್ ವೇಗಿ ಹರ್ಷಿತ್ ರಾಣಾ ಹಾಗೂ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಮೊದಲ ಟೆಸ್ಟ್ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ವೇಳೆ ಟೆಸ್ಟ್ ಕ್ರಿಕೆಟ್‌ನ ಇಬ್ಬರು ಅನುಭವಿ ಹಾಗೂ ದಿಗ್ಗಜ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆಡುವ ಬಳಗಕ್ಕೆ ಏಕೈಕ ಸ್ಪಿನ್ನರ್ ಆಗಿ ವಾಷಿಂಗ್ಟನ್ ಸುಂದರ್ ಆಯ್ಕೆಯಾಗಿದ್ದಾರೆ.
ಇದು ತಂಡದ ಮ್ಯಾನೇಜ್‌ಮೆಂಟ್ ತೆಗೆದುಕೊಂಡ ಅಚ್ಚರಿಯ ನಿರ್ಧಾರವಾಗಿದೆ, ವೇಗಿಗಳಾದ ಆಕಾಶ್ ದೀಪ್ ಮತ್ತು ಪ್ರಸಿದ್ಧ್ ಕೃಷ್ಣ ಬದಲಿಗೆ ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಲಾಗಿದೆ. ನಿರೀಕ್ಷೆಯಂತೆಯೇ ಕನ್ನಡಿಗ ಕೆಎಲ್ ರಾಹುಲ್ ಜೊತೆಗೆ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಶುಭ್ಮನ್ ಗಿಲ್ ಗಾಯಗೊಂಡಿರುವುದರಿಂದ ಮತ್ತೋರ್ವ ಕನ್ನಡಿಗ ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ತಂಡದಲ್ಲಿ ನಾಲ್ವರು ವೇಗಿಗಳಿದ್ದು, ಏಕೈಕ ಸ್ಪಿನ್ನರ್ ಆಗಿ ವಾಷಿಂಗ್ಟನ್ ಕಾಣಿಸಿಕೊಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಮತ್ತಷ್ಟು ಆಳ ಕಂಡುಕೊಳ್ಳುವ ದೃಷ್ಟಿಯಿಂದ ಇಬ್ಬರು ಆಲ್‌ರೌಂಡರ್‌ಗಳಿಗೆ ಸ್ಥಾನ ನೀಡಲಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ 2024-25 ವೇಳಾಪಟ್ಟಿ (ಭಾರತೀಯ ಕಾಲಮಾನ
- 1ನೇ ಟೆಸ್ಟ್: ನವೆಂಬರ್ 22ರಿಂದ 26, 2024 - ಪರ್ತ್, ಬೆಳಗ್ಗೆ 7:50
- 2ನೇ ಟೆಸ್ಟ್ (ರಾತ್ರಿ ಮತ್ತು ಹಗಲು): ಡಿಸೆಂಬರ್ 6ರಿಂದ 10, 2024 - ಅಡಿಲೇಡ್, ಬೆಳಗ್ಗೆ 9:30
- 3ನೇ ಟೆಸ್ಟ್: ಡಿಸೆಂಬರ್ 14ರಿಂದ 18, 2024 - ಬ್ರಿಸ್ಬೇನ್, ಬೆಳಗ್ಗೆ 5:50
- 4ನೇ ಟೆಸ್ಟ್: ಡಿಸೆಂಬರ್ 26ರಿಂದ 30, 2024 - ಮೆಲ್ಬೋರ್ನ್, ಬೆಳಗ್ಗೆ 5:00
- 5ನೇ ಟೆಸ್ಟ್: ಜನವರಿ 3ರಿಂದ 7, 2025 - ಸಿಡ್ನಿ, ಬೆಳಗ್ಗೆ 5:00
ಬಾರ್ಡರ್-ಗವಾಸ್ಕರ್ ಟ್ರೋಫಿ ನೇರಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್
ಟೆಸ್ಟ್ ಸರಣಿಯು ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಇದೇ ವೇಳೆ ಡಿಸ್ನಿ + ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.
ಭಾರತ ಆಡುವ ಬಳಗ
ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ (ನಾಯಕ), ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಆಡುವ ಬಳಗ
ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಾಬುಶೆನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹೇಜಲ್‌ವುಡ್.