IND vs PAK: ಭಾರತೀಯ ಅಭಿಮಾನಿಗಳಿಗೆ ದೊಡ್ಡ ಸುದ್ದಿ ನೀಡಿದ ಪಾಕಿಸ್ತಾನ: ಪಿಸಿಬಿ ಮಹತ್ವದ ನಿರ್ಧಾರ
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Pak: ಭಾರತೀಯ ಅಭಿಮಾನಿಗಳಿಗೆ ದೊಡ್ಡ ಸುದ್ದಿ ನೀಡಿದ ಪಾಕಿಸ್ತಾನ: ಪಿಸಿಬಿ ಮಹತ್ವದ ನಿರ್ಧಾರ

IND vs PAK: ಭಾರತೀಯ ಅಭಿಮಾನಿಗಳಿಗೆ ದೊಡ್ಡ ಸುದ್ದಿ ನೀಡಿದ ಪಾಕಿಸ್ತಾನ: ಪಿಸಿಬಿ ಮಹತ್ವದ ನಿರ್ಧಾರ

IND vs PAK: ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಬರಲು ಬಯಸುವ ಭಾರತೀಯ ಅಭಿಮಾನಿಗಳಿಗೆ ಶೀಘ್ರ ವೀಸಾ ನೀಡುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮತ್ತು ಕೇಂದ್ರ ಸರ್ಕಾರದ ಸಚಿವ ಮೊಹ್ಸಿನ್ ನಖ್ವಿ ಭರವಸೆ ನೀಡಿದ್ದಾರೆ.

ಭಾರತೀಯ ಅಭಿಮಾನಿಗಳಿಗೆ ದೊಡ್ಡ ಸುದ್ದಿ ನೀಡಿದ ಪಾಕಿಸ್ತಾನ: ಪಿಸಿಬಿ ಮಹತ್ವದ ನಿರ್ಧಾರ
ಭಾರತೀಯ ಅಭಿಮಾನಿಗಳಿಗೆ ದೊಡ್ಡ ಸುದ್ದಿ ನೀಡಿದ ಪಾಕಿಸ್ತಾನ: ಪಿಸಿಬಿ ಮಹತ್ವದ ನಿರ್ಧಾರ (X)

ಮುಂದಿನ ಐಸಿಸಿ ಟೂರ್ನಮೆಂಟ್ ಚಾಂಪಿಯನ್ಸ್ ಟ್ರೋಫಿಯಾಗಿದ್ದು, ಇದನ್ನು ಪಾಕಿಸ್ತಾನ ಆಯೋಜಿಸಲಿದೆ. 2025ರ ಆರಂಭದಲ್ಲಿ ನಡೆಯಲಿರುವ ಈ ಪಂದ್ಯಾವಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭರ್ಜರಿ ತಯಾರಿ ನಡೆಸುತ್ತಿದೆ. ಆದರೆ ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆ ಕಡಿಮೆ. ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ. ಹೀಗಿದ್ದರೂ ಪಾಕಿಸ್ತಾನದಲ್ಲಿ ಭದ್ರತಾ ಬೆದರಿಕೆಯ ಹೊರತಾಗಿಯೂ, ಈ ಪಂದ್ಯಾವಳಿಗಾಗಿ ಟೀಮ್ ಇಂಡಿಯಾ ತಮ್ಮ ದೇಶಕ್ಕೆ ಬರಲಿದೆ ಎಂದು ಪಿಸಿಬಿ ಭರವಸೆ ನೀಡಿದೆ. ಇದೆಲ್ಲದರ ನಡುವೆ ಪಿಸಿಬಿ ಭಾರತೀಯ ಅಭಿಮಾನಿಗಳಿಗಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಲು ತಮ್ಮ ದೇಶಕ್ಕೆ ಬರಲು ಬಯಸುವ ಭಾರತೀಯ ಅಭಿಮಾನಿಗಳಿಗೆ ಶೀಘ್ರ ವೀಸಾ ನೀಡುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮತ್ತು ಕೇಂದ್ರ ಸರ್ಕಾರದ ಸಚಿವ ಮೊಹ್ಸಿನ್ ನಖ್ವಿ ಭರವಸೆ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಭಾರತೀಯ ಕ್ರಿಕೆಟ್ ಪ್ರೇಮಿಗಳು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ ಎಂಬ ಭರವಸೆಯನ್ನು ಪಿಸಿಬಿ ಹೊಂದಿದೆ ಎಂದು ನಖ್ವಿ ಹೇಳಿದರು.

ಭಾರತೀಯ ಅಭಿಮಾನಿಗಳು ಪಾಕಿಸ್ತಾನಕ್ಕೆ ಬಂದು ಲಾಹೋರ್‌ನಲ್ಲಿ ಈ ಎರಡು ದೇಶಗಳ ನಡುವಿನ ಪಂದ್ಯವನ್ನು ವೀಕ್ಷಿಸಬೇಕೆಂದು ನಾವು ಬಯಸುತ್ತೇವೆ. ಭಾರತೀಯ ಅಭಿಮಾನಿಗಳಿಗಾಗಿ ನಾವು ವಿಶೇಷ ಕೋಟಾ ಟಿಕೆಟ್‌ಗಳನ್ನು ಇರಿಸುತ್ತೇವೆ ಮತ್ತು ಸಾಧ್ಯವಾದಷ್ಟು ಬೇಗ ವೀಸಾಗಳನ್ನು ನೀಡಲು ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನಖ್ವಿ ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ಚಾಂಪಿಯನ್ಸ್ ಟ್ರೋಫಿ 2025 ರ ಸ್ಥಳ ಬದಲಾವಣೆ?

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಕೆಲವು ವರ್ಷಗಳಿಂದ ಉತ್ತಮವಾಗಿಲ್ಲ. ಈ ಕಾರಣದಿಂದಾಗಿ ಭಾರತ ತಂಡವು ಈ ದೇಶಕ್ಕೆ ಪ್ರವಾಸ ಮಾಡುವುದಿಲ್ಲ. ಐಸಿಸಿ ಪಂದ್ಯಾವಳಿಗಳು ಮತ್ತು ಏಷ್ಯಾಕಪ್ ಸಮಯದಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯಗಳನ್ನು ಆಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತವೆ.

ಚಾಂಪಿಯನ್ಸ್ ಟ್ರೋಫಿ ಕೂಡ ಹೀಗೆ ಸಂಭವಿಸಿದಲ್ಲಿ, ಟೀಮ್ ಇಂಡಿಯಾ ತನ್ನ ಎಲ್ಲಾ ಗುಂಪು ಹಂತದ ಪಂದ್ಯಗಳನ್ನು ಪಾಕಿಸ್ತಾನದ ಹೊರಗೆ ಆಡಲಿದೆ ಮತ್ತು ಸೆಮಿಫೈನಲ್ ತಲುಪಿದರೂ, ಸ್ಥಳದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಸದ್ಯ ಎರಡೂ ಸೆಮಿಫೈನಲ್ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ ಎಂದು ಹೇಳಲಾಗಿದೆ.

ದುಬೈನಲ್ಲಿ ಪಂದ್ಯ?

ಮತ್ತೊಂದೆಡೆ, ಈ ಟೂರ್ನಿಯ ಫೈನಲ್ ಪಂದ್ಯ ಲಾಹೋರ್‌ನಲ್ಲಿ ನಡೆಯಲಿದೆ. ಆದರೆ ಟೀಂ ಇಂಡಿಯಾ ಫೈನಲ್ ತಲುಪಿದರೆ, ಪಾಕಿಸ್ತಾನದ ಹೊರಗೆಯೇ ಫೈನಲ್ ಪಂದ್ಯ ನಡೆಯಬಹುದು. ದುಬೈನಲ್ಲಿ ಈ ಪಂದ್ಯ ನಡೆಯುವ ಎಲ್ಲಾ ಸಾಧ್ಯತೆಗಳಿವೆ. ಆದರೆ, ಈ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

ಡ್ರಾಫ್ಟ್ ವೇಳಾಪಟ್ಟಿಯ ಪ್ರಕಾರ, ಟೀಮ್ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ಆಡಬೇಕಾಗಿದೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಫೆಬ್ರವರಿ 20ರಂದು ಆಡಲಿದೆ. ಇದರ ನಂತರ, ತಂಡ ಫೆಬ್ರವರಿ 23ರಂದು ನ್ಯೂಜಿಲೆಂಡ್ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ. ಗುಂಪು ಹಂತದ ಮೂರನೇ ಮತ್ತು ಕೊನೆಯ ಪಂದ್ಯವು ಮಾರ್ಚ್ 1 ರಂದು ಪಾಕಿಸ್ತಾನದ ವಿರುದ್ಧ ನಡೆಯಲಿದೆ.

Whats_app_banner