ಕಾಮನ್ವೆಲ್ತ್ ಗೇಮ್ಸ್: ಲಾನ್ ಬೌಲ್ಸ್ನಲ್ಲಿ ಚಿನ್ನ ಗೆದ್ದಿದ್ದ ತಂಡಕ್ಕೆ ಚಿನ್ನದಂತ ಟಿಪ್ಸ್ ಕೊಟ್ಟಿದ್ರಂತೆ ಎಂಎಸ್ ಧೋನಿ!
Lawn Bowl : 2022ರ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಲಾನ್ ಬೌಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತೀಯ ತಂಡದ ಮಹಿಳಾ ತಂಡಕ್ಕೆ ಚಿನ್ನದಂತ ಸಲಹೆಗಳನ್ನು ಎಂಎಸ್ ಧೋನಿ ಅವರು ನೀಡಿದ್ದರಂತೆ.
ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth games 2022) ಭಾರತದ ಮಹಿಳೆಯರು ಐತಿಹಾಸಿಕ ಸಾಧನೆ ಮಾಡಿದ್ದರು. ಲಾನ್ ಬೌಲ್ಸ್ ವುಮೆನ್ಸ್ ಫೋರ್ಸ್ (Lawn Bowl) ವಿಭಾಗದಲ್ಲಿ ಭಾರತ ಮಹಿಳಾ ತಂಡ, ದಕ್ಷಿಣ ಆಫ್ರಿಕಾ ತಂಡದ (India vs South Africa) ವನಿತೆಯರನ್ನು 17-10 ಅಂಕಗಳೊಂದಿಗೆ ಮಣಿಸಿ ಬಂಗಾರದ ಪದಕಕ್ಕೆ ಕೊರೊಡ್ಡಿತ್ತು. ಆದರೆ ಈ ಹಿಂದೂಸ್ತಾನ್ ನಾರಿಯರ ಅಸಾಮಾನ್ಯ ಸಾಧನೆಯ ಹಿಂದೆ ಇದ್ದದ್ದೇ ಮಾಜಿ ನಾಯಕ ಎಂಎಸ್ ಧೋನಿಯಂತೆ! ಅಚ್ಚರಿ ಎನಿಸಿದ್ದರೂ ಇದೇ ಸತ್ಯ.
ನಿಮಗೆ ಅನಿಸಬಹುದು, ಅರೆ ಲಾನ್ ಬೌಲ್ಸ್ ಆಟಕ್ಕೂ ಎಂಎಸ್ ಧೋನಿಗೂ ಎತ್ತಣದಿತ್ತಣ ಸಂಬಂಧ ಎಂದು ನಿಮಗೆ ಆಶ್ಚರ್ಯ ಆಗಬಹುದು. ಆದರೆ, ಅದೇ ಸತ್ಯ. ಚಿನ್ನ ಗೆದ್ದ ತಂಡಕ್ಕೆ ಧೋನಿ ಚಿನ್ನದಂತ ಟಿಪ್ಸ್ ನೀಡಿದ್ದರು. ಹೌದು, ಲಾನ್ ಬೌಲ್ಸ್ನಲ್ಲಿ ಚಿನ್ನ ಗೆದ್ದು ಚರಿತ್ರೆ ಸೃಷ್ಟಿಸಿದ್ದ ಭಾರತದ ತಂಡದ ಈ ಅದ್ವೀತಿಯ ಸಾಧನೆಯಲ್ಲಿ ಕೂಲ್ ಕ್ಯಾಪ್ಟನ್ ಧೋನಿಗೂ ಪಾಲಿದೆ. ಈ ವಿಷಯವನ್ನು ಭಾರತ ಲಾನ್ಸ್ ಬೌಲ್ಸ್ ಆಟಗಾರ್ತಿ ಲವ್ಲೀ ಚೌಬೆ ಅವರೇ ಬಹಿರಂಗಪಡಿಸಿದ್ದಾರೆ.
ಲಾನ್ ಬೌಲ್ಸ್ ಆಟದ ಬಗ್ಗೆ ಮಾಹಿಗಿದೆ ಅದ್ಭುತ ಜ್ಞಾನ
ಹೌದು, ಮಾಹಿಗೆ ಬರೀ ಕ್ರಿಕೆಟ್ನಲ್ಲಿ ಅಷ್ಟೇ ಅಲ್ಲ, ಬೇರೆ ಆಟಗಳಲ್ಲೂ ಧೋನಿ ಪಂಟರ್ ಆಗಿದ್ದಾರೆ. ಲಾನ್ ಬೌಲ್ಸ್ ಆಟದ ಬಗ್ಗೆಯೂ ಧೋನಿ, ಅದ್ಭುತ ಜ್ಞಾನ, ಕೌಶಲಗಳನ್ನು ಹೊಂದಿದ್ದಾರೆ. ಅಂದು ಕಾಮನ್ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನ ಧೋನಿ, ಲಾನ್ ಬೌಲ್ಸ್ ವಿಭಾಗದಲ್ಲಿ ಪಾಲ್ಗೊಳ್ಳುವ ಆಟಗಾರ್ತಿರರನ್ನು ಭೇಟಿಯಾಗಿದ್ದರಂತೆ. ಅಭ್ಯಾಸ ಮಾಡುತ್ತಿದ್ದ ಜಾಗಕ್ಕೆ ತೆರಳಿ ಅತ್ಯಮೂಲ್ಯ ಸಲಹೆಗಳನ್ನು ನೀಡಿದ್ದರಂತೆ!
ಧೋನಿ ಬಗ್ಗೆ ಆಟಗಾರ್ತಿ ಲವ್ಲಿ ಚೌಬೆ ಹೇಳಿದ್ದಿಷ್ಟು
ಧೋನಿ, ಲಾನ್ಬೌಲ್ಸ್ ಆಟದ ಬಗ್ಗೆ ಅದ್ಭುತ ಜ್ಞಾನ ಹೊಂದಿದ್ದಾರೆ. ಅವರು ರಾಂಚಿಯಲ್ಲಿದ್ದಾಗ ಲಾನ್ ಬೌಲ್ಸ್ ಆಟಗಾರರನ್ನು ಭೇಟಿಯಾಗುತ್ತಿದ್ದರು. ಧೋನಿ ಸರ್ಗೆ ನಮ್ಮ ಕೋಚ್ನ ಪರಿಚಯವಿದೆ. ನಾವು ಅಭ್ಯಾಸ ಮಾಡುತ್ತಿದ್ದ ಜಾಗ ರಾಂಚಿಯಲ್ಲಿರೋ ದೇವ್ರಿ ಮಠ ದೇವಸ್ಥಾನಕ್ಕೆ ಹತ್ತಿರವಿದೆ. ಧೋನಿ ಅವರು ದೇವಸ್ಥಾನಕ್ಕೆ ಬಂದಾಗಲೆಲ್ಲಾ ನಮ್ಮನ್ನ ನೋಡೋಕೆ ಬರುತ್ತಿದ್ದರು. ನಮ್ಮ ಜೊತೆ ಆಟದ ಬಗ್ಗೆ ಚರ್ಚಿಸುತ್ತಿದ್ದರು. ನಮಗೆ ಸಲಹೆ ಕೂಡ ನೀಡುತ್ತಿದ್ದರು. ನಾನು ಆಸ್ಟ್ರೇಲಿಯಾಕ್ಕೆ ಹೋದಾಗಲೆಲ್ಲಾ ಲಾನ್ ಬೌಲ್ಸ್ ಆಡುತ್ತಿದ್ದೆ ಎಂದು ಧೋನಿ ಹೇಳಿದ್ರು ಎಂದು ಭಾರತದ ಲಾನ್ ಬೌಲ್ಸ್ ಆಟಗಾರ್ತಿ ಲವ್ಲಿ ಚೌಬೆ ಈ ಹಿಂದೆ ಹೇಳಿದ್ದರು.
ಕ್ರಿಕೆಟ್ ಜಗತ್ತು ಕಂಡ ಒನ್ ಆಫ್ ದಿ ಗ್ರೇಟ್ ಕ್ಯಾಪ್ಟನ್ ಧೋನಿ, ಗೇಮ್ಪ್ಲಾನ್ ರೂಪಿಸುವುದರಲ್ಲಿ ಮಾಸ್ಟರ್. ಎಂಎಸ್ ಧೋನಿ ರಣತಂತ್ರ, ಆಲೋಚನೆಗಳು ಸೋತಿದ್ದು, ಬಹಳ ಕಡಿಮೆ. ಧೋನಿ ಹೇಗೆ ಗೇಮ್ ರೀಡ್ ಮಾಡುತ್ತಿದ್ದರು ಎಂಬುದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದರೆ ಅಂಪೈರ್ ಡಿಸಿಷನ್ ರಿವ್ಯೂ ಸಿಸ್ಟಮ್. ಪಂದ್ಯದ ವೇಳೆ ಧೋನಿ ಡಿಆರ್ಎಸ್ ತಗೊಂಡ್ರೆ, ಆ ಬ್ಯಾಟ್ಸ್ಮನ್ ಔಟ್ ಅಂತಾನೇ ಲೆಕ್ಕ. ಇದೇ ಕಾರಣಕ್ಕೆ ಅಭಿಮಾನಿಗಳು ಇದನ್ನು ಧೋನಿ ರಿವ್ಯೂ ಸಿಸ್ಟಮ್ ಎಂದು ಕರೆಯುತ್ತಾರೆ.
ಧೋನಿ ತಮ್ಮ ಚಾಣಾಕ್ಷ ನಾಯಕತ್ವದ ಮೂಲಕ, ಭಾರತಕ್ಕೆ ಏಕದಿನ ಹಾಗೂ ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದು ಕೊಟ್ಟಿದ್ದಾರೆ. ಇನ್ನು ಆಟಗಾರರಲ್ಲಿನ ಕೌಶಲ್ಯ, ಪ್ರತಿಭೆ, ಸಾಮರ್ಥ್ಯ ಗುರುತಿಸುವುದರಲ್ಲಿ ಧೋನಿ ನಂತರವೇ ಯಾರಾದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ, ರವೀಂದ್ರ ಜಡೇಜಾ, ಅಶ್ವಿನ್ ಸೇರಿದಂತೆ ಹಲವು ಆಟಗಾರರನ್ನು ಬೆಳೆಸಿದ್ದು ಕೂಡ ಧೋನಿಯೇ.
ಅದೇನೆ ಇರಲಿ, ಬರೀ ಭಾರತೀಯ ಕ್ರಿಕೆಟ್ನಲ್ಲಿ ಮಾತ್ರ ಅಲ್ಲ, ಬೇರೆ ಆಟಗಳ ಯಶಸ್ಸಿನಲ್ಲೂ ಧೋನಿ ಪ್ರಮುಖ ಪಾತ್ರವಹಿಸ್ತಿದ್ದಾರೆ. ಆ ಮೂಲಕ ಸಪ್ತ ಸಾಗರದಾಚೆಗೂ, ತ್ರಿವರ್ಣ ಧ್ವಜ ಮುಗಿಲೆತ್ತರಕ್ಕೆ ಹಾರಲು ಕಾರಣವಾಗುತ್ತಿದ್ದಾರೆ. ಇದಕ್ಕೆ ಹೇಳೋದು ಧೋನಿ ಅಂದರೆ ಸಾಮಾನ್ಯ ಅಲ್ಲ ಅಂತ!