Jasprit Bumrah: ಭಾರತ vs ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ
India vs England: ಭಾರತದ ವೇಗಿ ಜಸ್ಪ್ರೀತ್ ಬುಮ್ರಾಗೆ ಇಂಗ್ಲೆಂಡ್ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಶ್ರಾಂತಿ ನೀಡಲು ನಿರ್ಧರಿಸಲಾಗಿತ್ತು. ಇದೀಗ ನಾಲ್ಕನೇ ಪಂದ್ಯದಿಂದ ಅವರಿಗೆ ರೆಸ್ಟ್ ನೀಡಲಾಗುತ್ತಿದೆ. ಆ ಬಳಿಕ ಧರ್ಮಶಾಲಾದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅವರು ಆಡುತ್ತಾರೆಯೇ ಎಂಬ ಬಗ್ಗೆ ಇನ್ನಷ್ಟೇ ನಿರ್ಧಾರ ಮಾಡಬೇಕಾಗಿದೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ (India vs England) ಪಂದ್ಯದಲ್ಲಿ ಭಾರತ ತಂಡ ದಾಖಲೆಯ ಅಂತರದಿಂದ ಗೆದ್ದು ಬೀಗಿದೆ. ಇದಾದ ಬಳಿಕ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ಆರಂಭವಾಗಿದೆ. ರಾಂಚಿಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ, ಟೀಮ್ ಇಂಡಿಯಾದಲ್ಲಿ ಹಲವಾರು ಬದಲಾವಣೆಗಳಾಗುವ ಸಾಧ್ಯತೆ ಇವೆ.
ಭಾರತ ತಂಡದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ, ರಾಂಚಿ ಟೆಸ್ಟ್‌ನಿಂದ ವಿಶ್ರಾಂತಿ ನೀಡಲಾಗುತ್ತದೆ ಎಂದು ವರದಿಯಾಗಿದೆ. ಕ್ರಿಕ್‌ಬಜ್ ಮಾಡಿರುವ ವರದಿ ಪ್ರಕಾರ, ಭಾರತ ತಂಡದೊಂದಿಗೆ ರಾಜ್‌ಕೋಟ್‌ನಿಂದ ರಾಂಚಿಗೆ ಬುಮ್ರಾ ಪ್ರಯಾಣಿಸುವ ಸಾಧ್ಯತೆಯಿಲ್ಲ. ತಂಡವು ಮಂಗಳವಾರ ರಾಜ್‌ಕೋಟ್‌ನಿಂದ ಜಾರ್ಖಂಡ್ ರಾಜಧಾನಿಗೆ ಹೊರಡಲಿದ್ದು, ಬುಮ್ರಾ ಸೋಮವಾರ ಅಹಮದಾಬಾದ್‌ಗೆ ತೆರಳಬಹುದು ಎಂದು ವರದಿ ಹೇಳಿದೆ.
ಧರ್ಮಶಾಲಾ ಟೆಸ್ಟ್‌ಗೂ ಬುಮ್ರಾ ಅನುಮಾನ
ಅತ್ತ ಸರಣಿಯ ಕೊನೆಯ ಪಂದ್ಯವು ಧರ್ಮಶಾಲಾದಲ್ಲಿ ನಡೆಯಲಿದ್ದು, ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಬುಮ್ರಾ ಆಡುತ್ತಾರೆಯೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ನಾಲ್ಕನೇ ಪಂದ್ಯದ ಫಲಿತಾಂಶವನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ | ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ತಂಡ ಸೇರಿಕೊಳ್ಳಲಿದ್ದಾರೆ ಕೆಎಲ್ ರಾಹುಲ್; ಮತ್ತೆ ಬೌಲಿಂಗ್ ಮಾಡಲು ಬೆನ್ ಸ್ಟೋಕ್ಸ್ ಕಾತರ
ರಾಂಚಿ ಟೆಸ್ಟ್ ಪಂದ್ಯವು ಫೆಬ್ರವರಿ 23ರ ಶುಕ್ರವಾರದಿಂದ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ರೋಹಿತ್ ಪಡೆ ಗೆದ್ದರೆ, ಭಾರತವು ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಂತಾಗುತ್ತದೆ.
ವಿಶ್ರಾಂತಿ ನೀಡಲು ಕಾರಣವೇನು?
ಮುಂದಿನ ಎರಡು ತಿಂಗಳಲ್ಲಿ ಐಪಿಎಲ್ ಮತ್ತು ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಸತತ ಪಂದ್ಯಗಳಲ್ಲಿ ಆಡುತ್ತಿರುವ ವೇಗದ ಬೌಲರ್‌ಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಆ ಮೂಲಕ ಅವರ ಕೆಲಸದ ಹೊರೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ | ಭಾರತದ ಎದುರು ಶರಣಾದ ಬಾಜ್ಬಾಲ್; ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ 434 ರನ್ಗಳ ಗೆಲುವು, ಸರಣಿಯಲ್ಲಿ ಮುನ್ನಡೆ
ಸತತ ಬೆನ್ನುನೋವಿನಿಂದಾಗಿ ಬುಮ್ರಾ ಸುಮಾರು ಒಂದು ವರ್ಷದಿಂದ ಮೈದಾನದಿಂದ ಹೊರಗುಳಿದಿದ್ದರು. 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗಿಂತ ಕೆಲವೇ ದಿನಗಳಿಗಿಂತ ಮುನ್ನ ಉನ್ನತ ಮಟ್ಟದ ಕ್ರಿಕೆಟ್‌ಗೆ ಬುಮ್ರಾ ಮರಳಿದ್ದರು. ಡಿಸೆಂಬರ್ ಮತ್ತು ಜನವರಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡರು.
ಸರಣಿಯಲ್ಲಿ 17 ವಿಕೆಟ್
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ, ಬುಮ್ರಾ ಮಾರಕ ಬೌಲಿಂಗ್ ದಾಳಿ ನಡೆಸುತ್ತಿದ್ದಾರೆ. ಮೂರು ಪಂದ್ಯಗಳಲ್ಲಿ 17 ವಿಕೆಟ್‌ಗಳೊಂದಿಗೆ ಸರಣಿಯ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಿಂದ ವೇಗಿ ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿತ್ತು. ಸದ್ಯ, ಟೀಮ್ ಮ್ಯಾನೇಜ್ಮೆಂಟ್ ಬುಮ್ರಾಗೆ ಬದಲಿ ಆಟಗಾರನನ್ನು ಹುಡುಕುತ್ತದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ಮೂರನೇ ಪಂದ್ಯದಿಂದ ಬುಮ್ರಾಗೆ ವಿಶ್ರಾಂತಿ ನೀಡುವ ಸುಳಿವಿತ್ತು. ಆದರೆ, ಅಂತಿಮವಾಗಿ ಅವರನ್ನು ಆಡಿಸುವ ನಿರ್ಧಾರಕ್ಕೆ ಬರಲಾಯ್ತು.
ಇದನ್ನೂ ಓದಿ | WTC Points Table: ಆಸ್ಟ್ರೇಲಿಯಾ ಹಿಂದಿಕ್ಕಿ ಮೇಲೇರಿದ ಭಾರತ; ಫೈನಲ್ ರೇಸ್ನಿಂದ ಇಂಗ್ಲೆಂಡ್ ಬಹುತೇಕ ಹೊರಕ್ಕೆ
ರಣಜಿ ಪಂದ್ಯದಲ್ಲಿ ಬಂಗಾಳ ಪರ ಆಡಲು ಮೂರನೇ ಟೆಸ್ಟ್‌ನಿಂದ ಬಿಡುಗಡೆಯಾಗಿದ್ದ ವೇಗಿ ಮುಖೇಶ್ ಕುಮಾರ್, ರಾಂಚಿಯಲ್ಲಿ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ಗೆ ಭಾರತ ಸಂಭಾವ್ಯ ಆಡುವ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್.
(This copy first appeared in Hindustan Times Kannada website. To read more like this please logon to kannada.hindustantimes.com)