ಕೆನಡಾ ವಿರುದ್ಧ ಅಮೆರಿಕಗೆ ದಾಖಲೆಯ ಜಯ ತಂದುಕೊಟ್ಟ ಆರನ್ ಜೋನ್ಸ್-ಆಂಡ್ರೀಸ್ ಗೌಸ್ ಯಾರು; ಇಬ್ಬರೂ ವಲಸಿಗರು ವಾಸ್ತುಶಿಲ್ಪಿಗಳು
Aaron Jones and Andries Gous : ಟಿ20 ವಿಶ್ವಕಪ್ 2024 ಉದ್ಘಾಟನಾ ಪಂದ್ಯದಲ್ಲಿ ಕೆನಡಾ ವಿರುದ್ಧ ಅಬ್ಬರಿಸಿದ ಆರನ್ ಜೋನ್ಸ್ ಮತ್ತು ಆಂಡ್ರೀಸ್ ಗೌಸ್ ಅವರು ಆರ್ಭಟಿಸಿ ಅಮೆರಿಕಗೆ ಐತಿಹಾಸಿಕ ದಾಖಲೆ ತಂದುಕೊಟ್ಟಿದ್ದಾರೆ. ಈ ಇಬ್ಬರ ಹಿನ್ನೆಲೆ ಇಲ್ಲಿದೆ?
ಬಹುನಿರೀಕ್ಷಿತ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಅದ್ಧೂರಿ ಆರಂಭ ಪಡೆದುಕೊಂಡಿತು. ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ಮತ್ತು ಕೆನಡಾ ತಂಡಗಳು ಸೆಣಸಾಟ ನಡೆಸಿದ್ದು, ಕ್ರಿಕೆಟ್ ಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸಿತು. ಹೌದು, ಆರಂಭಿಕ ಪಂದ್ಯವು ನಿರೀಕ್ಷೆಗೂ ಮೀರಿ ಉತ್ತಮ ಬೆಂಬಲ ಪಡೆಯಿತು. ಈ ಪಂದ್ಯದಲ್ಲಿ ಕೆನಡಾ ವಿರುದ್ಧ ಅಮೆರಿಕೆ ಮನಮೋಹಕ ಗೆಲುವು ಸಾಧಿಸಿದೆ. ಅದರಲ್ಲೂ ಆರನ್ ಜೋನ್ಸ್ ಆಡಿದ ಆಟಕ್ಕೆ ಕ್ರಿಕೆಟ್ ಜಗತ್ತೇ ಸಲಾಂ ಎನ್ನುತ್ತಿದೆ.
ಡಲ್ಲಾಸ್ನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಸೋತ ಕೆನಡಾ ಮೊದಲು ಬ್ಯಾಟಿಂಗ್ ನಡೆಸಿತು. ನವನೀತ್ ಧಲಿವಾಲ್ (61) ಮತ್ತು ನಿಕೋಲಸ್ ಕಿರ್ಟನ್ (51) ಅವರು ತಲಾ ಅರ್ಧಶತಕ ಸಿಡಿಸಿದ ಪರಿಣಾಮ ತನ್ನ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಅಮೆರಿಕ 17.4 ಓವರ್ಗಳಲ್ಲೇ ಜಯದ ನಗೆ ಬೀರಿತು. ಆರನ್ ಜೋನ್ಸ್ (94) ಮತ್ತು ಆಂಡ್ರೀಸ್ ಗೌಸ್ (65) ಅವರ ಅಜೇಯ ಆಟದಿಂದ ಗೆದ್ದು ಬೀಗಿತು.
ಜೋನ್ಸ್ ಮತ್ತು ಗೌಸ್ ಸೇರಿಕೊಂಡು 131 ರನ್‌ಗಳ ಬೃಹತ್ ಪಾಲುದಾರಿಕೆ ಒದಗಿಸಿ ಸೋಲುವ ಭೀತಿಗೆ ಸಿಲುಕಿದ್ದ ತಂಡಕ್ಕೆ ಜಯದ ಕೊಡುಗೆ ನೀಡಿದರು. ವಿಶ್ವಕಪ್‌ನ ಆರಂಭಿಕ ದಿನವೇ ಯುಎಸ್‌ಎ ಐತಿಹಾಸಿಕ ಗೆಲುವು ಸಾಧಿಸಲು ನೆರವಾದರು. ಡಲ್ಲಾಸ್‌ನಲ್ಲಿ ಕೆನಡಾ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಒಂದು ಹಂತದಲ್ಲಿ ಅಮೆರಿಕ 8 ಓವರ್ಗೆ 48ಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ತಂಡದ ಗೆಲುವಿಗೆ 72 ಎಸೆತಗಳಲ್ಲಿ 147 ರನ್ ಬೇಕಿತ್ತು.
ಈ ವೇಳೆ ಒಂದಾದ ಆರನ್ ಜೋನ್ಸ್ ಮತ್ತು ಆಂಡ್ರೀಸ್ ಗೌಸ್ ಅವರು ಗೇರ್ ಬದಲಾಯಿಸಿ ಕೆನಡಾ ಬೌಲರ್ಗಳ ಎದುರು ದಂಡಯಾತ್ರೆ ನಡೆಸಿದರು. ಅದರಲ್ಲೂ ಜೋನ್ಸ್ ಬರೋಬ್ಬರಿ 10 ಸಿಕ್ಸರ್ ಚಚ್ಚಿದರು. ಗೌಸ್ ಅವರು 46 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಿತ 65 ರನ್ ಸಿಡಿಸಿದರೆ, ಜೋನ್ಸ್ ಅವರು 10 ಸಿಕ್ಸರ್, 4 ಬೌಂಡರಿ ಸಹಿತ ಅಜೇಯ 94 ರನ್ ಬಾರಿಸಿದರು. ವಿಶೇಷ ಅಂದರೆ ಇಬ್ಬರೂ ಅರ್ಕಿಟೆಕ್ಚರ್ ಎಂಬುದು ವಿಶೇಷ. ಇವರಿಬ್ಬರ ಅದ್ಭುತ ಪ್ರದರ್ಶನದಿಂದ 14 ಎಸೆತಗಳನ್ನು ಬಾಕಿ ಉಳಿಸಿಯೇ ಅಮೆರಿಕ ಜಯದ ನಗೆ ಬೀರಿತು.
ಬರೋಬ್ಬರಿ 10 ಸಿಕ್ಸರ್ ಚಚ್ಚಿದ ಆರನ್ ಜೋನ್ಸ್ ಯಾರು?
ಯುಎಸ್ ಪೌರತ್ವವನ್ನು ಪಡೆದ ಬಾರ್ಬಡೋಸ್ ಮೂಲದ ಕ್ರಿಕೆಟಿಗ ಆರನ್ ಜೋನ್ಸ್, 2019ರಲ್ಲಿ ಯುಎಇ ವಿರುದ್ಧ ಯುಎಸ್ಎ ತಂಡಕ್ಕೆ ಪದಾರ್ಪಣೆ ಮಾಡಿದರು. 2024ರ ಅಕ್ಟೋಬರ್ 19ರಂದು ಜನಿಸಿದ ಜೋನ್ಸ್, ವಿಶ್ವದ ವಿವಿಧ ಫ್ರಾಂಚೈಸಿ ಲೀಗ್ಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಮೇಜರ್ ಲೀಗ್ ಕ್ರಿಕೆಟ್ (MLC), ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ (BPL) ರಂಗ್‌ಪುರ್ ರೈಡರ್ಸ್, ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (CPL) ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್‌ನಲ್ಲಿ ಸಿಯಾಟಲ್ ಓರ್ಕಾಸ್‌ಗಾಗಿ ಆಡಿದ್ದಾರೆ.
27 ಅಂತಾರಾಷ್ಟ್ರೀಯ ಟಿ20ಐ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಜೋನ್ಸ್, 28.11ರ ಬ್ಯಾಟಿಂಗ್ ಸರಾಸರಿಯಲ್ಲಿ 478 ರನ್ ಗಳಿಸಿದ್ದಾರೆ. ಈತ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿ. 2019ರಲ್ಲಿ ಕ್ರಿಕೆಟ್ಗೆ ಪದಾರ್ಪಣೆ ಮೊದಲು ಉತ್ತಮ ಲೆಗ್ ಸ್ಪಿನ್ನರ್ ಆಗಿಯೂ ಕಾಣಿಸಿಕೊಂಡರು. ನಂತರ ಅವರ ಕೋಚ್ ಹೇಳಿದ ನಂತರ ಬ್ಯಾಟಿಂಗ್ ಕಡೆ ಗಮನ ಹರಿಸಿದರು. ಇದೀಗ ಪರಾಕ್ರಮ ಮೆರೆಯುತ್ತಿದ್ದಾರೆ. ಅದು ಜೂನ್ 2ರ ಭಾನುವಾರ ಕೆನಡಾ ಪಂದ್ಯದಲ್ಲಿ ಫಲ ಕೊಟ್ಟಿದೆ.
ಆಕರ್ಷಕ ಅರ್ಧಶತಕ ಸಿಡಿಸಿದ ಆಂಡ್ರೀಸ್ ಗೌಸ್ ಯಾರು?
30 ವರ್ಷ ವಯಸ್ಸಿನ ವಿಕೆಟ್ ಕೀಪರ್ ಬ್ಯಾಟರ್ ಗೌಸ್ ಅವರು ಮೊದಲು ಆಡಿದ್ದು ದಕ್ಷಿಣ ಆಫ್ರಿಕಾ ಪರ. 2013ರಲ್ಲಿ ಸೌತ್ ಆಫ್ರಿಕಾ ಪರ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು. ದೇಶೀಯ ಕ್ರಿಕೆಟ್ನಲ್ಲಿ ಫ್ರೀ ಸ್ಟೇಟ್ ಮತ್ತು ನೈಟ್ಸ್ ಪರ ಕಣಕ್ಕಿಳಿದಿದ್ದರು. 2021ರಲ್ಲಿ ಗೌಸ್ ಯುಎಸ್ಎಗೆ ಸ್ಥಳಾಂತರಗೊಂಡು ಅದೇ ತಂಡದ ಪರ ಆಡಿದರು. ಕೆನಡಾ ವಿರುದ್ಧ ಈಗಾಗಲೇ 4 ಟಿ20ಐಗಳಲ್ಲಿ 3 ಅರ್ಧಶತಕ ಸಿಡಿಸಿ ಪ್ರಭಾವ ಬೀರಿದ್ದಾರೆ. 140 ಸ್ಟ್ರೈಕಿಂಗ್ ರೇಟ್ ಹೊಂದಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್‌ನ ಉದ್ಘಾಟನಾ ಋತುವಿನಲ್ಲಿ ವಾಷಿಂಗ್ಟನ್ ಫ್ರೀಡಮ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅಬುಧಾಬಿ ಟಿ10 ನಲ್ಲಿ ಮೋರಿಸ್ವಿಲ್ಲೆ ಸ್ಯಾಂಪ್ ಆರ್ಮಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಐಎಲ್ಟಿ20ನಲ್ಲಿ ಅಬುಧಾಬಿ ನೈಟ್ ರೈಡರ್ಸ್‌ನೊಂದಿಗೆ, ಡೆಸರ್ಟ್ ವೈಪರ್ಸ್ ವಿರುದ್ಧ ತನ್ನ ಚೊಚ್ಚಲ ಪಂದ್ಯದಲ್ಲಿ 50 ಎಸೆತಗಳಲ್ಲಿ 95 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಟಿ20 ವಿಶ್ವಕಪ್ 2024ರ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ