ಕನ್ನಡ ಸುದ್ದಿ  /  Cricket  /  Mohammed Siraj Jumps To Top Spot In Icc Odi Bowling Rankings After Asia Cup Final Cricket News In Kannada Jra

ಏಕದಿನ ಬೌಲಿಂಗ್‌ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟ ಮೊಹಮ್ಮದ್‌ ಸಿರಾಜ್

Mohammed Siraj: ಭಾರತದ ವೇಗಿ ಮೊಹಮ್ಮದ್‌ ಸಿರಾಜ್‌ ಐಸಿಸಿ ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ ಮತ್ತೆ ನಂಬರ್‌ ವನ್‌ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಏಕದಿನ ಶ್ರೇಯಾಂಕದಲ್ಲಿ ನಂಬರ್‌ ವನ್‌ ಪಟ್ಟ ಪಡೆದ ಮೊಹಮ್ಮದ್‌ ಸಿರಾಜ್‌
ಏಕದಿನ ಶ್ರೇಯಾಂಕದಲ್ಲಿ ನಂಬರ್‌ ವನ್‌ ಪಟ್ಟ ಪಡೆದ ಮೊಹಮ್ಮದ್‌ ಸಿರಾಜ್‌ (PTI)

ಏಷ್ಯಾಕಪ್‌ (Asia Cup Final) ಫೈನಲ್‌ ಪಂದ್ಯದಲ್ಲಿ ದಾಖಲೆಯ ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದ ಭಾರತದ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ (Mohammed Siraj), ಏಕದಿನ ಬೌಲಿಂಗ್‌ ಶ್ರೇಯಾಂಕದಲ್ಲಿ (ICC Men’s ODI Bowling Rankings) ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.

ಇಂದು (ಸೆಪ್ಟೆಂಬರ್ 20, 2023 ಮಂಗಳವಾರ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ವೇಗಿ ಮತ್ತೊಮ್ಮೆ ವಿಶ್ವದ ನಂಬರ್ ವನ್ ಏಕದಿನ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಸಿರಾಜ್ ತಮ್ಮ ಹಳೆಯ ಶ್ರೇಯಾಂಕದಿಂದ ಬರೋಬ್ಬರಿ 8 ಸ್ಥಾನ ಮೇಲೇರಿ ಮೊದಲ ಸ್ಥಾನ ಪಡೆದಿದ್ದಾರೆ. ಈ ಹಿಂದೆ ನಂಬರ್‌ ವನ್‌ ಸ್ಥಾನದಲ್ಲಿದ್ದ ಆಸ್ಟ್ರೇಲಿಯದ ಜೋಶ್ ಹೇಜಲ್‌ವುಡ್ ಅವರನ್ನು ಕೆಳಕ್ಕೆ ತಳ್ಳಿದ್ದಾರೆ.

ಇತ್ತೀಚೆಗೆ ನಡೆದ ಏಷ್ಯಾಕಪ್ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅವರು 21 ರನ್‌ ಬಿಟ್ಟುಕೊಟ್ಟು ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸಿದ್ದರು. ಇದು ಸಿರಾಜ್‌ ಶ್ರೇಯಾಂಕದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಟೂರ್ನಿಯಲ್ಲಿ ಅವರು 10 ವಿಕೆಟ್‌ಗಳನ್ನು ಕಬಳಿಸಿದ್ದರು. ಮೊದಲ ಸ್ಥಾನಕ್ಕೆ ಲಗ್ಗೆ ಹಾಕುವುದರೊಂದಿಗೆ ಅವರು ಹೇಜಲ್‌ವುಡ್, ಟ್ರೆಂಟ್ ಬೋಲ್ಟ್, ರಶೀದ್ ಖಾನ್ ಮತ್ತು ಮಿಚೆಲ್ ಸ್ಟಾರ್ಕ್‌ರನ್ನು ಹಿಂದಿಕ್ಕಿದ್ದಾರೆ.

ಈ ವರ್ಷದ ಜನವರಿಯಲ್ಲಿ ಮೊದಲ ಬಾರಿಗೆ ಅಗ್ರ ಶ್ರೇಯಾಂಕ ಪಡೆದ ಸಿರಾಜ್, ಮಾರ್ಚ್ ತಿಂಗಳಲ್ಲಿ ಸ್ಥಾನ ಕಳೆದುಕೊಂಡರು. ಆಸೀಸ್‌ ವೇಗಿ ಜೋಶ್ ಹೇಜಲ್‌ವುಡ್‌ ಮೊದಲ ಸ್ಥಾನಕ್ಕೆ ಬಡ್ತಿ ಪಡೆದರು. ಏಷ್ಯಾಕಪ್‌ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾವನ್ನು ಕೇವಲ 50 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಸಿರಾಜ್‌ ಪಾತ್ರ ಪ್ರಮುಖವಾಗಿತ್ತು. ಇವರ ಪ್ರದರ್ಶನದ ನೆರವಿನಿಂದ ಭಾರತವು 10 ವಿಕೆಟ್‌ಗಳ ಜಯ ಸಾಧಿಸಿತು. ಹೀಗಾಗಿ ಎಂಟು ಸ್ಥಾನ ಮೇಲೇರಿ ನಂಬರ್‌ ವನ್‌ ಪಟ್ಟ ಅಲಂಕರಿಸಿದ್ದಾರೆ.

ಏಷ್ಯಾಕಪ್‌ನ ಬಳಿಕ ಅಫ್ಘಾನಿಸ್ತಾನದ ಸ್ಪಿನ್ನರ್‌ಗಳಾದ ಮುಜೀಬ್ ಉರ್ ರೆಹಮಾನ್ 4ನೇ ಸ್ಥಾನ ಮತ್ತು ರಶೀದ್ ಖಾನ್ 5ನೇ ಸ್ಥಾನ ಪಡೆಯುವ ಮೂಲಕ ಅಗ್ರ ಐದರಲ್ಲಿ ಸ್ಥಾನ ಪಡೆದಿದ್ದಾರೆ.

29 ವರ್ಷದ ಸಿರಾಜ್ ಇದುವರೆಗೆ 29 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಇದರಲ್ಲಿ 53 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ, ವೇಗವಾಗಿ 50 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಈವರೆಗೆ 21 ಟೆಸ್ಟ್ ಪಂದ್ಯಗಳಿಂದ 59 ವಿಕೆಟ್ ಪಡೆದಿದ್ದಾರೆ. ಸದ್ಯ ಮೊಹಮ್ಮದ್ ಸಿರಾಜ್ ಭಾರತ ತಂಡದ ಪ್ರಮುಖ ಬೌಲರ್ ಎನಿಸಿಕೊಂಡಿದ್ದಾರೆ. ಹೊಸ ಚೆಂಡಿನೊಂದಿಗೆ ಪವರ್‌ಪ್ಲೇ ಅವಧಿಯಲ್ಲಿ ಎದುರಾಳಿ ತಂಡಕ್ಕೆ ಸಿರಾಜ್‌ ಮಾರಕವಾಗುತ್ತಿದ್ದಾರೆ. ಹೀಗಾಗಿ ಮುಂದಿನ ವಿಶ್ವಕಪ್‌ನಲ್ಲಿಯೂ ಸಿರಾಜ್‌ ಮೇಲೆ ಭಾರಿ ಭರವಸೆ ಇದೆ. ಹಿಂದೆ ಭಾರತ ತಂಡದ ನಾಯಕನಾಗಿದ್ದ ವಿರಾಟ್‌ ಕೊಹ್ಲಿ, ಸಿರಾಜ್‌ ಮೇಲೆ ಭಾರಿ ವಿಶ್ವಾಸವಿಟ್ಟಿದ್ದರು. ಇದೀಗ ನಾಯಕ ರೋಹಿತ್‌ ಶರ್ಮಾ, ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ಟೀಮ್‌ ಇಂಡಿಯಾ ಮ್ಯಾನೇಜ್‌ಮೆಂಟ್‌ ಕೂಡಾ ಮಿಯಾನ್‌ ಮ್ಯಾಜಿಕ್ ಬಗ್ಗೆ ನಂಬಿಕೆ ಇಟ್ಟಿದ್ದಾರೆ.‌