ದೇಶವನ್ನು ಹೆಮ್ಮೆಪಡುವಂತೆ ಮಾಡು ಎಂದಿದ್ದ ತಂದೆ; ಅಪ್ಪ ಸತ್ತಾಗ ಅಂತ್ಯಕ್ರಿಯೆಗೆ ಬರಲಾಗದೆ ದುಃಖಿಸಿದ್ದ ಸಿರಾಜ್; ಅಸಲಿಗೆ ಅಂದು ಏನಾಗಿತ್ತು?
ಕನ್ನಡ ಸುದ್ದಿ  /  ಕ್ರಿಕೆಟ್  /  ದೇಶವನ್ನು ಹೆಮ್ಮೆಪಡುವಂತೆ ಮಾಡು ಎಂದಿದ್ದ ತಂದೆ; ಅಪ್ಪ ಸತ್ತಾಗ ಅಂತ್ಯಕ್ರಿಯೆಗೆ ಬರಲಾಗದೆ ದುಃಖಿಸಿದ್ದ ಸಿರಾಜ್; ಅಸಲಿಗೆ ಅಂದು ಏನಾಗಿತ್ತು?

ದೇಶವನ್ನು ಹೆಮ್ಮೆಪಡುವಂತೆ ಮಾಡು ಎಂದಿದ್ದ ತಂದೆ; ಅಪ್ಪ ಸತ್ತಾಗ ಅಂತ್ಯಕ್ರಿಯೆಗೆ ಬರಲಾಗದೆ ದುಃಖಿಸಿದ್ದ ಸಿರಾಜ್; ಅಸಲಿಗೆ ಅಂದು ಏನಾಗಿತ್ತು?

Mohammed Siraj: 2020ರ ನವೆಂಬರ್ 20. ಈ ದಿನ ಸಿರಾಜ್ ಜೀವನದಲ್ಲಿ ಅತ್ಯಂತ ಕರಾಳ ದಿನ. ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿದ್ದ ಜನ್ಮಕೊಟ್ಟ ತಂದೆ, 53 ವರ್ಷದ ಮೊಹಮ್ಮದ್ ಗೌಸ್, ಹೈದರಾಬಾದ್‌ನಲ್ಲಿ ಇಹಲೋಕ ತ್ಯಜಿಸಿದ್ದರು.

ಅಪ್ಪ ಸತ್ತಾಗ ಅಂತ್ಯಕ್ರಿಯೆಗೆ ಬರಲಾಗದೆ ದುಃಖಿಸಿದ್ದ ಮೊಹಮ್ಮದ್ ಸಿರಾಜ್.
ಅಪ್ಪ ಸತ್ತಾಗ ಅಂತ್ಯಕ್ರಿಯೆಗೆ ಬರಲಾಗದೆ ದುಃಖಿಸಿದ್ದ ಮೊಹಮ್ಮದ್ ಸಿರಾಜ್.

ಏಷ್ಯಾಕಪ್​ ಟೂರ್ನಿಯ ಫೈನಲ್​​ನಲ್ಲಿ (Asia Cup Final 2023) ಪ್ರಚಂಡ ಬೌಲಿಂಗ್​ ಮೂಲಕ ಕ್ರಿಕೆಟ್​​ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಭಾರತ ತಂಡದ ವೇಗದ ಬೌಲರ್​​ ಮೊಹಮ್ಮದ್ ಸಿರಾಜ್ (Mohammed Siraj)​​, ಎಲ್ಲೆಲ್ಲೂ ಟಾಪ್​ ಟ್ರೆಂಡಿಂಗ್​​​​ನಲ್ಲಿದ್ದಾರೆ. ನೆಟ್ಟಿಗರಂತೂ ಸಿರಾಜ್ ಕುರಿತ ವೈಯಕ್ತಿಕ ಜೀವನದ ಬಗ್ಗೆ ಗೂಗಲ್​​​​ನಲ್ಲಿ ಹುಡುಕಾಡಿದ್ದೇ ಹುಡುಕಾಡಿದ್ದು. ಅವರ ತಂದೆ-ತಾಯಿ, ಆಸ್ತಿ, ಸ್ಯಾಲರಿ, ವಯಸ್ಸು.. ಹೀಗೆ ಸಿರಾಜ್​ರ ವೈಯಕ್ತಿಕ ಜೀವನದ ಕುರಿತು ದೊಡ್ಡ ಮಟ್ಟದಲ್ಲಿ ಹುಡುಕಾಟ ನಡೆಸಿ ತಿಳಿದುಕೊಂಡಿದ್ದಾರೆ.

ಆದರೆ, ಸಿರಾಜ್ ಕುರಿತಂತೆ ನಾವಿಂದು ಹೇಳುವ ವಿಷಯ ಸಾಕಷ್ಟು ಮಂದಿಗೆ ತಿಳಿದಿರುವುದಿಲ್ಲ. ತನ್ನ ತಂದೆ ಅನಾರೋಗ್ಯದಿಂದ ನಿಧನರಾದರೂ ಅವರ ಅಂತ್ಯ ಸಂಸ್ಕಾರಕ್ಕೆ ಬರಲಾಗದೆ, ದುಃಖಿಸಿದ್ದರು. ಏಕಾಂಗಿಯಾಗಿ ಕೋಣೆಯಲ್ಲಿ ಕೂತು ಕಣ್ಣೀರು ಹಾಕಿದ್ದರು. ಅಂದು ಸಿರಾಜ್​ ನೋವಿನ ಜೊತೆಗೆ ದೇಶಪ್ರೇಮವನ್ನೂ ಮೆರೆದಿದ್ದರು. ಹೌದು, ಜೀವನಕೊಟ್ಟ ತಂದೆಯ ಅಂತಿಮ ವಿಧಿ-ವಿಧಾನಗಳಿಗೂ ಬರಲಾಗದೆ, ಹಸಿರು ಅಖಾಡದಲ್ಲಿ ದೇಶದ ಪರ ಆಡಿದ್ದರು. ಆಟದ ಮೇಲಿರುವ ಸಿರಾಜ್​ರ ಬದ್ದತೆಯೇ ಇಂದು ಅವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ.

ತಂದೆ ನಿಧನರಾದಾಗ ಆಸೀಸ್​​ನಲ್ಲಿದ್ದ ಸಿರಾಜ್

2020ರ ನವೆಂಬರ್ 20. ಈ ದಿನ ಸಿರಾಜ್ ಜೀವನದಲ್ಲಿ ಅತ್ಯಂತ ಕರಾಳ ದಿನ. ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿದ್ದ ಜನ್ಮಕೊಟ್ಟ ತಂದೆ, 53 ವರ್ಷದ ಮೊಹಮ್ಮದ್ ಗೌಸ್, ಹೈದರಾಬಾದ್‌ನಲ್ಲಿ ಇಹಲೋಕ ತ್ಯಜಿಸಿದ್ದರು. ಆದರೆ ತಂದೆಯ ಅಂತ್ಯಕ್ರಿಯೆಯನ್ನು ಮುಂದೆ ನಿಂತು ಮಾಡಬೇಕಿದ್ದ ಮಗ ಅಂದು ಆಸ್ಟ್ರೇಲಿಯಾದಲ್ಲಿದ್ದರು. ಬಾರ್ಡರ್​​-ಗವಾಸ್ಕರ್​ ಟ್ರೋಫಿಗೆ ಆಯ್ಕೆಯಾಗಿದ್ದ ಕಾರಣ ಸಿರಾಜ್ ಆಸೀಸ್​​​ ನಾಡಿಗೆ ಪ್ರಯಾಣಿಸಿದ್ದರು. ಕೊರೊನಾ ಪ್ರೋಟೋಕಾಲ್​​​ನಿಂದ ಭಾರತಕ್ಕೆ ಬರಲು ಸಾಧ್ಯವಾಗದೆ ದುಃಖಿಸಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡದಲ್ಲಿದ್ದ ಸಿರಾಜ್​ಗೆ ಸಿಡ್ನಿಯ ಬ್ಲ್ಯಾಕ್‌ಟೌನ್ ಓವಲ್‌ನಲ್ಲಿ ಅಭ್ಯಾಸ ಮುಗಿಸಿದ ನಂತರ ತಂದೆ ಸಾವಿನ ಸುದ್ದಿ ತಿಳಿಯಿತು. ದುಃಖದ ಸಂಗತಿ ಅಂದರೆ, ಸಿರಾಜ್ ಆಸ್ಟ್ರೇಲಿಯಾದಲ್ಲಿದ್ದ ಸಂದರ್ಭದಲ್ಲಿ ಲಾಕ್​​ಡೌನ್​ ಕೊರೊನಾ ವೈರಸ್ ನಿರ್ಬಂಧಗಳು ಜಾರಿಯಲ್ಲಿದ್ದ ಕಾರಣ ಅಂತಿಮ ವಿಧಿ ವಿಧಾನಗಳಿಗೆ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಇದು ಸಿರಾಜ್​​ರನ್ನು ಬಹಳಷ್ಟು ಕಾಡುವಂತೆ ಮಾಡಿತ್ತು. ಆಸೀಸ್​ಗೆ ಪ್ರಯಾಣಿಸಿದ್ದ ಸಿರಾಜ್​ 14 ದಿನಗಳ ಕ್ವಾರಂಟೈನ್​​ನಲ್ಲಿದ್ದರು.

ನವೆಂಬರ್ 13ರಂದು ಭಾರತ ತಂಡವು ಆಸ್ಟ್ರೇಲಿಯಾ ತಲುಪಿತ್ತು. ಅದಾದ ಒಂದು ವಾರದಲ್ಲಿ ಈ ದುರಂತ ನಡೆದಿತ್ತು. ಕ್ವಾರಂಟೈನ್​ನಲ್ಲಿದ್ದ ಸಿರಾಜ್ ಏಕಾಂಗಿಯಾಗಿ ಅಳುತ್ತಲೇ ದಿನಗಳನ್ನು ಕಳೆದರು. ಆಘಾತಕಾರಿ ಸುದ್ದಿ ಸಿರಾಜ್ ಅವರನ್ನು ಆಘಾತಕಾರಿ ಸ್ಥಿತಿಗೆ ತಳ್ಳಿತು. ರಾಷ್ಟ್ರೀಯ ಕರ್ತವ್ಯದಲ್ಲಿದ್ದಾಗ ಕಣ್ಣೀರಿನ ನಡುವೆ ಭಾವನಾತ್ಮಕ ಯುದ್ಧದಲ್ಲಿ ಹೋರಾಡಿದರು. ಕೋಣೆಯಲ್ಲಿ ಕಣ್ಣೀರಿನ ಕೋಡಿ ಹರಿಸಿದ್ದರು. ಅಂದು ಇಡೀ ಭಾರತ ತಂಡವೇ ಅವರ ಬೆಂಬಲಕ್ಕೆ ನಿಂತಿತ್ತು. ಆಟಗಾರರು ತುಂಬಾ ಧೈರ್ಯ ತುಂಬಿದ್ದರು.

ಕೊಹ್ಲಿ-ಶಾಸ್ತ್ರಿಯಿಂದ ಅಪಾರ ಬೆಂಬಲ

ಜಾಗತಿಕ ಕೊರೊನಾ ವೈರಸ್ ನಿರ್ಬಂಧಗಳಿಂದ ಅಂತಿಮ ವಿಧಿ ವಿಧಾನಗಳಿಗೆ ತೆರಳಲಾಗದೆ ತೊಳಲಾಟ ಅನುಭವಿಸಿದ್ದ ಸಿರಾಜ್​ಗೆ ಅಂದಿನ ನಾಯಕ ವಿರಾಟ್ ಕೊಹ್ಲಿ ಮತ್ತು ಅಂದಿನ ಕೋಚ್​ ರವಿ ಶಾಸ್ತ್ರಿ ಅಪಾರ ಬೆಂಬಲ ಸೂಚಿಸಿದ್ದರು. ಅಂದಿನ ಫೀಲ್ಡಿಂಗ್ ಕೋಚ್​ ಆರ್​​​ ಶ್ರೀಧರ್ ಅವರಂತೂ ಕ್ಷಣಕ್ಷಣಕ್ಕೂ ಕರೆ ಮಾಡುತ್ತಿದ್ದರು, ಹೇಗಿದ್ದೀರಿ, ಏನು ತಿಂದಿದ್ದೀರಿ ಎಂಬಿತ್ಯಾದಿ ವಿಚಾರಗಳನ್ನು ಕೇಳುತ್ತಿದ್ದರು. ಈ ಬಗ್ಗೆ ಸಿರಾಜ್​ ಆರ್​​ಸಿಬಿ ಪಾಡ್​ಕಾಸ್ಟ್​​ನಲ್ಲಿ ವಿವರಿಸಿದ್ದಾರೆ. ಸಿರಾಜ್​ ಒಬ್ಬನೇ ಕೂತು ತುಂಬಾ ಅತ್ತಿದ್ದೇನೆ ಎಂದು ಹೇಳಿದ್ದರು. ಬಯೋಬಬಲ್​​​ನಲ್ಲಿದ್ದ ಕಾರಣ ಆಟಗಾರರು ನೇರವಾಗಿ ಧೈರ್ಯ ತುಂಬಲು ಸಾಧ್ಯವಾಗಿರಲಿಲ್ಲ. ಕ್ಷಣ, ಕ್ಷಣಕ್ಕೂ ಕಾಲ್, ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ಹೇಳಿದರು ಎಂದು ಸಿರಾಜ್ ಹೇಳಿದ್ದರು.

ನೋವಿನಲ್ಲೂ ಸಿರಾಜ್ ಅದ್ಭುತ ಪ್ರದರ್ಶನ

ತಮ್ಮ ಜೀವನದ ಶಕ್ತಿ ಎನಿಸಿಕೊಂಡಿದ್ದ ತಂದೆಯನ್ನು ಕಳೆದುಕೊಂಡು ನೋವಿನಲ್ಲಿದ್ದ ಸಿರಾಜ್​ಗೆ ಟೆಸ್ಟ್​ ಕ್ರಿಕೆಟ್​​ಗೆ ಪದಾರ್ಪಣೆಗೈಯುವ ಭಾಗ್ಯ ದೊರೆಯಿತು. ಬಾರ್ಡರ್​​-ಗವಾಸ್ಕರ್ ಸರಣಿಯ 2ನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪ್ರವೇಶಿಸಿದ ಸಿರಾಜ್​, ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನ ತೋರಿದರು. ಆಸಿಸ್​ನ ಘಟಾನುಘಟಿ ಬ್ಯಾಟರ್​​ಗಳನ್ನೇ ಪೆವಿಲಿಯನ್​​ಗೆ ಕಳುಹಿಸಿದರು. ತಾನಾಡಿದ 3 ಪಂದ್ಯಗಳಲ್ಲಿ ಒಟ್ಟು 13 ವಿಕೆಟ್​ ಪಡೆದು, ಸರಣಿಯಲ್ಲಿ ಅತಿಹೆಚ್ಚು ಪಡೆದವರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಮಿಂಚಿದರು.

ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಸಮಾಧಿಗೆ ಭೇಟಿ

2020ರ ನವೆಂಬರ್​​ 27ರಂದು ಪ್ರವಾಸದ ಏಕದಿನ ಸರಣಿ ನಡೆಯಿತು. ಆದರೆ ಟೆಸ್ಟ್ ಸರಣಿಯಲ್ಲಿ ಡಿಸೆಂಬರ್ 11ರಂದು ಆರಂಭವಾದ ಟೆಸ್ಟ್​ಗೆ ಆಯ್ಕೆಯಾಗದ ಸಿರಾಜ್ 2ನೇ ಮ್ಯಾಚ್​​​​ನಲ್ಲಿ ಪದಾರ್ಪಣೆ ಮಾಡಿದ್ದರು. ಈ ಸರಣಿ 2021ರ ಜನವರಿ 21ಕ್ಕೆ ಮುಗಿದಿತ್ತು. ಐತಿಹಾಸಿಕ ಸರಣಿ ಗೆದ್ದ ನಂತರ ಭಾರತಕ್ಕೆ ಬಂದಿಳಿದ ಸಿರಾಜ್ ಮನೆಗೆ ಹೋಗದೆ ನೇರವಾಗಿ ತಂದೆ ಸಮಾಧಿಯಾಗಿದ್ದರು. ತಂದೆಯ ಸಮಾಧಿಗೆ ಗೌರವ ಪಂದ್ಯ ಸಲ್ಲಿಸಿದ ಸಿರಾಜ್, ಕಣ್ಣೀರಿಟ್ಟರು.

ದೇಶ ಹೆಮ್ಮಪಡುವಂತೆ ಮಾಡು ಎಂದಿದ್ದ ತಂದೆ

ಈ ಹಿಂದೆ ಸ್ಪೋರ್ಟ್‌ಸ್ಟಾರ್‌ನೊಂದಿಗೆ ಮಾತನಾಡಿದ ಮೊಹಮ್ಮದ್ ಸಿರಾಜ್, ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಅಪಾರ ಬೆಂಬಲ ನೀಡಿದ್ದರು ಎಂದು ಹೇಳಿದ್ದರು. ನನ್ನ ತಂದೆಯ ಆಸೆ ಯಾವಾಗಲೂ ಇದೇ ಆಗಿತ್ತು. ಮೇರಾ ಬೇಟಾ, ದೇಶ್ ಕಾ ನಾಮ್ ರೋಷನ್ ಕರ್ನಾ (ನನ್ನ ಮಗ, ನೀನು ನನ್ನ ದೇಶವನ್ನು ಹೆಮ್ಮೆಪಡುವಂತೆ ಮಾಡಬೇಕು). ನಾನು ಅದನ್ನು ಖಚಿತವಾಗಿ ಮಾಡುತ್ತೇನೆ ಎಂದು ಸಿರಾಜ್ ಹೇಳಿದ್ದರು.

ನನ್ನ ಆಟದಲ್ಲಿ ನನ್ನ ಉತ್ಸಾಹ ಕುಗ್ಗದಂತೆ ನೋಡಿಕೊಳ್ಳಲು ನನ್ನ ತಂದೆ ಆಟೋ ಓಡಿಸಲು ನನ್ನ ಆರಂಭಿಕ ದಿನಗಳಲ್ಲಿ ಯಾವ ರೀತಿಯ ಕಷ್ಟಗಳನ್ನು ಎದುರಿಸಿದರು ಎಂದು ನನಗೆ ತಿಳಿದಿದೆ. ನೆನೆಸಿಕೊಂಡರೆ ಅಳು ಬರುತ್ತದೆ. ನನ್ನ ಜೀವನದ ದೊಡ್ಡ ಶಕ್ತಿಯನ್ನು ಕಳೆದುಕೊಂಡೆ. ನಾನು ದೇಶಕ್ಕಾಗಿ ಆಡುವುದನ್ನು ನೋಡುವುದೇ ಅವರ ಕನಸಾಗಿತ್ತು. ಅವರ ಕನಸಿನಂತೆ ಇಂದು ಭಾರತಕ್ಕೆ ಆಡುತ್ತಿದ್ದೇನೆ ಎಂದಿದ್ದರು ಸಿರಾಜ್.

ಸಿರಾಜ್ ಪ್ರದರ್ಶನ ಹೇಗಿದೆ?

ಮೊಹಮ್ಮದ್ ಸಿರಾಜ್ ಮೂರು ಫಾರ್ಮೆಟ್​​ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈವರೆಗೂ 21 ಟೆಸ್ಟ್​ ಪಂದ್ಯಗಳನ್ನಾಡಿದ್ದು, 59 ವಿಕೆಟ್​ ಪಡೆದಿದ್ದಾರೆ. ಇನ್ನು ಏಕದಿನ ಕ್ರಿಕೆಟ್​​ನಲ್ಲಿ 29 ಪಂದ್ಯಗಳಲ್ಲಿ 53 ವಿಕೆಟ್​ಗಳ ಸಾಧನೆ ಮಾಡಿದ್ದಾರೆ. 8 ಟಿ20 ಪಂದ್ಯಗಳನ್ನಾಡಿದ್ದು, 11 ವಿಕೆಟ್ ಪಡೆದಿದ್ದಾರೆ. ಸದ್ಯ ಏಷ್ಯಾಕಪ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಿರಾಜ್ ಈಗ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಅಕ್ಟೋಬರ್​ 5ರಿಂದ ಭಾರತದಲ್ಲಿ ಶುರುವಾಗುವ ಏಕದಿನ ವಿಶ್ವಕಪ್​​​ನಲ್ಲೂ ಅದ್ಭೂತ ಪ್ರದರ್ಶನ ನೀಡಲಿ ಎನ್ನುವುದೇ ನಮ್ಮ ನಿಮ್ಮೆಲ್ಲರ ಆಶಯ.

Whats_app_banner