ಕನ್ನಡ ಸುದ್ದಿ  /  ಕ್ರಿಕೆಟ್  /  ಧೋನಿ ಸಿಎಸ್‌ಕೆ ತಂಡದ ಮೊದಲ ಆಯ್ಕೆ ಆಗಿರಲಿಲ್ಲ; ನಾಯಕನಾಗುವಂತೆ ಸೆಹ್ವಾಗ್‌ಗೆ ಬಂದಿತ್ತು ಆಫರ್!

ಧೋನಿ ಸಿಎಸ್‌ಕೆ ತಂಡದ ಮೊದಲ ಆಯ್ಕೆ ಆಗಿರಲಿಲ್ಲ; ನಾಯಕನಾಗುವಂತೆ ಸೆಹ್ವಾಗ್‌ಗೆ ಬಂದಿತ್ತು ಆಫರ್!

ಸಿಎಸ್‌ಕೆ ತಂಡದ ಯಶಸ್ಸಿನಲ್ಲಿ ಎಂಎಸ್‌ ಧೋನಿ ಪಾತ್ರ ತುಂಬಾ ದೊಡ್ಡದು. ಆದರೆ, ಮಾಹಿ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿಯ ಮೊದಲ ಆಯ್ಕೆಯ ನಾಯಕ ಆಗಿರಲಿಲ್ಲ. ಬದಲಿಗೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ ಮೊದಲ ಆಯ್ಕೆ ನಾಯಕನಾಗಿದ್ದರು.

ಧೋನಿ ಸಿಎಸ್‌ಕೆ ತಂಡದ ಮೊದಲ ಆಯ್ಕೆ ಆಗಿರಲಿಲ್ಲ; ನಾಯಕನಾಗುವಂತೆ ಸೆಹ್ವಾಗ್‌ಗೆ ಬಂದಿತ್ತು ಆಫರ್!
ಧೋನಿ ಸಿಎಸ್‌ಕೆ ತಂಡದ ಮೊದಲ ಆಯ್ಕೆ ಆಗಿರಲಿಲ್ಲ; ನಾಯಕನಾಗುವಂತೆ ಸೆಹ್ವಾಗ್‌ಗೆ ಬಂದಿತ್ತು ಆಫರ್!

ಭಾರತ ಕಂಡ ಶ್ರೇಷ್ಠ‌ ನಾಯಕರಲ್ಲಿ ಎಂಎಸ್ ಧೋನಿ ಕೂಡಾ ಒಬ್ಬರು. ದೇಶಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಮಾಹಿ ಪಾತ್ರರಾಗಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡುತ್ತಿರುವ ಮಾಹಿ, ಸಿಎಸ್‌ಕೆ ಫ್ರಾಂಚೈಸಿಗೆ ದಾಖಲೆಯ 5 ಟ್ರೋಫಿಗಳನ್ನು ಗೆದ್ದು ಕೊಟ್ಟಿದ್ದಾರೆ. 2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದ ಧೋನಿ ಚೆನ್ನೈ ತಂಡದ ಪರ ಆಡುತ್ತಿದ್ದಾರೆ. 2016 ಮತ್ತು 2017ರಲ್ಲಿ ತಂಡವು ಬ್ಯಾನ್‌ ಆದ ಎರಡು ವರ್ಷಗಳಲ್ಲಿ ಪುಣೆ ಪರ ಆಡಿದ್ದ ಅವರು, ಉಳಿದ ಎಲ್ಲಾ ಆವೃತ್ತಿಗಳಲ್ಲಿಯೂ ಸಿಎಸ್‌ಕೆ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಕಳೆದ ಆವೃತ್ತಿಯವರೆಗೂ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ.

ಅಭಿಮಾನಿಗಳಿಂದ ಅಪಾರ ಪ್ರೀತಿ ಮತ್ತು ಗೌರವವನ್ನು ಸಂಪಾದಿಸಿರುವ ಧೋನಿ, ಸಿಎಸ್‌ಕೆ ಸೇರಿದ ಬಳಿ ತಲಾ ಎಂದೇ ಕರೆಸಿಕೊಳ್ಳುತ್ತಿದ್ದಾರೆ. ಅವರಿಗಿರುವ ಅಭಿಮಾನಿ ಬಳಗ ತುಂಬಾ ದೊಡ್ಡದು. ಈ ನಡುವೆ, ಕೆಲವು ದಿನಗಳ ಹಿಂದೆ ಭಾರತದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್‌ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಫೀವರ್ ಎಫ್‌ಎಂ ಜೊತೆ ಮಾತನಾಡಿದ್ದ ವೀರು, ಸಿಎಸ್‌ಕೆ ತಂಡಕ್ಕೆ ಎಂಎಸ್‌ ಧೋನಿ ಮೊದಲ ಆಯ್ಕೆಯ ನಾಯಕನಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಸೆಹ್ವಾಗ್ ಪ್ರಕಾರ, 2008ರ ಉದ್ಘಾಟನಾ ಆವೃತ್ತಿಯ ಐಪಿಎಲ್‌ಗೆ ಮುಂಚಿತವಾಗಿ ಸಿಎಸ್‌ಕೆ ತಂಡಕ್ಕೆ ಆಟಗಾರರನ್ನು ಖರೀದಿಸಲು ಇನ್‌ಚಾರ್ಜ್ ಆಗಿದ್ದ ವಿಬಿ ಚಂದ್ರಶೇಖರ್ ಅವರು ಸೆಹ್ವಾಗ್‌ ಅವರನ್ನು ಸಂಪರ್ಕಿಸಿದ್ದರು. ಅಲ್ಲದೆ ಚೆನ್ನೈ ತಂಡಕ್ಕೆ ಬರುವಂತೆ ಮನವಿ ಮಾಡಿದ್ದರು.

ಟ್ರೆಂಡಿಂಗ್​ ಸುದ್ದಿ

“ವಿಬಿ ಚಂದ್ರಶೇಖರ್ ಅವರು ಸಿಎಸ್‌ಕೆ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುತ್ತಿದ್ದರು. ಅವರು ನನಗೆ ಫೋನ್ ಕರೆ ಮಾಡಿದ್ದರು.‌ ನೀವು ಸಿಎಸ್‌ಕೆ ತಂಡದ ಪರ ಆಡಬೇಕೆಂದು ನಾವು ಬಯಸುತ್ತೇವೆ. ಡೆಲ್ಲಿ ಡೇರ್‌ಡೆವಿಲ್ಸ್ ಫ್ರಾಂಚೈಸಿಯು ನಿಮ್ಮನ್ನು ಅವರ ಐಕಾನ್ ಆಗಬೇಕೆಂದು ಬಯಸುತ್ತದೆ. ಅವರ ಆಫರ್ ಅನ್ನು ನೀವು ಸ್ವೀಕರಿಸಬೇಡಿ' ಎಂದು ಹೇಳಿದ್ದರು. ಅದಕ್ಕೆ ನಾನು ಸರಿ, ನೋಡೋಣ” ಎಂದು ಹೇಳಿದ್ದಾಗಿ ಸೆಹ್ವಾಗ್ ಹೇಳಿದರು.

ನಾನು ಡೆಲ್ಲಿ ಆಫರ್‌ ಸ್ವೀಕರಿಸಿದೆ

“ಕೊನೆಗೆ ನನಗೆ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಆಫರ್‌ ಬಂತು. ನಾನು ಅದನ್ನು ಸ್ವೀಕರಿಸಿದೆ. ಹೀಗಾಗಿ ನಾನು ಹರಾಜಿಗೆ ನಿಲ್ಲಲಿಲ್ಲ. ನಾನು ಹರಾಜಿನ ಭಾಗವಾಗಿದ್ದರೆ, ಸಿಎಸ್‌ಕೆ ನನ್ನನ್ನು ಖರೀದಿಸಿ ನಾಯಕನನ್ನಾಗಿ ಮಾಡುತ್ತಿತ್ತು. ಆದರೆ ನಾನು ನಿಲ್ಲದ ಕಾರಣ, ಅವರು ಎಂಎಸ್ ಧೋನಿಯನ್ನು ಖರೀದಿಸಿದರು. ಅಲ್ಲದೆ ಅವರನ್ನು ನಾಯಕನನ್ನಾಗಿ ಮಾಡಿದರು” ಎಂದು ಸೆಹ್ವಾಗ್ ಹೇಳಿದ್ದಾರೆ.

ಸೆಹ್ವಾಗ್ ಡೆಲ್ಲಿ ಡೇರ್‌ಡೆವಿಲ್ಸ್ ಪರ ಆರು ಆವೃತ್ತಿಗಳಲ್ಲಿ ಆಡಿದ್ದಾರೆ. ಆ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಸೇರಿಕೊಂಡರು.