ಪರದಾಡಿ ಗೆದ್ದ ಪಾಕಿಸ್ತಾನ; ಐರ್ಲೆಂಡ್ ವಿರುದ್ಧ ಜಯಿಸಿ ಟಿ20 ವಿಶ್ವಕಪ್ ಅಭಿಯಾನ ಮುಗಿಸಿದ ಬಾಬರ್ ಪಡೆ
Pakistan beat Ireland : ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಐರ್ಲೆಂಡ್ ವಿರುದ್ಧ ಗೆದ್ದು ಅಭಿಯಾನ ಮುಗಿಸಿದೆ. ಸೂಪರ್-8ರ ಪ್ರವೇಶಿಸಲು ವಿಫಲವಾಯಿತು.
ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ. 2022ರ ವಿಶ್ವಕಪ್ನಲ್ಲಿ ರನ್ನರ್ಅಪ್ ಆಗಿದ್ದ ಬಾಬರ್ ಅಜಮ್ ಪಡೆ, ಇದೀಗ ಲೀಗ್ನಲ್ಲೇ ತನ್ನ ಅಭಿಯಾನ ಕೊನೆಗೊಳಿಸಿ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಜೂನ್ 16ರಂದು ಐರ್ಲೆಂಡ್ ವಿರುದ್ಧ 3 ವಿಕೆಟ್ಗಳಿಂದ ಗೆಲುವು ಸಾಧಿಸಿ ಎ ಗುಂಪಿನ ಲೀಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಪಾಕಿಸ್ತಾನ, ಈಗ ಸೂಪರ್-8 ಪ್ರವೇಶಿಸಲು ವಿಫಲವಾಯಿತು. ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೀಗ್ನಿಂದಲೇ ಹೊರಬಿತ್ತು. ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 106 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 18.5 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತು.
ಎದ್ದುಬಿದ್ದು ಗೆದ್ದ ಪಾಕ್
ಸಾಧಾರಣ ಗುರಿ ಬೆನ್ನಟ್ಟಿದ ಪಾಕಿಸ್ತಾನದ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ಮೊಹಮ್ಮದ್ ರಿಜ್ವಾನ್, ಸೈಮ್ ಅಯೂಬ್ ತಲಾ 17 ರನ್ ಗಳಿಸಿದರೆ, ಫಖಾರ್ ಜಮಾನ್ 5, ಉಸ್ಮಾನ್ ಖಾನ್ 2, ಶಾದಾಬ್ ಖಾನ್ 0, ಇಮಾದ್ ವಾಸೀಂ 4 ರನ್ ಗಳಿಸಿ ಔಟಾದರು. ಆದರೆ, ನಾಯಕ ಬಾಬರ್ ಅಜಮ್ ಜವಾಬ್ದಾರಿಯುತ ಪ್ರದರ್ಶನ ನೀಡಿದರು. ಅಬ್ಬಾಸ್ ಅಫ್ರಿದಿ ಜೊತೆಗೂಡಿ ಸೋಲಿನಿಂದ ತಂಡವನ್ನು ಪಾರು ಮಾಡಿದರು. ಅಬ್ಬಾಸ್ ಕೊನೆಯಲ್ಲಿ 17 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು.
ಬಾಬರ್ ಅಜಮ್ ಅವರು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೊನೆವರೆಗೂ ಕ್ರೀಸ್ನಲ್ಲಿದ್ದರು. 34 ಎಸೆತಗಳಲ್ಲಿ ಅಜೇಯ 32 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮ ಎರಡು ಓವರ್ಗಳಲ್ಲಿ ಕಣಕ್ಕಿಳಿದ ಶಾಹೀನ್ ಅಫ್ರಿದಿ ಭರ್ಜರಿ ಸಿಕ್ಸರ್ ಚಚ್ಚುವ ಮೂಲಕ ಐರ್ಲೆಂಡ್ ತಂಡವನ್ನು ಮಣಿಸಲು ನೆರವಾದರು. 18.5 ಓವರ್ಗಳಲ್ಲಿ ಗೆಲುವಿನ ನಗೆ ಬೀರಿದರು. ಬ್ಯಾರಿ ಮೆಕಾರ್ಥಿ 3 ವಿಕೆಟ್ ಪಡೆದರೂ ಗೆಲುವು ತಂದುಕೊಡಲು ವಿಫಲರಾದರು.
ಇಮಾದ್ ಮತ್ತು ಶಾಹೀನ್ ಆರ್ಭಟ
ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್, ಶಾಹೀನ್ ಅಫ್ರಿದಿ ಮತ್ತು ಇಮಾದ್ ವಾಸೀಂ ಅವರ ಬೌಲಿಂಗ್ ದಾಳಿಗೆ ತತ್ತರಿಸಿತು. ಮೊದಲ ಐವರು ಬ್ಯಾಟರ್ಸ್ ಒಂದಂಕಿಗೆ ಔಟಾದರು. ಆಂಡ್ರ್ಯೂ ಬಾಲ್ಬಿರ್ನಿ (0), ಪಾಲ್ ಸ್ಟಿರ್ಲಿಂಗ್ (1), ಲೋರ್ಕನ್ ಟಕರ್ (2), ಹ್ಯಾರಿ ಟೆಕ್ಟರ್ (0), ಕರ್ಟಿಸ್ ಕ್ಯಾಂಫರ್ (7), ಜಾರ್ಜ್ ಡಾಕ್ರೆಲ್ (11) ತಂಡದ ಮೊತ್ತದ 32 ರನ್ ಆಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು.
ಆದರೆ, ಗೆರಾತ್ ಡೆಲಾನಿ ಮಾತ್ರ 31 ರನ್ಗಳ ಕಾಣಿಕೆ ನೀಡಿದರು. ಆದರೆ, ಅವರನ್ನೂ ಇಮಾದ್ ವಾಸೀಂ ಹೊರದಬ್ಬಿದರು. ಮಾರ್ಕ್ ಅಡೈರ್ 15, ಬ್ಯಾರಿ ಮೆಕಾರ್ಥಿ 2, ಜೋಶುವಾ ಲಿಟಲ್ 22 ರನ್, ಬೆಂಜಮಿನ್ ವೈಟ್ 5 ರನ್ ಕಲೆ ಹಾಕಿದರು. ಇಮಾದ್ ವಾಸೀಂ 4 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 3 ವಿಕೆಟ್ ಪಡೆದರೆ, ಶಾಹೀನ್ ಅಫ್ರಿದಿ 4 ಓವರ್ಗಳಲ್ಲಿ 22 ರನ್ ನೀಡಿ 3 ವಿಕೆಟ್ ಉರುಳಿಸಿದ್ದಾರೆ. ಮೊಹಮ್ಮದ್ ಅಮೀರ್ 2, ಹ್ಯಾರಿಸ್ ರೌಫ್ 1 ವಿಕೆಟ್ ಪಡೆದಿದ್ದಾರೆ.