ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡ ಪ್ರಕಟ; ಇಬ್ಬರು ಆರ್‌ಸಿಬಿ ವೇಗಿಗಳಿಗೆ ಸ್ಥಾನ, ಮಯಾಂಕ್ ಯಾದವ್ ಅಲಭ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡ ಪ್ರಕಟ; ಇಬ್ಬರು ಆರ್‌ಸಿಬಿ ವೇಗಿಗಳಿಗೆ ಸ್ಥಾನ, ಮಯಾಂಕ್ ಯಾದವ್ ಅಲಭ್ಯ

ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡ ಪ್ರಕಟ; ಇಬ್ಬರು ಆರ್‌ಸಿಬಿ ವೇಗಿಗಳಿಗೆ ಸ್ಥಾನ, ಮಯಾಂಕ್ ಯಾದವ್ ಅಲಭ್ಯ

India vs South Africa: ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ತಂಡಕ್ಕೆ ಇಬ್ಬರು ಆರ್‌ಸಿಬಿ ವೇಗಿಗಳು ಆಯ್ಕೆಯಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ಚುಟುಕು ಸರಣಿಯಲ್ಲಿ ಆಡಿದ್ದ ಬಹುತೇಕ ಆಟಗಾರರು ಹರಿಣಗಳ ನಾಡಿಗೆ ಪ್ರವಾಸಕ್ಕೂ ಆಯ್ಕೆಯಾಗದ್ದಾರೆ.

ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು ಮಯಾಂಕ್ ಯಾದವ್ ಅಲಭ್ಯರಾಗಿದ್ದಾರೆ.
ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು ಮಯಾಂಕ್ ಯಾದವ್ ಅಲಭ್ಯರಾಗಿದ್ದಾರೆ. (AP)

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಶುಕ್ರವಾರ (ಅಕ್ಟೋಬರ್‌ 25) ಪ್ರಕಟಿಸಿದೆ. ನಿರೀಕ್ಷೆಯಂತೆಯೇ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ನವೆಂಬರ್‌ 8ರಿಂದ ದಕ್ಷಿಣ ಆಫ್ರಿಕಾ ಸರಣಿ ಆರಂಭವಾಗಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಬ್ಬರು ವೇಗಿಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯಶ್ ದಯಾಳ್‌ ಮತ್ತು ವಿಜಯ್‌ಕುಮಾರ್ ವೈಶಾಕ್ ಅವರು, ಕೋಲ್ಕತ್ತಾ ನೈಟ್ ರೈಡರ್ಸ್‌ನ ಬ್ಯಾಟರ್ ರಮಣದೀಪ್ ಸಿಂಗ್ ಜೊತೆಗೆ ಇದೇ ಮೊದಲ ಬಾರಿಗೆ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ. ಅತ್ತ ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೇಗದ ಬೌಲರ್ ಮಯಾಂಕ್ ಯಾದವ್ ಮತ್ತು ರಿಯಾನ್ ಪರಾಗ್ ಗಾಯಗಳಿಂದಾಗಿ ತಂಡಕ್ಕೆ ಆಯ್ಕೆಯಾಗಿಲ್ಲ.

ಗಾಯದ ಸಮಸ್ಯೆಯಿಂದಾಗಿ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಶಿವಂ ದುಬೆ ಕೂಡಾ ತಂಡದಿಂದ ಹೊರಗುಳಿದಿದ್ದಾರೆ. ಪರಾಗ್ ಅನುಪಸ್ಥಿತಿ ಕುರಿತು ಬಿಸಿಸಿಐ ಸ್ಪಷ್ಟನೆ ನೀಡಿದ್ದು, ಆಲ್‌ರೌಂಡರ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ದೀರ್ಘಕಾಲದ ಬಲ ಭುಜದ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮೂರು ಹೊಸ ಹೆಸರುಗಳು ಕೇಳಿಬಂದಿವೆ. 2024ರ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಡಿದ, ಹಾಗೂ ಉದಯೋನ್ಮುಖ ತಂಡಗಳ ಏಷ್ಯಾಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಬ್ಯಾಟರ್‌ ರಮಣ್‌ದೀಪ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಈಗಾಗಲೇ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದ ಆರ್‌ಸಿಬಿ ಸ್ಟಾರ್‌ ಬೌಲರ್‌ ಯಶ್ ದಯಾಳ್ ಅವರ ಜೊತೆಗೆ ವಿಜಯಕುಮಾರ್ ವೈಶಾಕ್ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಸಂಜು ಸ್ಯಾಮ್ಸನ್‌ ವಿಕೆಟ್‌ ಕೀಪರ್

ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ತಂಡದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಉದಯೋನ್ಮುಖ ತಂಡಗಳ ಏಷ್ಯಾಕಪ್‌ನಲ್ಲಿ ಭಾರತ ಯುವ ತಂಡವನ್ನು ಸೆಮಿಫೈನಲ್‌ವರೆಗೆ ಮುನ್ನಡೆಸಿದ ತಿಲಕ್ ವರ್ಮಾ ಅವರನ್ನು ಸಹ ಆಯ್ಕೆ ಮಾಡಲಾಗಿದೆ. ಬ್ಯಾಕಪ್ ವಿಕೆಟ್ ಕೀಪರ್ ಆಗಿ ಮತ್ತೊಮ್ಮೆ ಜಿತೇಶ್ ಶರ್ಮಾ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಆಲ್‌ರೌಂಡರ್‌ಗಳ ಪೈಕಿ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸ್ಪಿನ್ ವಿಭಾಗದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿ ಅವರು ರವಿ ಬಿಷ್ಣೋಯ್ ಜೊತೆ ಸೇರಿಕೊಂಡಿದ್ದಾರೆ.

ಆಲ್‌ರೌಂಡರ್‌ಗಳು ಸೇರಿ ತಂಡದಲ್ಲಿ ಐವರು ವೇಗಿಗಳಿದ್ದಾರೆ. ಹಾರ್ದಿಕ್ ಆಲ್ ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ.

ನವೆಂಬರ್ 8ರಿಂದ ಸರಣಿ ಆರಂಭ

ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಟಿ20 ಸರಣಿ ನವೆಂಬರ್ 8ರಂದು ಆರಂಭವಾಗಲಿದೆ. ನವೆಂಬರ್ 08ರಂದು ಮೊದಲ ಪಂದ್ಯ ಡರ್ಬನ್‌ನಲ್ಲಿ ನಡೆದರೆ, 10ರಂದು ಗ್ಕೆಬರ್ಹಾದಲ್ಲಿ ಎರಡನೇ ಪಂದ್ಯ, 13ರಂದು ಸೆಂಚೂರಿಯನ್‌ನಲ್ಲಿ ಮೂರನೇ ಪಂದ್ಯ ನಡೆಯಲಿದೆ. 15ರಂದು ಜೊಹಾನ್ಸ್‌ಬರ್ಗ್‌ನಲ್ಲಿ ನಾಲ್ಕನೇ ಹಾಗೂ ಕೊನೆಯ ಪಂದ್ಯ ನಡೆಯಲಿದೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಮಣ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಿಜಯಕುಮಾರ್ ವೈಶಾಕ್, ಅವೇಶ್ ಖಾನ್, ಯಶ್ ದಯಾಳ್.

Whats_app_banner