ಜಾನಿ ಬೈರ್‌ಸ್ಟೋ ಔಟ್, ಹರ್ಷಲ್ ಪಟೇಲ್ಗೆ ಚಾನ್ಸ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI
Punjab Kings: ಪಂಜಾಬ್ ಕಿಂಗ್ಸ್ ಯುವ ಆಟಗಾರರೊಂದಿಗೆ ಕಣಕ್ಕಿಳಿದು ಚೊಚ್ಚಲ ಟ್ರೋಫಿ ಗೆಲ್ಲಲು ಪಣತೊಟ್ಟಿದೆ. ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟಕ್ಕೆ ಸಜ್ಜಾಗಿರುವ ಪಂಜಾಬ್ ಪ್ಲೇಯಿಂಗ್ ಇಲೆವೆನ್ ಹೇಗಿದೆ ನೋಡಿ.
17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ವರ್ಣರಂಜಿತ ಚಾಲನೆ ಸಿಕ್ಕಿದೆ. ಶ್ರೀಮಂತ ಲೀಗ್ನ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. ಚಂಡಿಗಢದ ಮಹಾರಾಜ ಯಾದವಿಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವು ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಮಾರ್ಚ್ 23ರ ಡಬಲ್ ಹೆಡರ್ನ ಮೊದಲ ಪಂದ್ಯವು ಮಧ್ಯಾಹ್ನ 3ಕ್ಕೆ ಪ್ರಾರಂಭವಾಗಲಿದೆ.
ಉಭಯ ತಂಡಗಳಿಗೆ ಮೊದಲ ಪಂದ್ಯ ಇದಾಗಿದ್ದು, ಶುಭಾರಂಭದ ನಿರೀಕ್ಷೆಯಲ್ಲಿವೆ. 16 ವರ್ಷಗಳಿಂದ ಟ್ರೋಫಿ ಗೆಲ್ಲದ ಎರಡೂ ತಂಡಗಳು ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿವೆ. ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಳೆದ ಆವೃತ್ತಿಯ ಅಂಕಪಟ್ಟಿಯ 8ನೇ ಸ್ಥಾನದಲ್ಲಿತ್ತು. ಮಿನಿ ಹರಾಜಿನ ಬಳಿಕ ತಂಡದಲ್ಲಿ ಹೊಸಮುಖಗಳು ಕಾಣಿಸಿಕೊಂಡಿದ್ದು, ಹೊಸ ಕನಸುಗಳೊಂದಿಗೆ ಟೂರ್ನಿ ಆರಂಭಿಸಲು ಕಾಯುತ್ತಿದೆ.
ಧವನ್-ಪ್ರಭುಗೆ ಆರಂಭಿಕರಾಗಿ ಕಣಕ್ಕೆ
ಅಲ್ಲದೆ, 2014ರ ನಂತರ ಐಪಿಎಲ್ ಫೈನಲ್ ಪ್ರವೇಶಿಸಲು ಭರ್ಜರಿ ಸಿದ್ಧತೆ ನಡೆಸಿರುವ ಕಿಂಗ್ಸ್, ಧವನ್ ಹೊರತುಪಡಿಸಿ ಭಾರತದ ಸ್ಟಾರ್ ಆಟಗಾರರನ್ನೇ ಹೊಂದಿಲ್ಲ. ಹಾಗಾಗಿ ಆಡುವ 11ರ ಬಳಗ ಕಟ್ಟುವುದೇ ಮ್ಯಾನೇಜ್ಮೆಂಟ್ಗೆ ದೊಡ್ಡ ಸವಾಲಾಗಿದೆ. ಆರಂಭಿಕನಾಗಿ ಶಿಖರ್ ಧವನ್ ಮತ್ತು ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದ್ದ ಪ್ರಭುಸಿಮ್ರಾನ್ ಸಿಂಗ್ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ಮತ್ತೊಂದೆಡೆ ಜಾನಿ ಬೈರ್‌ಸ್ಟೋ ವಿದೇಶಿ ಆಟಗಾರರ ಕೋಟಾದಲ್ಲಿ ಅವಕಾಶ ಪಡೆಯಲು ಸಜ್ಜಾಗಿದ್ದಾರೆ.
ಆದರೆ ಬೈರ್‌ಸ್ಟೋ ಅವರಿಗಿಂತ ಹಾರ್ಡ್ ಹಿಟ್ಟರ್ ಲಿಯಾಮ್ ಲಿವಿಂಗ್‌ಸ್ಟನ್ ಅವರಿಗೆ ಮೊದಲ ಆದ್ಯತೆ ನೀಡಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಅಲ್ಲದೆ, ಆಲ್ರೌಂಡರ್ ಸಿಕಂದರ್ ರಾಜಾರನ್ನು ಆಡುವ 11ರ ಬಳಗದಲ್ಲಿ ಆಡಿಸಲು ಚಿಂತಿಸಿದೆ. ಕಳೆದ ಬಾರಿ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಮಿಂಚಿದ್ದರು. ಹೀಗಾಗಿ ಬೈರ್‌ಸ್ಟೋ ಜೊತೆಗೆ ರಿಲೀ ರೊಸೊವ್ ಬೆಂಚ್ ಕಾಯಬೇಕಿದೆ. ತದನಂತರ ಯುವ ಆಟಗಾರರಾದ ಆಶುತೋಷ್ ಶರ್ಮಾ ಮತ್ತು ಜಿತೇಶ್ ಶರ್ಮಾ ಕಣಕ್ಕಿಳಿಯಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಅನುಭವಿಗಳಾದ ಹರ್ಷಲ್ ಪಟೇಲ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ಅರ್ಶ್‌ದೀಪ್ ಸಿಂಗ್ ಅವಕಾಶ ನೀಡುವುದು ಖಚಿತವಾಗಿದೆ. ಇವರನ್ನು ಹೊರತುಪಡಿಸಿ ರಾಹುಲ್ ಚಹರ್ ಅನುಭವಿಯಾಗಿದ್ದಾರೆ. ಉಳಿದಂತೆ ತಂಡದಲ್ಲಿ ಅನಾನುಭವಿಗಳು ಹಾಗೂ ಯುವ ಆಟಗಾರರ ದಂಡೇ ಇದ್ದು, ಬಲಿಷ್ಠ ತಂಡ ಕಟ್ಟುವುದು ಸವಾಲಿನದಾಯಕವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ XI
ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್, ಸಿಕಂದರ್ ರಜಾ, ಅಶುತೋಷ್ ಶರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ಅರ್ಶ್‌ದೀಪ್ ಸಿಂಗ್.
ಪಂಜಾಬ್ ಕಿಂಗ್ಸ್ ಸಂಪೂರ್ಣ ತಂಡ
ಶಿಖರ್ ಧವನ್, ಜಿತೇಶ್ ಶರ್ಮಾ, ಜಾನಿ ಬೈರ್‌ಸ್ಟೋ, ಪ್ರಭುಸಿಮ್ರಾನ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟನ್, ಹರ್‌ಪ್ರೀತ್ ಭಾಟಿಯಾ, ರಿಲೀ ರೊಸೊವ್, ಶಶಾಂಕ್ ಸಿಂಗ್, ಕ್ರಿಸ್ ವೋಕ್ಸ್, ವಿಶ್ವನಾಥ್ ಪ್ರತಾಪ್ ಸಿಂಗ್, ಅಶುತೋಷ್ ಶರ್ಮಾ, ತನಯ್ ತ್ಯಾಗರಾಜನ್, ಅಥರ್ವ ತೈಡೆ, ಸಮ್ದಾರ್ ಸಿಂಗ್, ಪ್ರಿನ್ಸ್ ಚೌಧರಿ, ಹರ್‌ಪ್ರೀತ್ ಬ್ರಾರ್, ಅರ್ಶ್‌ದೀಪ್ ಸಿಂಗ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ರಾಹುಲ್ ಚಹರ್, ವಿದ್ವತ್ ಕಾವೇರಪ್ಪ, ಹರ್ಷಲ್ ಪಟೇಲ್.