ರಾಹುಲ್ ದ್ರಾವಿಡ್ ಐಪಿಎಲ್ ಹರಾಜು ತಂತ್ರಕ್ಕೆ ಬ್ರೇಕ್ ಹಾಕಿದ ಬುಮ್ರಾ- ಸಿರಾಜ್; ವಿಡಿಯೋ ಹಂಚಿಕೊಂಡ ರಾಜಸ್ಥಾನ್ ರಾಯಲ್ಸ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಸದ್ಯ ಭಾರತ ತಂಡ ಅಮೋಘ ಪ್ರದರ್ಶನ ನೀಡುತ್ತಿದೆ. ಆಸೀಸ್ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ ಹರಾಜು ಯೋಜನೆ ರೂಪಿಸುತ್ತಿರುವ ರಾಹುಲ್ ದ್ರಾವಿಡ್, ತಮ್ಮ ಗಮನವನ್ನು ಬಾರ್ಡರ್-ಗವಾಸ್ಕರ್ ಟ್ರೋಫಿಯತ್ತ ಹರಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟವು ಪರ್ತ್ ಸ್ಟೇಡಿಯಂನಲ್ಲಿ ಸಾಗುತ್ತಿದೆ. ಪಂದ್ಯದ ಮೊದಲ ದಿನದಾಟದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು 150ರ ಅಲ್ಪಮೊತ್ತಕ್ಕೆ ಆಲೌಟ್ ಆಯ್ತು. ಆದರೆ, ಇದಕ್ಕೆ ತಕ್ಕನಾಗಿ ಆತಿಥೇಯ ಆಸ್ಟ್ರೇಲಿಯಾ ಕೂಡಾ ಮೊದಲ ದಿನವೇ 67 ರನ್ ಆಗುವಷ್ಟರಲ್ಲಿ ಪ್ರಮುಖ 7 ವಿಕೆಟ್ ಕಳೆದುಕೊಂಡಿತು. ವಿಷಯ ಇದಲ್ಲ. ನಾಳೆ, ಅಂದರೆ ನವೆಂಬರ್ 24ರಂದು ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಐಪಿಎಲ್ ಹರಾಜು ಕಾರ್ಯತಂತ್ರವನ್ನು ಯೋಜಿಸಲು ಭಾರತದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರಸ್ತುತ ಸೌದಿ ಅರೇಬಿಯಾದ ಜೆದ್ದಾದಲ್ಲಿದ್ದಾರೆ. ದ್ರಾವಿಡ್ ಕೂಡಾ, ಅತ್ತ ಪರ್ತ್‌ನಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಕುತೂಹಲದಲ್ಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡವು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಪರ್ತ್ ಟೆಸ್ಟ್ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ದ್ರಾವಿಡ್ ಆಸಕ್ತಿಯಿಂದ ವಿಚಾರಿಸುತ್ತಿರುವುದನ್ನು ಕಾಣಬಹುದು. ಆರ್‌ಆರ್ ತಂಡದ ಪರ ಹರಾಜು ತಂತ್ರಗಳನ್ನು ಮಾಡುತ್ತಿರುವುದರ ನಡುವೆ, ಭಾರತ - ಆಸ್ಟ್ರೇಲಿಯಾ ಟೆಸ್ಟ್‌ನಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಟೀಮ್ ಇಂಡಿಯಾ ಮಾಜಿ ಆಟಗಾರ ಕುತೂಹಲದಿಂದ ಪ್ರಶ್ನಿಸಿದ್ದಾರೆ.
ಮೊದಲ ದಿನದಾಟದಲ್ಲಿ ಭಾರತಕ್ಕೆ ತುಸು ಆತಂಕ ಸೃಷ್ಟಿಸಿದವರು ಮಾರ್ನಸ್ ಲಾಬುಶೇನ್. ತಂಡವು ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ದಾಗ, ಲಬುಶೇನ್ ತುಸು ಪ್ರತಿರೋಧ ಒಡ್ಡಿದರು. ಆದರೆ ಮೊಹಮ್ಮದ್ ಸಿರಾಜ್ ನಿರ್ಣಾಯಕ ವಿಕೆಟ್ ಪಡೆದು ಮಿಂಚಿದರು. ಲಬುಶೇನ್ ವಿಕೆಟ್ ಪಡೆದ ವಿಷಯವಾಗಿ ಈ ವಿಡಿಯೋ ಆರಂಭವಾಗುತ್ತದೆ.
ವಿಡಿಯೋದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯು ಆಸ್ಟ್ರೇಲಿಯಾದ ಸ್ಕೋರ್ 47/6 ಎಂದು ಹೇಳಿತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ದ್ರಾವಿಡ್, “ಹೌದಾ? ಯಾರು ಔಟ್?” ಎಂದು ಕೇಳುತ್ತಾರೆ. "ಲಾಬುಶೇನ್ʼ ಎಂಬ ಉತ್ತರ ಬಂದಾಗ, ಔಟ್ ಮಾಡಿದ ಬೌಲರ್ ಯಾರು ಎಂದು ಕೇಳುತ್ತಾರೆ. ಅದಕ್ಕೆ ಆ ವ್ಯಕ್ತಿ ಸಿರಾಜ್ ಎಂದು ಹೇಳುತ್ತಾರೆ.
ರಾಜಸ್ಥಾನ್ ರಾಯಲ್ಸ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಬಾರ್ಡರ್-ಗವಾಸ್ಕರ್ ಟ್ರೋಫಿಯ ಸ್ಕೋರ್ ನೋಡದೆ ಕುಳಿತುಕೊಳ್ಳುವುದು ಕಷ್ಟ” ಎಂದು ಶೀರ್ಷಿಕೆ ನೀಡಿದೆ.
ವಿಡಿಯೋ ಇಲ್ಲಿದೆ
ಆರು ಆಟಗಾರರು ರಿಟೈನ್
ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡವು ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೇಯರ್ ಮತ್ತು ಸಂದೀಪ್ ಶರ್ಮಾ ಅವರನ್ನು ಉಳಿಸಿಕೊಂಡಿದೆ. ನಾಳೆ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ತಂಡವನ್ನು ಇನ್ನಷ್ಟು ಬಲಿಷ್ಠಗೊಳಿಸಲು ತಂತ್ರ ರೂಪಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ಸ್ಟ್ಯಾಂಡ್ ಇನ್ ನಾಯಕ ಜಸ್‌ಪ್ರೀತ್ ಬುಮ್ರಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 150 ರನ್‌ಗಳಿಗೆ ಆಲೌಟ್ ಆಯ್ತು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ಕೂಡಾ ಕೇವಲ 104 ರನ್‌ಗಳಿಗೆ ಆಲೌಟ್ ಆಯ್ತು. ಭಾರತ 46 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದೆ.
ಭಾರತದ ಪರ ನಾಯಕ ಬುಮ್ರಾ 5 ವಿಕೆಟ್ ಸಾಧನೆ ಮಾಡಿದರೆ, ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಹರ್ಷಿತ್ ರಾಣಾ 3 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.