ಐಪಿಎಲ್ 2025ರ ಆರಂಭಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆನೆಬಲ; ರಾಹುಲ್‌ ದ್ರಾವಿಡ್ ಅಧಿಕೃತ ಸೇರ್ಪಡೆ-rajasthan royals appoints rahul dravid as head coach ahead of ipl 2025 indian premier league rr franchise jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025ರ ಆರಂಭಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆನೆಬಲ; ರಾಹುಲ್‌ ದ್ರಾವಿಡ್ ಅಧಿಕೃತ ಸೇರ್ಪಡೆ

ಐಪಿಎಲ್ 2025ರ ಆರಂಭಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆನೆಬಲ; ರಾಹುಲ್‌ ದ್ರಾವಿಡ್ ಅಧಿಕೃತ ಸೇರ್ಪಡೆ

Rahul Dravid joins Rajasthan Royals: ಭಾರತ ಕ್ರಿಕೆಟ್‌ ತಂಡದ ಮಾಜಿ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಮತ್ತೊಂದು ಮಹತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್‌ ತಂಡವು, ದಿ ವಾಲ್‌ ಅವರನ್ನು ಮುಖ್ಯ ಕೋಚ್‌ ಆಗಿ ನೇಮಿಸಿದೆ.

ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್‌ ಆಗಿ ರಾಹುಲ್‌ ದ್ರಾವಿಡ್ ನೇಮಕ
ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್‌ ಆಗಿ ರಾಹುಲ್‌ ದ್ರಾವಿಡ್ ನೇಮಕ (X)

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಕೋಚ್ ರಾಹುಲ್ ದ್ರಾವಿಡ್ (Rahul Dravid) ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಬಹುನೀರೀಕ್ಷಿತ 2025ರ ಐಪಿಎಲ್‌ (IPL 2025) ಆವೃತ್ತಿಗೂ ಮುನ್ನ ಬಹು ವರ್ಷಗಳ ಒಪ್ಪಂದದ ಮೇಲೆ ದಿ ವಾಲ್‌ ರಾಜಸ್ಥಾನ ತಂಡ ಸೇರಿಕೊಂಡಿದ್ದಾರೆ. ಈ ಕುರಿತಾಗಿ ಆರ್‌ಆರ್‌ ಫ್ರಾಂಚೈಸಿ ಸೆಪ್ಟೆಂಬರ್‌ 6ರ ಶುಕ್ರವಾರ ತಿಳಿಸಿದೆ.

ಭಾರತ ತಂಡದ ಕೋಚ್‌ ಹುದ್ದೆಯಿಂದ ಕೆಳಗಿಳಿದ ಬಳಿಕ, ದ್ರಾವಿಡ್ ತಾವು ಈ ಹಿಂದೆ ಪ್ರತಿನಿಧಿಸಿದ್ದ ತಂಡದ ಕೋಚ್‌ ಆಗಿ ಸೇರಿಕೊಳ್ಳುವ ಸುದ್ದಿ ಹಬ್ಬಿತ್ತು. ಅದು ಈಗ ನಿಜವಾಗಿದೆ. ಕನ್ನಡಿಗ ತಮ್ಮ ಅಧಿಕಾರಾವಧಿಯನ್ನು ತಕ್ಷಣದಿಂದಲೇ ಆರಂಭಿಸಲಿದ್ದಾರೆ. ರಾಜಸ್ಥಾನ ಫ್ರಾಂಚೈಸಿಯ ಕ್ರಿಕೆಟ್ ನಿರ್ದೇಶಕ ಕುಮಾರ ಸಂಗಕ್ಕಾರ ಅವರೊಂದಿಗೆ ಕೆಲಸ ಮಾಡಲಿದ್ದಾರೆ.

ದ್ರಾವಿಡ್‌ ಅವರು 2011ರಿಂದ 2015ರವರೆಗೆ ಐದು ಋತುಗಳಲ್ಲಿ ತಂಡದೊಂದಿಗೆ ಕೆಲಸ ಮಾಡಿದ್ದರು.‌ 51 ವರ್ಷದ ನಿವೃತ್ತ ಕ್ರಿಕೆಟಿಗ ಮತ್ತೆ ರಾಜಸ್ಥಾನ ತಂಡದೊಂದಿಗಿನ ನಂಟು ಮುಂದುವರೆಸಲಿದ್ದಾರೆ. ಹಿಂದೆ 2012 ಮತ್ತು 2013ರ ಆವೃತ್ತಿಯಲ್ಲಿ ತಂಡದ ನಾಯಕರಾಗಿದ್ದರು. ಆ ಬಳಿಕ 2014 ಮತ್ತು 2015 ರಲ್ಲಿ ತಂಡದ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು.

“ರಾಹುಲ್ ದ್ರಾವಿಡ್ ಅವರನ್ನು ಮತ್ತೆ ಫ್ರಾಂಚೈಸಿಗೆ ಕರೆತರಲು ನಮಗೆ ಸಂತೋಷವಾಗಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಅವರು ನಡೆಸಿದ ಪರಿವರ್ತನೆಯಿಂದ ಅವರ ಅಸಾಧಾರಣ ಕೋಚಿಂಗ್ ಸಾಮರ್ಥ್ಯಗಳು ಸ್ಪಷ್ಟವಾಗಿವೆ” ಎಂದು ರಾಯಲ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೇಕ್ ಲಶ್ ಮೆಕ್ಕ್ರಮ್ ಹೇಳಿದ್ದಾರೆ.

ಹರಾಜು ಪ್ರಕ್ರಿಯೆ ತಯಾರಿ

“ರಾಹುಲ್ ಈಗಿನಿಂದಲೇ ಸಂಗಕ್ಕಾರ ಮತ್ತು ತಂಡದ ಉಳಿದವರೊಂದಿಗೆ ಕೆಲಸ ಮಾಡಬೇಕಾಗಿದೆ. ಏಕೆಂದರೆ ಐಪಿಎಲ್ ಮುಂದಿನ ಆವೃತ್ತಿಗೂ ಮುನ್ನ ನಡೆಯಲಿರುವ ರಿಟೆನ್ಷನ್‌ ಪ್ರಕ್ರಿಯೆ ಮತ್ತು ಹರಾಜು ಪ್ರಕ್ರಿಯೆಗಾಗಿ ನಾವು ತಯಾರಿ ನಡೆಸುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಐಪಿಎಲ್ 2015ರಲ್ಲಿ ದ್ರಾವಿಡ್ ಮಾರ್ಗದರ್ಶನದಲ್ಲಿ ರಾಜಸ್ಥಾನ ತಂಡವು ಟೂರ್ನಿಯ ಅಂತ್ಯಕ್ಕೆ ಮೂರನೇ ಸ್ಥಾನ ಪಡೆದಿತ್ತು. ಆ ಬಳಿಕ ಅವರು ಭಾರತ ಅಂಡರ್ -19 ಮತ್ತು ಭಾರತ ಎ ತಂಡಗಳ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. 2018ರ ವಿಶ್ವಕಪ್ ಫೈನಲ್‌ನಲ್ಲಿ ಅಂಡರ್ -19 ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

ಎಲ್ಲಾ ಮೂರು ಸ್ವರೂಪಗಳಲ್ಲಿ ಅಗ್ರಶ್ರೇಯಾಂಕ

2019ರ ಜುಲೈನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಮುಖ್ಯಸ್ಥರನ್ನಾಗಿ ರಾಹುಲ್ ದ್ರಾವಿಡ್‌ ಅವರನ್ನು ನೇಮಿಸಲಾಯಿತು. ನಂತರ 2021ರ ನವೆಂಬರ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ನೇಮಕಗೊಂಡರು. ದ್ರಾವಿಡ್ ತಮ್ಮ ಅಧಿಕಾರಾವಧಿಯಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಶ್ರೇಯಾಂಕದಲ್ಲಿ ಭಾರತ ಕ್ರಿಕೆಟ್‌ ತಂಡವನ್ನು ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಮುನ್ನಡೆಸಿದರು. ಟೀಮ್‌ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬಳಿಕ ಕೋಚಿಂಗ್‌ನಿಂದ ಕೆಳಗಿಳಿದರು.

mysore-dasara_Entry_Point