ವಿಶ್ವಕಪ್ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ಭಾವುಕ ಪೋಸ್ಟ್ ಹಾಕಿದ ರಶೀದ್ ಖಾನ್
Rashid khan : ಅಫ್ಘಾನಿಸ್ತಾನ ತಂಡವು ತನ್ನ ಮೊದಲ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ರಶೀದ್ ಖಾನ್ ಭಾವುಕರಾಗಿದ್ದಾರೆ.
ಟಿ20 ವಿಶ್ವಕಪ್ 2024ರ (T20 World Cup 2024) ಮೊದಲ ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡ, ದಕ್ಷಿಣ ಆಫ್ರಿಕಾ (South Africa vs Afghanistan) ವಿರುದ್ಧ ಹೀನಾಯ ಸೋಲಿನ ನಂತರ ನಾಯಕ ರಶೀದ್ ಖಾನ್ (Rashid khan) ಭಾವುಕರಾಗಿದ್ದಾರೆ. ಪ್ರತಿ ಆವೃತ್ತಿಯಲ್ಲೂ ಸೆಮಿಫೈನಲ್ಗೆ ಪ್ರಯಾಣ ಮುಗಿಸುತ್ತಿದ್ದ ದಕ್ಷಿಣ ಆಫ್ರಿಕಾ, ಹಾಲಿ ವಿಶ್ವಕಪ್ನ ಮೊದಲ ಸೆಮಿಫೈನಲ್ನಲ್ಲಿ ರಶೀದ್ ನೇತೃತ್ವದ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿ ಇದೇ ಮೊದಲ ಬಾರಿಗೆ ಫೈನಲ್ಗೆ ಪ್ರವೇಶಿಸಿತು. ಜೂನ್ 29ರಂದುದಕ್ಷಿಣ ಆಫ್ರಿಕಾ ತನ್ನ ಮೊದಲ ಟಿ20 ವಿಶ್ವಕಪ್ ಫೈನಲ್ ಆಡಲಿದೆ.
ಪಂದ್ಯದ ನಂತರ ತಮ್ಮ ಸಾಮಾಜಿಕ ಖಾತೆಗಳಲ್ಲಿ ಪೋಸ್ಟ್ ಮಾಡಿರುವ ಆಫ್ಘನ್ ಸ್ಪಿನ್ನರ್ ಹಾಗೂ ನಾಯಕ ರಶೀದ್ ಖಾನ್ ಕೃತಜ್ಞತೆ ವ್ಯಕ್ತಪಡಿಸಲು ಹೃದಯಸ್ಪರ್ಶಿ ಟಿಪ್ಪಣಿಯನ್ನು ಬರೆದಿದ್ದಾರೆ. ನಾವು ಈ ಟಿ20 ವಿಶ್ವಕಪ್ (T20 World Cup) ಅನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಈ ತಂಡದ ಪ್ರತಿಯೊಬ್ಬರೂ ಮುಂದಿಟ್ಟಿರುವ ಹೋರಾಟ ಶ್ಲಾಘನೀಯ ಮತ್ತು ನಮ್ಮೆಲ್ಲರ ಬಗ್ಗೆ ನನಗೆ ನಿಜವಾಗಿಯೂ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.
ಹಾಗೆಯೇ ಮುಂದುವರೆಸಿ ನಾವು ಇಲ್ಲಿಂದ ತಂಡವನ್ನು ಮತ್ತಷ್ಟು ಉತ್ತಮವಾಗಿ ನಿರ್ಮಸಲು ಮುಂದುವರೆಸುತ್ತೇವೆ. ಮುಂದಿನ ಪಂದ್ಯದಲ್ಲಿ ಹೆಚ್ಚಿನ ಧೈರ್ಯದೊಂದಿಗೆ ಮರಳುತ್ತೇವೆ. ನಮ್ಮ ಮೇಲೆ ನಂಬಿಕೆ ಇಟ್ಟ ಮತ್ತು ಹೋರಾಟವನ್ನು ಮುಂದುವರಿಸಲು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ರಶೀದ್ ಹೇಳಿದ್ದಾರೆ. ರಶೀದ್ ಈ ಟೂರ್ನಿಯಲ್ಲಿ ಒಟ್ಟು 15 ವಿಕೆಟ್ ಪಡೆದಿದ್ದಾರೆ.
ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ನ ಮೊದಲ ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನ 56 ರನ್ಗಳಿಗೆ ಆಲೌಟ್ ಆಗಿದೆ. ಅಜ್ಮತುಲ್ಲಾ ಒಮರ್ಜಾಯ್ ಮಾತ್ರ ಎರಡಂಕಿ (10) ದಾಟಿದ್ದಾರೆ. ಏಷ್ಯನ್ ದೈತ್ಯ ತಂಡವು ಟಿ20 ವಿಶ್ವಕಪ್ ನಾಕೌಟ್ನಲ್ಲಿ ಅತ್ಯಂತ ಕಡಿಮೆ ಮೊತ್ತವನ್ನು ದಾಖಲಿಸಿದೆ. ವೇಗಿಗಳಾದ ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ ಮತ್ತು ಆನ್ರಿಚ್ ನೋಕಿಯಾ ಭರ್ಜರಿ ಬೌಲಿಂಗ್ ದಾಳಿ ನಡೆಸಿದರು. ರೀಜಾ ಹೆಂಡ್ರಿಕ್ಸ್ (29*) ಮತ್ತು ನಾಯಕ ಏಡೆನ್ ಮಾರ್ಕ್ರಮ್ (23*) 8.5 ಓವರ್ಗಳಲ್ಲಿ 57 ರನ್ಗಳ ಗುರಿ ತಲುಪಿದರು.
ಆಟದ ಪರಿಸ್ಥಿತಿಗಳ ಬಗ್ಗೆ ರಶೀದ್ ಏನು ಹೇಳಿದರು
ನಾವು ಉತ್ತಮವಾಗಿ ಆಡಬಹುದಿತ್ತು ಆದರೆ ಪರಿಸ್ಥಿತಿಗಳು ನಮಗೆ ವಿರುದ್ಧವಾದವು. ಆದರೆ ಟಿ20 ಕ್ರಿಕೆಟ್ನಲ್ಲಿ ನೀವು ಎಲ್ಲಾ ಪರಿಸ್ಥಿತಿಗಳಿಗೆ ಸಿದ್ಧರಾಗಿರಬೇಕು. ಮುಜೀಬ್ ಗಾಯಗೊಂಡಿದ್ದು ನಮಗೆ ಹಿನ್ನಡೆ ತಂದುಕೊಟ್ಟಿತು. ಟೂರ್ನಿಯಲ್ಲಿ ನಮ್ಮ ವೇಗಿಗಳು ಮತ್ತು ನಬಿ ಕೂಡ ಹೊಸ ಚೆಂಡಿನೊಂದಿಗೆ ಅದ್ಭುತವಾಗಿ ಬೌಲಿಂಗ್ ಮಾಡಿದರು. ಇದು ಸ್ಪಿನ್ನರ್ಗಳ ಕೆಲಸವನ್ನು ಸುಲಭಗೊಳಿಸುತ್ತಿತ್ತು ಎಂದು ಅಫ್ಘಾನಿಸ್ತಾನದ ನಾಯಕ ರಶೀದ್ ಪಂದ್ಯದ ನಂತರ ಹೇಳಿದ್ದಾರೆ.
ರಶೀದ್ಗೆ ಛೀಮಾರಿ
ಸೂಪರ್-8 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ರಶೀದ್ ತೋರಿದ ವರ್ತನೆಗೆ ಐಸಿಸಿ ಬೇಸರ ವ್ಯಕ್ತಪಡಿಸಿದೆ. ಮೊದಲ ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ರಶೀದ್ ಅವರು ಸಹ ಆಟಗಾರ ಕರೀಮ್ ಜನತ್ ಮೇಲೆ ಕೋಪ ತೋರಿಸಿದ ನಂತರ ಬ್ಯಾಟ್ ಎಸೆದರು. ಐಸಿಸಿ ನೀತಿ ಸಂಹಿತೆಯ ಪ್ರಕಾರ, ಇದನ್ನು ಲೆವೆಲ್ 1 ಅಪರಾಧವೆಂದು ಪರಿಗಣಿಸಲಾಗುತ್ತದೆ. ಲೆವೆಲ್ 1 ಅಪರಾಧಗಳಿಗೆ ಕನಿಷ್ಠ ದಂಡ ವಿಧಿಸಲಾಗುತ್ತದೆ. ಗರಿಷ್ಠ ದಂಡವು ಪಂದ್ಯದ ಶುಲ್ಕದ ಶೇಕಡಾ 50ರಷ್ಟು ಆಗಿರುತ್ತದೆ. ಕ್ರಿಕೆಟಿಗನ ಶಿಸ್ತು ದಾಖಲೆಗೆ ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ಸೇರಿಸಲಾಗುತ್ತದೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ