ಫಾಫ್ ಡು ಪ್ಲೆಸಿಸ್, ಮ್ಯಾಕ್ಸ್ವೆಲ್, ವಿಲ್ ಜ್ಯಾಕ್ಸ್ ಇಲ್ಲ; ಆರ್ಸಿಬಿ ರಿಟೇನ್ ಆಟಗಾರರ ಪಟ್ಟಿ ಔಟ್
Royal Challengers Bengaluru: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ 2025 ಕ್ಕೆ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಹೊರ ಬಿದ್ದಿದೆ. ಆದರೆ, ಈ ಬಾರಿ ಮೂವರನ್ನಷ್ಟೇ ತಂಡದಲ್ಲಿ ಉಳಿಸಿಕೊಳ್ಳಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2025 ರ (IPL 2025) ಮೆಗಾ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಪಟ್ಟಿ ರಿಲೀಸ್ ಮಾಡಲು ಕೆಲವೇ ಗಂಟೆಗಳು ಮಾತ್ರ ಬಾಕಿ. ಇಂದು ಅಂದರೆ ಅಕ್ಟೋಬರ್ 31ರ ಗುರುವಾರ ಸಂಜೆ 5 ರೊಳಗೆ ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕು. ಆದರೆ ಇದರ ನಡುವೆ ಕೆಲವು ವರದಿಗಳು ಪ್ರಮುಖ ಆಟಗಾರರೇ ಹರಾಜಿಗೆ ಬರಲಿದ್ದಾರೆ ಎಂದು ತಿಳಿಸಿವೆ. ಅದರಂತೆ 3 ಬಾರಿ ಐಪಿಎಲ್ ಫೈನಲಿಸ್ಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಈ ಬಾರಿಯಾದರೂ ಪ್ರಶಸ್ತಿ ಗೆಲ್ಲಲೇಬೇಕೆಂಬ ಪಟ್ಟು ಹಿಡಿದಿದ್ದು, ಬಲಿಷ್ಠ ತಂಡವನ್ನು ರಚಿಸಲು ಯೋಜನೆ ರೂಪಿಸಿದೆ. ಆದರೆ, ವರದಿಗಳ ಪ್ರಕಾರ ಮೂವರನ್ನು ಮಾತ್ರ ಆರ್ಸಿಬಿ ಉಳಿಸಿಕೊಂಡಿದೆ ಎನ್ನಲಾಗಿದೆ.
ಆರ್ಸಿಬಿ ರಿಟೆನ್ಶನ್ ಪಟ್ಟಿಯನ್ನು ಸಲ್ಲಿಸುವುದಕ್ಕೂ ಮುನ್ನವೇ ಫ್ರಾಂಚೈಸಿ ಸಾಮಾಜಿಕ ಜಾಲತಾಣವಾದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಹುಳ ಬಿಟ್ಟಿದೆ. ಈ ಪೋಸ್ಟ್ ಹೊರತುಪಡಿಸಿ ಕ್ರಿಕ್ಬಜ್ ವರದಿ ಮಾಡಿದ್ದು, ಈ ಸಲ ಮೂವರನ್ನ ಉಳಿಸಿಕೊಳ್ಳಲು ಯೋಜನೆ ರೂಪಿಸಿದೆ. ಗ್ಲೆನ್ ಮ್ಯಾಕ್ಸ್ವೆಲ್, ವಿಲ್ ಜ್ಯಾಕ್ಸ್ ಯಾರೂ ಈ ಪಟ್ಟಿಯಲ್ಲಿಲ್ಲ ಎಂಬುದು ವಿಶೇಷ. ವಿರಾಟ್ ಕೊಹ್ಲಿ ಮೊದಲ ಆಯ್ಕೆಯಾದರೆ, 2ನೇ ಆಯ್ಕೆ ರಜತ್ ಪಾಟೀದಾರ್ ಆಗಿದ್ದಾರೆ. 3ನೇ ಸ್ಥಾನದಲ್ಲಿ ಯಶ್ ದಯಾಳ್ ಇದ್ದಾರೆ. ಉಳಿದ ಆಟಗಾರರನ್ನು ಹರಾಜಿನಲ್ಲೇ ಖರೀದಿಸಬೇಕು ಎಂಬ ಯೋಜನೆ ಹಾಕಿಕೊಂಡಿದೆ. ಇದೀಗ ಫ್ಯಾನ್ಸ್ಗೆ ತಲೆಗೆ ಹುಳ ಬಿಟ್ಟಿರುವ ಆರ್ಸಿಬಿ ಫ್ರಾಂಚೈಸಿ ಆಟಗಾರರ ಹೆಸರಿನ ಪಝಲ್ ಪೋಸ್ಟ್ವೊಂದನ್ನು ಹಂಚಿಕೊಂಡಿದೆ. ಇದು 8 ಆಟಗಾರರನ್ನು ಸೂಚಿಸಿದೆ. ಆದರೆ ಉಳಿಸಿಕೊಳ್ಳಬೇಕಾದವರ ಸಂಖ್ಯೆ 6 ಅಷ್ಟೆ.
ಫಝಲ್ನಲ್ಲಿ ಕಾಣಿಸಿಕೊಂಡ ಹೆಸರುಗಳು
ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್ವೆಲ್, ರಜತ್ ಪಾಟೀದರ್, ಅನುಜ್ ರಾವತ್, ಯಶ್ ದಯಾಳ್, ಫಾಫ್ ಡು ಪ್ಲೆಸಿಸ್.
ಹರಾಜಿಗೆ ಬರಲಿದ್ದಾರೆ ಕೆಎಲ್ ರಾಹುಲ್
ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಉಳಿಸಿಕೊಳ್ಳುವ ಪ್ರಸ್ತಾಪದ ಹೊರತಾಗಿಯೂ ರಾಹುಲ್ ಲಕ್ನೋದಿಂದ ಬೇರ್ಪಡಲು ನಿರ್ಧರಿಸಿದ್ದಾರೆ ಎಂದು ಹೊಸ ವರದಿ ಬಹಿರಂಗಪಡಿಸಿದೆ. ಈ ವಾರದ ಆರಂಭದಲ್ಲಿ ಇಎಸ್ಪಿಎನ್ ಕ್ರಿಕ್ಇನ್ಫೋ ವರದಿಯ ಪ್ರಕಾರ, ನಿಕೋಲಸ್ ಪೂರನ್, ಮಯಾಂಕ್ ಯಾದವ್, ರವಿ ಬಿಷ್ಣೋಯ್ ಮತ್ತು ಮೊಹ್ಸಿನ್ ಖಾನ್ ಅವರನ್ನು ಲಕ್ನೋ ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ. ಐಪಿಎಲ್ 2025 ರ ಋತುವಿನಲ್ಲಿ ರಾಹುಲ್ ಅವರನ್ನು ಉಳಿಸಿಕೊಳ್ಳಲು ಲಕ್ನೋ ಆಫರ್ ನೀಡಿದೆ. ಆದರೆ ವೈಯಕ್ತಿಕ ಮತ್ತು ವೃತ್ತಿಪರ ಕಾರಣಗಳಿಂದಾಗಿ ಕೆಎಲ್ ನಿರಾಕರಿಸಲು ನಿರ್ಧರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಬುಧವಾರ ವರದಿ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಮತ್ತು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಕೂಡ ಹರಾಜಿಗೆ ಬರಲಿದ್ದಾರೆ ಎನ್ನಲಾಗಿದೆ.
ಕೆಎಲ್ ರಾಹುಲ್ ಐಪಿಎಲ್ ಜರ್ನಿ
ಆರ್ಸಿಬಿ (2013-16), ಸನ್ರೈಸರ್ಸ್ ಹೈದರಾಬಾದ್ (2014-15), ಕಿಂಗ್ಸ್ ಇಲೆವೆನ್ ಪಂಜಾಬ್ (2018-21), ಎಲ್ಎಸ್ಜಿ ಪರ ಒಟ್ಟು 132 ಐಪಿಎಲ್ ಪಂದ್ಯಗಳನ್ನು ಆಡಿರುವ ರಾಹುಲ್, 45.47 ಸರಾಸರಿಯಲ್ಲಿ 4683 ರನ್ ಗಳಿಸಿದ್ದಾರೆ.