Mohammed Siraj: ಆರ್​​ಸಿಬಿ ತಂಡ ಮಾತ್ರವಲ್ಲ, ಎಮೋಷನ್; ಅಭಿಮಾನಿಗಳಿಗೆ ಮೊಹಮ್ಮದ್ ಸಿರಾಜ್​ ಭಾವುಕ ಪತ್ರ
ಕನ್ನಡ ಸುದ್ದಿ  /  ಕ್ರಿಕೆಟ್  /  Mohammed Siraj: ಆರ್​​ಸಿಬಿ ತಂಡ ಮಾತ್ರವಲ್ಲ, ಎಮೋಷನ್; ಅಭಿಮಾನಿಗಳಿಗೆ ಮೊಹಮ್ಮದ್ ಸಿರಾಜ್​ ಭಾವುಕ ಪತ್ರ

Mohammed Siraj: ಆರ್​​ಸಿಬಿ ತಂಡ ಮಾತ್ರವಲ್ಲ, ಎಮೋಷನ್; ಅಭಿಮಾನಿಗಳಿಗೆ ಮೊಹಮ್ಮದ್ ಸಿರಾಜ್​ ಭಾವುಕ ಪತ್ರ

Mohammed Siraj: ಐಪಿಎಲ್ 2025 ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಪಾಲಾಗಿರುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಆರ್​ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಹಾಕಿದ್ದಾರೆ.

ನಿಮ್ಮಂತಹ ಅಭಿಮಾನಿ ಬಳಗ ಜಗತ್ತಿನಲ್ಲೇ ಇಲ್ಲ; ಆರ್​ಸಿಬಿ ಫ್ಯಾನ್ಸ್​ಗೆ ಮೊಹಮ್ಮದ್ ಸಿರಾಜ್ ಸುದೀರ್ಘ ಭಾವುಕ ಪತ್ರ
ನಿಮ್ಮಂತಹ ಅಭಿಮಾನಿ ಬಳಗ ಜಗತ್ತಿನಲ್ಲೇ ಇಲ್ಲ; ಆರ್​ಸಿಬಿ ಫ್ಯಾನ್ಸ್​ಗೆ ಮೊಹಮ್ಮದ್ ಸಿರಾಜ್ ಸುದೀರ್ಘ ಭಾವುಕ ಪತ್ರ

ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಐಪಿಎಲ್ 2025 ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಖರೀದಿಸದೆ ಕೈಬಿಟ್ಟಿತು. 12.25 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾದ ಸಿರಾಜ್ ಖರೀದಿಗೆ ಬಿಡ್ ಕೂಡ ಮಾಡಲಿಲ್ಲ. ಆರ್​​ಟಿಎಂ (ರೈಟ್ ಟು ಮ್ಯಾಚ್) ಕಾರ್ಡ್​ ಬಳಕೆಗೂ ಮುಂದಾಗಲಿಲ್ಲ. ಆರ್​ಸಿಬಿ ಮ್ಯಾನೇಜ್​ಮೆಂಟ್ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಂತೂ ಸುಳ್ಳಲ್ಲ. ಅಭಿಮಾನಿಗಳು ಈಗಲೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ನಿರಾಸೆಯಾಗಿರುವುದನ್ನು ಗಮನಿಸಿರುವ ಸಿರಾಜ್ ಹರಾಜು ಮುಗಿದ ನಂತರ ಸುದೀರ್ಘ ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ಫ್ಯಾನ್ಸ್​ಗೆ ಬರೆದ ಭಾವುಕ ಪತ್ರದಲ್ಲಿ ತನ್ನ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದು, ಆರ್​​ಸಿಬಿ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.

ಸಿರಾಜ್ ಬರೆದ ಭಾವುಕ ಪತ್ರ ಹೀಗಿದೆ ನೋಡಿ…

ನನ್ನ ಪ್ರೀತಿಯ ಆರ್​​​ಸಿಬಿಗೆ…

‘ಸಾತ್ ಸಾಲ್ ಆರ್​ಸಿಬಿ ಕೆ ಸಾತ್ ಮೇರೆ ದಿಲ್ ಕೆ ಬಹುತ್ ಕರೀಬ್ ಹೈ (ಆರ್​ಸಿಬಿ ಜೊತೆಗೆ ಆಡಿದ 7 ವರ್ಷಗಳು ನನ್ನ ಹೃದಯಕ್ಕೆ ಹತ್ತಿರವಾಗಿವೆ). ನಾನು ಆರ್​​ಸಿಬಿ ಜೆರ್ಸಿ ಧರಿಸಿದ ಅವಧಿಯನ್ನು ನೆನೆದರೆ ನನ್ನ ಹೃದಯವು ಕೃತಜ್ಞತೆ, ಪ್ರೀತಿ, ಭಾವನೆಗಳಿಂದ ತುಂಬಿದೆ. ನಾನು ಮೊದಲ ಬಾರಿಗೆ ಆರ್​​ಸಿಬಿ ಜೆರ್ಸಿ ಧರಿಸಿದ ದಿನ ಮತ್ತು ನಾವು ರೂಪುಗೊಳ್ಳುವ ಬಂಧವನ್ನು ನಾನೆಂದಿಗೂ ಊಹಿಸಿರಲಿಲ್ಲ. ಆರ್​ಸಿಬಿ ಜೆರ್ಸಿ ಧರಿಸಿ ಬೌಲಿಂಗ್ ಮಾಡಿದ ಮೊದಲ ಎಸೆತದಿಂದ ಹಿಡಿದು, ತೆಗೆದುಕೊಂಡ ಪ್ರತಿಯೊಂದು ವಿಕೆಟ್, ಆಡಿದ ಪ್ರತಿ ಪಂದ್ಯ, ನಿಮ್ಮೊಂದಿಗೆ ಹಂಚಿಕೊಂಡ ಪ್ರತಿ ಕ್ಷಣ, ಪ್ರಯಾಣವು ಅಸಾಧಾರಣವಾಗಿದೆ. ಸಹಜವಾಗಿ ಏರಿಳಿತಗಳು ಇದ್ದವು. ಆದರೆ ಈ ಎಲ್ಲದರ ನಡುವೆ, ಒಂದು ವಿಷಯ ಸ್ಥಿರವಾಗಿರುವುದು ನಿಮ್ಮ ಅಚಲ ಬೆಂಬಲ.. ಆರ್​​ಸಿಬಿ ಕೇವಲ ಫ್ರಾಂಚೈಸಿಯಲ್ಲ, ಅದಕ್ಕಿಂತ ಹೆಚ್ಚು. ಇದು ಒಂದು ಭಾವನೆ, ಹೃದಯ ಬಡಿತ, ಒಂದು ಕುಟುಂಬ, ನಮ್ಮ ಮನೆ ಎಂದು ಭಾಸವಾಗುತ್ತದೆ’ ಎಂದು ಸಿರಾಜ್ ಇನ್​ಸ್ಟಾದಲ್ಲಿ ಬರೆದಿದ್ದಾರೆ.

ಮುಂದುವರೆದು, ‘ಕೆಲವು ಸೋಲುಗಳು, ಪದಗಳು ವಿವರಿಸಲಾಗದಷ್ಟು ಆಳವಾಗಿ ನೋಯಿಸಿದ ರಾತ್ರಿಗಳಿವೆ. ಆದರೆ ಸ್ಟ್ಯಾಂಡ್​​ಗಳಲ್ಲಿ ನಿಮ್ಮ ಧ್ವನಿ, ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಸಂದೇಶಗಳು, ನಿಮ್ಮ ನಿರಂತರ ನಂಬಿಕೆ ನನ್ನನ್ನು ಮುಂದುವರಿಯುವಂತೆ ಮಾಡಿತು. ಆರ್​ಸಿಬಿಯ ಅಭಿಮಾನಿಗಳಾದ ನೀವು ಈ ತಂಡದ ಆತ್ಮ. ನೀವು ತರುವ ಶಕ್ತಿ, ನೀವು ನೀಡುವ ಪ್ರೀತಿ, ನೀವು ತೋರಿಸುವ ನಂಬಿಕೆ, ಅದಕ್ಕೆ ಸಾಟಿಯಿಲ್ಲ. ಪ್ರತಿ ಬಾರಿ ನಾನು ಆ ಮೈದಾನಕ್ಕೆ ಕಾಲಿಟ್ಟಾಗ, ನಿಮ್ಮ ಕನಸುಗಳು ಮತ್ತು ಭರವಸೆಗಳ ಭಾರವನ್ನು ನಾನು ಅನುಭವಿಸಿದ್ದೇನೆ. ನಾನು ನನ್ನೆಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ. ಏಕೆಂದರೆ ನೀವು ನನ್ನ ಹಿಂದೆಯೇ ಇದ್ದೀರಿ ಎಂದು ನನಗೆ ತಿಳಿದಿತ್ತು, ಇನ್ನಷ್ಟು ಉತ್ತಮವಾಗಿ ಆಡಲು ನನ್ನನ್ನು ನಾನೇ ಮುಂದಕ್ಕೆ ತಳ್ಳಿಕೊಳ್ಳುತ್ತಿದ್ದೆ’ ಎಂದು ಸುದೀರ್ಘ ಪೋಸ್ಟ್​ ಅಭಿಮಾನಿಗಳನ್ನು ಭಾವುಕತೆಯ ಜೊತೆಗೆ ಬಣ್ಣಿಸಿದ್ದಾರೆ.

‘ನಾವು ಸೋತಾಗ ನಿಮ್ಮ ಕಣ್ಣೀರನ್ನು ನಾನು ನೋಡಿದ್ದೇನೆ. ನಾವು ಗೆದ್ದಾಗ ನಿಮ್ಮ ಸಂಭ್ರಮಾಚರಣೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ನಾನು ಈ ಮಾತನ್ನು ನಿಮಗೆ ಹೇಳಲೇಬೇಕು, ನಿಮ್ಮಂತಹ ಅಭಿಮಾನಿ ಬಳಗ ಜಗತ್ತಿನಲ್ಲಿ ಎಲ್ಲೂ ಇಲ್ಲ. ನಿಮ್ಮ ಪ್ರೀತಿ, ನಿಮ್ಮ ಸಮರ್ಪಣೆ, ನಿಮ್ಮ ನಿಷ್ಠೆ- ಇದನ್ನು ನಾನು ನನ್ನ ಜೀವನದುದ್ದಕ್ಕೂ ಮೆಚ್ಚುತ್ತೇನೆ. ನಾನು ಈಗ ನನ್ನ ವೃತ್ತಿಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟರೂ, ಆರ್​​ಸಿಬಿ ಯಾವಾಗಲೂ ನನ್ನ ಹೃದಯದಲ್ಲೇ ಸ್ಥಾನ ಪಡೆದಿರುತ್ತದೆ. ಇದು ವಿದಾಯವಲ್ಲ- ಇದು ಧನ್ಯವಾದಗಳು. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ, ನನ್ನನ್ನು ಅಪ್ಪಿಕೊಂಡಿದ್ದಕ್ಕೆ ಮತ್ತು ಕ್ರಿಕೆಟ್​​ಗಿಂತಲೂ ದೊಡ್ಡದಾದ ಯಾವುದೋ ಒಂದು ಭಾಗವೆಂದು ಭಾವಿಸಿದ್ದಕ್ಕೆ ಅನಂತ ಧನ್ಯವಾದಗಳು’ ಎಂದು ಭಾವುಕರಾಗಿದ್ದಾರೆ.

ಸಿರಾಜ್​ ಇನ್​ಸ್ಟಾಗ್ರಾಂ ಪೋಸ್ಟ್​ ಇಲ್ಲಿದೆ

2018ರಲ್ಲಿ ಆರ್​ಸಿಬಿಗೆ ಸಿರಾಜ್ ಪದಾರ್ಪಣೆ

2018ರಲ್ಲಿ ಆರ್​​ಸಿಬಿ ಪರ ಪದಾರ್ಪಣೆ ಮಾಡಿದ ಸಿರಾಜ್ ಅವರನ್ನು 2025ರ ಐಪಿಎಲ್ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ 12.25 ಕೋಟಿ ರೂ.ಗೆ ಖರೀದಿಸಿದೆ. ಅವರು ಜಿಟಿಯ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಆರ್​​ಸಿಬಿ ಪರ 87 ಪಂದ್ಯಗಳಲ್ಲಿ 83 ವಿಕೆಟ್​ಗಳನ್ನು ಪಡೆದಿದ್ದಾರೆ. ಪ್ರಸ್ತುತ ಭಾರತೀಯ ಟೆಸ್ಟ್ ತಂಡದೊಂದಿಗೆ ಆಸ್ಟ್ರೇಲಿಯಾದಲ್ಲಿ ಇದ್ದಾರೆ. 2008ರಿಂದ ಇದುವರೆಗೂ ಐಪಿಎಲ್ ಗೆಲ್ಲದ ಕೇವಲ ಮೂರು ತಂಡಗಳಲ್ಲಿ (ಪಿಬಿಕೆಎಸ್ ಮತ್ತು ಡಿಸಿ ಇತರರು) ಒಂದಾಗಿದೆ. ಮೂರು ಬಾರಿ ಫೈನಲ್ ಪ್ರವೇಶಿಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಜಿಟಿ ಸೇರಿರುವ ಸಿರಾಜ್ ಅವರು ಕಗಿಸೊ ರಬಾಡ ಮತ್ತು ಪ್ರಸಿದ್ಧ್ ಕೃಷ್ಣ ಅವರೊಂದಿಗೆ ವೇಗದ ಬೌಲಿಂಗ್ ದಾಳಿಯಲ್ಲಿ ಜೊತೆಗೂಡಲಿದ್ದಾರೆ. ಮತ್ತೊಂದೆಡೆ, ಆರ್​​ಸಿಬಿ ವೇಗದ ವಿಭಾಗವನ್ನು ನಿರ್ವಹಿಸಲು ಭುವನೇಶ್ವರ್ ಕುಮಾರ್, ಜೋಶ್ ಹೇಜಲ್​ವುಡ್, ಯಶ್ ದಯಾಳ್, ನುವಾನ್ ತುಷಾರ ಅವರನ್ನು ಹೊಂದಿದೆ.

Whats_app_banner