ಕನ್ನಡ ಸುದ್ದಿ  /  Cricket  /  Rcb To Lose Yet Another Indian Premier League Trophy Ab De Villiers Humungous Prediction For His Former Team In Ipl Prs

ಆರ್​​ಸಿಬಿ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವುದು ಖಚಿತ; ಭರ್ಜರಿ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್​

AB de Villiers: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವನ್ನು ಬಹಿರಂಗಪಡಿಸಿದ್ದಾರೆ.

ಐಪಿಎಲ್​ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಯಾವುದೆಂದು ಬಹಿರಂಗಪಡಿಸಿದ ಎಬಿ ಡಿವಿಲಿಯರ್ಸ್
ಐಪಿಎಲ್​ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಯಾವುದೆಂದು ಬಹಿರಂಗಪಡಿಸಿದ ಎಬಿ ಡಿವಿಲಿಯರ್ಸ್

17ನೇ ಆವೃತ್ತಿಯ ಐಪಿಎಲ್​-2024​ ಜಾತ್ರೆ ಆರಂಭಗೊಂಡಿದೆ. ಒಂದು ಟ್ರೋಫಿಗಾಗಿ ಎಲ್ಲಾ 10 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಐಪಿಎಲ್ ಮಿನಿ ಹರಾಜಿನ ಬಳಿಕ 10 ತಂಡಗಳಲ್ಲಿ ಭಾರಿ ಬದಲಾವಣೆ ಕಂಡಿದೆ. ಹಲವು ತಂಡಗಳಲ್ಲಿ ಕ್ಯಾಪ್ಟನ್​ಗಳ ಬದಲಾವಣೆಯಾಗಿದೆ. ಹೊಸ ತಂಡಗಳು, ಹೊಸ ಕನಸು ಮತ್ತು ಭರವಸೆಗಳೊಂದಿಗೆ ಐಪಿಎಲ್ ಅಖಾಡಕ್ಕೆ ಧುಮುಕಲು ಸಜ್ಜಾಗಿವೆ.

ನೂತನ ಐಪಿಎಲ್ ಟೂರ್ನಿ ಆರಂಭಗೊಂಡ ಬೆನ್ನಲ್ಲೇ ಪ್ರಿಡಿಕ್ಷನ್​​ಗಳು ಜೋರಾಗಿವೆ. ಮಾಜಿ ಕ್ರಿಕೆಟರ್ಸ್, ತಜ್ಞರು, ಕ್ರಿಕೆಟ್ ಪಂಡಿತರು ಈ ಬಾರಿ ಯಾವ ತಂಡಗಳು ಪ್ಲೇಆಫ್​ಗೆ ಪ್ರವೇಶಿಸಲಿವೆ, ಯಾವ ತಂಡ ಪ್ರಶಸ್ತಿ ಗೆಲ್ಲಲಿದೆ, ಯಾರು ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಗೆಲ್ಲುತ್ತಾರೆ ಎಂಬುದರ ಕುರಿತು ತಮ್ಮದೇಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿಗೆ ಎಬಿ ಡಿವಿಲಿಯರ್ಸ್ ಕೂಡ ಸೇರಿದ್ದಾರೆ.

ಎಬಿ ಡಿವಿಲಿಯರ್ಸ್ ಹೇಳಿದ್ದೇನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ್ದಾರೆ. 2024ರ ಐಪಿಎಲ್​ನಲ್ಲಿ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಆರ್​​ಸಿಬಿ, 16 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಬ್ಲ್ಯುಪಿಎಲ್​​ನಲ್ಲಿ ಆರ್​ಸಿಬಿ ಮಹಿಳಾ ತಂಡ 2ನೇ ಸೀಸನ್​ನಲ್ಲೇ ಟ್ರೋಫಿ ಗೆದ್ದಿದೆ.

2009, 2011 ಮತ್ತು 2016ರಲ್ಲಿ ಆರ್​ಸಿಬಿ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಇದೀಗ ಮಹಿಳೆಯರ ತಂಡವನ್ನು ಆರ್​ಸಿಬಿ ಪುರುಷರ ತಂಡವು ಅನುಕರಿಸಲಿದೆ ಎಂದು ಹೇಳಿರುವ ಎಬಿಡಿ, ಈ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಭರವಸೆ ಇದೆ ಎಂದಿದ್ದಾರೆ. ಈ ಹಿಂದೆ ತಂಡದಲ್ಲಿದ್ದ ನ್ಯೂನತೆಗಳನ್ನು ಒಪ್ಪಿಕೊಂಡ ಎಬಿಡಿ, ಈಗ ಹುಡುಗರು ಹುಡುಗಿಯರ ಪಾರ್ಟಿಗೆ ಬರಲಿದ್ದಾರೆ ಎಂದಿದ್ದಾರೆ.

ಟ್ರೋಫಿ ಜಯಿಸುವುದು ತಂಡದ ಮುಂದಿರುವ ಗುರಿ. ಹುಡುಗಿಯರು ಈಗಾಗಲೇ ಮಾಡಿ ತೋರಿಸಿದ್ದಾರೆ. ಈಗ ಮುಂದಿನ ಹುಡುಗರದ್ದು. ಅವರು ಸಹ ಈ ಹುಡುಗಿಯರ ಪಾರ್ಟಿಗೆ ಬರುತ್ತಾರೆ ಎಂದು ಭಾವಿಸಲಾಗಿದೆ. ಪುರುಷರ ತಂಡ ಈ ಬಾರಿ ಕಪ್ ಗೆಲ್ಲಬಹುದು, ಗೆಲ್ಲುತ್ತಾರೆ ನೋಡಿ. ನನಗೆ ನಂಬಿಕೆ ಇದೆ. ಆದರೆ ತಾಳ್ಮೆಯಿಂದ ಇರಬೇಕು. ಕ್ರೀಡೆ ಒಂದು ತಮಾಷೆಯ ವಿಷಯ. ಯಾವಾಗ ಏನು ಬೇಕಾದರೂ ಆಗಬಹುದು ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಒಮ್ಮೆ ಆರ್​ಸಿಬಿ​ ಪುರುಷರ ತಂಡವು ಒಂದು ಟ್ರೋಫಿ ಜಯಿಸಿದರೆ, ಹಿಂದೆದೆಯೇ ಹಲವು ಟ್ರೋಫಿಗಳನ್ನು ಗೆಲ್ಲಲಿದೆ. ಇನ್ನೂ 9 ಬಲಿಷ್ಠ ತಂಡಗಳಿವೆ. ಆರ್​ಸಿಬಿ ಹೊರತುಪಡಿಸಿ ಇನ್ನೂ ನಾಲ್ಕು ತಂಡಗಳು ಪ್ರಶಸ್ತಿ ಗೆದ್ದಿಲ್ಲ. ನಮ್ಮ ತಂಡ ಸಂಪೂರ್ಣ ಪರಿಶ್ರಮ ನೀಡಿದೆ. ನಾವು ಹತ್ತಿರಕ್ಕೂ ಬಂದಿದ್ದೇವೆ. ಆದರೆ, ಟ್ರೋಫಿ ಎತ್ತಿ ಸಂಭ್ರಮಿಸುವ ದಿನ ಬರಲಿಲ್ಲ ಎಂದು ಹೇಳಿದ್ದಾರೆ.

ಆರ್​​ಸಿಬಿ 2020, 2021 ಮತ್ತು 2022 ರಲ್ಲಿ ಸತತವಾಗಿ ಮೂರು ಬಾರಿ ಪ್ಲೇಆಫ್ ತಲುಪಿದೆ. 2023ರಲ್ಲಿ ಪ್ಲೇಆಫ್ ಪ್ರವೇಶಿಸಲು ವಿಫಲವಾಗಿತ್ತು. ಆದರೆ ತಮ್ಮ ಮಹಿಳಾ ತಂಡವು ಡಬ್ಲ್ಯುಪಿಎಲ್ ಪ್ರಶಸ್ತಿ ಗೆದ್ದ ನಂತರ ಫಾಫ್ ಪಡೆಯು ಹೆಚ್ಚಿನ ಭರವಸೆ ಹೊಂದಿದೆ. ತಂಡಕ್ಕೆ ಹೊಸ ಸೇರ್ಪಡೆಗಳ ಹೊರತಾಗಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ ರನ್ ಗಳಿಸುವ ಜವಾಬ್ದಾರಿ ಹೆಚ್ಚಾಗಿದೆ.