Rohit Sharma: ರೋಹಿತ್ ಶರ್ಮಾ ಆರ್ಸಿಬಿಗೆ ಬರುವುದು ಬಹುತೇಕ: ಮಾಜಿ ಕ್ರಿಕೆಟಿಗನಿಂದ ಸಿಕ್ಕಿತು ಸುಳಿವು
Rohit Sharma: ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ರೋಹಿತ್ ಶರ್ಮಾ ಅವರನ್ನು ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತೆಗೆದುಕೊಳ್ಳುವಂತೆ ನೀಡಿದ್ದಾರೆ. ಆರ್‌ಸಿಬಿ ರೋಹಿತ್ ಅವರನ್ನು ತಂಡಕ್ಕೆ ತೆಗೆದುಕೊಂಡು ನಾಯಕರನ್ನಾಗಿ ನೇಮಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಕಾನ್ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾರೂ ಊಹಿಸಲಾಗದ ರೀತಿಯಲ್ಲಿ ಗೆಲುವು ಕಂಡಿತು. ಇದರ ಶ್ರೇಯ ನಾಯಕ ರೋಹಿತ್ ಶರ್ಮಾ ಅವರಿಗೆ ಸಲ್ಲಬೇಕು. ತಂಡವನ್ನು ಹಿಟ್‌ಮ್ಯಾನ್ ಆಕ್ರಮಣಕಾರಿಯಾಗಿ ಮುನ್ನಡೆಸಿದರು. ಇವರ ನಾಯಕತ್ವಕ್ಕೆ ಎಲ್ಲರೂ ಫಿದಾ ಆದರು. ಇದೀಗ 2025ರ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ನಾಯಕನಾಗಿಯೇ ಆಡಬೇಕು ಎಂಬ ಕೂಗು ಕೇಳಿಬರುತ್ತಿದೆ.
ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ರೋಹಿತ್ ಶರ್ಮಾ ಅವರನ್ನು ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತೆಗೆದುಕೊಳ್ಳುವಂತೆ ನೀಡಿದ್ದಾರೆ. ಆರ್‌ಸಿಬಿ ರೋಹಿತ್ ಅವರನ್ನು ತಂಡಕ್ಕೆ ತೆಗೆದುಕೊಂಡು ನಾಯಕರನ್ನಾಗಿ ನೇಮಿಸಬೇಕು ಎಂದು ಸಲಹೆ ನೀಡಿದ್ದಾರೆ. ಹಿಟ್‌ಮ್ಯಾನ್ 2011 ರಿಂದ ಮುಂಬೈ ಪರ ಆಡುತ್ತಿದ್ದಾರೆ. 2013 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿ ಅಧಿಕಾರ ವಹಿಸಿಕೊಂಡ ನಂತರ, ಅವರು 5 ಬಾರಿ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ. 2024 ರಲ್ಲಿ ಹಾರ್ದಿಕ್ ಪಾಂಡ್ಯಗೆ ನಾಯಕನಾಗಿ ಅಧಿಕಾರವನ್ನು ನೀಡಲಾಯಿತು.
ಮೊಹಮ್ಮದ್ ಕೈಫ್ ಹೇಳಿದ್ದೇನು?
2025ರ ಐಪಿಎಲ್ ಹೊಸ ಋತುವಿನ ಹರಾಜು ಶೀಘ್ರದಲ್ಲೇ ನಡೆಯಲಿದೆ. ಈ ಹರಾಜಿನಲ್ಲಿ ರೋಹಿತ್ ಅವರನ್ನು ಖರೀದಿಸುವಂತೆ ಮೊಹಮ್ಮದ್ ಕೈಫ್ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದರು. ‘ರೋಹಿತ್ ಶ್ರೇಷ್ಠ ನಾಯಕ, ಹಾಗಾಗಿ ಹಿಟ್‌ಮ್ಯಾನ್ ಐಪಿಎಲ್ ಅನ್ನು ಮುನ್ನಡೆಸಬೇಕು. ಅವರ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿದೆ. ಅಂತಹ ರೋಹಿತ್‌ಗೆ ವಿವಿಧ ತಂಡಗಳಿಂದ ಆಫರ್‌ಗಳು ಬರುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ ಮತ್ತು ಅನೇಕ ಫ್ರಾಂಚೈಸಿಗಳು ಅವರನ್ನು ತಮ್ಮ ತಂಡಗಳಿಗೆ ಸೇರಿಕೊಳ್ಳುವಂತೆ ಕೇಳುತ್ತಿವೆ. ಆದರೆ ಆರ್‌ಸಿಬಿ ಈ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹೇಗಾದರೂ ರೋಹಿತ್‌ಗೆ ಮನವರಿಕೆ ಮಾಡಿಕೊಟ್ಟು ಅಧಿಕಾರ ಹಸ್ತಾಂತರಿಸಬೇಕು. ರೋಹಿತ್ ದೊಡ್ಡ ಸ್ಕೋರ್ ಮಾಡದಿದ್ದರೂ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬಲ್ಲರು.’ ಎಂದು ಕೈಫ್ ಹೇಳಿದ್ದಾರೆ.
ಖಾಸಗಿ ಚಾನೆಲ್ವೊಂದರ ಚಿಟ್ ಚಾಟ್ನಲ್ಲಿ ಮಾತನಾಡಿದ ಕೈಫ್, ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ನಾಯಕರಾಗಿ ಮಾತ್ರ ಆಡಬೇಕು. ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಇತ್ತ ಆರ್‌ಸಿಬಿ ಕೂಡ ಹೊಸ ನಾಯಕನ ಹುಡುಕಾಟದಲ್ಲಿದೆ. ಹೀಗಾಗಿ ರೋಹಿತ್ ಅವರನ್ನು ಖರೀದಿಸಿ ಬೆಂಗಳೂರು ನಾಯಕನನ್ನಾಗಿ ಮಾಡುವುದು ಉತ್ತಮ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 17 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಹಿಟ್‌ಮ್ಯಾನ್ ಹಾಗೂ ಕಿಂಗ್ ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದೆ. ಇವರಿಬ್ಬರು ಟೀಮ್ ಇಂಡಿಯಾ ಪರ ಜೊತೆಯಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇಬ್ಬರು ದಿಗ್ಗಜರನ್ನು ಜೊತೆಗೂಡಿಸಿ ಆರ್‌ಸಿಬಿ ಬಲಿಷ್ಠ ತಂಡವನ್ನು ರೂಪಿಸಿಕೊಳ್ಳಬಹುದು.