ಮತ್ತೆ ಪಾಕಿಸ್ತಾನ ತಂಡದ ನಾಯಕತ್ವ ತೊರೆದ ಬಾಬರ್​ ಅಜಮ್; ಇದೇನು ಕುಂಟೆ ಬಿಲ್ಲೆ ಆಟನಾ ಎಂದ ನೆಟ್ಟಿಗರು
ಕನ್ನಡ ಸುದ್ದಿ  /  ಕ್ರಿಕೆಟ್  /  ಮತ್ತೆ ಪಾಕಿಸ್ತಾನ ತಂಡದ ನಾಯಕತ್ವ ತೊರೆದ ಬಾಬರ್​ ಅಜಮ್; ಇದೇನು ಕುಂಟೆ ಬಿಲ್ಲೆ ಆಟನಾ ಎಂದ ನೆಟ್ಟಿಗರು

ಮತ್ತೆ ಪಾಕಿಸ್ತಾನ ತಂಡದ ನಾಯಕತ್ವ ತೊರೆದ ಬಾಬರ್​ ಅಜಮ್; ಇದೇನು ಕುಂಟೆ ಬಿಲ್ಲೆ ಆಟನಾ ಎಂದ ನೆಟ್ಟಿಗರು

Babar Azam: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ಪಾಕಿಸ್ತಾನದ ಎಲ್ಲಾ ಮಾದರಿಯ ಕ್ರಿಕೆಟ್ ನಾಯಕತ್ವಕ್ಕೆ ಬಾಬರ್‌ ಅಜಮ್ (Babar Azam) ಗುಡ್ ಬೈ ಹೇಳಿದ್ದಾರೆ.

ಪಾಕಿಸ್ತಾನ ತಂಡದ ನಾಯಕತ್ವ ತೊರೆದ ಬಾಬರ್​ ಅಜಮ್
ಪಾಕಿಸ್ತಾನ ತಂಡದ ನಾಯಕತ್ವ ತೊರೆದ ಬಾಬರ್​ ಅಜಮ್

ತಕ್ಷಣವೇ ಜಾರಿಗೆ ಬರುವಂತೆ ಪಾಕಿಸ್ತಾನ ತಂಡದ (Pakistan Cricket Team) ವೈಟ್ ಬಾಲ್ ಕ್ರಿಕೆಟ್​ ನಾಯಕತ್ವದಿಂದ ಬಾಬರ್ ಅಜಮ್ (Babar Azam) ಮತ್ತೊಮ್ಮೆ ಕೆಳಗಿಳಿದ್ದಾರೆ. 2023ರ ಏಕದಿನ ವಿಶ್ವಕಪ್​ನಲ್ಲಿ ಹೀನಾಯ ಸೋಲಿನ ಹೊಣೆಗಾರಿಕೆ ಹೊತ್ತು ನಾಯಕತ್ವ ತ್ಯಜಿಸಿದ್ದ ಬಾಬರ್ ಅಜಮ್, 2023ರ ಟಿ20 ವಿಶ್ವಕಪ್​ಗೂ ಮುನ್ನ ಅಂದರೆ ಈ ವರ್ಷದ ಏಪ್ರಿಲ್​ನಲ್ಲಿ ಮತ್ತೊಮ್ಮೆ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದರು. ಕ್ಯಾಪ್ಟನ್ಸಿ ತ್ಯಜಿಸುವ ನಿರ್ಧಾರ ಕಳೆದ ತಿಂಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಟೀಮ್ ಮ್ಯಾನೇಜ್ಮೆಂಟ್​ಗೆ ತಿಳಿಸಿರುವುದಾಗಿ ಹೇಳಿಕೆಯೊಂದರಲ್ಲಿ ಬಾಬರ್ ದೃಢಪಡಿಸಿದ್ದರು.

ನಾಯಕತ್ವ ತುಂಬಾ ಜವಾಬ್ದಾರಿಯುತ ಹುದ್ದೆ. ಹಾಗೆ ಲಾಭದಾಯಕ ಅನುಭವವನ್ನೂ ನೀಡುತ್ತದೆ. ಆದರೆ ಅದರಿಂದ ಟ್ರೋಲ್ ಆಗುತ್ತಿರುವ ಕಾರಣ ಆಟದ ಮೇಲೆ ಕೇಂದ್ರೀಕರಿಸಲು ವಿಫಲವಾಗುತ್ತಿದ್ದೇನೆ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಬಾಬರ್ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟಿಪ್ಪಣ್ಣಿ ಬರೆದಿದ್ದಾರೆ. ಪ್ರಿಯ ಅಭಿಮಾನಿಗಳೇ... ನಾನು ಈ ತಂಡವನ್ನು ಮುನ್ನಡೆಸುವುದು ಅತ್ಯಂತ ಗೌರವದ ಸಂಕೇತ. ನಾನು ಕೆಳಗಿಳಿಯಲು ಇದೇ ಉತ್ತಮ ಸಮಯ. ಜೊತೆಗೆ ನನ್ನ ಆಟದ ಮೇಲೆ ಕೇಂದ್ರೀಕರಿಸಲು ಸಹ ಇದೇ ಉತ್ತಮ ಸಮಯ ಎಂದು ಬಾಬರ್ ಮಂಗಳವಾರ (ಅಕ್ಟೋಬರ್ 1) ತಡರಾತ್ರಿ ಎಕ್ಸ್​ನಲ್ಲಿ ಬರೆದಿದ್ದಾರೆ.

ನಾಯಕತ್ವವು ಲಾಭದಾಯಕ ಅನುಭವ. ಆದರಿದು ಕೆಲಸದ ಹೊರೆಯನ್ನೂ ಸೇರಿಸಿದೆ. ನನ್ನ ಪ್ರದರ್ಶನಕ್ಕೆ ಆದ್ಯತೆ ನೀಡಲು, ನನ್ನ ಬ್ಯಾಟಿಂಗ್ ಅನ್ನು ಆನಂದಿಸಲು ಮತ್ತು ನನ್ನ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ನಾನು ಬಯಸುತ್ತೇನೆ. ಇದು ನನಗೆ ಅತ್ಯಂತ ಸಂತೋಷವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಅವರ ನಾಯಕತ್ವದಲ್ಲಿ ಪಾಕಿಸ್ತಾನ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. 2023ರ ಏಕದಿನ ವಿಶ್ವಕಪ್​​ನಲ್ಲಿ ಪಾಕಿಸ್ತಾನ ಸೋತಿದ್ದ ಕಾರಣ ನಾಯಕತ್ವ ತೊರೆದಿದ್ದರು. ಆದರೆ 2024ರ ಟಿ20 ವಿಶ್ವಕಪ್​ನಲ್ಲೂ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.

ಮತ್ತೆ ಟ್ರೋಲ್​ ಆಗುತ್ತಿದ್ದಾರೆ ಬಾಬರ್

ಪಾಕಿಸ್ತಾನದ ವೈಟ್-ಬಾಲ್ ನಾಯಕನಾಗಿ ಮರುನಾಮಕರಣಗೊಂಡ ನಂತರ ಬಾಬರ್ ನಾಲ್ಕು ಟಿ20 ಸರಣಿಗಳಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದರು. ನ್ಯೂಜಿಲೆಂಡ್‌ನ ವಿರುದ್ಧ ನಡೆದ ತವರಿನಲ್ಲಿ 5 ಪಂದ್ಯಗಳ ಸರಣಿ 2-2 ರಿಂದ ಡ್ರಾ ಆದರೆ, ಐರ್ಲೆಂಡ್ ವಿರುದ್ಧ 2-1 ರಿಂದ ಗೆದ್ದಿತು. 4 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ಗೆ 2-0 ಅಂತರದಲ್ಲಿ ಸೋತಿತು. ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಲ್ಲೇ ಹೊರ ಬಿತ್ತು. ಸೂಪರ್​ 8 ಹಂತಕ್ಕೆ ಪ್ರವೇಶಿಸಲು ವಿಫಲವಾಯಿತು. ಕ್ರಿಕೆಟ್ ಶಿಶು ಅಮೆರಿಕ ಎದುರು ಹೀನಾಯವಾಗಿ ಸೋಲು ಕಂಡು ತೀವ್ರ ಮುಜುಗರಕ್ಕೆ ಒಳಗಾಯಿತು. ಇದೀಗ ಕ್ಯಾಪ್ಟನ್ಸಿ ತೊರೆದರೂ ಮತ್ತೆ ಟ್ರೋಲ್ ಆಗುತ್ತಿದ್ದು, ಇದೇನು ಕುಂಟೆಬಿಲ್ಲೆ ಆಟನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಬಾಬರ್ ನಾಯಕತ್ವದ ದಾಖಲೆ

ಬಾಬರ್ ಅವರು 85 ಪಂದ್ಯಗಳಲ್ಲಿ ಪಾಕಿಸ್ತಾನದ ನಾಯಕರಾಗಿ 48 ಗೆಲುವುಗಳೊಂದಿಗೆ ಇತಿಹಾಸದಲ್ಲಿ 2ನೇ ಅತ್ಯಂತ ಯಶಸ್ವಿ ಟಿ20ಐ ನಾಯಕರಾಗಿ ತಮ್ಮ ಅವಧಿಯನ್ನು ಕೊನೆಗೊಳಿಸಿದ್ದಾರೆ. ಬಾಬರ್ ನಾಯಕತ್ವದಲ್ಲಿ ಪಾಕ್​ 43 ಏಕದಿನ ಪಂದ್ಯಗಳಲ್ಲಿ 26 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ ತಂಡದ ಮುಂದಿನ ಸರಣಿ ಇಂಗ್ಲೆಂಡ್ ವಿರುದ್ಧ. ಅಕ್ಟೋಬರ್​ 18ರಿಂದ ಡಿಸೆಂಬರ್‌ವರೆಗೆ ಸತತವಾಗಿ 18 ವೈಟ್‌ ಬಾಲ್ ಪಂದ್ಯಗಳನ್ನು ಆಡಲಿದೆ. ಆಸ್ಟ್ರೇಲಿಯಾ, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ 3 ಟಿ20ಐ ಮತ್ತು ಅದೇ ತಂಡಗಳ ವಿರುದ್ಧ 3 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಶೀಘ್ರದಲ್ಲೇ ನೂತನ ನಾಯಕನನ್ನು ನೇಮಿಸಲಿದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ.

Whats_app_banner