ಕನ್ನಡ ಸುದ್ದಿ  /  Cricket  /  Sachin Tendulkar Virender Sehwag Praise Dhruv Jurel Performance In 4th Test Against England Ind Vs Eng Series Gill Jra

ಧ್ರುವ್ ಜುರೆಲ್ ವೀರೋಚಿತ‌ ಆಟಕ್ಕೆ ದಿಗ್ಗಜ ಕ್ರಿಕೆಟಿಗರ ಮೆಚ್ಚುಗೆ; ಸಚಿನ್, ಸೆಹ್ವಾಗ್‌, ವಾನ್ ವ್ಯಾಪಕ ಪ್ರಶಂಸೆ

Dhruv Jurel: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು ರೋಚಕ ಜಯ ಸಾಧಿಸಿತು. ಟೀಮ್‌ ಇಂಡಿಯಾ ಸರಣಿ ಗೆಲುವಿನಲ್ಲಿ ಯುವ ಆಟಗಾರ ಧ್ರುವ್‌ ಜುರೆಲ್ ವೀರೋಚಿತ ಆಟ ಪ್ರಮುಖ ಪಾತ್ರ ವಹಿಸಿದೆ. ಪಂದ್ಯಶ್ರೇಷ್ಠ ಆಟಕ್ಕೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಧ್ರುವ್ ಜುರೆಲ್ ವೀರೋಚಿತ‌ ಆಟಕ್ಕೆ ದಿಗ್ಗಜ ಕ್ರಿಕೆಟಿಗರ ಮೆಚ್ಚುಗೆ
ಧ್ರುವ್ ಜುರೆಲ್ ವೀರೋಚಿತ‌ ಆಟಕ್ಕೆ ದಿಗ್ಗಜ ಕ್ರಿಕೆಟಿಗರ ಮೆಚ್ಚುಗೆ

ರಾಂಚಿ ಟೆಸ್ಟ್‌ನಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿದೆ. ಟೀಮ್‌ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ ತವರಿನಲ್ಲಿ ನಡೆದ ಪಂದ್ಯದಲ್ಲಿ, ಪ್ರವಾಸಿ ಆಂಗ್ಲರ ವಿರುದ್ಧ ಭಾರತ (India vs England 4th Test) 5 ವಿಕೆಟ್‌ಗಳಿಂದ ಗೆದ್ದು ಬೀಗಿತು. ಸರಣಿಯ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಯುವ ವಿಕೆಟ್ ಕೀಪರ್ ಹಾಗೂ ಬ್ಯಾಟರ್‌ ಧ್ರವ್‌ ಜುರೆಲ್‌, ಪಂದ್ಯದಲ್ಲಿ ಗೆಲುವಿನ್‌ ರನ್‌ ಬಾರಿಸಿದರು. ಸರಣಿಯಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿರುವ ಯುವ ಆಟಗಾರನ ಪ್ರದರ್ಶನಕ್ಕೆ ದಿಗ್ಗಜ ಕ್ರಿಕೆಟಿಗರಿಂದ ಪ್ರಶಂಸೆಯ ಸುರಿಮಳೆ ವ್ಯಕ್ತವಾಗಿದೆ.

ಜೆಎಸ್‌ಸಿಎ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಜುರೆಲ್ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ 90 ರನ್ ಗಳಿಸಿ, ತಂಡವನ್ನು ಭಾರಿ ಹಿನ್ನಡೆಯಿಂದ ಉಳಿಸಿದರು. ಆ ಬಳಿಕ ಅಂತಿಮ ಇನ್ನಿಂಗ್ಸ್‌ನಲ್ಲಿ ಅಜೇಯ 39 ರನ್ ಸಿಡಿಸುವ ಮೂಲಕ ಇಂಗ್ಲೆಂಡ್ ವಿರುದ್ಧ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಕಬಳಿಸಿದ ಅಶ್ವಿನ್; ಅನಿಲ್ ಕುಂಬ್ಳೆ ದಾಖಲೆ ಹಿಂದಿಕ್ಕಿದ ಮತ್ತು ಸರಿಗಟ್ಟಿದ ಸ್ಪಿನ್ನರ್

ಭಾರತ ತಂಡವು ತವರಿನಲ್ಲಿ ಸತತ 17ನೇ ಸರಣಿ ಗೆಲ್ಲುತ್ತಿದ್ದಂತೆಯೇ, ಭಾರತದ ದಿಗ್ಗ ಕ್ರಿಕೆಟಿಗರು ಟೀಮ್‌ ಇಂಡಿಯಾ ಯುವ ಆಟಗಾರರನ್ನು ಕೊಂಡಾಡಿದ್ದಾರೆ. ಮಾಜಿ ಆರಂಭಿಕ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಕ್ರಿಕೆಟಿಗರು ಅಮೋಘ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

ಧ್ರುವ್‌ ಜುರೆಲ್ ಮತ್ತು ಶುಭ್ಮನ್ ಗಿಲ್ ಅದ್ಭುತ ಫಾರ್ಮ್ ಮುಂದುವರೆಸಿದರು. ಮುರಿಯದ 6ನೇ ವಿಕೆಟ್‌ಗೆ ಅಜೇಯ 72 ರನ್‌ಗಳ ಆಕರ್ಷಕ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. 77 ಎಸೆತಗಳನ್ನು ಎದುರಿಸಿದ ಜುರೆಲ್‌ ಅಜೇಯ 39 ರನ್ ಗಳಿಸಿದರು. ಗಿಲ್‌ ಅಜೇಯ 52 ರನ್‌ ಕಲೆ ಹಾಕಿದರು.

ಕ್ರಿಕೆಟ್‌ ದೇವರ ಪ್ರಶಂಸೆ

ಟೆಸ್ಟ್ ಸರಣಿಯಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಮಣಿಸುತ್ತಿದ್ದಂತೆಯೇ, ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ಖುಷಿಪಟ್ಟಿದ್ದಾರೆ. ಅಲ್ಲದೆ ತಂಡದ ಯುವ ಬಳಗವನ್ನು ಪ್ರಶಂಸಿದ್ದಾರೆ. ಭಾರತವು ಮತ್ತೊಮ್ಮೆ ಒತ್ತಡದ ಪರಿಸ್ಥಿತಿಯಿಂದ ಹೊರಬಂದು ಪಂದ್ಯವನ್ನು ಗೆಲ್ಲಲು ಹೋರಾಡಿತು. ಇದು ನಮ್ಮ ದೇಶದ ಆಟಗಾರರ ಆಟ ಮತ್ತು ಮಾನಸಿಕ ಸಾಮರ್ಥ್ಯವನ್ನು ತೋರಿಸುತ್ತದೆ. ಆಕಾಶ್ ದೀಪ್ ಮೊದಲ ಪಂದ್ಯದಲ್ಲೇ ಉತ್ತಮ ಬೌಲಿಂಗ್‌ ಮಾಡಿದರು. ಎರಡೂ ಇನ್ನಿಂಗ್ಸ್‌ಗಳಲ್ಲಿ ಧ್ರುವ್‌ ಜುರೆಲ್‌ ಅದ್ಭುತವಾಗಿ ಆಡಿದರು. ಕುಲ್ದೀಪ್ ಅವರೊಂದಿಗಿನ ಜೊತೆಯಾಟವು ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವನ್ನು ಪಂದ್ಯದಲ್ಲಿ ಉಳಿಸಿತು. ಕುಲ್ದೀಪ್, ಅಶ್ವಿನ್‌, ಜಡೇಜಾ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಚೇಸಿಂಗ್‌ ವೇಳೆ ಶುಭ್ಮನ್‌ ಗಿಲ್ ಅಗತ್ಯ ಅರ್ಧಶತಕ ಸಿಡಿಸಿದರು. ಪಂದ್ಯ ಮತ್ತು ಸರಣಿ ಗೆಲುವಿನಿಂದ ತುಂಬಾ ಸಂತೋಷವಾಗಿದೆ," ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.‌

ಇದೇ ವೇಳೆ ಗಿಲ್‌ ಹಾಗೂ ಧ್ರುವ್‌ ಆಟವನ್ನು ಸೆಹ್ವಾಗ್ ಶ್ಲಾಘಿಸಿದ್ದಾರೆ. ಆನಂದದಾಯಕ ಗೆಲುವು. ಸರಣಿ ಗೆಲುವಿನಲ್ಲಿ ಶುಬ್ಮನ್ ಗಿಲ್ ಮತ್ತು ಧ್ರುವ್ ಜುರೆಲ್ ತೋರಿಸಿದ ಸಂಯಮ ಅತ್ಯುತ್ತಮವಾಗಿತ್ತು. ಧ್ರುವ್ ಶಾಂತತೆ ಮತ್ತು‌ ಆಟದ ಮನೋಧರ್ಮ ನೋಡಲು ಖುಷಿಯಾಯ್ತು. ಗೆಲುವಿನಲ್ಲಿ ತಂಡದ ಪ್ರಯತ್ನ ಉತ್ತಮವಾಗಿತ್ತು" ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.‌

ಇದನ್ನೂ ಓದಿ | ಗಿಲ್‌-ಜುರೆಲ್‌ ಜವಾಬ್ದಾರಿಯುತ ಆಟ, ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ನಲ್ಲೂ ಭಾರತಕ್ಕೆ ರೋಚಕ ಜಯ; ಸರಣಿ ವಶ

ಇದೇ ವೇಳೆ ಮೈಕೆಲ್‌ ವಾನ್‌, ವೆಂಕಟೇಶ್‌ ಪ್ರಸಾದ್‌, ಇರ್ಫಾನ್‌ ಪಠಾಣ್‌ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಭಾರತದ ಯುವ ಆಟಗಾರರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)