ಕನ್ನಡ ಸುದ್ದಿ  /  Cricket  /  India Win Fourth Test Against England At Ranchi To Clinch The Series By 3 1 Ind Vs Eng 4th Test Rohit Sharma Stokes Jra

ಗಿಲ್‌-ಜುರೆಲ್‌ ಜವಾಬ್ದಾರಿಯುತ ಆಟ, ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ನಲ್ಲೂ ಭಾರತಕ್ಕೆ ರೋಚಕ ಜಯ; ಸರಣಿ ವಶ

IND vs ENG 4th Test : ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಧ್ರುವ್‌ ಜುರೆಲ್‌ ಹಾಗೂ ಶುಭ್ಮನ್‌ ಗಿಲ್‌ ಆರನೇ ವಿಕೆಟ್‌ಗೆ ಅಜೇಯ 72 ರನ್‌ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ಪಡೆ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿದೆ.

ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ನಲ್ಲೂ ಭಾರತಕ್ಕೆ ರೋಚಕ ಜಯ
ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ನಲ್ಲೂ ಭಾರತಕ್ಕೆ ರೋಚಕ ಜಯ (AP)

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿಯೂ ಭಾರತ ಕ್ರಿಕೆಟ್‌ ತಂಡ ರೋಚಕ ಜಯ ಸಾಧಿಸಿದೆ. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 5 ಪಂದ್ಯಗಳ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿದೆ.

ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ, ಗೆಲುವಿಗೆ 192 ರನ್‌​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ, 61 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 192 ರನ್‌ ಗಳಿಸಿ ಗೆದ್ದು ಬೀಗಿದೆ.

ಒಂದು ಹಂತದಲ್ಲಿ 120 ರನ್‌ ವೇಳೆಗೆ 5 ವಿಕೆಟ್‌ ಕಳೆದುಕೊಂಡಿದ್ದ ಭಾರತ, ಸಂಕಷ್ಟಕ್ಕೆ ಸಿಲುಕಿತ್ತು. ರವೀಂದ್ರ ಜಡೇಜಾ ಹಾಗೂ ಸರ್ಫರಾಜ್‌ ಖಾನ್‌ ಸತತ ಎರಡು ಎಸೆತಗಳಲ್ಲಿ ಔಟಾಗಿ ನಿರಾಶೆ ಮೂಡಿಸಿದರು. ಈ ವೇಳೆ ಧ್ರುವ್‌ ಜುರೆಲ್‌ ಹಾಗೂ ಶುಭ್ಮನ್‌ ಗಿಲ್‌ ಪ್ರಬುದ್ಧ ಆಟವಾಡಿದರು. ಅಜೇಯ 72 ರನ್‌ಗಳ ಆಕರ್ಷಕ ಮತ್ತು ಅಗತ್ಯ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆ ಹಂತದಲ್ಲಿ ಸತತ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ತಂಡದ ಒತ್ತಡ ಕಡಿಮೆ ಮಾಡಿದ ಗಿಲ್‌, ಅರ್ಧಶತಕದ ಸಂಭ್ರಮಾಚರಿಸಿದರು. ಇದೇ ವೇಳೆ 2 ರನ್‌ ಗಳಿಸುವ ಮೂಲಕ ತಂಡಕ್ಕೆ ಜುರೆಲ್‌ ಗೆಲುವಿನ ರನ್‌ ಬಾರಿಸಿದರು.

ಇದನ್ನೂ ಓದಿ | ಏನಪ್ಪಾ ಇಷ್ಟೊಂದ್ ಕ್ರೇಜ್! ಪಾಕಿಸ್ತಾನ ಪ್ರೀಮಿಯರ್ ಲೀಗ್​ನಲ್ಲೂ ಆರ್​​ಸಿಬಿ ಜೆರ್ಸಿಯೊಂದಿಗೆ ಕಾಣಿಸಿಕೊಂಡ ಅಭಿಮಾನಿ

ನಾಲ್ಕನೇ ಟೆಸ್ಟ್‌ ಪಂದ್ಯದ ಮೂರನೇ ದಿನದಂತ್ಯಕ್ಕೆ, ಭಾರತವು 8 ಓವರ್‌ಗ​ಳಿಗೆ 40 ರನ್ ಗಳಿಸಿತ್ತು. ಅದಕ್ಕೂ ಮುನ್ನ ಅಶ್ವಿನ್‌ ಸೇರಿದಂತೆ ಭಾರತದ ಪ್ರಬಲ ಸ್ಪಿನ್​ ದಾಳಿಗೆ ನಲುಗಿದ್ದ ಇಂಗ್ಲೆಂಡ್​, 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 145 ರನ್‌​ಗಳಿಗೆ ಇನ್ನಿಂಗ್ಸ್‌ ಮುಗಿಸಿತು. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಭಾರತದ ಗೆಲುವಿಗೆ ಕೇವಲ 152 ರನ್‌ಗಳ ಅಗತ್ಯವಿತ್ತು.

ಉತ್ತಮ ಆರಂಭದ ಬಳಿಕ ಸತತ ವಿಕೆಟ್‌ ಪತನ

ರೋಹಿತ್‌ ಹಾಗೂ ಜೈಸ್ವಾಲ್‌ ದಿನದಾಟದ ಆರಂಭದಲ್ಲಿ ತಂಡಕ್ಕೆ ಉತ್ತಮ ಆರಂಭ ಕೊಟ್ಟರು. ತಂಡದ ಮೊತ್ತ 84 ಇದ್ದ ವೇಳೆ 37 ರನ್‌ ಗಳಿಸಿ ಜೈಸ್ವಾಲ್‌ ಔಟಾದರು. ವೇಗದ ಆಟವಾಡಿದ ಹಿಟ್‌ಮ್ಯಾನ್‌ ಆಕರ್ಷಕ ಅರ್ಧಶತಕ ಸಿಡಿಸಿದರು. ಕೊನೆಗೆ 55 ರನ್‌ ಗಳಿಸಿ ಹಾರ್ಟ್ಲೆಗೆ ವಿಕೆಟ್‌ ಒಪ್ಪಿಸಿದರು. ಟೂರ್ನಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ರಜತ್‌ ಪಾಟೀದಾರ್‌, ಈ ಬಾರಿಯೂ ಶೂನ್ಯಕ್ಕೆ ನಿರ್ಗಮಿಸಿದರು. ನಿಧಾನಗತಿಯಲ್ಲಿ ಬ್ಯಾಟ್‌ ಬೀಸಿದ ಜಡೇಜಾ 33 ಎಸೆತ ಎದುರಿಸಿ ಕೇವಲ 4 ರನ್‌ ಬಾರಿಸಿದರು. ಅವರ ಬಳಿಕ ಬಂದ ಸರ್ಫರಾಜ್‌ ಖಾನ್‌, ಮೊದಲ ಎಸೆತದಲ್ಲಿ ಕ್ಯಾಚ್‌ ನೀಡಿ ಗೋಲ್ಡನ್‌ ಡಕ್‌ ಆದರು. ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ ಪಡೆದ ಶೋಯೆಬ್‌ ಬಶೀರ್‌, ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಕಬಳಿಸಿದ ಅಶ್ವಿನ್; ಅನಿಲ್ ಕುಂಬ್ಳೆ ದಾಖಲೆ ಹಿಂದಿಕ್ಕಿದ ಮತ್ತು ಸರಿಗಟ್ಟಿದ ಸ್ಪಿನ್ನರ್

ಈ ವೇಳೆ ಒಂದಾದ ಗಿಲ್‌ ಹಾಗೂ ಜುರೆಲ್‌ ಆಕರ್ಷಕ ಆಟವಾಡಿದರು. ನಿಧಾನಗತಿಯ ಆಟಕ್ಕೆ ಮುಂದಾಗಿ ವಿಕೆಟ್‌ ಉಳಿಸಿಕೊಂಡರು. ತಂಡವು ಗೆಲುವಿನ ಸಮೀಪಕ್ಕೆ ಬರುತ್ತಿದ್ದಂತೆಯೇ ಅಬ್ಬರಿಸಿದ ಗಿಲ್‌, ಅರ್ಧಶತಕ ಸಿಡಿಸಿದರು. ಕೊನೆಗೆ 192 ರನ್‌ ಗಳಿಸಿ ತಂಡ ಗೆದ್ದು ಬೀಗಿತು.

ಇಂಗ್ಲೆಂಡ್‌ ಪರ ಬಶೀರ್‌ 3 ವಿಕೆಟ್‌ ಪಡೆದರೆ, ಜೋ ರೂಟ್‌ ಹಾಗೂ ಟಾಮ್‌ ಹಾರ್ಟ್ಲೆ ತಲಾ ಒಂದು ವಿಕೆಟ್‌ ಕಬಳಿಸಿದರು.

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 353 ರನ್ ಗಳಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ 307 ರನ್ ಕಲೆ ಹಾಕಿತು. ಇದರೊಂದಿಗೆ 46 ರನ್‌​ಗಳ ಹಿನ್ನಡೆ ಅನುಭವಿಸಿತು. ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಪ್ರವಾಸಿ ತಂಡ ದೊಡ್ಡ ಮೊತ್ತದ ಗುರಿ ನೀಡುವ ವಿಶ್ವಾಸ ಹೊಂದಿತ್ತು. ಆದರೆ ಅಶ್ವಿನ್, ಕುಲ್ದೀಪ್ ಯಾದವ್ ದಾಳಿಗೆ 145 ರನ್‌​​ಗಳಿಗೆ ಆಲೌಟ್ ಆಯಿತು. 192 ರನ್‌​ಗಳ ಗುರಿ ಪಡೆದ ಭಾರತ 5 ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು.

ಇದನ್ನೂ ಒದಿ | ರನೌಟ್ ಭೀತಿಯಿಂದ ಪಾರಾದ ಬೆನ್ನಲ್ಲೇ ರೋಹಿತ್ ಶರ್ಮಾ ಮತ್ತು ಜೇಮ್ಸ್ ಆಂಡರ್ಸನ್ ನಡುವೆ ಮಾತಿನ ಸಮರ

ಸರಣಿಯ ಕೊನೆಯ ಪಂದ್ಯವು ಮಾರ್ಚ್‌ 07ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿದೆ. ಈಗಾಗಲೇ ಸರಣಿ ಗೆದ್ದಿರುವ ಭಾರತವು, ಒತ್ತಡವಿಲ್ಲದೆ ಮುಂದಿನ ಪಂದ್ಯ ಆಡಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point