ಕನ್ನಡ ಸುದ್ದಿ  /  ಕ್ರಿಕೆಟ್  /  Shubha Satheesh: ಪದಾರ್ಪಣೆ ಪಂದ್ಯದಲ್ಲೇ ದಾಖಲೆಯ ಅರ್ಧಶತಕ ಸಿಡಿಸಿದ ಕನ್ನಡತಿ ಶುಭಾ ಸತೀಶ್

Shubha Satheesh: ಪದಾರ್ಪಣೆ ಪಂದ್ಯದಲ್ಲೇ ದಾಖಲೆಯ ಅರ್ಧಶತಕ ಸಿಡಿಸಿದ ಕನ್ನಡತಿ ಶುಭಾ ಸತೀಶ್

Shubha Satheesh: ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕನ್ನಡತಿ ಶುಭಾ ಸತೀಶ್ ಚೊಚ್ಚಲ ಪಂದ್ಯದಲ್ಲೇ ದಾಖಲೆಯ ಅರ್ಧಶತಕ ಸಿಡಿಸಿದ್ದಾರೆ. ಇವರ ಬ್ಯಾಟಿಂಗ್‌ನಲ್ಲಿ ನಿರ್ಮಾಣವಾದ ದಾಖಲೆಯ ವಿವರ ಇಲ್ಲಿದೆ.

ಅರ್ಧಶತಕ ಸಿಡಿಸಿದ ಶುಭಾ ಸತೀಶ್
ಅರ್ಧಶತಕ ಸಿಡಿಸಿದ ಶುಭಾ ಸತೀಶ್ (PTI)

ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ (India Women vs England Women) ಭಾರತೀಯ ವನಿತೆಯರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಂದ್ಯದ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕನ್ನಡತಿ ಶುಭಾ ಸತೀಶ್ (Shubha Satheesh), ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ 24 ವರ್ಷ ಹರೆಯದ ಕನ್ನಡತಿ, 49 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆಕರ್ಷಕ ಹೊಡೆತಗಳಿಂದ ಎಡಗೈ ಆಟಗಾರ್ತಿ ಒಟ್ಟು 69 ರನ್‌ ಕಲೆ ಹಾಕಿದರು. ಅನುಭವಿ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಔಟಾದ ಬಳಿಕ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಲ್ಲದೆ ಜೆಮಿಮಾ ಜೊತೆಗೂಡಿ ಶತಕದ ಜೊತೆಯಾಟವಾಡಿದರು.

ಪಂದ್ಯದಲ್ಲಿ ಒಟ್ಟು 76 ಎಸೆತಗಳನ್ನು ಎದುರಿಸಿದ ಅವರು 13 ಬೌಂಡಿಗಳ ನೆರವಿಂದ 69 ರನ್‌ ಗಳಿಸಿ ಔಟಾದರು. ಅದಕ್ಕೂ ಮುನ್ನ, ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ ಅರ್ಧಶತಕ ತಲುಪಿದ ಭಾರತದ ಎರಡನೇ ವನಿತೆ ಎಂಬ ದಾಖಲೆ ನಿರ್ಮಿಸಿದರು. ಮತ್ತೊಂದೆಡೆ ಚೊಚ್ಚಲ ಟೆಸ್ಟ್‌ನಲ್ಲಿ ಐವತ್ತಕ್ಕೂ ಹೆಚ್ಚು ಸ್ಕೋರ್ ದಾಖಲಿಸಿದ 12ನೇ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು.

ಇದನ್ನೂ ಓದಿ | ಭಾರತ vs ಇಂಗ್ಲೆಂಡ್ ವನಿತೆಯರ ಏಕೈಕ ಟೆಸ್ಟ್ ಪಂದ್ಯ; ದಿನಾಂಕ, ಸಮಯ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ

ಬೌಂಡರಿಯೊಂದಿಗೆ ಅರ್ಧಶತಕ ತಲುಪಿದ ಅವರು, ಅಂತಿಮವಾಗಿ ಸೋಫಿ ಎಕ್ಲೆಸ್ಟನ್ ಅವರ ಎಸೆತದಲ್ಲಿ ಔಟಾದರು. ಈ ಹಿಂದೆ ಭಾರತದ ಸಂಗೀತಾ ದಬೀರ್ 40 ಎಸೆತಗಳ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಮಹಿಳಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟಾರೆ ಶುಭಾ ಅವರದ್ದು ವಿಶ್ವದಲ್ಲೇ ಮೂರನೇ ವೇಗದ ಅರ್ಧಶತಕ.

ವನಿತೆಯರ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ (ಎಸೆತಗಳು)

  • 40 - ಸಂಗೀತಾ ದಬೀರ್ - ಭಾರತ vs ಇಂಗ್ಲೆಂಡ್, 1995
  • 40 - ವನೆಸ್ಸಾ ಬೋವೆನ್ - ಶ್ರೀಲಂಕಾ vs ಪಾಕಿಸ್ತಾನ, 1998
  • 48 - ನ್ಯಾಟ್ ಸಿವರ್-ಬ್ರಂಟ್ - ಇಂಗ್ಲೆಂಡ್ vs ಆಸ್ಟ್ರೇಲಿಯಾ, 2022
  • 49 - ಸತೀಶ್ ಶುಭಾ - ಭಾರತ vs ಇಂಗ್ಲೆಂಡ್, 2023
  • 51 - ಸ್ಮೃತಿ ಮಂಧಾನ - ಭಾರತ vs ಆಸ್ಟ್ರೇಲಿಯಾ, 2021
  • 57 - ಮಾಯಾ ಲೆವಿಸ್ - ನ್ಯೂಜಿಲೆಂಡ್ vs ಇಂಗ್ಲೆಂಡ್, 1996

ಡಿಸೆಂಬರ್ 9ರಂದು ನಡೆದ ಡಬ್ಲ್ಯೂಪಿಎಲ್‌ ಹರಾಜಿನಲ್ಲಿ ಕನ್ನಡತಿ ಶುಭಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 10 ಲಕ್ಷ ರೂಪಾಯಿಗೆ ಖರೀದಿಸಿದೆ.

ಭಾರತ ವನಿತೆಯರ ಟೆಸ್ಟ್ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಶುಭಾ ಸತೀಶ್, ಹರ್ಲೀನ್ ಡಿಯೋಲ್, ಸೈಕಾ ಇಶಾಕ್, ರೇಣುಕಾ ಠಾಕೂರ್, ಟೈಟಾಸ್ ಸಾಧು, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್.

IPL_Entry_Point