ಶುಭ್ಮನ್ ಗಿಲ್ ರಿಟರ್ನ್, ಕೆಎಲ್ ರಾಹುಲ್ ಔಟ್, ಪಂತ್ ಕಥೆ ಏನು; ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್‌ಗೆ ಭಾರತದ ಸಂಭಾವ್ಯ XI
ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 8 ವಿಕೆಟ್ ಗಳ ಸೋಲು ಕಂಡಿದೆ. ಅಕ್ಟೋಬರ್ 24 ರಿಂದ ಪುಣೆಯಲ್ಲಿ 2ನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಸರಣಿಯನ್ನು ಜೀವಂತವಾಗಿರಿಸಲು ಭಾರತ ಗೆಲುವು ದಾಖಲಿಸಬೇಕಾಗಿದೆ. ಅದಕ್ಕಾಗಿ ಭಾರತ ಹಲವು ಬದಲಾವಣೆ ಕಾಣುವ ಸಾಧ್ಯತೆ ಇದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಎಂಟು ವಿಕೆಟ್ಗಳ ಹೀನಾಯ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಆಲೌಟ್ ಆದರೂ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತೀವ್ರ ಹೋರಾಟ ನಡೆಸಿತು. ಆದರೆ, ಮೊದಲ ದಿನವೇ ಸೋಲು ಖಚಿತಪಡಿಸಿದ್ದ ಟೆಸ್ಟ್ ಫಲಿತಾಂಶವನ್ನು ತಿರುಗಿಸಲು ನಡೆಸಿದ ಪ್ರಯತ್ನವು ಸಾಕಾಗಲಿಲ್ಲ. ಭಾರತ ತಂಡವು ಈಗ ಸರಣಿ ವಶಪಡಿಸಿಕೊಳ್ಳಲು ಮುಂದಿನ 2 ಟೆಸ್ಟ್ ಗೆಲ್ಲಲೇಬೇಕಾಗಿದೆ.
2ನೇ ಟೆಸ್ಟ್ ಅಕ್ಟೋಬರ್ 24 ರಿಂದ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿದೆ. ಆದರೆ ಭಾರತ ತನ್ನ 2ನೇ ಟೆಸ್ಟ್ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಬದಲಾವಣೆ ತರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಗಾಯದ ಕಾರಣ ಮೊದಲ ಟೆಸ್ಟ್ ಕಳೆದುಕೊಂಡಿದ್ದ ಶುಭ್ಮನ್ ಗಿಲ್, ಮುಂದಿನ ಪಂದ್ಯಕ್ಕೆ ತಂಡ ಕೂಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಗಿಲ್ ಅಲಭ್ಯತೆಯಲ್ಲಿ ಅವಕಾಶ ಪಡೆದ ಸರ್ಫರಾಜ್ ಖಾನ್ ಅಬ್ಬರಿಸಿ ಭರ್ಜರಿ 150 ರನ್ ಬಾರಿಸಿದರು. ಹೀಗಾಗಿ, ಅವರನ್ನು ಉಳಿಸಿಕೊಂಡು ವೈಫಲ್ಯ ಕಂಡ ಕೆಎಲ್ ರಾಹುಲ್ರನ್ನು ಕೈಬಿಡಲು ಚಿಂತಿಸಿದೆ.
ರಿಷಭ್ ಪಂತ್ ಆಡ್ತಾರಾ ಇಲ್ಲವೇ?
ಸರ್ಫರಾಜ್ರನ್ನು ಕೈಬಿಡುವುದು ತುಂಬಾ ಕಠಿಣ ನಿರ್ಧಾರವಾಗುತ್ತದೆ. ಕೆಎಲ್ ರಾಹುಲ್ ಅವರು ಗಿಲ್‌ಗೆ ದಾರಿ ಮಾಡಿಕೊಡುವುದು ಖಚಿತ. ಒಂದು ಗಿಲ್ ಗಾಯದಿಂದ ಚೇತರಿಸಿಕೊಳ್ಳದಿದ್ದರೆ, ರಾಹುಲ್ ಸ್ಥಾನ ಉಳಿದುಕೊಳ್ಳಲಿದೆ. ರಾಹುಕ್ ಮೊದಲ ಇನ್ನಿಂಗ್ಸ್‌ನಲ್ಲಿ ಡಕ್ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ 12 ರನ್ ಗಳಿಸಿದರು. ರಿಷಭ್ ಪಂತ್ ಅತ್ಯುತ್ತಮ ಫಾರ್ಮ್ನಲ್ಲಿದ್ದು, 99 ರನ್ ಗಳಿಸಿ 1 ರನ್ನಿಂದ ಶತಕ ವಂಚಿತರಾದರು. ಆದರೆ, ಮೊಣಕಾಲಿನ ಗಾಯಗೊಂಡ ಕಾರಣ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗಲಿಲ್ಲ.
2ನೇ ಟೆಸ್ಟ್‌ಗೂ ಮುನ್ನ ಪಂತ್ ಫಿಟ್‌ನೆಸ್ ಆತಂಕಕಾರಿಯಾಗಿದೆ. ಶೇ 100 ರಷ್ಟು ಫಿಟ್ ಆದರೆ ಮಾತ್ರ ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ಪಂತ್ ಚೇತರಿಕೆ ಕಾಣದಿದ್ದರೆ ಧ್ರುವ್ ಜುರೆಲ್ ವಿಕೆಟ್ ಕೀಪರ್ ಸ್ಥಾನವನ್ನು ನಿಭಾಯಿಸಲಿದ್ದಾರೆ. ಇಲ್ಲವಾದರೆ ಧ್ರುವ್ ಜುರೆಲ್ ಬದಲಿಗೆ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲು ಮತ್ತೊಂದು ಅವಕಾಶ ನೀಡಬಹುದು. ಉತ್ತಮ ಫಾರ್ಮ್‌ನಲ್ಲಿ ಇಲ್ಲದ ಮೊಹಮ್ಮದ್ ಸಿರಾಜ್ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡದ ಜಸ್ಪ್ರೀತ್ ಬುಮ್ರಾ ಮೇಲೆ ಒತ್ತಡ ಹೆಚ್ಚಾಗಿದೆ.
ಎರಡನೇ ಟೆಸ್ಟ್‌ನಲ್ಲಿ ಸಿರಾಜ್ ಬದಲಿಗೆ ಆಕಾಶ್ ದೀಪ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಪಂದ್ಯ ನಡೆಯಲಿದ್ದು, ಅಲ್ಲಿನ ಪಿಚ್ ವೇಗಿಗಳಿಗೆ ನೆರವಾಗಲಿದೆ. ಹೀಗಾಗಿ ಮೂವರು ವೇಗಿಗಳಿಗೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ. ಅದೇ ಜರುಗಿದರೆ ಕುಲ್ದೀಪ್ ಯಾದವ್ ಬೆಂಚ್ ಕಾಯಬೇಕಾಗುತ್ತದೆ. ಅಲ್ಲದೆ, ಮೂವರು ಸ್ಪಿನ್ನರ್ಗಳಿಗೆ ಮಣೆ ಹಾಕಲು ಬಯಸಿದರೆ, ಕುಲ್ದೀಪ್ ಬದಲಿಗೆ ಅಕ್ಷರ್ ಪಟೇಲ್ಗೆ ತಂಡದಲ್ಲಿ ಸ್ಥಾನ ಸಿಗಬಹುದು. ಆದರೆ, ತಂಡದಲ್ಲಿ ಯಾವೆಲ್ಲಾ ಬದಲಾವಣೆ ಆಗಬಹುದು ಎಂಬುದನ್ನು ಕಾದುನೋಡೋಣ.
2ನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಇಲೆವೆನ್
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್/ಧ್ರುವ್ ಜುರೆಲ್, ಕೆಎಲ್ ರಾಹುಲ್/ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್/ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ.