ಕನ್ನಡ ಸುದ್ದಿ  /  ಕ್ರಿಕೆಟ್  /  ಸೌರವ್ ಗಂಗೂಲಿ 52ನೇ ಜನ್ಮದಿನ: ಚಾಪೆಲ್ ಜೊತೆ ವೈಮನಸು, ಶರ್ಟ್​ ಬಿಚ್ಚಿ ಸಂಭ್ರಮ… ದಾದಾ ಹೆಜ್ಜೆಗುರುತುಗಳ ನೋಟ

ಸೌರವ್ ಗಂಗೂಲಿ 52ನೇ ಜನ್ಮದಿನ: ಚಾಪೆಲ್ ಜೊತೆ ವೈಮನಸು, ಶರ್ಟ್​ ಬಿಚ್ಚಿ ಸಂಭ್ರಮ… ದಾದಾ ಹೆಜ್ಜೆಗುರುತುಗಳ ನೋಟ

Sourav Ganguly Birthday: ಟೀಮ್ ಇಂಡಿಯಾ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್​ ಗಂಗೂಲಿ ಅವರಿಗೆ 52ನೇ ಜನ್ಮದಿನ. ಬಂಗಾಳದ ಮಹಾರಾಜನ ಹುಟ್ಟುಹಬ್ಬದ ಪ್ರಯುಕ್ತ ಅವರ ಕ್ರಿಕೆಟ್​​ ಪಯಣದ ಕುರಿತು ತಿಳಿಯೋಣ.

ಸೌರವ್ ಗಂಗೂಲಿ 52ನೇ ಜನ್ಮದಿನ: ಚಾಪೆಲ್ ಜೊತೆ ವೈಮನಸು, ಶರ್ಟ್​ ಬಿಚ್ಚಿ ಸಂಭ್ರಮ… ದಾದಾ ಹೆಜ್ಜೆಗುರುತುಗಳ ನೋಟ
ಸೌರವ್ ಗಂಗೂಲಿ 52ನೇ ಜನ್ಮದಿನ: ಚಾಪೆಲ್ ಜೊತೆ ವೈಮನಸು, ಶರ್ಟ್​ ಬಿಚ್ಚಿ ಸಂಭ್ರಮ… ದಾದಾ ಹೆಜ್ಜೆಗುರುತುಗಳ ನೋಟ

ಭಾರತೀಯ ಕ್ರಿಕೆಟ್ ತಂಡವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಸಾರ್ವಕಾಲಿಕ ಶ್ರೇಷ್ಠ ನಾಯಕ, ಬಂಗಾಳದ ಹುಲಿ ಸೌರವ್​ ಗಂಗೂಲಿ ಅವರು ಇಂದು (ಜುಲೈ 8) 52ನೇ ವರ್ಷದ ಹುಟ್ಟುಹಬ್ಬ (Sourav Ganguly Birthday) ಆಚರಿಸಿಕೊಳ್ಳುತ್ತಿದ್ದಾರೆ. ಮಾಜಿ ನಾಯಕ 1972ರ ಜುಲೈ 8ರಂದು ಜನಿಸಿದ್ದರು. ತವರಿನಲ್ಲಿ ಹುಲಿ, ವಿದೇಶದಲ್ಲಿ ಇಲಿ ಎನ್ನುತ್ತಿದ್ದವರಿಗೆ ವಿದೇಶಿ ನೆಲದಲ್ಲೂ ಎದುರಾಳಿಗಳ ಸದ್ದಡಗಿಸಿದ್ದ ಅಭಿಮಾನಿಗಳ ನೆಚ್ಚಿನ ದಾದಾರನ್ನು ಬಂಗಾಳದ ಮಹಾರಾಜ ಎಂದೂ ಕರೆಯಲಾಗುತ್ತದೆ.

ಆಕ್ರಮಣಕಾರಿ ನಾಯಕನಾಗಿ ಗುರುತಿಸಿಕೊಂಡಿದ್ದ ಗಂಗೂಲಿ, ಮೈದಾನದಲ್ಲಿ ಫೈಟರ್​ ಆಗಿದ್ದರು. ಸದಾ ಧೈರ್ಯದಿಂದ ಮುನ್ನುಗ್ಗುತ್ತಿದ್ದ ಗಂಗೂಲಿ, ಹುಟ್ಟಿದ್ದು ಕೋಲ್ಕತ್ತಾದ ಬೆಹಲಾದಲ್ಲಿ. ಪತ್ನಿಯ ಹೆಸರು ಡೋನಾ ಗಂಗೂಲಿ. ಮಗಳ ಹೆಸರು ಸನಾ ಗಂಗೂಲಿ. 2003ರಲ್ಲಿ ಭಾರತವನ್ನು ಏಕದಿನ ವಿಶ್ವಕಪ್​ ಫೈನಲ್​ಗೇರಿಸಿದ ಹೆಗ್ಗಳಿಕೆ ಹೊಂದಿರುವ ಗಂಗೂಲಿಯ ಪೂರ್ಣ ಹೆಸರು ಸೌರವ್ ಚಂಡೀದಾಸ್ ಗಂಗೂಲಿ. ಇದು ಎಷ್ಟೋ ಮಂದಿಗೂ ತಿಳಿದಿರಲೂ ಇಲ್ಲ. ಅವರ ಹುಟ್ಟುಹಬ್ಬರ ಪ್ರಯುಕ್ತ ಆಸಕ್ತಿಕರ ಸಂಗತಿಗಳನ್ನು ಈ ಮುಂದೆ ತಿಳಿಯೋಣ.

ಭಾರತೀಯ ಕ್ರಿಕೆಟ್​ ಮರೆಯಲಾಗದ ವರ್ಷ ಅಂದರೆ 1999. ಏಕೆಂದರೆ ಆ ವರ್ಷ ಮೊಹಮ್ಮದ್ ಅಜರುದ್ದೀನ್​ ನೇತೃತ್ವದಲ್ಲಿ ಭಾರತ ತಂಡವು ಸೂಪರ್​ ಸಿಕ್ಸ್​ ಹಂತದಿಂದಲೇ ಹೊರಬಿತ್ತು. ಇದಷ್ಟೇ ಅಲ್ಲದೆ, ಏಕದಿನ ವಿಶ್ವಕಪ್​ ನಂತರ ಸೌತ್​ ಆಫ್ರಿಕಾ ಸರಣಿಯಲ್ಲೂ ಮ್ಯಾಚ್​ ಫಿಕ್ಸಿಂಗ್​​ ಭೂತ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇದರಿಂದ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸಿತ್ತು. ತಲೆ ಎತ್ತಿ ಓಡಾಡಲಾಗದ ಸ್ಥಿತಿ ಬಂದೊದಗಿತ್ತು.

ಟ್ರೆಂಡಿಂಗ್​ ಸುದ್ದಿ

ನಾಯಕನಾದ ದಾದ

ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದ ಕ್ಯಾಪ್ಟನ್​ ಅಜರುದ್ದೀನ್, ಅಜಯ್​ ಜಡೇಜಾ ಸೇರಿದಂತೆ ಹಿರಿಯ ಆಟಗಾರರನ್ನು ನಿಷೇಧ ಮಾಡಲಾಗಿತ್ತು. ಮುಜುಗರಕ್ಕೆ ಒಳಗಾಗಿದ್ದ ಮತ್ತು ಸಂದಿಗ್ದ ಪರಿಸ್ಥಿತಿಗೆ ಸಿಲುಕಿದ್ದ ಸಂದರ್ಭದಲ್ಲಿ ಆರಂಭಿಕ ಆಟಗಾರ, ಎಡಗೈ ಬ್ಯಾಟ್ಸ್​ಮನ್​ ಸೌರವ್​ ಗಂಗೂಲಿಗೆ ಹೆಗಲಿಗೆ ಭಾರತ ತಂಡದ ಜವಾಬ್ದಾರಿ ನೀಡಲಾಗಿತ್ತು. ಅವರು ನಾಯಕತ್ವ ವಹಿಸಿಕೊಂಡ ಬಳಿಕ ಮೆನ್ ಇನ್ ಬ್ಲ್ಯೂ ಹಿಂದಿರುಗಿ ನೋಡಿದ್ದೇ ಇಲ್ಲ.

ಯುವ ಸೇನೆ ಕಟ್ಟಿದ್ದ ಗಂಗೂಲಿ

ಸಂಕಷ್ಟದ ಅವಧಿಯಲ್ಲಿ ಕ್ಯಾಪ್ಟನ್​ ಆಗಿದ್ದ ಬಂಗಾಳದ ಹುಲಿ, ಭಾರತ ತಂಡವನ್ನು ಹೊಸದಾಗಿ ಕಟ್ಟಿದರು. ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಿದರು. ವೀರೇಂದ್ರ ಸೆಹ್ವಾಗ್, ಯುವರಾಜ್​ ಸಿಂಗ್, ಮೊಹಮ್ಮದ್ ಕೈಫ್, ಜಹೀರ್ ಖಾನ್, ಎಂಎಸ್​ ಧೋನಿ, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಆಶಿಶ್ ನೆಹರಾ, ಸುರೇಶ್​ ರೈನಾ, ಗೌತಮ್​ ಗಂಭೀರ್​ ಸೇರಿದಂತೆ ಅನೇಕ ಯುವ ಪ್ರತಿಭಾವಂತ ಆಟಗಾರರ ಸೃಷ್ಟಿಗೆ ಕಾರಣರಾದರು.

ಹೊಸ ಪರ್ವ ಆರಂಭ, ವಿದೇಶದಲ್ಲೂ ಗೆಲುವು

ವಿದೇಶಿ ನೆಲದಲ್ಲಿ ಭಾರತ ಗೆಲುವು ಸಾಧಿಸುತ್ತಿದ್ದದ್ದು ಕಡಿಮೆ. ಹೀಗಾಗಿ, ತವರಿನಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬ ಟ್ಯಾಗ್​ ಲೈನ್​ ಇತ್ತು. ಆದರೆ, ಗಂಗೂಲಿ ನಾಯಕನಾದ ಮೇಲೆ ಭಾರತ, ವಿದೇಶದಲ್ಲೂ ಘರ್ಜಿಸಿತು. 2003ರಲ್ಲಿ ಆಸ್ಟ್ರೇಲಿಯಾ ಮಣ್ಣಿನಲ್ಲಿ ಟೆಸ್ಟ್​ ಸರಣಿ ಜಯಿಸಿತ್ತು. 2002ರಲ್ಲಿ ಇಂಗ್ಲೆಂಡ್​ ವಿರುದ್ಧ ಲಾರ್ಡ್ಸ್​​ ಅಂಗಳದಲ್ಲಿ ಫೈನಲ್ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ನ್ಯಾಟ್​ವೆಸ್ಟ್ ಸರಣಿ ವಶಪಡಿಸಿಕೊಂಡಿತ್ತು. ಈ ವೇಳೆ ನಾಯಕ ಸೌರವ್​ ಟೀ ಶರ್ಟ್​ ಬಿಚ್ಚಿ ಸಂಭ್ರಮಿಸಿದ್ದರು. ಇದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇದು ಕ್ರಿಕೆಟ್​ ಇರುವವರೆಗೂ ಅಜರಾಮರ.

ಗಂಗೂಲಿ ನಾಯಕತ್ವದಲ್ಲಿ ವಿಶ್ವಕಪ್​ ಫೈನಲ್

ಇದರ ಬೆನ್ನಲ್ಲೇ 2003ರಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ನಡೆದ ವಿಶ್ವಕಪ್​ನಲ್ಲೂ ಅದ್ಭುತ ಪ್ರದರ್ಶನ ತೋರಿತ್ತು. ಈ ಮೆಗಾ ಟೂರ್ನಿಯಲ್ಲಿ ಗಂಗೂಲಿ 3 ಸೆಂಚುರಿ ಬಾರಿಸಿದ್ದರು. ಸಚಿನ್ ತೆಂಡೂಲ್ಕರ್ ಸರಣಿ ಶ್ರೇಷ್ಠ ಪ್ರಶಸ್ತಿ ದಕ್ಕಿಸಿಕೊಂಡಿದ್ದರು. ಆದರೂ, ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನುಭವಿಸಿತ್ತು. ಆದರೆ, ಈ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ವಿರೋಚಿತ ಗೆಲುವು ಭಾರತೀಯರಿಗೆ ಕಪ್ ಗೆದ್ದದ್ದಕ್ಕಿಂತ ಹೆಚ್ಚಿನ ಖುಷಿಕೊಟ್ಟಿದ್ದಂತೂ ಸುಳ್ಳಲ್ಲ.

1992ರಲ್ಲಿ ಏಕದಿನ ತಂಡಕ್ಕೆ ಡೆಬ್ಯೂ

ನಾಯಕನಾದ ನಂತರ ಭಾರತೀಯ ಕ್ರಿಕೆಟ್​ನ ಸುವರ್ಣ ವರ್ಷಗಳಿಗೆ ಅಡಿಗಲ್ಲು ಹಾಕಿದ್ದ ಗಂಗೂಲಿ, ಸಾರ್ವಕಾಲಿಕ ಶ್ರೇಷ್ಠ ಎಡಗೈ ಬ್ಯಾಟ್ಸ್​ಮನ್​ ಎಂದೂ ಕರೆಸಿಕೊಳ್ಳುತ್ತಾರೆ. ಅಲ್ಲದೆ, ಗಾಡ್ ಆಫ್ ಆಫ್ ಸೈಡ್ ಎಂದೂ ಕರೆಸಿಕೊಳ್ಳುತ್ತಾರೆ. 1990ರಲ್ಲಿ ರಣಜಿ ಟ್ರೋಫಿಯ ಫೈನಲ್​​ನಲ್ಲಿ ಡೆಬ್ಯೂ ಮಾಡಿದ್ದ ಗಂಗೂಲಿ, 1992ರ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ, ಏಕದಿನ ಕ್ರಿಕೆಟ್​ಗೆ 1992ರಲ್ಲೇ ಪದಾರ್ಪಣೆ ಮಾಡಿದ್ದರು. ಇದಾದ ನಾಲ್ಕು ವರ್ಷಗಳ ನಂತರ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದರು.

ಚೊಚ್ಚಲ ಪಂದ್ಯದಲ್ಲೇ ಶತಕ

1996ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಗಂಗೂಲಿ, ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ವಿಶ್ವ ಗಮನ ಸೆಳೆದಿದ್ದರು. ಇಂಗ್ಲೆಂಡ್​ ವಿರುದ್ಧ ಕಣಕ್ಕಿಳಿದಿದ್ದ ಗಂಗೂಲಿ, ಅವಿಸ್ಮರಣೀಯ ಇನ್ನಿಂಗ್ಸ್​​ ಕಟ್ಟಿದ್ದರು. 301 ಎಸೆತಗಳಲ್ಲಿ 131 ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್​​ನಲ್ಲಿ 311 ಪಂದ್ಯಗಳಲ್ಲಿ 72 ಅರ್ಧಶತಕ, 22 ಶತಕಗಳ ನೆರವಿನಿಂದ 11363 ರನ್​ ಗಳಿಸಿದ್ದರೆ, ಟೆಸ್ಟ್​​ ಕ್ರಿಕೆಟ್​ನಲ್ಲಿ 113 ಪಂದ್ಯಗಳಲ್ಲಿ ಬ್ಯಾಟ್ ಬೀಸಿ 35 ಅರ್ಧಶತಕ, 16 ಶತಕ ಸಿಡಿಸಿ 7212 ರನ್​ ಗಳಿಸಿದ್ದಾರೆ.

ಚಾಪೆಲ್ ಜೊತೆ ವೈಮನಸು

2005ರ ನಂತರ ಕೋಚ್​ ಗ್ರೇಗ್ ಚಾಪೆಲ್ ಮತ್ತು ನಾಯಕ ಗಂಗೂಲಿ ನಡುವೆ ವೈಮಸು ಏರ್ಪಟ್ಟಿತ್ತು. ಗಂಗೂಲಿಯನ್ನು ತಂಡದಿಂದಲೇ ಹೊರಹಾಕಲಾಯಿತು. ಈ ವೇಳೆ ದೇಶದೆಲ್ಲೆಡೆ ಅಭಿಮಾನಿಗಳು ದೊಡ್ಡ ಹೋರಾಟ ನಡೆಸಿದ್ದರು. 2007ರಲ್ಲಿ ಮತ್ತೆ ತಂಡಕ್ಕೆ ಮರಳಿದ್ದ ಗಂಗೂಲಿ, ಪಾಕಿಸ್ತಾನದ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಚೊಚ್ಚಲ ಡಬಲ್​ ಸೆಂಚುರಿ ಬಾರಿಸಿ ಟೀಕಾಕಾರರಿಗೆ ಖಡಕ್ ತಿರುಗೇಟು ನೀಡಿದ್ದರು.

2008ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಜೊತೆ ಸೇರಿ ನಿವೃತ್ತಿ ಘೋಷಿಸಿದ ಗಂಗೂಲಿ, ಕ್ರಿಕೆಟ್ ಸೇವೆಯಿಂದ ದೂರವಾದರು. ಬಳಿಕ ಐಪಿಎಲ್​ನಲ್ಲೂ ಧಮಾಕ ಸೃಷ್ಟಿಸಿದರು. 59 ಐಪಿಎಲ್ ಪಂದ್ಯಗಳಲ್ಲಿ 1349 ರನ್​ ಚಚ್ಚಿದ್ದಾರೆ. 2012ರಲ್ಲಿ ಸಂಪೂರ್ಣ ಕ್ರಿಕೆಟ್​​ನಿಂದಲೇ ದೂರವಾದರು. ಹಲವು ವರ್ಷಗಳ ನಂತರ ಬಿಸಿಸಿಐ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದರು. ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿಯ ಡೈರೆಕ್ಟರ್​​ (ನಿರ್ದೇಶಕ) ಸೇವೆ ಸಲ್ಲಿಸುತ್ತಿದ್ದಾರೆ.

ನಿವ್ವಳ ಮೌಲ್ಯ

ಭಾರತೀಯ ಕ್ರಿಕೆಟ್​​ನಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಗಂಗೂಲಿಯ ಆಸ್ತಿ ಮೌಲ್ಯವು 700 ಕೋಟಿ. ಅವರು ತಿಂಗಳಿಗೆ 8 ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಕಾರುಗಳು, ಬೈಕ್​, ಫ್ಲಾಟ್​ ಸೇರಿದಂತೆ ಹಲವೆಡೆ ಆಸ್ತಿ ಹೊಂದಿದ್ದಾರೆ.

ನಾಯಕತ್ವದ ದಾಖಲೆ

146 ಏಕದಿನ ಪಂದ್ಯಗಳನ್ನು ಮುನ್ನಡೆಸಿರುವ ಗಂಗೂಲಿ, 76 ಪಂದ್ಯಗಳಲ್ಲಿ ಗೆಲುವು, 65ರಲ್ಲಿ ಸೋಲು ಕಂಡಿದ್ದಾರೆ. 49 ಟೆಸ್ಟ್​ ಪಂದ್ಯಗಳಿಗೆ ತಂಡದ ಜವಾಬ್ದಾರಿ ಹೊತ್ತಿದ್ದ ಗಂಗೂಲಿ, 21ರಲ್ಲಿ ಗೆಲುವು 13ರಲ್ಲಿ ಸೋಲು ಕಂಡಿದ್ದಾರೆ. ಉಳಿದ ಪಂದ್ಯಗಳು ಡ್ರಾ ಸಾಧಿಸಿವೆ.