ಕೆಣಕಿ ಕೆಟ್ಟ ಆಸೀಸ್; ಹರ್ಭಜನ್-ಸೈಮಂಡ್ಸ್ ವಿವಾದ ನೆನಪಿಸಿ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಗುಮ್ಮಿದ ಗವಾಸ್ಕರ್, ನಿಮಗಿದು ಬೇಕಿತ್ತಾ?
ಪರ್ತ್ ಟೆಸ್ಟ್ ಗೆಲುವಿನ ಬಳಿಕ ಆಸ್ಟ್ರೇಲಿಯಾ ಮಾಧ್ಯಮಗಳು ಭಾರತ ಕ್ರಿಕೆಟ್ ತಂಡವನ್ನು ಟೀಕಿಸಲು ಶುರು ಮಾಡಿವೆ. ಈ ಹಿಂದೆ ಟೀಮ್ ಇಂಡಿಯಾ ಆಟಗಾರರನ್ನು ಟೀಕಿಸಿದ ಸಂದರ್ಭಗಳನ್ನು ನೆನಪಿಸಿಕೊಂಡ ಸುನಿಲ್ ಗವಾಸ್ಕರ್, ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಟೆಸ್ಟ್ ಗೆಲುವು, ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಬಹುದು ಎಂಬುದನ್ನು ತೋರಿಸಿದೆ ಎಂದು ಹೇಳಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ಭಾರತ ತಂಡವು ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ನೀರು ಕುಡಿಸಿದೆ. ಕಾಂಗರೂ ನಾಡಿನಲ್ಲಿ ಆಸೀಸ್ ಅನುಭವಿಗಳ ಸೊಕ್ಕು ಮುರಿದ ಜಸ್ಪ್ರೀತ್ ಬುಮ್ರಾ ಪಡೆಯು 295 ರನ್‌ಗಳ ಸ್ಮರಣೀಯ ಗೆಲುವು ಸಾಧಿಸಿತು. ಪಂದ್ಯದ ನಂತರ ಆಸ್ಟ್ರೇಲಿಯಾ ಮಾಧ್ಯಮಗಳು ಭಾರತದ ಬಗ್ಗೆ ಇಲ್ಲಸಲ್ಲದ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದೆ. ಇದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾದ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ಗವಾಸ್ಕರ್, ಈ ಹಿಂದೆ ಭಾರತೀಯ ಕ್ರಿಕೆಟ್ ಅಥವಾ ಆಟಗಾರರನ್ನು ಟೀಕಿಸಿದ ಹಳೆಯ ಸಂದರ್ಭಗಳನ್ನು ನೆನಪಿಸಿಕೊಂಡಿದ್ದಾರೆ.
ಪರ್ತ್‌ನಲ್ಲಿ ಭಾರತ ಸಾಧಿಸಿದ ಗೆಲುವು ಆಸ್ಟ್ರೇಲಿಯಾಗೆ ದೊಡ್ಡ ಪಾಠ. ಯಾವುದೇ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಬಹುದು ಎಂಬುದನ್ನು ಟೀಮ್ ಇಂಡಿಯಾ ತೋರಿಸಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ 0-3 ಅಂತರದಿಂದ ವೈಟ್‌ವಾಶ್ ಅನುಭವಿಸಿ ಒತ್ತಡದಲ್ಲಿದ್ದ ಭಾರತ, ಕಾಂಗರೂ ನಾಡಿನಲ್ಲಿ ಕಂಬ್ಯಾಕ್ ಮಾಡಿತು. ಜಸ್ಪ್ರೀತ್ ಬುಮ್ರಾ ನೇತೃತ್ವದ ಬೌಲಿಂಗ್ ದಾಳಿಯು ಎರಡೂ ಇನ್ನಿಂಗ್ಸ್‌ಗಳಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿತು. ಇದು ಆಸ್ಟ್ರೇಲಿಯಾದಲ್ಲಿ ಭಾರತವು ಎರಡನೇ ಅತಿದೊಡ್ಡ ಗೆಲುವು ಸಾಧಿಸಲು ಸಹಾಯ ಮಾಡಿತು.
ಹರ್ಭಜನ್ ಸಿಂಗ್-ಆಂಡ್ರ್ಯೂ ಸೈಮಂಡ್ಸ್ ಘಟನೆಯ ಮೆಲುಕು
ಗೆಲುವಿನ ನಂತರ ಇಂಡಿಯಾ ಟುಡೇ ಜೊತೆ ಮಾತನಾಡಿದ ಗವಾಸ್ಕರ್, 2008ರಲ್ಲಿ ಅನಿಲ್ ಕುಂಬ್ಳೆ ನೇತೃತ್ವದ ಭಾರತ ತಂಡವು, ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಾಧಿಸಿದ್ದ ದಿಗ್ವಿಜಯವನ್ನು ನೆನಪಿಸಿಕೊಂಡರು. ಈ ಹಿಂದೆ ಪರ್ತ್‌ನಲ್ಲಿ ಭಾರತ ಒಲಿಸಿಕೊಂಡಿದ್ದ ಏಕೈಕ ಗೆಲುವು ಇದು. ಭಾರತ ತಂಡಕ್ಕೆ ಆ ಗೆಲುವು ವಿಶೇಷ. ಏಕೆಂದರೆ ಅದಕ್ಕೂ ಮುನ್ನ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಹರ್ಭಜನ್ ಸಿಂಗ್-ಆಂಡ್ರ್ಯೂ ಸೈಮಂಡ್ಸ್ ಘಟನೆಯ ಬಗ್ಗೆ ಆಸೀಸ್ ಮಾಧ್ಯಮಗಳು ಭಾರತವನ್ನು ಕಟುವಾಗಿ ಟೀಕಿಸಿದ್ದವು. ಈ ಬಾರಿ, ಜೂನ್ ತಿಂಗಳಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್ ಬಳಿ ಹಿಡಿದಿದ್ದ ಅಮೋಘ ಕ್ಯಾಚ್ ಅನ್ನು ಕೂಡಾ ಆಸ್ಟ್ರೇಲಿಯಾದ ಮಾಧ್ಯಮಗಳು ಪ್ರಶ್ನಿಸಿದ್ದವು. ಇವನ್ನೆಲ್ಲಾ ಗವಾಸ್ಕರ್ ನೆನೆಪಿಸಿಕೊಂಡಿದ್ದಾರೆ.
ಪರ್ತ್‌ನಲ್ಲಿ ಭಾರತ ಸಾಧಿಸಿದ ಗೆಲುವು ಆಸೀಸ್ ಮಾಧ್ಯಮಗಳಿಗೆ ಬಾಯಿ ಮುಚ್ಚಿಸುವ ಪ್ರತಿಕ್ರಿಯೆಯಾಗಿದೆ ಎಂದು ಭಾರತದ ಬ್ಯಾಟಿಂಗ್ ದಂತಕಥೆ ಹೇಳಿಕೊಂಡಿದ್ದಾರೆ. ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದು ಮಾತ್ರವಲ್ಲ, ಹೀನಾಯವಾಗಿ ಸೋಲಿಸಬಹುದು ಎಂಬುದನ್ನು ತಂಡ ತೋರಿಸಿದೆ ಎಂದು ಹೇಳಿದರು.
ಕೆಣಕಿದ ಆಸ್ಟ್ರೇಲಿಯಾಗೆ ತಕ್ಕ ಪಾಠ
“ಹಿಂದೆ ಒಂದು ಕಾಲದಲ್ಲಿ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಪ್ರಾಬಲ್ಯವಿತ್ತು. ಆ ಅವಧಿಯ ನಂತರ, ಆಸ್ಟ್ರೇಲಿಯಾ ಸುಮಾರು 10-15 ವರ್ಷಗಳ ಕಾಲ ಅಗ್ರಸ್ಥಾನದಲ್ಲಿತ್ತು. ಹೀಗಾಗಿಯೇ ತಂಡ ಇಷ್ಟು ದೊಡ್ಡ ಸೋಲನ್ನು ಅನುಭವಿಸಲಿಲ್ಲ. ಈಗ ಭಾರತೀಯ ಕ್ರಿಕೆಟ್ ಕಳೆದ 15 ವರ್ಷಗಳಲ್ಲಿ ಉನ್ನತ ಸ್ಥಾನದಲ್ಲಿದೆ. ಹರ್ಭಜನ್ ಸಿಂಗ್ ಮತ್ತು ಆಂಡ್ರ್ಯೂ ಸೈಮಂಡ್ಸ್ ನಡುವಿನ ವಿವಾದದ ನಂತರ 2007/08ರ ಸರಣಿಯಲ್ಲಿ ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಗೆದ್ದಿತ್ತು. ಆಗ ಆಸ್ಟ್ರೇಲಿಯಾದ ಮಾಧ್ಯಮಗಳಿಂದ ಟೀಕೆಗಳು ಬಂದವು. ಹೀಗಾಗಿಯೇ ಪರ್ತ್ ಮೈದಾನದಲ್ಲಿ ಸಾಧಿಸಿದ ಆ ಗೆಲುವು ಮತ್ತು ಈ ಬಾರಿಯ ಗೆಲುವು, ಭಾರತದ ಪ್ರತಿಕ್ರಿಯೆಯನ್ನು ಸೂಚಿಸುತ್ತದೆ. ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಕ್ಯಾಚ್ ಹಿಡಿದಿದ್ದನ್ನು ಈಗ ನೆನಪಿಸಿಕೊಳ್ಳಿ. ಆ ಕ್ಯಾಚ್ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಇಲ್ಲ ಸಲ್ಲದ ವಿಷಯಗಳನ್ನು ಬರೆಯಲಾಗುತ್ತಿತ್ತು. ಸೂರ್ಯಕುಮಾರ್ ಅವರ ಪಾದಗಳು ನೆಲವನ್ನು ಸ್ಪರ್ಶಿಸಿದರೆ ನೀವು ಆಸ್ಟ್ರೇಲಿಯಾದಲ್ಲಿ ಕುಳಿತು ಹೇಗೆ ಪ್ರಶ್ನಿಸುತ್ತೀರಿ? ಅದಕ್ಕಾಗಿಯೇ ನಮ್ಮ ತಂಡವು ಈ ಸರಣಿಯಲ್ಲಿ ನಿಮ್ಮನ್ನು ಸೋಲಿಸುವ ತಂಡ ಎಂಬುದನ್ನು ತೋರಿಸಿದೆ,” ಎಂದು ಗವಾಸ್ಕರ್ ಹೇಳಿದ್ದಾರೆ.