ಇಂಡೋ-ಆಫ್ರಿಕಾ ಫೈನಲ್ ಪಂದ್ಯಕ್ಕೂ ಮಳೆ ಭೀತಿ; ಮ್ಯಾಚ್ ರದ್ದುಗೊಂಡರೆ ಚಾಂಪಿಯನ್ ಪಟ್ಟ ಯಾರಿಗೆ? ಇಲ್ಲಿದೆ ವಿವರ
India vs South Africa Final: ಟಿ20 ವಿಶ್ವಕಪ್ 2024 ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಐಸಿಸಿ ರೂಪಿಸಿರುವ ನಿಯಮಗಳೇನು? ಮೀಸಲು ದಿನವೂ ಪಂದ್ಯ ನಡೆಯದಿದ್ದರೆ ಭಾರತ vs ಸೌತ್ ಆಫ್ರಿಕಾ ನಡುವೆ ವಿಜೇತರು ಯಾರು? ಇಲ್ಲಿದೆ ವಿವರ

2024ರ ಟಿ20 ವಿಶ್ವಕಪ್ (T20 World Cup 2024) ಕೊನೆಯ ಘಟ್ಟ ತಲುಪಿದೆ. ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಜೂನ್ 29ರಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಭಾರತ-ಸೌತ್ ಆಫ್ರಿಕಾ (India vs South Africa) ತಂಡಗಳು ಚಾಂಪಿಯನ್ ಪಟ್ಟಕ್ಕೇರಲು ಸಜ್ಜಾಗಿದೆ. ಉಭಯ ತಂಡಗಳು ಅಜೇಯವಾಗಿ ಫೈನಲ್ ಪ್ರವೇಶಿಸಿವೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಪ್ರಶಸ್ತಿ ಸುತ್ತಿನ ಪಂದ್ಯಕ್ಕೂ ಮಳೆ ಕಾಡುವ ಭೀತಿ ಎದುರಾಗಿದೆ.
ಬಾರ್ಬಡೋಸ್ನ ಆಕ್ಯುವೆದರ್ ರಿಪೋರ್ಟ್ ಪ್ರಕಾರ, ಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಗುಡುಗು ಸಹಿತ ಭಾರಿ ಮಳೆ ಸುರಿಯಾಗಲಿದೆ. ಶೇ.70 ರಷ್ಟು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿಗದಿತ ದಿನದಂದು ಮಳೆ ಅಡ್ಡಿ ಉಂಟು ಮಾಡಿ ಪಂದ್ಯ ನಡೆಯದೇ ಇದ್ದರೆ, ಮೀಸಲು ದಿನವು ಮುಂದುವರೆಯಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮೀಸ್ಗೂ ಮಳೆ ಅಡಚಣೆ ಉಂಟು ಮಾಡಿತ್ತು. ನಂತರ ಬಿಡುವು ಕೊಟ್ಟಿತು.
ಸೂಪರ್ 8 ಸುತ್ತಿನಲ್ಲಿ ಮತ್ತು ಸೆಮಿಫೈನಲ್ ಹಂತದಲ್ಲಿ ಮಳೆಯ ಕಾರಣ ರಿಸರ್ವ್ ಡೇಯಲ್ಲೂ ಫಲಿತಾಂಶ ಬಾರದಿದ್ದರೆ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನ ಪಡೆದ ತಂಡವು ಮುಂದಿನ ಹಂತಕ್ಕೆ ಏರುತ್ತದೆ. ಆದರೆ, ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಈ ನಿಯಮ ಅನ್ವಯ ಆಗುವುದಿಲ್ಲ. ಹಾಗಿದ್ದರೆ ಫೈನಲ್ ಪಂದ್ಯಕ್ಕೆ ಮೀಸಲು ದಿನವೂ ಮಳೆ ಬಂದರೆ ಅಜೇಯವಾಗಿರುವ ಎರಡೂ ತಂಡಗಳಲ್ಲಿ ಯಾರಿಗೆ ಟ್ರೋಫಿ ಸಿಗಲಿದೆ? ಇಲ್ಲಿದೆ ವಿವರ.
ಜಂಟಿ ವಿಜೇತರ ಘೋಷಣೆ
ಒಂದೊಮ್ಮೆ ಫೈನಲ್ನ ರಿಸರ್ವ್ ಡೇನಲ್ಲೂ ನಡೆಯದಿದ್ದರೆ ಆಗ ಉಭಯ ತಂಡಗಳನ್ನೂ ಜಂಟಿ ವಿಜೇತರು ಎಂದು ಘೋಷಣೆ ಮಾಡಲಾಗುತ್ತದೆ. 2002ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವು ಮಳೆಯ ಕಾರಣದಿಂದ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಭಾರತ ಮತ್ತು ಆತಿಥ್ಯ ವಹಿಸಿದ್ದ ಶ್ರೀಲಂಕಾ ಎರಡು ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗಿತ್ತು.
ಪಂದ್ಯದ ವೇಳೆ ಮಳೆ ಅಡ್ಡಿಪಡಿಸಿದರೆ ಹೆಚ್ಚುವರಿ 190 ನಿಮಿಷಗಳನ್ನು ಬಳಸಿಕೊಂಡು ಆಟವನ್ನು ಪೂರ್ಣಗೊಳಿಸಬಹುದು. ಎರಡೂ ತಂಡಗಳಿಗೆ ತಲಾ ಕನಿಷ್ಠ 10 ಓವರ್‌ಗಳನ್ನು ಆಡಲು ಅವಕಾಶ ಸಿಗದಿದ್ದರೆ, ಮಾರ್ಗಸೂಚಿಗಳ ಪ್ರಕಾರ ಪಂದ್ಯವನ್ನು ಮೀಸಲು ದಿನಕ್ಕೆ ವರ್ಗಾಯಿಸಲಾಗುತ್ತದೆ. ಈ ನಿಯಮವು ಹಲವಾರು ಷರತ್ತುಗಳೊಂದಿಗೆ ಕಾರ್ಯರೂಪಕ್ಕೆ ಬರುತ್ತದೆ. ಟಿ20 ವಿಶ್ವಕಪ್ 2024 ಫೈನಲ್‌ಗೆ ಮೀಸಲು ದಿನವಾದ ಜೂನ್ 30. ಹಾಗಾದರೆ ಮೀಸಲು ದಿನದ ನಿಯಮಗಳೇನು?
ಐಸಿಸಿ ನಿಗದಿಪಡಿಸಿದ ಆಟದ ಪರಿಸ್ಥಿತಿಗಳಿಗೆ ಅನುಗುಣವಾಗಿ ಅಂತಿಮ ಪಂದ್ಯವು ಟೈನಲ್ಲಿ ಕೊನೆಗೊಂಡರೆ ವಿಜಯಶಾಲಿ ತಂಡವನ್ನು ನಿರ್ಧರಿಸಲು ಸೂಪರ್ ಓವರ್ ಅನ್ನು ಬಳಸಲಾಗುವುದು. ಸೂಪರ್ ಓವರ್ ಕೂಡ ನಡೆಯಲು ಸಾಧ್ಯವಾಗದಿದ್ದರೆ, ಎರಡೂ ತಂಡಗಳನ್ನು - ಭಾರತ ಮತ್ತು ದಕ್ಷಿಣ ಆಫ್ರಿಕಾ - ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. ಟ್ರೋಫಿಯನ್ನು ಹಂಚಿಕೊಳ್ಳಾಗುತ್ತದೆ.
ಅಫ್ಘಾನಿಸ್ತಾನ ಮಣಿಸಿ ಸೌತ್ ಆಫ್ರಿಕಾ ಫೈನಲ್‌ಗೆ
ಟಿ20 ವಿಶ್ವಕಪ್ 2024 ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆದ್ದು ಸೌತ್ ಆಫ್ರಿಕಾ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿತು. ಐಸಿಸಿ ವಿಶ್ವಕಪ್ಗಳಲ್ಲಿ ದಕ್ಷಿಣ ಆಫ್ರಿಕಾ ಪಾಲಿಗೆ ಇದೇ ಮೊದಲ ಫೈನಲ್. ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಫ್ಘನ್ ಮೊದಲು ಬ್ಯಾಟಿಂಗ್ ನಡೆಸಿತು. ಆದರೆ 11.5 ಓವರ್ಗಳಲ್ಲಿ 56 ರನ್ ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆಫ್ರಿಕಾ 8.5 ಓವರ್ಗಳಲ್ಲೇ ಗೆದ್ದು ಬೀಗಿತು. ಇದರೊಂದಿಗೆ ಫೈನಲ್ ಪ್ರವೇಶಿಸಿತು.
ಇಂಗ್ಲೆಂಡ್ ಎದುರು ಸೇಡು ತೀರಿಸಿಕೊಂಡ ಭಾರತ
2022ರ ಸೆಮಿಫೈನಲ್ ಸೋಲಿನ ಸೇಡನ್ನು ಇಂಗ್ಲೆಂಡ್ ವಿರುದ್ಧ ತೀರಿಸಿಕೊಂಡ ಭಾರತ ತಂಡ, ಟಿ20 ವಿಶ್ವಕಪ್ ಇತಿಹಾಸದಲ್ಲಿ 3ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಗಯಾನಾದ ಪ್ರಾವಿಡೆನ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಎದುರು 68 ರನ್ಗಳಿಂದ ಗೆದ್ದು ಬೀಗಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 171 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆಂಗ್ಲರು 103 ರನ್ಗಳಿಗೆ ಆಲೌಟ್ ಆದರು. ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ತಲಾ 3 ವಿಕೆಟ್ ಪಡೆದು ಮಿಂಚಿದರು.
ಅಜೇಯ ತಂಡಗಳ ನಡುವೆ ಫೈನಲ್ ಪಂದ್ಯ
ಐಸಿಸಿ ಟೂರ್ನಿಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಪಂದ್ಯ ಸೋಲದೆ ಫೈನಲ್ ಪ್ರವೇಶಿಸಿದ ತಂಡಗಳ ನಡುವೆ ಕಾದಾಟ ನಡೆಯಲಿದೆ. ಸೌತ್ ಆಫ್ರಿಕಾ ಲೀಗ್ ಹಂತದಲ್ಲಿ 4, ಸೂಪರ್-8 ಸುತ್ತಿನಲ್ಲಿ 3 ಮತ್ತು ಸೆಮಿಫೈನಲ್ನಲ್ಲಿ ಗೆದ್ದು ಫೈನಲ್ಗೇರಿದೆ. ಮತ್ತೊಂದೆಡೆ ಭಾರತ ತಂಡ ಲೀಗ್ನಲ್ಲಿ 3 ಪಂದ್ಯ (4ರಲ್ಲಿ 1 ಪಂದ್ಯ ಮಳೆಯಿಂದ ರದ್ದು), ಸೂಪರ್-8 ಹಂತದಲ್ಲಿ ಮೂರು ಪಂದ್ಯ, ಸೆಮಿಫೈನಲ್ ಜಯಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ. ಫೈನಲ್ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ.
