ಸೆಮಿಫೈನಲ್ ಹಂತದಲ್ಲಿ ಇದೇ ಮೊದಲ ಬಾರಿಗೆ ಒಂದಂಕಿಗೆ ವಿರಾಟ್ ಕೊಹ್ಲಿ ಔಟ್; ಸಮಾಧಾನಪಡಿಸಿದ ರಾಹುಲ್ ದ್ರಾವಿಡ್, ವಿಡಿಯೋ
Virat Kohli: ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಹಂತದಲ್ಲಿ ಇದೇ ಮೊದಲ ಬಾರಿಗೆ ಒಂದಂಕಿಗೆ ಔಟಾಗಿ ಡಗೌಟ್ನಲ್ಲಿ ಹತಾಶರಾಗಿದ್ದ ವಿರಾಟ್ ಕೊಹ್ಲಿ ಅವರನ್ನು ಹೆಡ್ಕೋಚ್ ರಾಹುಲ್ ದ್ರಾವಿಡ್ ಸಮಾಧಾನಪಡಿಸಿದರು.
ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ ಜೂನ್ 27ರ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಈ ಹಿಂದೆ ಟಿ20 ವಿಶ್ವಕಪ್ ಸೆಮಿಫೈನಲ್ಗಳಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ವಿರಾಟ್, ಈ ನಾಕೌಟ್ ಪಂದ್ಯದಲ್ಲೂ ಭರ್ಜರಿ ಸ್ಕೋರ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಹಾಲಿ ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿರುವ ವಿರಾಟ್, ಈ ಪಂದ್ಯದಲ್ಲೂ ನಿರಾಸೆ ಮೂಡಿಸಿದರು.
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಈವೆಂಟ್ನ 2024ರ ಆವೃತ್ತಿಯ ಸೆಮಿಫೈನಲ್ 2ರಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿತು. ಆದರೆ, ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕೊಹ್ಲಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ನಲ್ಲಿ ಸಿಕ್ಸರ್ ಬಾರಿಸಿದ ಬೆನ್ನಲ್ಲೇ ವೇಗಿ ರೀಸ್ ಟಾಪ್ಲೆ ಅವರ ಬೌಲಿಂಗ್ ಕ್ಲೀನ್ ಬೋಲ್ಡ್ ಆದರು. 9 ಎಸೆತಗಳಲ್ಲಿ 9 ರನ್ ಗಳಿಸಿ ಹೊರ ನಡೆದರು. ಇದು ಇಂಗ್ಲೆಂಡ್ ಪಾಲಿಗೆ ಭರ್ಜರಿ ಮುನ್ನಡೆ ಪಡೆಯಲು ಕಾರಣವಾಯಿತು.
ಸಮಾಧಾನಪಡಿಸಿದ ರಾಹುಲ್ ದ್ರಾವಿಡ್
ಮತ್ತೊಮ್ಮೆ ನಿರಾಸೆ ಮೂಡಿಸಿ ಡಗೌಟ್ನಲ್ಲಿ ಹತಾಶರಾಗಿ ಕುಳಿತಿದ್ದ ವಿರಾಟ್ ಕೊಹ್ಲಿ ಅವರನ್ನು ಹೆಡ್ಕೋಚ್ ರಾಹುಲ್ ದ್ರಾವಿಡ್ ಸಮಾಧಾನಪಡಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಅಕ್ಕಪಕ್ಕದಲ್ಲಿ ಕುಳಿತಿದ್ದರು.
ಐಸಿಸಿ ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಪ್ರದರ್ಶನ
ಎರಡನೇ ಓವರ್ನಲ್ಲಿ 9 ರನ್ ಗಳಿಸಿ ವಿರಾಟ್ ಔಟಾದರು. ಐಸಿಸಿ ಟಿ20 ವಿಶ್ವಕಪ್ 2024 ರಲ್ಲಿ ಕೊಹ್ಲಿ 7 ಇನ್ನಿಂಗ್ಸ್ಗಳಲ್ಲಿ 10.71ರ ಸರಾಸರಿಯಲ್ಲಿ ಕೇವಲ 75 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವೇಗಿ ಟಾಪ್ಲೆ ಟಿ20 ವಿಶ್ವಕಪ್ನ ಸೆಮಿಫೈನಲ್ ಹಂತದಲ್ಲಿ ಕೊಹ್ಲಿಯ ಪ್ರಾಬಲ್ಯವನ್ನು ಕೊನೆಗೊಳಿಸುವಲ್ಲಿ ಯಶಸ್ವಿಯಾದರು. ನಾಕೌಟ್ ಸುತ್ತಿನಲ್ಲಿ ಕೊಹ್ಲಿ ಹೊಸ ಕನಿಷ್ಠ ಮಟ್ಟವನ್ನು ತಲುಪಿದ್ದಾರೆ. ಈ ಹಿಂದೆ ಟಿ20 ವಿಶ್ವಕಪ್ ಸೆಮಿಫೈನಲ್ಗಳಲ್ಲಿ ಅರ್ಧಶತಕ ಬಾರಿಸಿದ್ದ ಕೊಹ್ಲಿ, ಮೊದಲ ಬಾರಿಗೆ ಸೆಮೀಸ್ನಲ್ಲಿ ಒಂದಂಕಿಗೆ ಔಟಾಗಿದ್ದಾರೆ.
ಐರ್ಲೆಂಡ್ ವಿರುದ್ಧ 1 (5 ಎಸೆತ)
ಪಾಕಿಸ್ತಾನ ವಿರುದ್ಧ 4 (3 ಎಸೆತ)
ಯುಎಸ್ಎ ವಿರುದ್ಧ 0 (1 ಎಸೆತ)
ಅಫ್ಘಾನಿಸ್ತಾನ ಎದುರು 24 (24 ಎಸೆತ)
ಬಾಂಗ್ಲಾದೇಶ ವಿರುದ್ಧ 37 (28 ಎಸೆತ)
ಆಸ್ಟ್ರೇಲಿಯಾ ಎದುರು 0 (5 ಎಸೆತ)
ಇಂಗ್ಲೆಂಡ್ ವಿರುದ್ಧ 9 (9 ಎಸೆತ)
2007ರ ಚಾಂಪಿಯನ್ಸ್ ತಂಡದ ಕೊನೆಯ 3 ಸೆಮಿಫೈನಲ್ ಪಂದ್ಯಗಳಲ್ಲಿ ಕೊಹ್ಲಿ ಅರ್ಧಶತಕ ಬಾರಿಸಿದ್ದರು. 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 72*(44), 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 89*(47) ಹಾಗೂ 2022ರಲ್ಲಿ ಇಂಗ್ಲೆಂಡ್ ವಿರುದ್ಧ 50(40) ರನ್ ಗಳಿಸಿದ್ದರು. 2024ರ ಋತುವಿನಲ್ಲಿ ಕೊಹ್ಲಿಯನ್ನು ಎಡಗೈ ವೇಗದ ಬೌಲರ್ಗಳ ವಿರುದ್ಧ ಮೂರು ಬಾರಿ ಔಟ್ ಆಗಿದ್ದಾರೆ.
ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ವಿನ್ನರ್
ಐಪಿಎಲ್ನಲ್ಲಿ ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದು ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ್ದರು. ಆಡಿದ್ದ 15 ಪಂದ್ಯಗಳಲ್ಲಿ 741 ರನ್ ಗಳಿಸಿದ್ದ ಕೊಹ್ಲಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. ಆದರೆ ಟಿ20 ವಿಶ್ವಕಪ್ನಲ್ಲಿ ಅದೇ ಖದರ್ ತೋರಿಸಲು ವಿಫಲರಾದರು.