ಬೆರಳಿನಲ್ಲಿ ರಕ್ತಸ್ರಾವವಾಗುತ್ತಿದ್ದರೂ ಬೌಲಿಂಗ್ ಮಾಡಿ ಮನಗೆದ್ದ ಜಸ್ಪ್ರೀತ್ ಬುಮ್ರಾ; ಗಾಯಕ್ಕೆ ಜಗ್ಗದೆ ಆಡಿದ ವೇಗಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಬೆರಳಿನಲ್ಲಿ ರಕ್ತಸ್ರಾವವಾಗುತ್ತಿದ್ದರೂ ಬೌಲಿಂಗ್ ಮಾಡಿ ಮನಗೆದ್ದ ಜಸ್ಪ್ರೀತ್ ಬುಮ್ರಾ; ಗಾಯಕ್ಕೆ ಜಗ್ಗದೆ ಆಡಿದ ವೇಗಿ

ಬೆರಳಿನಲ್ಲಿ ರಕ್ತಸ್ರಾವವಾಗುತ್ತಿದ್ದರೂ ಬೌಲಿಂಗ್ ಮಾಡಿ ಮನಗೆದ್ದ ಜಸ್ಪ್ರೀತ್ ಬುಮ್ರಾ; ಗಾಯಕ್ಕೆ ಜಗ್ಗದೆ ಆಡಿದ ವೇಗಿ

ಬೆರಳಿನಲ್ಲಿ ನೋವು ಹಾಗೂ ರಕ್ತಸ್ರಾವದ ಹೊರತಾಗಿಯೂ ಜಸ್ಪ್ರೀತ್ ಬುಮ್ರಾ ಒಂದು ಓವರ್‌ ಪೂರ್ಣಗೊಳಿಸಿದರು. ಆ ಬಳಿಕ ಬೆರಳಿಗೆ ಚಿಕಿತ್ಸೆ ಪಡೆದು ಮತ್ತೆ ಬೌಲಿಂಗ್‌ ಮಾಡಿದರು. ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸದ್ಯ ಭಾರತ ಭಾರಿ ಹಿನ್ನಡೆಯಲ್ಲಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬೃಹತ್‌ ಮೊತ್ತ ಪೇರಿಸಿದರೆ ಮಾತ್ರ ತಂಡ ಮೇಲುಗೈ ಸಾಧಿಸುವ ಅಲ್ಪ ಅವಕಾಶವಿದೆ.

ಬೆರಳಿನಲ್ಲಿ ರಕ್ತಸ್ರಾವವಾಗುತ್ತಿದ್ದರೂ ಬೌಲಿಂಗ್ ಮಾಡಿ ಮನಗೆದ್ದ ಜಸ್ಪ್ರೀತ್ ಬುಮ್ರಾ
ಬೆರಳಿನಲ್ಲಿ ರಕ್ತಸ್ರಾವವಾಗುತ್ತಿದ್ದರೂ ಬೌಲಿಂಗ್ ಮಾಡಿ ಮನಗೆದ್ದ ಜಸ್ಪ್ರೀತ್ ಬುಮ್ರಾ (AFP)

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ, ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ ಗಂಭೀರ ಗಾಯಗೊಂಡಿದ್ದರು. ಇದೀಗ ಮೂರನೇ ದಿನದಾಟದ ವೇಳೆ ಟೀಮ್‌ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್‌ ಬುಮ್ರಾ ಗಾಯಕ್ಕೆ ತುತ್ತಾಗಿದ್ದಾರೆ. ಊಟದ ನಂತರದ ಸೆಷನ್‌ನಲ್ಲಿ ಬುಮ್ರಾ ಅವರ ಮಧ್ಯದ ಬೆರಳಿನಿಂದ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿದೆ. ಹೀಗಾಗಿ ತಂಡದ ಮ್ಯಾನೇಜ್ಮೆಂಟ್‌ಗೆ ಮತ್ತೊಂದು ಕಳವಳ ಶುರುವಾಗಿದೆ. ಪಂದ್ಯದಲ್ಲಿ ಕಿವೀಸ್‌ ಭಾರಿ ಹಿಡಿತ ಸಾಧಿಸಿರುವುದು ಒಂದೆಡೆಯಾದರೆ, ಭಾರತ ತಂಡಕ್ಕೆ ಗಾಯದ ಸಮಸ್ಯೆ ಮತ್ತಷ್ಟು ಆತಂಕ ತಂದಿದೆ.

ನ್ಯೂಜಿಲೆಂಡ್ ತಂಡವು ಅದಾಗಲೇ ಭಾರಿ ಮುನ್ನಡೆ ಸಾಧಿಸಿದ್ದರಿಂದ, ಬುಮ್ರಾ ಅವರಂಥಾ ಅನುಭವಿಗಳ ಬೌಲಿಂಗ್‌ ಭಾರತಕ್ಕೆ ಅಗತ್ಯವಿತ್ತು. ಹೀಗಾಗಿ ಗಾಯದ ನಡುವೆಯೂ ಬುಮ್ರಾ ಬೌಲಿಂಗ್ ಮುಂದುವರಿಸಿದರು. ಇದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಲಂಚ್‌ ಅವಧಿ ಆದ ನಂತರ, ಪಂದ್ಯದ 86ನೇ ಓವರ್‌ ವೇಳೆಗೆ ಟೀಮ್ ಇಂಡಿಯಾ ಫಿಸಿಯೋ ಮೈದಾನಕ್ಕೆ ಓಡಿ ಬಂದರು. ಈ ವೇಳೆ ವೀಕ್ಷಕ ವಿವರಣೆ ಮಾಡುತ್ತಿದ್ದ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಬುಮ್ರಾ ಅವರಿಗೆ ಆದ ಗಾಯದ ಬಗ್ಗೆ ವಿವರಿಸಿದರು. ವೇಗದ ಬೌಲರ್ ಅವರ ಮಧ್ಯದ ಬೆರಳಿಗೆ ಗಾಯವಾಗಿದೆ. ಬೆರಳಿನಿಂದ ರಕ್ತಸ್ರಾವವಾಗುತ್ತಿದೆ ಎಂದು ವೀಕ್ಷಕರಿಗೆ ಮಾಹಿತಿ ನೀಡಿದರು.

ರಕ್ತಸ್ರಾವದ ನಡುವೆಯೇ ಓವರ್‌ ಪೂರ್ಣಗೊಳಿಸಿದ ಬುಮ್ರಾ

ಭಾರಿ ನೋವು ಹಾಗೂ ರಕ್ತಸ್ರಾವದ ನಡುವೆಯೂ ಬುಮ್ರಾ ಆ ಓವರ್ ಅನ್ನು ಪೂರ್ಣಗೊಳಿಸಿದರು. ಆರು ಎಸೆತಗಳನ್ನು ಪೂರ್ಣಗೊಳಿಸಿದ ನಂತರ, ಬೆರಳಿಗೆ ಅಗತ್ಯ ಚಿಕಿತ್ಸೆ ಪಡೆದು ಟೇಪ್ ಮಾಡಿದ ಮಧ್ಯದ ಬೆರಳಿನಲ್ಲೇ ಬೌಲಿಂಗ್‌ ಮಾಡಿದರು.

ಎರಡನೇ ದಿನದಾಟದಲ್ಲಿ ಭಾರತವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್ ಗಳಿಸಿ ಆಲೌಟ್ ಆಯ್ತು. 2ನೇ ದಿನದಾಟದ ಅಂತ್ಯಕ್ಕೆ 134 ರನ್ ಗಳ ಮುನ್ನಡೆ ಸಾಧಿಸಿದ್ದ ನ್ಯೂಜಿಲೆಂಡ್ 3ನೇ ದಿನದಾಟದಲ್ಲಿ ಒಟ್ಟು 402 ರನ್‌ ಕಲೆ ಹಾಕಿತು. ಭರ್ಜರಿ ಮುನ್ನಡೆಯೊಂದಿಗೆ ಇದೀಗ ಭಾರತಕ್ಕೆ ಎರಡನೇ ಇನ್ನಿಂಗ್ಸ್‌ ಆಡುವ ಅವಕಾಶ ಕೊಟ್ಟಿದೆ.

ಮೂರನೇ ದಿನದಾಟದಲ್ಲಿ ಕೇವಲ 15 ಓವರ್‌ಗಳ ಅಂತರದಲ್ಲಿ ಭಾರತೀಯ ಬೌಲರ್‌ಗಳು ಕಿವೀಸ್‌ ತಂಡದ ನಾಲ್ಕು ವಿಕೆಟ್ ಪಡೆದರು. ಈ ವೇಳೆ ಲೀಡ್‌ 200ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಬಹುದು ಎಂಬ ನಿರೀಕ್ಷೆ ಮೂಡಿತು. ಆದರೆ ಟಿಮ್ ಸೌಥಿ ಅರ್ಧಶತಕ ಸಿಡಿಸಿದರು. ರಚಿನ್ ರವೀಂದ್ರ ಅಬ್ಬರಿಸಿ ಭರ್ಜರಿ ಶತಕ ಸಿಡಿಸಿದರು. ಇವರಿಬ್ಬರ ನಡುವಿನ ದಾಖಲೆಯ ಶತಕದ ಜೊತೆಯಾಟದಿಂದ ಭಾರತವು ನಿರಾಶೆಗೊಂಡಿತು.

ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕಿವೀಸ್‌, ಮುನ್ನಡೆಯನ್ನು 300 ರನ್‌ಗಳಿಗೆ ಹೆಚ್ಚಿಸಿತು. ಇದು ಟೆಸ್ಟ್ ಇತಿಹಾಸದಲ್ಲಿ ಭಾರತದ ವಿರುದ್ಧ ಕಿವೀಸ್‌ ಸಂಪಾದಿಸಿದ ಅತಿದೊಡ್ಡ ಮುನ್ನಡೆಯಾಗಿದೆ.

Whats_app_banner