ಸರಣಿಯಿಂದ ಹೊರಬಿದ್ದ ಜೋಶ್ ಹೇಜಲ್​ವುಡ್, ಭಾರತಕ್ಕೆ ಕಾಡುತ್ತಿದ್ದ ಟ್ರಾವಿಸ್ ಹೆಡ್​ಗೆ ಗಾಯ? ಮುಂದಿನ ಪಂದ್ಯಗಳಿಗೆ ಡೌಟ್
ಕನ್ನಡ ಸುದ್ದಿ  /  ಕ್ರಿಕೆಟ್  /  ಸರಣಿಯಿಂದ ಹೊರಬಿದ್ದ ಜೋಶ್ ಹೇಜಲ್​ವುಡ್, ಭಾರತಕ್ಕೆ ಕಾಡುತ್ತಿದ್ದ ಟ್ರಾವಿಸ್ ಹೆಡ್​ಗೆ ಗಾಯ? ಮುಂದಿನ ಪಂದ್ಯಗಳಿಗೆ ಡೌಟ್

ಸರಣಿಯಿಂದ ಹೊರಬಿದ್ದ ಜೋಶ್ ಹೇಜಲ್​ವುಡ್, ಭಾರತಕ್ಕೆ ಕಾಡುತ್ತಿದ್ದ ಟ್ರಾವಿಸ್ ಹೆಡ್​ಗೆ ಗಾಯ? ಮುಂದಿನ ಪಂದ್ಯಗಳಿಗೆ ಡೌಟ್

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಗುಡ್​ನ್ಯೂಸ್ ಸಿಕ್ಕಿದೆ. ಭಾರತಕ್ಕೆ ನುಂಗಲಾರದ ತುತ್ತಾಗಿದ್ದ ಟ್ರಾವಿಸ್ ಹೆಡ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಜೋಶ್ ಹೇಜಲ್​ವುಡ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.

ಸರಣಿಯಿಂದ ಹೊರಬಿದ್ದ ಜೋಶ್ ಹೇಜಲ್​ವುಡ್, ಭಾರತಕ್ಕೆ ಕಾಡುತ್ತಿದ್ದ ಟ್ರಾವಿಸ್ ಹೆಡ್​ಗೆ ಗಾಯ? ಮುಂದಿನ ಪಂದ್ಯಗಳಿಗೆ ಡೌಟ್
ಸರಣಿಯಿಂದ ಹೊರಬಿದ್ದ ಜೋಶ್ ಹೇಜಲ್​ವುಡ್, ಭಾರತಕ್ಕೆ ಕಾಡುತ್ತಿದ್ದ ಟ್ರಾವಿಸ್ ಹೆಡ್​ಗೆ ಗಾಯ? ಮುಂದಿನ ಪಂದ್ಯಗಳಿಗೆ ಡೌಟ್

ಭಾರತ vs ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್​ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡ ಬಳಿಕ ಆಸೀಸ್ ಪಾಳಯದಲ್ಲಿ ಆತಂಕ ಮನೆ ಮಾಡಿದೆ. ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಅಬ್ಬರಿಸಿದ ಕಾಂಗರೂ ಪಡೆಯ ಪ್ರಮುಖ ಆಟಗಾರ ಟ್ರಾವಿಸ್ ಹೆಡ್ ಗಾಯದ ಭೀತಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಬ್ರಿಸ್ಬೇನ್​ ಟೆಸ್ಟ್​ನ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಕುಂಟುತ್ತಿದ್ದಂತೆ ಕಂಡು ಬಂತು. ಕ್ರೀಸ್​​ನಲ್ಲಿ ಕೇವಲ 2.1 ಓವರ್​ಗಳ ಕಾಲ ಬ್ಯಾಟಿಂಗ್ ಮಾಡಿದ ಹೆಡ್, ಸಂಭಾವ್ಯ ತೊಡೆಸಂದು ಗಾಯದಿಂದ ಬಳಲುತ್ತಿದ್ದು, ಮುಂದಿನ ಎರಡು ಪಂದ್ಯಗಳಿಗೆ ಅನುಮಾನ ಎಂದು ಹೇಳಲಾಗುತ್ತಿದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ವಕ್ತಾರರು ಇದನ್ನು ನಿರಾಕರಿಸಿದ್ದಾರೆ.

ಟೀಮ್ ಇಂಡಿಯಾ ಚೇಸಿಂಗ್ ನಡೆಸುವ ವೇಳೆ ಫೀಲ್ಡಿಂಗ್‌ ನಡೆಸಲು ಹೆಡ್ ತನ್ನ ಸಹ ಆಟಗಾರರೊಂದಿಗೆ ಮೈದಾನಕ್ಕೆ ಆಗಮಿಸಲಿಲ್ಲ. ಇದು ಬಾರ್ಡರ್ ಗವಾಸ್ಕರ್ ಟ್ರೋಫಿಯ ಉಳಿದ ಪಂದ್ಯಗಳಿಗೆ ಟ್ರಾವಿಸ್ ಹೆಡ್ ಹೊರಗುಳಿಯುವ ಅನುಮಾನ ಹುಟ್ಟು ಹಾಕಿದೆ. ಮತ್ತೊಂದೆಡೆ ಜೋಶ್ ಹೇಜಲ್​ವುಡ್ ಸರಣಿಯಿಂದಲೇ ಹೊರ ಬಿದ್ದಿದ್ದಾರೆ. ಜೋಶ್ ನಂತರ ಆಸೀಸ್​ ಮತ್ತೊಂದು ಗಾಯದ ಆತಂಕ ಸೃಷ್ಟಿಸಿದೆ. ಆದರೆ, ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಆಸೀಸ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಹೆಡ್ ಕುರಿತ ಗೊಂದಲಕ್ಕೆ ತೆರೆ ಎಳೆದು ಜೋಶ್​ ಅಲಭ್ಯತೆಯ ಸ್ಪಷ್ಟನೆ ನೀಡಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆಯಲಿರುವ 4ನೇ ಟೆಸ್ಟ್‌ಗೆ ಹೆಡ್​ ಚೇತರಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕಮಿನ್ಸ್, ಹೇಜಲ್​ವುಡ್ ಹೊರಬಿದ್ದಿದ್ದಾರೆ ಎಂದಿದ್ದಾರೆ.

ಬ್ರಿಸ್ಬೇನ್ ಟೆಸ್ಟ್‌ನ ಅಂತಿಮ ದಿನದಂದು ಹೆಡ್ ಅವರು ತೊಡೆಸಂದು ಬಿಗಿಯಾಗಿ ಹಿಡಿದ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಮೈದಾನಕ್ಕೆ ಆಗಮಿಸಲಿಲ್ಲ ಎಂದು ಕಮಿನ್ಸ್ ಸ್ಪಷ್ಟಪಡಿಸಿದ್ದಾರೆ. ಆದರೆ ಜೋಶ್ ಹೇಜಲ್​ವುಡ್ ಚೇತರಿಸಿಕೊಳ್ಳದ ಕಾರಣ ಸರಣಿಯಿಂದ ಹೊರಬಿದಿದ್ದಾರೆ. ಮತ್ತೊಬ್ಬರಿಗೆ ಗಾಯ ಕಾಣಿಸಿಕೊಂಡರೆ ಭಾರೀ ಹೊಡೆತ ಬಿದ್ದಂತಾಗುತ್ತದೆ. ಜೋಶ್​ ಗಾಯದ ಬಗ್ಗೆ ಪ್ರತಿಕ್ರಿಯಿಸಿದ ಕಮಿನ್ಸ್, 'ಇದು ನಿಜವಾಗಿಯೂ ಕಠಿಣವಾಗಿದೆ. ಆದರೆ ನಾವು ಅವರನ್ನು ಗೌರವಿಸುತ್ತೇವೆ. ದುರದೃಷ್ಟವಶಾತ್, ಅವರು ಈ ಸರಣಿ ಕಳೆದುಕೊಳ್ಳಲಿದ್ದಾರೆ. ಅವರು ಯಾವಾಗ ಮಳುತ್ತಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಸರಣಿಯಲ್ಲಿ ಟ್ರಾವಿಸ್ ಹೆಡ್ ಅಬ್ಬರ

ಪ್ರಸಕ್ತ ಟೂರ್ನಿಯಲ್ಲಿ ಟ್ರಾವಿಸ್ ಹೆಡ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ. ಮೊದಲ ಟೆಸ್ಟ್​​ನಲ್ಲಿ ಅರ್ಧಶತಕ (89), 2ನೇ ಮತ್ತು ಮೂರನೇ ಟೆಸ್ಟ್​​​ನಲ್ಲಿ ಸತತ ಶತಕ ಬಾರಿಸಿದ ಹೆಡ್, ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂರು ಪಂದ್ಯಗಳ 5 ಇನ್ನಿಂಗ್ಸ್​​ಗಳಲ್ಲಿ 81.80ರ ಬ್ಯಾಟಿಂಗ್ ಸರಾಸರಿಯಂತೆ 409 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸ್ಟ್ರೈಕ್​ರೇಟ್ 94.24. ಒಟ್ಟು 47 ಬೌಂಡರಿ, 4 ಸಿಕ್ಸರ್​ ಬಾರಿಸಿದ್ದಾರೆ. ಭಾರತ ತಂಡಕ್ಕೆ ಬಿಟ್ಟೂ ಬಿಡದೆ ಕಾಡುತ್ತಿರುವ ಮತ್ತು ಅದ್ಭುತ ಫಾರ್ಮ್​ನಲ್ಲಿರುವ ಹೆಡ್, ಗಾಯಗೊಂಡಿದ್ದಾರೆ ಎಂದು ವರದಿಯಾಗಿದ್ದು, ಆಸೀಸ್ ತಂಡಕ್ಕೆ ಇನ್ನಿಲ್ಲದಂತೆ ಕಾಡುತ್ತಿದೆ. ಇದರ ನಡುವೆಯೂ ಕಮಿನ್ಸ್ ಭರವಸೆ ವ್ಯಕ್ತಪಡಿಸಿದ್ದಾರೆ.

ನಾಲ್ಕನೇ ಟೆಸ್ಟ್​ ಪಂದ್ಯ ಯಾವಾಗ, ಎಷ್ಟೊತ್ತಿಗೆ?

ಮೊದಲ ಮೂರು ಟೆಸ್ಟ್​ ಪಂದ್ಯಗಳಲ್ಲಿ ಭಾರತ - ಆಸ್ಟ್ರೇಲಿಯಾ ತಂಡಗಳು ತಲಾ 1 ಪಂದ್ಯ ಗೆದ್ದಿವೆ. ಒಂದು ಪಂದ್ಯ ಡ್ರಾಗೊಂಡಿದೆ. ಇದೀಗ 4ನೇ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ಕಸರತ್ತು ನಡೆಸುತ್ತಿವೆ. ಮೆಲ್ಬರ್ನ್​ ಕ್ರಿಕೆಟ್ ಮೈದಾನದಲ್ಲಿ ಡಿಸೆಂಬರ್ 26ರಂದು ಈ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 5 ಗಂಟೆಗೆ ಆರಂಭವಾಗಲಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಕ್ರಿಕೆಟ್​ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರತ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಚಿಂತಿಸುತ್ತಿದೆ.

Whats_app_banner