ಯುಎಸ್ಎ vs ಸೌತ್ ಆಫ್ರಿಕಾ ಟಿ20 ವಿಶ್ವಕಪ್ ಸೂಪರ್ 8 ಪಂದ್ಯ: ಪ್ಲೇಯಿಂಗ್ XI, ಹವಾಮಾನ ಮತ್ತು ಪಿಚ್ ವರದಿ ಇಲ್ಲಿದೆ
USA vs SA T20 World Cup 2024: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಸೂಪರ್-8 ಪಂದ್ಯಗಳು ಇಂದಿನಿಂದ (ಜೂನ್ 19) ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲೇ ಯುಎಸ್ಎ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.
ಐಸಿಸಿ ಟಿ20 ವಿಶ್ವಕಪ್ 2024 (T20 World Cup 2024) ಗುಂಪು ಹಂತ ಕೊನೆಗೊಂಡಿದೆ. ಇನ್ನೇನಿದ್ದರೂ ಸೂಪರ್-8 ಕದನ ಆರಂಭವಾಗಲಿದೆ. ಇಂದು (ಜೂನ್ 19) ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ (Sir Vivian Richards Stadium, North Sound, Antigua) ಸಹ-ಆತಿಥೇಯ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ (USA vs SA) ನಡುವೆ ಮೊದಲ ಸೂಪರ್-8 ಪಂದ್ಯ ನಡೆಯಲಿದೆ. ಪಂದ್ಯಾವಳಿಯ ಸೂಪರ್-8 ಹಂತ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಉತ್ಸುಕರಾಗಿದ್ದಾರೆ.
ಮೊನಾಂಕ್ ಪಟೇಲ್ ನೇತೃತ್ವದ ಅಮೆರಿಕ ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಲೀಗ್ನಲ್ಲಿ ಕೆನಡಾ ತಂಡವನ್ನು ಸೋಲಿಸುವ ಮೂಲಕ ಅಭಿಯಾನ ಪ್ರಾರಂಭಿಸಿದ ಯುಎಸ್ಎ, ನಂತರ ಪಾಕಿಸ್ತಾನ ತಂಡವನ್ನು ಸೂಪರ್ ಓವರ್ನಲ್ಲಿ ಮಣಿಸಿ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿತು. ಜೂನ್ 12ರಂದು ಭಾರತ ವಿರುದ್ಧ ತಮ್ಮ ಒಂದು ಗುಂಪು ಹಂತದ ಪಂದ್ಯದಲ್ಲಿ ಸೋತರೂ, ತಂಡವು ಸೂಪರ್ 8 ಹಂತಕ್ಕೆ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಯಿತು.
ಮತ್ತೊಂದೆಡೆ, ಸೌತ್ ಆಫ್ರಿಕಾ ಇಂದು ಯುಎಸ್ಎ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಸತತ 4 ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡವು ನಡೆಯುತ್ತಿರುವ ಟಿ20 ವಿಶ್ವಕಪ್ 2024ರಲ್ಲಿ ಅಜೇಯವಾಗಿ ಉಳಿದಿದೆ. ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆಮ್ ಮತ್ತು ಕೇಶವ್ ಮಹಾರಾಜ್ ಸೇರಿದಂತೆ ಸ್ಟಾರ್ ಆಟಗಾರನ್ನು ಹೊಂದಿರುವ ತಂಡವು ಮುಂದಿನ ಹಂತದಲ್ಲೂ ಪ್ರಾಬಲ್ಯ ಸಾಧಿಸಲು ಎದುರು ನೋಡುತ್ತಿದೆ. ಹಾಗಂತ ಅಮೆರಿಕ ತಂಡವನ್ನೂ ಕಡೆಗಣಿಸುವಂತಿಲ್ಲ.
ಲೈವ್ ಸ್ಟ್ರೀಮಿಂಗ್ ವಿವರ
ನಿರೀಕ್ಷಿತ ಯುಎಸ್ಎ vs ಸೌತ್ ಆಫ್ರಿಕಾ ಪಂದ್ಯವು ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳು ರೋಚಕ ಘರ್ಷಣೆಯನ್ನು ವೀಕ್ಷಿಸಬಹುದು. ಮತ್ತೊಂದೆಡೆ ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ. ಮೊಬೈಲ್ನಲ್ಲಿ ಸಂಪೂರ್ಣ ಉಚಿತವಾಗಿರಲಿದೆ.
ಪಿಚ್ ವರದಿ
ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನ ಪಿಚ್ ಬ್ಯಾಟರ್ ಮತ್ತು ಬೌಲರ್‌ಗಳಿಗೆ ಉತ್ತಮ ಮೇಲ್ಮೈ ಎಂದು ಸಾಬೀತಾಗಿದೆ. ಈ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಉತ್ತಮ ಮೊತ್ತ ಕಲೆ ಹಾಕುವುದರಿಂದ ಫ್ಯಾನ್ಸ್ ರೋಚಕ ಪಂದ್ಯವನ್ನು ನಿರೀಕ್ಷಿಸಬಹುದು. ಮತ್ತೊಂದೆಡೆ, ಇದು ವೇಗಿಗಳಿಗೆ ಅನುಕೂಲವಾಗಲಿದೆ. ವಿಕೆಟ್‌ನಲ್ಲಿ ಉತ್ತಮ ವೇಗ ಇರುತ್ತದೆ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿ ನಂತರ ಗುರಿ ಬೆನ್ನಟ್ಟಬಹುದು.
ಹವಾಮಾನ ಮುನ್ಸೂಚನೆ
ಪಂದ್ಯದ ಆರಂಭಕ್ಕೂ ಮುನ್ನವೇ ಆಘಾತವಾಗಿದೆ. ಶೇ 20ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಅದು ಆಟಕ್ಕೆ ಅಡ್ಡಿಯಾಗಬಹುದು. ನಿರೀಕ್ಷಿತ ಆರ್ದ್ರತೆಯ ಮಟ್ಟಗಳು ಸುಮಾರು ಶೇ 72ರಷ್ಟು ಇರಲಿದೆ. ತಾಪಮಾನವು 30 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ನಿರೀಕ್ಷೆ ಇದೆ. ಗಾಳಿಯು ಗಂಟೆಗೆ 21 ಕಿ.ಮೀ. ವೇಗದಲ್ಲಿ ಬೀಸುತ್ತದೆ.
ದಕ್ಷಿಣ ಆಫ್ರಿಕಾ ಸಂಭಾವ್ಯ ಪ್ಲೇಯಿಂಗ್ XI
ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಮ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಕಗಿಸೊ ರಬಾಡಾ, ಆನ್ರಿಚ್ ನೋಕಿಯಾ.
ಯುನೈಟೆಡ್ ಸ್ಟೇಟ್ಸ್ ಸಂಭಾವ್ಯ ಪ್ಲೇಯಿಂಗ್ XI
ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ & ವಿಕೆಟ್ ಕೀಪರ್), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನೋಸ್ತುಶ್ ಕೆಂಜಿಗೆ, ಅಲಿ ಖಾನ್, ಸೌರಭ್ ನೇತ್ರವಲ್ಕರ್.