ಬಾಲ್ಯ ಸ್ನೇಹಿತ ಸಚಿನ್ ತೆಂಡೂಲ್ಕರ್ ಜೊತೆಗಿನ ಸಂಬಂಧದ ಕುರಿತು ಕೊನೆಗೂ ಮೌನ ಮುರಿದ ವಿನೋದ್ ಕಾಂಬ್ಳಿ; ಅವರು ನನಗಾಗಿ…
Vinod Kambli on Sachin Tendulkar: ಸಚಿನ್ ತೆಂಡೂಲ್ಕರ್ ಅವರು ನಾನು ಕಷ್ಟದ ಸಮಯದಲ್ಲಿದ್ದಾಗ ಸಹಾಯ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದಾರೆ ಎಂದು ವಿನೋದ್ ಕಾಂಬ್ಳಿ ಬಹಿರಂಗಪಡಿಸಿದ್ದಾರೆ.
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ಅವರು ತಮ್ಮ ಬಾಲ್ಯ ಸ್ನೇಹಿತ ಸಚಿನ್ ತೆಂಡೂಲ್ಕರ್ (Sachin Tendulkar) ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಇದೇ ಮೊದಲ ಬಾರಿಗೆ ಬಿಚ್ಚಿಟ್ಟಿದ್ದಾರೆ. ಕಷ್ಟದ ಸಮಯದಲ್ಲಿ ಸಚಿನ್ ಅವರು ಹೇಗೆ ಬೆಂಬಲಕ್ಕೆ ನಿಂತಿದ್ದರು ಎಂಬುದನ್ನು ನೆನೆದಿದ್ದಾರೆ. 2 ವಾರಗಳ ಹಿಂದೆ ಮುಂಬೈನಲ್ಲಿ ನಡೆದ ತಮ್ಮ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಬ್ಳಿ ಆರೋಗ್ಯ ಹದಗೆಟ್ಟಿದ್ದು ಕಂಡು ಬಂತು. ಆ ಬಳಿಕ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ (Kapil Dev) ಅವರ ನೇತೃತ್ವದ 1983ರ ವಿಶ್ವಕಪ್ ತಂಡದ ಸದಸ್ಯರು ನೆರವಿಗೆ ನಿಲ್ಲುವುದಾಗಿ ಘೋಷಿಸಿದ್ದರು.
ಕಾರ್ಯಕ್ರಮದಲ್ಲಿ ಕಾಂಬ್ಳಿ ನೋಡಿದ ಅನೇಕರು, ಅವರು ಆರೋಗ್ಯವಾಗಿದ್ದಾರೆಯೇ ಎಂದು ಆಶ್ಚರ್ಯಪಟ್ಟಿದ್ದರು. ಇನ್ನೂ ಕೆಲವರು ಬಾಲ್ಯದ ಉತ್ತಮ ಸ್ನೇಹಿತ ಸಚಿನ್ ಅವರು ಕಾಂಬ್ಳಿಗೆ ನೆರವಾಗಲಿಲ್ಲ ಎಂದು ಭಾವಿಸಿದ್ದರು. ಆದರೆ ಈ ಎಲ್ಲದರ ಕುರಿತು ಸ್ಪಷ್ಟನೆ ನೀಡಿರುವ ವಿನೋದ್ ಕಾಂಬ್ಳಿ, ತನ್ನ ಕಷ್ಟದ ಅವಧಿಯಲ್ಲಿ ತೆಂಡೂಲ್ಕರ್ ತಮ್ಮೊಂದಿಗೆ ನಿಂತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ನಮ್ಮ ನಡುವೆ ಬಿರುಕು ಇತ್ತು. ಹಾಗಂತ ನನಗೆ ತುಂಬಾ ಸಹಾಯ ಮಾಡದೇ ಇರಲಿಲ್ಲ ಎಂದಿದ್ದಾರೆ. ನಾನು 2 ಬಾರಿ ಹೃದಯಾಘಾತಕ್ಕೆ ಒಳಗಾದಾಗ, ಸಚಿನ್ ಅವರೇ ಆಸ್ಪತ್ರೆ ಬಿಲ್ ಕಟ್ಟಿದ್ದರು ಎಂದಿದ್ದಾರೆ.
ವಿಕ್ಕಿ ಲಾಲ್ವಾನಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಾಂಬ್ಳಿ, 'ದಶಕದ ಹಿಂದೆ ನನಗೆ ಆರೋಗ್ಯ ಸರಿಯಿರಲಿಲ್ಲ. ಕುಸಿದುಬಿದ್ದಿದ್ದೆ. ಆಗ ನನ್ನ ಹೆಂಡತಿ ತಕ್ಷಣವೇ ನನ್ನನ್ನು ನೇರವಾಗಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದರು. ನನಗೆ 2 ಬಾರಿ ಹೃದಯಾಘಾತವಾಗಿತ್ತು. ನನ್ನ ಹೆಂಡತಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಳು. ಒಂದು ಕ್ಷಣವೂ ನನ್ನನ್ನು ಬಿಟ್ಟು ಹೋಗುತ್ತಿರಲಿಲ್ಲ. ನನ್ನ ಪರಿಸ್ಥಿತಿ ನೋಡಿ ನನ್ನ ಪತ್ನಿ ಅಳುತ್ತಿದ್ದಳು ಎಂದು ಪತ್ನಿಯ ತ್ಯಾಗವನ್ನು ನೆನೆದರು. ಇದೇ ವೇಳೆ ಸಚಿನ್ ತನಗಾಗಿ ಮಾಡಿದ ನೆರವುಗಳನ್ನೂ ಬಹಿರಂಗಪಡಿಸಿದ್ದಾರೆ.
ಸಚಿನ್ ಬಗ್ಗೆ ಕಾಂಬ್ಳಿ ಹೇಳಿದ್ದೇನು?
ನಾವು (ಸಚಿನ್) ಚಿಕ್ಕವರಿದ್ದಾಗಿನಿಂದಲೂ ಒಬ್ಬರಿಗೊಬ್ಬರು ತುಂಬಾ ಆತ್ಮೀಯರು. ಆದರೆ ಸಚಿನ್ ತೆಂಡೂಲ್ಕರ್ ಸ್ಥಾನಮಾನದಲ್ಲಿ ಏರಿಕೆ ಕಂಡರು. ಸಚಿನ್ ನನಗಾಗಿ ಎಲ್ಲವನ್ನೂ ಮಾಡಿದರು. ನನಗೆ ತುಂಬಾ ಸಹಾಯ ಮಾಡಿದರು. ನಾನು ಲೀಲಾವತಿ ಆಸ್ಪತ್ರೆಯಲ್ಲಿ 2 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದೇನೆ. ಆದರೆ 2013 ರಲ್ಲಿ ನನ್ನ ಎರಡೂ ಶಸ್ತ್ರಚಿಕಿತ್ಸೆಗಳಿಗೆ ಹಣ ಪಾವತಿಸಿದ್ದಾರೆ. ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದು ಕಾಂಬ್ಳಿ ಹೇಳಿದ್ದಾರೆ. ಆ ಮೂಲಕ ಸಚಿನ್ ತನಗೇನು ಸಹಾಯವೇ ಮಾಡಿಲ್ಲ ಎನ್ನುವ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಸಚಿನ್ ಮತ್ತು ಕಾಂಬ್ಳಿ ಬಾಲ್ಯ ಸ್ನೇಹಿತರಾಗಿದ್ದರು. ಶಾರದಾಶ್ರಮ ವಿದ್ಯಾಮಂದಿರಕ್ಕಾಗಿ ಒಟ್ಟಿಗೆ ಆಡುತ್ತಿದ್ದ ಜೋಡಿ, ಫೆಬ್ರವರಿ 24, 1988 ರಂದು ಹ್ಯಾರಿಸ್ ಶೀಲ್ಡ್‌ನಲ್ಲಿ ಸೇಂಟ್ ಕ್ಸೇವಿಯರ್ಸ್ ವಿರುದ್ಧ 664 ರನ್ಗಳ ಬೃಹತ್ ಜೊತೆಯಾಟ ಕಟ್ಟಿದ್ದರು. 1992 ಮತ್ತು 1996ರ ಏಕದಿನ ವಿಶ್ವಕಪ್ಗಳಲ್ಲಿ ಒಟ್ಟಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆದಾಗ್ಯೂ, 2009ರಲ್ಲಿ 'ಸಚ್ ಕಾ ಸಾಮ್ನಾ' ಎಂಬ ರಿಯಾಲಿಟಿ ಶೋನಲ್ಲಿ ಕಾಂಬ್ಳಿ ಅವರನ್ನು 'ನಿಮ್ಮ ಸ್ವಯಂ-ವಿನಾಶಕಾರಿ ನಡವಳಿಕೆಯಿಂದ ನಿಮ್ಮನ್ನು ಉಳಿಸಲು ಸಚಿನ್ ಹೆಚ್ಚೆಚ್ಚು ಸಹಾಯ ಮಾಡಬಹುದಿತ್ತೆಂದು ನೀವು ನಂಬುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಲು ಕೇಳಿದಾಗ, ಅವರ ಸಂಬಂಧವು ಒರಟಾಗಿತ್ತು ಎಂದು ಹೇಳಿದ್ದರು. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.
ಕಾಂಬ್ಳಿಯನ್ನು ಕಡೆಣಿಸಿದ್ದ ಸಚಿನ್
ಕಾಂಬ್ಳಿ ಮತ್ತು ತೆಂಡೂಲ್ಕರ್ ನಡುವೆ ಬಿರುಕು ಉಂಟಾಗಿತ್ತು. ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಮಾತನಾಡದೆ ಕಳೆದಿದ್ದರು. ತೆಂಡೂಲ್ಕರ್ ತಮ್ಮ ಕಣ್ಣೀರು ತುಂಬಿದ ನಿವೃತ್ತಿ ಭಾಷಣದಲ್ಲಿ ಕಾಂಬ್ಳಿ ಅವರ ಉಲ್ಲೇಖಿಸಿರಲಿಲ್ಲ. ತಮ್ಮ ಮನೆಯಲ್ಲಿ ಏರ್ಪಡಿಸಿದ್ದ ಕೂಟಕ್ಕೂ ಕಾಂಬ್ಳಿಯನ್ನು ಆಹ್ವಾನಿಸಿರಲಿಲ್ಲ. ಇದರಲ್ಲಿ ಭಾರತೀಯ ಕ್ರಿಕೆಟ್ನ ಖ್ಯಾತನಾಮರೇ ಭಾಗವಹಿಸಿದ್ದರು. ಸಂದರ್ಶನವೊಂದರಲ್ಲಿ ಕಾಂಬ್ಳಿ ತನ್ನ ಬಾಲ್ಯದ ಸ್ನೇಹಿತ ತನ್ನನ್ನು 'ಮರೆತಿದ್ದಾನೆ' ಎಂದು ಬೇಸರವಾಯಿತು ಎಂದು ಹೇಳಿದ್ದರು. ಆ ಬಳಿಕ ಇಬ್ಬರ ನಡುವೆ ಸಂಬಂಧಗಳು ಸುಧಾರಿಸಿದವು. ಸಚಿನ್ ತೆಂಡೂಲ್ಕರ್ ಅವರ ಮಿಡ್ಲ್ಸೆಕ್ಸ್ ಗ್ಲೋಬಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಕಾಂಬ್ಳಿ ಕಾಣಿಸಿಕೊಂಡಿದ್ದರು.
ಸಚಿನ್ ನನಗಾಗಿ ಎಲ್ಲವನ್ನೂ ಮಾಡಿದರು. ಸಚಿನ್ ಹೇಗೆ ಆಡಬೇಕೆಂದು ನನಗೆ ಹೇಳಿಕೊಟ್ಟಿದ್ದರು. ನಾನು 9 ಬಾರಿ ಕಂಬ್ಯಾಕ್ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಕಾಂಬ್ಳಿ, ಭಾರತದ ಪರ 17 ಟೆಸ್ಟ್ ಮತ್ತು 104 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ನವೆಂಬರ್ 1995 ರಲ್ಲಿ ಕಟಕ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದವಿನೋದ್, ಅಕ್ಟೋಬರ್ 2000ರಲ್ಲಿ ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿಗೆ ಏಕದಿನ ಆಡಿದ್ದರು.