ನಿಮ್ದು ನೀವು ನೋಡ್ಕೊಳಿ, ನಿಮಗ್ಯಾಕೆ ನಮ್ಮ ಉಸಾಬರಿ; ವಿರಾಟ್ ಕೊಹ್ಲಿ ಟೀಕಿಸಿದ್ದ ರಿಕಿ ಪಾಂಟಿಂಗ್​ಗೆ ಗೌತಮ್ ಗಂಭೀರ್ ತಿರುಗೇಟು
ಕನ್ನಡ ಸುದ್ದಿ  /  ಕ್ರಿಕೆಟ್  /  ನಿಮ್ದು ನೀವು ನೋಡ್ಕೊಳಿ, ನಿಮಗ್ಯಾಕೆ ನಮ್ಮ ಉಸಾಬರಿ; ವಿರಾಟ್ ಕೊಹ್ಲಿ ಟೀಕಿಸಿದ್ದ ರಿಕಿ ಪಾಂಟಿಂಗ್​ಗೆ ಗೌತಮ್ ಗಂಭೀರ್ ತಿರುಗೇಟು

ನಿಮ್ದು ನೀವು ನೋಡ್ಕೊಳಿ, ನಿಮಗ್ಯಾಕೆ ನಮ್ಮ ಉಸಾಬರಿ; ವಿರಾಟ್ ಕೊಹ್ಲಿ ಟೀಕಿಸಿದ್ದ ರಿಕಿ ಪಾಂಟಿಂಗ್​ಗೆ ಗೌತಮ್ ಗಂಭೀರ್ ತಿರುಗೇಟು

Gautam Gambhir: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ರಿಕಿ ಪಾಂಟಿಂಗ್ ನೀಡಿರುವ ಹೇಳಿಕೆಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ತಿರುಗೇಟು ನೀಡಿದ್ದು, ಭಾರತೀಯ ಕ್ರಿಕೆಟ್​ಗೂ ನಿಮಗೂ ಏನು ಸಂಬಂಧ ಎಂದು ಕಿಡಿಕಾರಿದ್ದಾರೆ.

ವಿರಾಟ್ ಕೊಹ್ಲಿ ಟೀಕಿಸಿದ್ದ ರಿಕಿ ಪಾಂಟಿಂಗ್​ಗೆ ಗೌತಮ್ ಗಂಭೀರ್ ತಿರುಗೇಟು
ವಿರಾಟ್ ಕೊಹ್ಲಿ ಟೀಕಿಸಿದ್ದ ರಿಕಿ ಪಾಂಟಿಂಗ್​ಗೆ ಗೌತಮ್ ಗಂಭೀರ್ ತಿರುಗೇಟು (Agencies)

ನವದೆಹಲಿ: ಟೀಮ್ ಇಂಡಿಯಾ ಸೂಪರ್​ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಟೀಕಿಸಿದ್ದ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ (Ricky Ponting) ಹೇಳಿಕೆಗೆ ಹೆಡ್​ಕೋಚ್ ಗೌತಮ್ ಗಂಭೀರ್​ (Gautam Gambhir) ತಿರುಗೇಟು ನೀಡಿದ್ದಾರೆ. ಕೊಹ್ಲಿ ಸದ್ಯದ ಫಾರ್ಮ್​ ಬಗ್ಗೆ ಪಾಂಟಿಂಗ್ ವ್ಯಕ್ತಪಡಿಸಿದ್ದ ಕಳವಳವನ್ನು ಗಂಭೀರ್​ ತಳ್ಳಿ ಹಾಕಿದ್ದು, ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಬೆಂಬಲಿಸಿದ್ದಾರೆ. ಇಬ್ಬರಿಗೂ ರನ್ ಗಳಿಸುವ ಹಸಿವು ಇನ್ನೂ ತಗ್ಗಿಲ್ಲ ಎಂದಿದ್ದಾರೆ ಗೌತಿ. ಕಳೆದ 5 ವರ್ಷಗಳಲ್ಲಿ 2-3 ಟೆಸ್ಟ್ ಶತಕ ಗಳಿಸಿದರೂ, ಕೊಹ್ಲಿ ಭಾರತ ತಂಡದ ಪ್ಲೇಯಿಂಗ್ 11 ಭಾಗವಾಗಿ ಮುಂದುವರೆದಿದ್ದಾರೆ. ಅದು ಬೇರೆ ಯಾರಾದರೂ ಆಗಿದ್ದರೆ, ಬಹಳ ಹಿಂದೆಯೇ ಕೈಬಿಡಲಾಗುತ್ತಿತ್ತು ಎಂದು ಪಾಂಟಿಂಗ್ ಹೇಳಿದ್ದರು.

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಇಬ್ಬರು ಸಹ ತಲಾ 6 ಇನ್ನಿಂಗ್ಸ್​​ಗಳಲ್ಲಿ ಕ್ರಮವಾಗಿ 93 ಮತ್ತು 91 ರನ್ ಗಳಿಸಿದ್ದಾರೆ. ಇವರ ಕೆಟ್ಟ ಪ್ರದರ್ಶನದಿಂದ ಭಾರತ 0-3 ರಿಂದ ಸೋತಿತು. ಇದೀಗ ಕೊಹ್ಲಿ ಮತ್ತು ರೋಹಿತ್ ಅವರು ತಮ್ಮ ವೈಫಲ್ಯದಿಂದ ಹೊರಬರಬೇಕಿದೆ. ಆಸೀಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ಸರಣಿಯನ್ನು 4-0 ಅಂತರದಿಂದ ಗೆಲ್ಲಬೇಕಿದೆ. ಆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ ಅರ್ಹತೆ ಪಡೆಯಬೇಕು. ನವೆಂಬರ್​ 22ರಿಂದ ಬಾರ್ಡರ್​ ಗವಾಸ್ಕರ್ ಟ್ರೋಫಿ ಆರಂಭವಾಗಲಿದ್ದು, ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಮಗ್ಯಾಕೆ ನಮ್ಮ ಉಸಾಬರಿ ಎಂದ ಗಂಭೀರ್

ರಿಕಿ ಪಾಂಟಿಂಗ್ ಹೇಳಿಕೆ ನೀಡಿದ್ದಕ್ಕೆ ಉತ್ತರಿಸಿದ ಗಂಭೀರ್, ಪಾಂಟಿಂಗ್​ಗೂ ಭಾರತೀಯ ಕ್ರಿಕೆಟ್​​ಗೂ ಏನು ಸಂಬಂಧ? ಅವರು ಆಸ್ಟ್ರೇಲಿಯಾ ಕ್ರಿಕೆಟ್ ಬಗ್ಗೆ ಯೋಚಿಸಲಿ. ನನಗೆ ಯಾವುದೇ ಚಿಂತೆ ಇಲ್ಲ. ಇಬ್ಬರು ಅದ್ಭುತ ಆಟಗಾರರು. ಭಾರತೀಯ ಕ್ರಿಕೆಟ್​ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಭವಿಷ್ಯದಲ್ಲಿಯೂ ಸಾಕಷ್ಟು ಸಾಧಿಸಲಿದ್ದಾರೆ. ತಂಡಕ್ಕಾಗಿ, ಗೆಲುವು ಸಾಧಿಸಲು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ತಂಡಕ್ಕಾಗಿ ಹೆಚ್ಚಿನದನ್ನು ಸಾಧಿಸಲು ಇಚ್ಛಿಸುತ್ತಾರೆ ಎಂದಿದ್ದಾರೆ. ಪ್ರಸ್ತುತ ಭಾರತ ತಂಡವು ಪರಿವರ್ತನೆಯ ಹಾದಿಯಲ್ಲಿದೆ ಎಂಬ ಸಿದ್ಧಾಂತಗಳನ್ನು ಗಂಭೀರ್ ತಳ್ಳಿಹಾಕಿದ್ದಾರೆ. ಕೊಹ್ಲಿ, ರೋಹಿತ್ ಜೊತೆಗೆ ಅಶ್ವಿನ್, ಜಡೇಜಾ ಶೀಘ್ರದಲ್ಲೇ ನಿವೃತ್ತಿಯಾಗುತ್ತಾರೆ ಎಂದು ವರದಿಯಾಗಿದೆ.

ಪರಿವರ್ತನೆಯ ಬಗ್ಗೆ ಚಿಂತಿಸುವುದಿಲ್ಲ ಎಂದ ಗಂಭೀರ್

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ತಂಡವು ಪರಿವರ್ತನೆಯಲ್ಲಿದೆ ಎಂದು ನಾನು ಯೋಚಿಸುತ್ತಿಲ್ಲ. ನನ್ನ ಮನಸ್ಸಿನಲ್ಲಿರುವ ವಿಷಯವೆಂದರೆ ನಾವು ಐದು ಟೆಸ್ಟ್ ಪಂದ್ಯಗಳನ್ನು ಆಡಲು ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದೇವೆ. ಪರಿವರ್ತನೆಯಾಗಲಿ ಅಥವಾ ಪರಿವರ್ತನೆ ಆಗದಿರಲಿ, ಆ ವಿಷಯದ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ಈ ಸಮಯದಲ್ಲಿ ನಾವು ಆಸ್ಟ್ರೇಲಿಯಾದಲ್ಲಿ ಆಡಲಿರುವ 5 ಟೆಸ್ಟ್​​ಗಳ ಬಗ್ಗೆ ಯೋಚಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಭಾರತ ತಂಡದಲ್ಲಿ ಅನುಭವಿಗಳಿದ್ದಾರೆ. ಎಲ್ಲರೂ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಎಲ್ಲರೂ ರನ್ ಗಳಿಸುವ ಹಸಿವು ಹೊಂದಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.

Whats_app_banner