Tilak Varma: ಏಷ್ಯಾಕಪ್ಗೆ ತಿಲಕ್ ವರ್ಮಾ ಆಯ್ಕೆ ಮಾಡಲು ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ
Tilak Varma: ತಿಲಕ್ ವರ್ಮಾ ಆಯ್ಕೆಗೆ ಸಂಬಂಧಿಸಿ ಆಯ್ಕೆ ಸಮಿತಿಯ ನಿರ್ಧಾರ ಸರಿಯಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಇದು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಪ್ರಭಾವ, ಅನುಭವ ಇಲ್ಲದ ಆಟಗಾರನ ಬದಲಿಗೆ ಅನುಭವಿ ಆಟಗಾರನಿಗೆ ಮಣೆ ಹಾಕಬೇಕಿತ್ತು ಎಂಬ ಚರ್ಚೆಗಳು ಜೋರಾಗುತ್ತಿವೆ. ಆದರೆ ಆಯ್ಕೆ ಮಾಡಿದ್ದೇಕೆ ಎಂಬುದನ್ನು ಈ ವರದಿಯಲ್ಲಿ ನೋಡೋಣ.
ಏಷ್ಯಾಕಪ್ ಟೂರ್ನಿಗೆ ಭಾರತದ 17 ಸದಸ್ಯರ ತಂಡ ಪ್ರಕಟಗೊಂಡಿದೆ. ನಿರೀಕ್ಷೆಯಂತೆ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮರಳಿದ್ದಾರೆ. ಆದರೆ, ಸಂಜು ಸ್ಯಾಮ್ಸನ್ರನ್ನು ಸ್ಟ್ಯಾಂಡ್ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ತಿಲಕ್ ವರ್ಮಾಗೆ ಚಾನ್ಸ್ ನೀಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ತಂಡ ಪ್ರಕಟವಾದ ಬೆನ್ನಲ್ಲೇ ತಿಲಕ್ ವರ್ಮಾಗೆ ಅವಕಾಶ ಕೊಟ್ಟಿದ್ದು ಯಾಕೆ ಎಂಬ ಚರ್ಚೆ ಆರಂಭವಾಗಿದೆ.
15 ಮತ್ತು 16ನೇ ಆವೃತ್ತಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಅಬ್ಬರದ ಆಟವು, ರಾಷ್ಟ್ರೀಯ ತಂಡದಲ್ಲೂ ಅವಕಾಶ ಸಿಗುವಂತೆ ಮಾಡಿತು. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸಿಕ್ಕ ಅವಕಾಶವನ್ನ ಎರಡೂ ಕೈಗಳಿಂದ ಬಾಚಿಕೊಂಡ ತಿಲಕ್, ಆಯ್ಕೆದಾರರ ಗಮನ ಸೆಳೆದರು. ಈವರೆಗೂ ಕೇವಲ 7 ಅಂತಾರಾಷ್ಟ್ರೀಯ ಪಂದ್ಯಗಳನ್ನಷ್ಟೇ. ಅದು ಕೂಡ ಟಿ20 ಕ್ರಿಕೆಟ್ ಆಡಿರುವುದಷ್ಟೇ. ಒಂದು ಏಕದಿನದಲ್ಲೂ ಕಣಕ್ಕಿಳಿದಿಲ್ಲ.
ಆದರೂ ಅವಕಾಶ ನೀಡಿದ್ದೇಕೆ? ಆಯ್ಕೆ ಸಮಿತಿಯ ನಿರ್ಧಾರ ಸರಿಯಿಲ್ಲ. ಇದು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಪ್ರಭಾವ, ಅನುಭವ ಇಲ್ಲದ ಆಟಗಾರನ ಬದಲಿಗೆ ಅನುಭವಿ ಆಟಗಾರನಿಗೆ ಮಣೆ ಹಾಕಬೇಕಿತ್ತು ಎಂಬ ಚರ್ಚೆಗಳು ಜೋರಾಗುತ್ತಿವೆ. ಕೆಲವರು ಸಂಜು ಸ್ಯಾಮ್ಸನ್ ಪರ ಬ್ಯಾಟ್ ಬೀಸುತ್ತಿದ್ದಾರೆ. ಆದರೆ ತಿಲಕ್ರನ್ನು ಆಯ್ಕೆ ಮಾಡಿದ್ದೇಕೆ? ಅದಕ್ಕೆ ಕಾರಣಗಳೇನು ಎಂಬುದನ್ನು ಈ ಮುಂದೆ ನೋಡೋಣ.
ಮಧ್ಯಮ ಕ್ರಮಾಂಕಕ್ಕೆ ಬೇಕು ಎಡಗೈ ಆಟಗಾರ
ಯುವರಾಜ್ ಸಿಂಗ್ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಸೂಕ್ತ ಎಡಗೈ ಆಟಗಾರನ ಕೊರತೆ ಎದುರಿಸುತ್ತಿದೆ. ತಂಡಕ್ಕೆ ಪ್ರವೇಶಿಸಿದ ಎಲ್ಲರೂ ಬಲಗೈ ಆಟಗಾರರೇ ಆದ ಕಾರಣ ತಂಡಕ್ಕೆ ಎಡಗೈ ಆಟಗಾರನ ಅವಶ್ಯಕತೆ ಇತ್ತು. ಆರಂಭಿಕರು ಬಹುಬೇಗನೇ ಔಟಾದರೂ, ಮಧ್ಯಮ ಕ್ರಮಾಂಕದಲ್ಲಿ ಎಡಗೈ-ಬಲಗೈ ಕಾಂಬಿನೇಷನ್ ಮೂಲಕ ಬೌಲರ್ಗಳಿಗೆ ಗೊಂದಲ ಸೃಷ್ಟಿಸಲು ಇದು ನೆರವಾಗುತ್ತದೆ.
ಎಡಗೈ-ಬಲಗೈ ಬ್ಯಾಟರ್ಗಳು ಬದಲಾಗುತ್ತಿದ್ದರೆ, ಬೌಲರ್ ತಂತ್ರವೂ ಬದಲಾಗುತ್ತದೆ. ಫೀಲ್ಡರ್ಗಳು ಬದಲಾಗುತ್ತಾರೆ. ಬೌಲರ್ಗಳ ಒಮ್ಮೆ ಎಡಗೈ, ಮತ್ತೊಮ್ಮೆ ಬಲಗೈ ಬ್ಯಾಟರ್ಗೆ ಬೌಲ್ ಮಾಡುವಾಗ ಗೊಂದಲಕ್ಕೆ ಒಳಗಾಗಿ ಯಾರಿಗೆ ಯಾವ ರೀತಿಯ ಎಸೆತ ಹಾಕಬೇಕೆಂದು ರನ್ ಬಿಟ್ಟುಕೊಡುತ್ತಾರೆ. 2011ರಲ್ಲಿ ಯುವರಾಜ್ ಸಿಂಗ್ ಇದೇ ರೀತಿಯ ಆಟದಿಂದ ವಿಶ್ವಕಪ್ ಗೆದ್ದುಕೊಟ್ಟಿದ್ದು ನೆನಪಿಲ್ಲವೇ?
ಒತ್ತಡ ನಿಭಾಯಿಸುವ ಶಕ್ತಿ ತಿಲಕ್ಗೆ ಇದೆ!
ತಿಲಕ್ ವರ್ಮಾ ಅದ್ಭುತ ಪ್ರತಿಭಾವಂತ ಬ್ಯಾಟ್ಸ್ಮನ್ ಎಂಬುದರಲ್ಲಿ ಎರಡು ಮಾತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಒತ್ತಡ ನಿಭಾಯಿಸುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಆರಂಭದಲ್ಲಿ ವಿಕೆಟ್ ಬೇಗನೇ ಕಳೆದುಕ ಕೊಂಡರೆ, ತಂಡವನ್ನು ಒತ್ತಡ ಮಧ್ಯಮ ಕ್ರಮಾಂಕದ ಆಟಗಾರರ ಮೇಲಿರುತ್ತದೆ. ಅವರು ಕನಿಷ್ಠ 20 ಓವರ್ಗಳ ಮೇಲಾದರೂ ಆಡಬೇಕು. ಈ ಶಕ್ತಿ ತಿಲಕ್ ವರ್ಮಾಗೆ ಇದೆ.
ಮ್ಯಾಚ್ ಫಿನಿಷಿಂಗ್ ಆಟಕ್ಕೆ ಒತ್ತು
2011ರ ಏಕದಿನ ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ನೋಡಿದ್ದೀರಾ? ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದರು. ಬಿರುಸಿನ ಆಟವಷ್ಟೇ ಅಲ್ಲ, ತಾಳ್ಮೆ, ಜವಾಬ್ದಾರಿಯುತ ಆಟವೂ ಮುಖ್ಯ. ಇದಕ್ಕೆ ತಿಲಕ್ ವರ್ಮಾ ಹೇಳಿ ಮಾಡಿಸಿದ್ದಾರೆ. ಅದನ್ನು ವಿಶೇಷವಾಗಿ ಹೇಳಬೇಕಿಲ್ಲ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗ ಬೇಗನೇ ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದದ್ದು ಇದೇ ತಿಲಕ್ ವರ್ಮಾ ಎಂಬುದನ್ನು ಮರೆಯುವಂತಿಲ್ಲ. ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ಗಳ ಅಗತ್ಯ ಇದ್ದಾಗ ಮ್ಯಾಚ್ ಫಿನಿಷ್ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದಾರೆ.
ಬೌಲರ್ಗಳ ಮೇಲೆ ಒತ್ತಡ ಹಾಕುವ ಸಾಮರ್ಥ್ಯ
ಬೌಲರ್ಗಳು ಫುಲ್ ಫಾರ್ಮ್ನಲ್ಲಿದ್ದಾಗ ಅವರ ಬೆಂಕಿ ಚೆಂಡುಗಳನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಆದರೆ ತಿಲಕ್ ವರ್ಮಾ ಇಂತಹ ಸಂದರ್ಭವನ್ನು ಸುಲಭವಾಗಿ ಫೇಸ್ ಮಾಡುತ್ತಾರೆ. ಬೌಲರ್ಗಳ ಬೌನ್ಸ್, ಯಾರ್ಕರ್, ಸ್ವಿಂಗ್.. ವಿವಿಧ ವೇರಿಯೇಷನ್ ಬೌಲಿಂಗ್ ತುಂಬಾ ಚೆನ್ನಾಗಿ ಹ್ಯಾಂಡಲ್ ಮಾಡುವ ತಾಕತ್ತು ಹೊಂದಿದ್ದಾರೆ. ಇದೆಲ್ಲವನ್ನು ವೆಸ್ಟ್ ಇಂಡೀಸ್ ಸರಣಿಯಲ್ಲಿ ಕಣ್ಣಾರೆ ಕಂಡಿದ್ದೇವೆ.
ಆಡುವ ಅವಕಾಶ ಸಿಗುವುದು ಅನುಮಾನ
ಸದ್ಯ ಮಧ್ಯಮ ಕ್ರಮಾಂಕದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ಮೊದಲ ಮೂರು ಸ್ಥಾನಗಳಿಗೆ ರೋಹಿತ್, ಗಿಲ್, ಕೊಹ್ಲಿ ಫಿಕ್ಸ್ ಆಗಿದ್ದಾರೆ. ಆದರೆ ನಾಲ್ಕನೇ ಸ್ಥಾನಕ್ಕೆ ಶ್ರೇಯಸ್ ಅಯ್ಯರ್, 5ನೇ ಸ್ಥಾನಕ್ಕೆ ಕೆಎಲ್ ರಾಹುಲ್ ಆಡುವುದು ಖಚಿತ. ಆದರೆ, ಇನ್ನು 6, 7ರಲ್ಲಿ ಹಾರ್ದಿಕ್, ಜಡೇಜಾ ಇರಲಿದ್ದಾರೆ. ಹಾಗಾಗಿ ತಿಲಕ್ ವರ್ಮಾ 4-5ನೇ ಸ್ಥಾನಕ್ಕೆ ಪೈಪೋಟಿ ನಡೆಸಬೇಕಿದೆ. ಆದರೆ, ಇಲ್ಲಿ ಸೂರ್ಯಕುಮಾರ್, ಇಶಾನ್ ಕಿಶನ್ ಕೂಡ ಇದೇ ಸ್ಥಾನಕ್ಕೆ ಸ್ಪರ್ಧೆ ನಡೆಸಬೇಕಿದೆ. ಅಯ್ಯರ್-ರಾಹುಲ್ರಲ್ಲಿ ಯಾರಿಗೆ ಏನೇ ಆದರೂ, ಮೊದಲ ಆಯ್ಕೆಯೂ ಸೂರ್ಯ-ಇಶಾನ್ ಅವರೇ ಆಗಿರುತ್ತಾರೆ. ಹಾಗಾಗಿ ತಿಲಕ್ ವರ್ಮಾಗೆ ಆಡುವ ಅವಕಾಶ ಸಿಗುವುದು ಅನುಮಾನ.
ಲೀಸ್ಟ್ ಎನಲ್ಲಿ ತಿಲಕ್ ಭರ್ಜರಿ ಪ್ರದರ್ಶನ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದೂ ಏಕದಿನ ಕ್ರಿಕೆಟ್ ಆಡದ ತಿಲಕ್ ವರ್ಮಾ, ದೇಶೀಯ ಕ್ರಿಕೆಟ್ ಲೀಸ್ಟ್ ಎನಲ್ಲಿ ಅದ್ಭುತ, ಅಮೋಘ ಪ್ರದರ್ಶನ ನೀಡಿದ್ದಾರೆ. ಲೀಸ್ಟ್ ಎ ಕ್ರಿಕೆಟ್ನಲ್ಲಿ ಆಡಿರುವ 25 ಪಂದ್ಯಗಳಲ್ಲಿ ಬರೋಬ್ಬರಿ 56.18ರ ಸರಾಸರಿಯಲ್ಲಿ 5 ಶತಕ, 5 ಅರ್ಧಶತಕಗಳ ನೆರವಿನಿಂದ 1236 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ರೇಟ್ 101.64. ಏಕದಿನ ಕ್ರಿಕೆಟ್ನಲ್ಲಿ ಇಷ್ಟು ಸ್ಟ್ರೈಕ್ರೇಟ್ ಇರುವುದೇ ಅಪರೂಪ.
ಈ ಎಲ್ಲಾ ಅಂಶಗಳು, ಅವರ ಪ್ರದರ್ಶನ, ಪ್ರತಿಭೆಯನ್ನು ಗುರುತಿಸಿಯೇ ಏಷ್ಯಾಕಪ್ ತಂಡಕ್ಕೆ ಮಣೆ ಹಾಕಲಾಗಿದೆ. ಬಹುಶಃ ಇದೇ ತಂಡವನ್ನು ಏಕದಿನ ವಿಶ್ವಕಪ್ ಟೂರ್ನಿಗೂ ಪ್ರಕಟಿಸುವ ಸಾಧ್ಯತೆ ಇದೆ. ಹಾಗಾಗಿ ವಿಶ್ವಕಪ್ಗೂ ಆಯ್ಕೆಯಾದರೂ ಅಚ್ಚರಿ ಇಲ್ಲ. ಮತ್ತೊಂದೆಡೆ ಮುಂಬೈ ರಾಜಕೀಯ ಎಂಬ ಕೂಗು ಎದ್ದಿದೆ. ತಿಲಕ್ ವರ್ಮಾ ಹೈದರಾಬಾದ್ ಹುಡುಗನಾದರೂ ಮುಂಬೈ ತಂಡದಲ್ಲಿರುವ ಆಟಗಾರ ಎಂಬ ಕಾರಣಕ್ಕೆ ನಾಯಕ ರೋಹಿತ್ ಅವಕಾಶ ನೀಡಿದ್ದಾರೆ ಎಂದು ಕೆಲವರು ವಾದಿಸಿದ್ದಾರೆ. ಅದೇನೆ ಇರಲಿ, ತಿಲಕ್ ವರ್ಮಾ ಅದ್ಭುತ ಪ್ರದರ್ಶನ ತೋರಲಿ, ತಂಡದ ಗೆಲುವಿಗೆ ಶ್ರಮಿಸಲಿ ಎಂದು ಹಾರೈಸೋಣ.