ಬೆಂಗಳೂರು ಫ್ಯಾನ್ಸ್​ಗೆ ಸಿಹಿಸುದ್ದಿ; ಡಬ್ಲ್ಯುಪಿಎಲ್​ 2ನೇ ಆವೃತ್ತಿಗೆ ಎರಡು ರಾಜಧಾನಿಗಳು ಆತಿಥ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಬೆಂಗಳೂರು ಫ್ಯಾನ್ಸ್​ಗೆ ಸಿಹಿಸುದ್ದಿ; ಡಬ್ಲ್ಯುಪಿಎಲ್​ 2ನೇ ಆವೃತ್ತಿಗೆ ಎರಡು ರಾಜಧಾನಿಗಳು ಆತಿಥ್ಯ

ಬೆಂಗಳೂರು ಫ್ಯಾನ್ಸ್​ಗೆ ಸಿಹಿಸುದ್ದಿ; ಡಬ್ಲ್ಯುಪಿಎಲ್​ 2ನೇ ಆವೃತ್ತಿಗೆ ಎರಡು ರಾಜಧಾನಿಗಳು ಆತಿಥ್ಯ

WPL 2024: ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್​​ ಲೀಗ್​ ಅನ್ನು ಬೆಂಗಳೂರು ಮತ್ತು ದೆಹಲಿಯಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

 ಮಹಿಳಾ ಪ್ರೀಮಿಯರ್​​ ಲೀಗ್
ಮಹಿಳಾ ಪ್ರೀಮಿಯರ್​​ ಲೀಗ್

ಮಹಿಳಾ ಪ್ರೀಮಿಯರ್ ಲೀಗ್‌ನ (WPL 2024) ಎರಡನೇ ಆವೃತ್ತಿಗೆ ದೆಹಲಿ ಮತ್ತು ಬೆಂಗಳೂರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಬಹುನಿರೀಕ್ಷಿತ ಟೂರ್ನಿಯು ಫೆಬ್ರವರಿ 22 ಮತ್ತು ಮಾರ್ಚ್ 17ರ ನಡುವೆ ನಡೆಯುವ ಸಾಧ್ಯತೆಯಿದೆ. ಇಎಸ್​ಪಿಎನ್​ ಕ್ರಿಕ್​ಇನ್ಫೋ ವರದಿ ಪ್ರಕಾರ, ಟೂರ್ನಿ ಮೊದಲ ಭಾಗವನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ, 2ನೇ ಹಂತವನ್ನು ಭಾರತದ ರಾಜಧಾನಿ ದೆಹಲಿಯಲ್ಲಿ (ನಾಕೌಟ್, ಫೈನಲ್ ಸೇರಿ) ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಬಿಸಿಸಿಐ ಇನ್ನೂ ಅಧಿಕೃತಗೊಳಿಸಿಲ್ಲ.

ಎರಡು ಸ್ಥಳಗಳಲ್ಲಿ ಒಟ್ಟು 22 ಪಂದ್ಯಗಳನ್ನು ಆಡಿಸಲಾಗುತ್ತದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಮತ್ತು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಡಬ್ಲ್ಯುಪಿಎಲ್ 2024ಗೆ ಆತಿಥ್ಯ ವಹಿಸಲಿದೆ. ಇದಕ್ಕೂ ಮೊದಲು ಮುಂಬೈ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂ 2023ರಲ್ಲಿ ನಡೆದ ಮೊದಲ ಆವೃತ್ತಿಯ ಡಬ್ಲ್ಯುಪಿಎಲ್​ಗೆ ಆತಿಥ್ಯ ವಹಿಸಿತ್ತು. ಮುಂಬೈ ಇಂಡಿಯನ್ಸ್ ತಂಡ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಕೊನೆ ಸ್ಥಾನದಲ್ಲಿದ್ದ ಆರ್​ಸಿಬಿ

ಉದ್ಘಾಟನಾ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು. ಸತತ 5 ಪಂದ್ಯಗಳಲ್ಲಿ ಸೋತಿದ್ದ ಆರ್​​ಸಿಬಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮುಂಬೈ ಚಾಂಪಿಯನ್ ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ರನ್ನರ್​ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮತ್ತೊಂದೆಡೆ ಯುಪಿ ವಾರಿಯರ್ಸ್ ಮೂರನೇ ಸ್ಥಾನಕ್ಕೆ, ಗುಜರಾತ್ ಜೈಂಟ್ಸ್​ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಮಾರ್ಚ್​ 22ರಿಂದ ಐಪಿಎಲ್

ಈ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಅದರ ಹೊರತಾಗಿ 17ನೇ ಆವೃತ್ತಿಯ ಐಪಿಎಲ್​ ಅನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ವರದಿಗಳ ಪ್ರಕಾರ 2024ರ ಐಪಿಎಲ್​ ಮಾರ್ಚ್ 22 ರಿಂದ ಟೂರ್ನಿಗೆ ಚಾಲನೆ ಸಿಗಲಿದೆ. ಐಪಿಎಲ್ ಬೆನ್ನಲ್ಲೇ ಟಿ20 ವಿಶ್ವಕಪ್ ಶುರುವಾಗಲಿದ್ದು, ಅದಕ್ಕೆ ತಕ್ಕಂತೆ ವೇಳಾಪಟ್ಟಿ ಸಿದ್ಧಪಡಿಸಿಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ. ಅಲ್ಲದೆ, ಇದರೊಂದಿಗೆ ಭಾರತದ ಹೊರಗೆ ನಡೆಯುವುದಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದೆ.

ಡಿಸೆಂಬರ್​​ನಲ್ಲಿ ನಡೆದಿತ್ತು ಹರಾಜು

ಡಿಸೆಂಬರ್ 9ರಂದು ಡಬ್ಲ್ಯುಪಿಎಲ್ ಮತ್ತು ಡಿಸೆಂಬರ್ 19ರಂದು ಟೂರ್ನಿಗಳ ಮಿನಿ ಹರಾಜು ನಡೆದಿತ್ತು. ಮಹಿಳಾ ಹರಾಜಿನಲ್ಲಿ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್​ 2 ಕೋಟಿಗೆ ಡೆಲ್ಲಿ, ಭಾರತದ ಅನ್​ಕ್ಯಾಪ್ಡ್​ ಪ್ಲೇಯರ್ ಕಾಶ್ವೀ ಗೌತಮ್ 2 ಕೋಟಿಗೆ ಗುಜರಾತ್ ಜೈಂಟ್ಸ್​ ಪಾಲಾಗಿದ್ದಾರೆ. ಇಬ್ಬರು ಸಹ ಬಾರಿಯ ದುಬಾರಿ ಆಟಗಾರ್ತಿಯರು. ಇನ್ನು ಐಪಿಎಲ್ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ 24.75 ಕೋಟಿಗೆ ಕೆಕೆಆರ್​​ ಪಾಲಾದರು. 20.50 ಕೋಟಿಗೆ ಎಸ್​ಆರ್​ಎಚ್​​​ ತಂಡಕ್ಕೆ ಸೇಲ್​ ಆದರು. ಐಪಿಎಲ್ ಇತಿಹಾಸದಲ್ಲಿ ದುಬಾರಿ ಆಟಗಾರರು ಎಂಬ ದಾಖಲೆಗೆ ಪಾತ್ರರಾದರು.

ಇತ್ತೀಚೆಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಮುಂಬರುವ ಡಬ್ಲ್ಯುಪಿಎಲ್ ಆವೃತ್ತಿಯನ್ನು ಒಂದೇ ರಾಜ್ಯದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದರು. ಇದಕ್ಕೂ ಮೊದಲು ಮುಂಬೈ ಜೊತೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲೂ ಡಬ್ಲ್ಯುಪಿಎಲ್ 2ನೇ ಆವೃತ್ತಿಯಲ್ಲಿ ಕೆಲವು ಪಂದ್ಯಗಳನ್ನು ಆಯೋಜಿಸಲಾಗುತ್ತದೆ ಎಂಬ ವದಂತಿಗಳು ಎದ್ದಿದ್ದವು.

Whats_app_banner