ಕನ್ನಡ ಸುದ್ದಿ  /  Cricket  /  Wpl 2024 Gujarat Giants Beth Mooney Win Toss And Choose Bat Against Delhi Capitals Womens Premier League 2024 Jra

ಡಬ್ಲ್ಯೂಪಿಎಲ್‌ ಲೀಗ್‌ ಹಂತದ ಕೊನೆಯ ಪಂದ್ಯ; ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಟಾಸ್‌ ಗೆದ್ದ ಗುಜರಾತ್‌ ಬ್ಯಾಟಿಂಗ್‌ ಆಯ್ಕೆ

ಡಬ್ಲ್ಯೂಪಿಎಲ್‌ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್ ತಂಡವು ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿದಿದೆ. ಅತ್ತ ಮೆಗ್‌ ಲ್ಯಾನಿಂಗ್‌ ನೇತೃತ್ವದ ಡೆಲ್ಲಿ‌ ಕ್ಯಾಪಿಟಲ್ಸ್ ತಂಡವು ಒಂದು ಬದಲಾವಣೆ ಮಾಡಿಕೊಂಡಿದೆ. ಇಂದಿನ ಪಂದ್ಯದಲ್ಲಿ ಗೆದ್ದರೆ ಡೆಲ್ಲಿ ತಂಡ ಅಗ್ರಸ್ಥಾನವನ್ನು ಉಳಿಸಿಕೊಳ್ಳಲಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಟಾಸ್‌ ಗೆದ್ದ ಗುಜರಾತ್‌ ಬ್ಯಾಟಿಂಗ್‌ ಆಯ್ಕೆ
ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಟಾಸ್‌ ಗೆದ್ದ ಗುಜರಾತ್‌ ಬ್ಯಾಟಿಂಗ್‌ ಆಯ್ಕೆ (WPL twitter)

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ (Womens Premier League 2024) ಎರಡನೇ ಆವೃತ್ತಿಯ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಬೆತ್‌ ಮೂನಿ ಪಡೆಗೆ ಈ ಪಂದ್ಯ ಔಪಚಾರಿಕವಷ್ಟೇ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ತಂಡವು, ಗೆದ್ದರೂ ಸೋತರೂ ಏನೂ ಬದಲಾವಣೆ ಸಾಧ್ಯವಿಲ್ಲ. ಅತ್ತ ಡೆಲ್ಲಿ ತಂಡವು ಈ ಪಂದ್ಯ ಗೆದ್ದರೆ ಅಗ್ರಸ್ಥಾನಿಯಾಗಿ ಲೀಗ್‌ ಹಂತ ಮುಗಿಸಿ ನೇರವಾಗಿ ಫೈನಲ್‌ ಪಂದ್ಯಕ್ಕೆ ಲಗ್ಗೆ ಇಡಲಿದೆ. ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ನಾಯಕಿ ಬೆತ್‌ ಮೂನಿ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಇಂದಿನ ಪಂದ್ಯದಲ್ಲಿ ಗುಜರಾತ್‌ ತಂಡವು ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯಲಿದೆ. ಅತ್ತ ಡೆಲ್ಲಿ ತಂಡದಲ್ಲಿ ಒಂದು ಬದಲಾವಣೆಯಾಗಿದೆ.

ಡಬ್ಲ್ಯೂಪಿಎಲ್‌ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ತಂಡವು ನೇರವಾಗಿ ಫೈನಲ್‌ ಪಂದ್ಯಕ್ಕೆ ಲಗ್ಗೆ ಇಡುತ್ತದೆ. ಎರಡು ಹಾಗೂ ಮೂರನೇ ಸ್ಥಾನ ಪಡೆದ ತಂಡಗಳು ಎಲಿಮನೇಟರ್‌ ಪಂದ್ಯದಲ್ಲಿ ಆಡಲಿವೆ. ಅಲ್ಲಿ ಗೆದ್ದರೆ ಫೈನಲ್‌ ಪ್ರವೇಶಿಸಲಿದೆ. ಸೋತ ತಂಡವು ಹೊರಬೀಳುತ್ತದೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಆಡಿದ 7 ಪಂದ್ಯಗಳಲ್ಲಿ 5 ಗೆಲುವು ಹಾಗೂ 2 ಸೋಲು ಕಂಡು 10 ಅಂಕ ಪಡೆದಿದೆ. ಭರ್ಜರಿ +0.918 ನೆಟ್‌ ರನ್‌ ರೇಟ್‌ನೊಂದಿಗೆ ಮುಂಬೈಗಿಂತ ಭಾರಿ ಅಂತರದಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯ ಸೋತರೂ ಡೆಲ್ಲಿ ತಂಡಕ್ಕೆ ದೊಡ್ಡ ನಷ್ಟವಿಲ್ಲ. ಆದರೆ, ಭಾರಿ ಅಂತರದಿಂದ ಸೋಲದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.

ಇದನ್ನೂ ಓದಿ | ರಚಿನ್ ರವೀಂದ್ರಗೆ ಮತ್ತೊಂದು ಪ್ರಶಸ್ತಿ; ಸರ್ ರಿಚರ್ಡ್ ಹ್ಯಾಡ್ಲಿ ಪದಕ ಪಡೆದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆ

ಮುಂಬೈ ತಂಡವು ಅಗ್ರಸ್ಥಾನಿಯಾಗಿ ಫೈನಲ್‌ ಪ್ರವೇಶಿಸಬೇಕಾದರೆ, ಇಂದಿನ ಪಂದ್ಯದಲ್ಲಿ ಡೆಲ್ಲಿ ತಂಡವು ಗುಜರಾತ್‌ ವಿರುದ್ಧ ಹೀನಾಯವಾಗಿ ಸೋಲಬೇಕಾಗುತ್ತದೆ. ರನ್‌ಗಳ ಅಂತರದಲ್ಲಿ ನೋಡುವುದಾದರೆ, 120ಕ್ಕೂ ಹೆಚ್ಚು ರನ್ ಅಂತರದಿಂದ ಮೆಗ್‌ ಲ್ಯಾನಿಂಗ್‌ ಪಡೆ ಸೋತರೆ ಮುಂಬೈ ತಂಡವು ಅಗ್ರಸ್ಥಾನ ಪಡೆಯಲಿದೆ. ಉದಾಹರಣೆಗೆ, ಮೊದಲು ಬ್ಯಾಟಿಂಗ್‌ ನಡೆಸುತ್ತಿರುವ ಗುಜರಾತ್‌ ತಂಡವು, 200 ರನ್‌ ಕಲೆ ಹಾಕಿತು ಎಂದಿಟ್ಟುಕೊಳ್ಳೋಣ. ಆಗ ಡೆಲ್ಲಿ ತಂಡವು 80 ರನ್‌ ಒಳಗೆ ಆಲೌಟ್‌ ಆಗಬೇಕಾಗುತ್ತದೆ. ಆಗ ಮಾತ್ರ ನೆಟ್‌ ರನ್‌ ರೇಟ್‌ ಹೆಚ್ಚಳವಾಗಿ ಮುಂಬೈ ಅಗ್ರಸ್ಥಾನ ಪಡೆಯಲಿದೆ.

ಗುಜರಾತ್ ಜೈಂಟ್ಸ್ ಆಡುವ ಬಳಗ

ಲಾರಾ ವೊಲ್ವಾರ್ಡ್ಟ್, ಬೆತ್ ಮೂನಿ (ನಾಯಕಿ ಮತ್ತು ವಿಕೆಟ್‌ ಕೀಪರ್), ದಯಾಲನ್ ಹೇಮಲತಾ, ಫೋಬೆ ಲಿಚ್‌ಫೀಲ್ಡ್, ಆಶ್ಲೀ ಗಾರ್ಡ್ನರ್, ಭಾರತಿ ಫುಲ್ಮಾಲಿ, ಕ್ಯಾಥರಿನ್ ಬ್ರೈಸ್, ತನುಜಾ ಕನ್ವರ್, ಶಬ್ನಮ್ ಎಂಡಿ ಶಕಿಲ್, ಮೇಘನಾ ಸಿಂಗ್, ಮನ್ನತ್ ಕಶ್ಯಪ್.

ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ

ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಆಲಿಸ್ ಕ್ಯಾಪ್ಸೆ, ಮರಿಜಾನ್ನೆ ಕಪ್, ಜೆಸ್ ಜೊನಾಸ್ಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್), ಶಿಖಾ ಪಾಂಡೆ, ಮಿನ್ನು ಮಣಿ.‌

ಇದನ್ನೂ ಓದಿ | ನೀವು ಗಾಯಗೊಂಡು ಭಾರತದ ಪರ ಆಡಲ್ಲ, ನೇರವಾಗಿ ಐಪಿಎಲ್‌ ಆಡ್ತೀರಿ; ಹಾರ್ದಿಕ್ ಪಾಂಡ್ಯ ನಡೆಗೆ ಮಾಜಿ ಕ್ರಿಕೆಟಿಗ ಆಕ್ರೋಶ

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point