ದ್ವಿಶತಕದ ಜೊತೆಗೆ ಸಿಕ್ಸರ್ನಲ್ಲೂ ಜೈಸ್ವಾಲ್ ವಿಶ್ವದಾಖಲೆ; ರೋಹಿತ್ ಹಿಂದಿಕ್ಕಿ ಕೊಹ್ಲಿ, ಅಕ್ರಂ ಸಾಲಿಗೆ ಸೇರಿ ಹಲವು ದಾಖಲೆ ಬರೆದ ಯಶಸ್ವಿ
Yashasvi Jaiswal : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಟೀಮ್ ಇಂಡಿಯಾದ ಯುವ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದಾರೆ. ಇದು ಈ ಟೆಸ್ಟ್ ಸರಣಿಯಲ್ಲಿ ದಾಖಲಾದ ಅವರ ಸತತ ಎರಡನೇ ದ್ವಿಶತಕ. ಇದರೊಂದಿಗೆ ಹಲವು ದಿಗ್ಗಜರ ದಾಖಲೆಗಳನ್ನು ನಿರ್ನಾಮಗೊಳಿಸಿದ್ದಾರೆ.
ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ 3ನೇ ದಿನದಂದು ಶತಕ ಸಿಡಿಸಿ ರಿಟೈರ್ಡ್ ಹರ್ಟ್ ಆಗಿದ್ದ ಮುಂಬೈಕರ್, 4ನೇ ದಿನದಂದು ಶುಭ್ಮನ್ ಗಿಲ್ ಔಟಾದ ನಂತರ ಕಣಕ್ಕಿಳಿದು 231 ಎಸೆತಗಳಲ್ಲಿ 200ರ ಗಡಿ ದಾಟಿದರು. ಅವರ ಖಾತೆಗೆ ಸೇರಿದ 2 ದ್ವಿಶತಕಗಳು ಇದೇ ಸರಣಿಯಲ್ಲಿ ಬಂದ್ದದ್ದು ವಿಶೇಷ.
10 ಸಿಕ್ಸರ್, 14 ಬೌಂಡರಿ
22 ವರ್ಷ ವಯಸ್ಸಿನ ಜೈಸ್ವಾಲ್ 96.1 ಓವರ್ ಜೋ ರೂಟ್ ಎಸೆತದ ಬೌಲಿಂಗ್ನಲ್ಲಿ ಸಿಂಗಲ್ ಗಳಿಸುವ ಮೂಲಕ ಟೆಸ್ಟ್‌ನಲ್ಲಿ ತಮ್ಮ 2ನೇ ದ್ವಿಶತಕ ಪೂರ್ಣಗೊಳಿಸಿದರು. ಅವರು 231 ಎಸೆತಗಳಲ್ಲಿ 14 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 214 ರನ್ ಗಳಿಸಿದರು.
ಇಂಗ್ಲೆಂಡ್ ಬೌಲರ್ಗಳ ವಿರುದ್ಧ ದಂಡಂ ದಶಗುಣಂ ಮಂತ್ರವನ್ನು ಪಠಿಸಿದ ಯಶಸ್ವಿ ಜೈಸ್ವಾಲ್, ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೈದರು. ರೋಹಿತ್ ಶರ್ಮಾ ದಾಖಲೆ ಮುರಿದ ಯುವ ಆಟಗಾರ ವಿರಾಟ್ ಕೊಹ್ಲಿ, ವಿನೋದ್ ಕಾಂಬ್ಲಿ ಎಲೈಟ್ ಪಟ್ಟಿಗೂ ಸೇರಿದ್ದಾರೆ. ಅಲ್ಲದೆ, ವಾಸೀಂ ಅಕ್ರಮ್ ಅವರ ವಿಶ್ವದಾಲೆ ಕೂಡ ಸರಿಗಟ್ಟಿದ್ದಾರೆ.
147 ವರ್ಷಗಳ ಇತಿಹಾಸದಲ್ಲಿ ಜೈಸ್ವಾಲ್ ದಾಖಲೆ
3ನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ 12 ಸಿಕ್ಸರ್‌ಗಳನ್ನು ಬಾರಿಸಿದರು. ಇದರೊಂದಿಗೆ ಅವರು ಈ ಸರಣಿಯಲ್ಲಿ 20 ಸಿಕ್ಸರ್‌ಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ.
ಅಕ್ರಮ್ ದಾಖಲೆ ಸರಿಗಟ್ಟಿದ ಜೈಸ್ವಾಲ್
85ನೇ ಓವರ್ ಎಸೆದ ಇಂಗ್ಲೆಂಡ್‌ನ ಅನುಭವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಬೌಲಿಂಗ್ನಲ್ಲಿ ಸತತ 3 ಸಿಕ್ಸರ್‌ಗಳನ್ನು ಬಾರಿಸಿದರು. 2ನೇ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ಗಳೊಂದಿಗೆ ಜೈಸ್ವಾಲ್ ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ವಾಸಿಂ ಅಕ್ರಂ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ಭಾರತದ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ರೋಹಿತ್ ಈ ಹಿಂದೆ 19 ಸಿಕ್ಸರ್ ಸಿಡಿಸಿದ್ದರು.
ವಿಶ್ವದ ಮೊದಲ ಆಟಗಾರ
ತಮ್ಮ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ನಂತರ ಜೈಸ್ವಾಲ್ ಇದುವರೆಗೆ ಏಳು ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕಗಳು, ಎರಡು ದ್ವಿಶತಕಗಳು, 150 ಪ್ಲಸ್ ಒಮ್ಮೆ ಮತ್ತು ಎರಡು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಮೂರು ಬಾರಿಯೂ 150+ ಸ್ಕೋರ್ ಸಿಡಿಸಿದ್ದಾರೆ. ಮೊದಲ ಮೂರು ಶತಕಗಳನ್ನು 150+ ಸ್ಕೋರ್ ಆಗಿ ಪರಿವರ್ತಿಸಿದ ವಿಶ್ವದ ಮೊದಲ ಆಟಗಾರ.
ಟೆಸ್ಟ್‌ನ ಎರಡನೇ ಇನ್ನಿಂಗ್ಸ್ ದ್ವಿಶತಕ ಬಾರಿಸಿದ ಭಾರತೀಯರು
203* ರನ್ - ಮನ್ಸೂರ್ ಅಲಿ ಖಾನ್ ಪಟೌಡಿ vs ಇಂಗ್ಲೆಂಡ್ (ಡೆಲ್ಲಿ, 1964)
200* ರನ್ - ದಿಲೀಪ್ ಸರ್ದೇಸಾಯಿ vs ವೆಸ್ಟ್ ಇಂಡೀಸ್ (ಮುಂಬೈ, 1965)
220 ರನ್ - ಸುನಿಲ್ ಗವಾಸ್ಕರ್ vs ವೆಸ್ಟ್ ಇಂಡೀಸ್ (ಪೋರ್ಟ್ ಆಫ್ ಸ್ಪೇನ್, 1971)
221 ರನ್ - ಸುನಿಲ್ ಗವಾಸ್ಕರ್ vs ಇಂಗ್ಲೆಂಡ್ (ದಿ ಓವಲ್, 1979)
281 ರನ್ - ವಿವಿಎಸ್ ಲಕ್ಷ್ಮಣ್ vs ಆಸ್ಟ್ರೇಲಿಯಾ (ಕೋಲ್ಕತ್ತಾ, 2001)
212 ರನ್ - ವಾಸೀಂ ಜಾಫರ್ vs ವೆಸ್ಟ್ ಇಂಡೀಸ್ (ಆ್ಯಂಟಿಗುವಾ, 2006)
214* ರನ್ - ಯಶಸ್ವಿ ಜೈಸ್ವಾಲ್ vs ಇಂಗ್ಲೆಂಡ್ (ರಾಜ್ಕೋಟ್, 2004) - ಹೊಸ ಸೇರ್ಪಡೆ
ಸತತ ಎರಡು ದ್ವಿಶತಕ ಸಿಡಿಸಿದ ಭಾರತೀಯರು
ವಿನೋದ್ ಕಾಂಬ್ಲಿ: 224 vs ಇಂಗ್ಲೆಂಡ್, ಮುಂಬೈ | 227 vs ಜಿಂಬಾಬ್ವೆ, ಡೆಲ್ಲಿ (1992/93)
ವಿರಾಟ್ ಕೊಹ್ಲಿ: 213 vs ಶ್ರೀಲಂಕಾ, ನಾಗ್ಪುರ | 243 vs ಶ್ರೀಲಂಕಾ, ಡೆಲ್ಲಿ (2017/18)
ಯಶಸ್ವಿ ಜೈಸ್ವಾಲ್: 209 vs ಇಂಗ್ಲೆಂಡ್, ವೈಜಾಗ್ | 214* vs ಇಂಗ್ಲೆಂಡ್, ರಾಜ್ಕೋಟ್ (2023/24) - ಹೊಸ ಸೇರ್ಪಡೆ
ಟೆಸ್ಟ್ ಇನ್ನಿಂಗ್ಸ್ವೊಂದರಲ್ಲಿ ಹೆಚ್ಚು ಸಿಕ್ಸರ್
12 ಸಿಕ್ಸರ್ - ಯಶಸ್ವಿ ಜೈಸ್ವಾಲ್ vs ಇಂಗ್ಲೆಂಡ್, ರಾಜ್ಕೋಟ್ 2024 * (ಹೊಸ ಸೇರ್ಪಡೆ)
12 ಸಿಕ್ಸರ್ - ವಾಸೀಂ ಅಕ್ರಮ್ vs ಜಿಂಬಾಬ್ವೆ, ಶೇಕಿಪುರ, 1996
11 ಸಿಕ್ಸರ್ - ಮ್ಯಾಥ್ಯೂ ಹೇಡನ್ vs ಜಿಂಬಾಬ್ವೆ, ಪರ್ತ್ 2003
11 ಸಿಕ್ಸರ್ - ನಥನ್ ಆಸ್ಟಲ್ vs ಇಂಗ್ಲೆಂಡ್, ಕ್ರಿರ್ಸ್ಟ್ಚರ್ಚ್ 2002
11 ಸಿಕ್ಸರ್ - ಬ್ರೆಂಡನ್ ಮೆಕಲಮ್ vs ಪಾಕಿಸ್ತಾನ, ಶಾರ್ಜಾ 2014
11 ಸಿಕ್ಸರ್ - ಬ್ರೆಂಡನ್ ಮೆಕಲಮ್ vs ಶ್ರೀಲಂಕಾ, ಕ್ರಿರ್ಸ್ಟ್ಚರ್ಚ್ 2014
11 ಸಿಕ್ಸರ್ - ಬೆನ್ಸ್ಟೋಕ್ಸ್ vs ಸೌತ್ ಆಫ್ರಿಕಾ, ಕೇಪ್ಟೌನ್ 2016
11 ಸಿಕ್ಸರ್ - ಕುಶಾಲ್ ಮೆಂಡೀಸ್ vs ಐರ್ಲೆಂಡ್, ಗಲ್ಲೆ 2023