ಕನ್ನಡ ಸುದ್ದಿ  /  ಕ್ರಿಕೆಟ್  /  ಸೂರ್ಯಕುಮಾರ್, ಪಂತ್ ಮೇಲೂ ಶಿವಂ ದುಬೆ ಒತ್ತಡ ಹೇರಿದ್ದಾರೆ; ಟಿ20 ವಿಶ್ವಕಪ್‌ಗೆ ಸಿಎಸ್‌ಕೆ ಆಟಗಾರನ ಆಯ್ಕೆಗೆ ದಿಗ್ಗಜರ ಬೆಂಬಲ

ಸೂರ್ಯಕುಮಾರ್, ಪಂತ್ ಮೇಲೂ ಶಿವಂ ದುಬೆ ಒತ್ತಡ ಹೇರಿದ್ದಾರೆ; ಟಿ20 ವಿಶ್ವಕಪ್‌ಗೆ ಸಿಎಸ್‌ಕೆ ಆಟಗಾರನ ಆಯ್ಕೆಗೆ ದಿಗ್ಗಜರ ಬೆಂಬಲ

Shivam Dube: ಮುಂಬರುವ ಟಿ20 ವಿಶ್ವಕಪ್‌ಗೆ 15 ಸದಸ್ಯರ ಭಾರತ ತಂಡವನ್ನು ಶೀಘ್ರದಲ್ಲೇ ಬಿಸಿಸಿಐ ಪ್ರಕಟಿಸಲಿದೆ. ಸದ್ಯ ಐಪಿಎಲ್‌ ಪಂದ್ಯ ನಡೆಯುತ್ತಿದ್ದು, ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಕೆಲವು ಆಟಗಾರರ ಆಯ್ಕೆಗಾಗಿ ಮಾಜಿ ಕ್ರಿಕೆಟಿಗರು ಹಾಗೂ ದಿಗ್ಗಜರು ಸಲಹೆ ನೀಡಿದ್ದಾರೆ.

ಟಿ20 ವಿಶ್ವಕಪ್‌ಗೆ ಸಿಎಸ್‌ಕೆ ಆಟಗಾರನ ಆಯ್ಕೆಗೆ ದಿಗ್ಗಜರ ಬೆಂಬಲ
ಟಿ20 ವಿಶ್ವಕಪ್‌ಗೆ ಸಿಎಸ್‌ಕೆ ಆಟಗಾರನ ಆಯ್ಕೆಗೆ ದಿಗ್ಗಜರ ಬೆಂಬಲ

ಪ್ರಸಕ್ತ ವರ್ಷದ ಕ್ರಿಕೆಟ್ ಕ್ಯಾಲೆಂಡರ್‌ನ ಪ್ರಮುಖ ಟೂರ್ನಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಚುಟುಕು ಸಮರದಲ್ಲಿ ಆಡಲು ಆಟಗಾರರು ಕಾಯುತ್ತಿದ್ದಾರೆ. ಅದರಲ್ಲೂ ಭಾರತ ತಂಡಕ್ಕೆ ಆಯ್ಕೆಯಾಗಲು ಯುವ ಆಟಗಾರರ ಬಳಗದ ನಡುವೆ ಪೈಪೋಟಿ ಶುರುವಾಗಿದೆ. ವಿಶ್ವಸಮರಕ್ಕೆ ಭಾರತ ತಂಡದ ಆಯ್ಕೆಗೆ ಐಪಿಎಲ್‌ ಟೂರ್ನಿಯೇ ಪ್ರಮುಖ ಮಾನದಂಡ ಎಂಬುದು ಗೌಪ್ಯವಾಗಿ ಉಳಿದಿಲ್ಲ. ಮಿಲಿಯನ್‌ ಡಾಲರ್‌ ಟೂರ್ನಿಯಲ್ಲಿ ಫಿಟ್‌ನೆಸ್‌ ಜೊತೆಗೆ ಫಾರ್ಮ್‌ನಲ್ಲಿ ಉಳಿಯುವ ಆಟಗಾರರು ವಿಶ್ವಕಪ್‌ಗೆ ಆಯ್ಕೆಯಾಗಲಿದ್ದಾರೆ. ಆದರೆ, ಹೊಸ ಹೊಸ ಪ್ರತಿಭೆಗಳು ಹುಟ್ಟುತ್ತಿರುವುದು ಒಂದೆಡೆಯಾದರೆ, ಈಗಾಗಲೇ ಟೀಮ್‌ ಇಂಡಿಯಾಗೆ ಆಯ್ಕೆಯಾಗಿರುವ ಆಟಗಾರರು ಕೂಡಾ ಬಿರುಸಿನ ಫಾರ್ಮ್‌ನಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಜೂನ್‌ ತಿಂಗಳಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ, ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು 15 ಸದಸ್ಯರ ತಂಡವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಐಪಿಎಲ್‌ ಪಂದ್ಯ ನಡೆಯುತ್ತಿರುವಂತೆಯೇ, ಆಟಗಾರರ ಆಯ್ಕೆಗಾಗಿ ಅನುಭವಿಗಳು ಮತ್ತು ತಜ್ಞರು ಈಗಾಗಲೇ ಆಟಗಾರರ ಆಯ್ಕೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಆರಂಭಿಸಿದ್ದಾರೆ.

ಟೂರ್ನಿಯಲ್ಲಿ ಸಿಎಸ್‌ಕೆ ತಂಡದ ಮಧ್ಯಮ ಕ್ರಮಾಂಕದ ಸ್ಫೋಟಕ ಆಟಗಾರ ಶಿವಂ ದುಬೆ ಬಿರುಸಿನ ಫಾರ್ಮ್‌ನಲ್ಲಿದ್ದಾರೆ. ಚೆನ್ನೈ ತಂಡದ ಈವರೆಗಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿರುವ ಆಟಗಾರ ದುಬೆ. ಏಪ್ರಿಲ್‌ 5ರ ಶುಕ್ರವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧವೂ ದುಬೆ ಅಬ್ಬರಿಸಿದ್ದರು. 24 ಎಸೆತಗಳಲ್ಲಿ 4 ಸಿಕ್ಸರ್‌ ಸಹಿತ 45 ರನ್‌ ಸಿಡಿಸಿದ್ದಾರೆ. ಈ ಅಮೋಘ ಪ್ರದರ್ಶನದ ನಂತರ ಹಿರಿಯ ಕ್ರಿಕೆಟಿಗರು, ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಈ ವಿಚಾರವಾಗಿ ಅಗರ್ಕರ್ ಜಾಣ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಒದಿ | IPL 2024 Latest Updates: ರಾಜಸ್ಥಾನ್ ರಾಯಲ್ಸ್ vs ಆರ್‌ಸಿಬಿ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್‌, ಫಲಿತಾಂಶ ವಿವರ

ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ತಂಡದ ಇತರ ಬ್ಯಾಟರ್‌ಗಳು ವಿಫಲರಾದಾಗ, ದುಬೆ ಒಬ್ಬರೇ ಅಬ್ಬರಿಸಿದರು. ಈ ಟೂರ್ನಿಯಲ್ಲಿ ಅವರು, ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 160.87ರ ಸ್ಟ್ರೈಕ್ ರೇಟ್‌ನಲ್ಲಿ 148 ರನ್ ಗಳಿಸಿದ್ದಾರೆ. ಇದು ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ಬೆರಗುಗೊಳಿಸಿದೆ.

ಗೇಮ್ ಚೇಂಜರ್

ಎಸ್ಆರ್‌ಎಚ್ ಸ್ಪಿನ್ನರ್‌ಗಳನ್ನು ಸುಲಭವಾಗಿ ದಂಡಿಸಿದ ದುಬೆ ಆಟಕ್ಕೆ ಭಾರತದ ದಿಗ್ಗಜ ಆಟಗಾರ ಯುವರಾಜ್ ಖುಷಿಯಾಗಿದ್ದಾರೆ. ಎಡಗೈ ಆಟಗಾರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲು ಬೆಂಬಲಿಸಿದ ಅವರು, ದುಬೆಯನ್ನು ಒಬ್ಬ “ಗೇಮ್ ಚೇಂಜರ್” ಎಂದು ಬಣ್ಣಿಸಿದ್ದಾರೆ.

"ಶಿವಂ ದುಬೆ ಸರಾಗವಾಗಿ ಚೆಂಡನ್ನು ಬೌಂಡರಿ ಲೈನ್‌ ದಾಟಿಸುವುದನ್ನು ನೋಡಲು ಖುಷಿಯಾಗುತ್ತಿದೆ. ಅವರು ವಿಶ್ವಕಪ್ ತಂಡದಲ್ಲಿರಬೇಕು ಎಂದು ನಾನು ಭಾವಿಸುತ್ತೇನೆ. ಅವರೊಬ್ಬ ಗೇಮ್‌ ಚೇಂಜರ್‌ ಆಗುವ ಕೌಶಲ್ಯ ಹೊಂದಿದ್ದಾರೆ," ಎಂದು ಯುವಿ ಟ್ವೀಟ್‌ ಮಾಡಿದ್ದಾರೆ.

ಹಲವು ಆಟಗಾರರ ಮೇಲೆ ದುಬೆ ಒತ್ತಡ ಹೇರಿದ್ದಾರೆ

ಕಳೆದ ಎರಡು ಐಪಿಎಲ್‌ ಆವೃತ್ತಿಗಳಲ್ಲಿ ಸಿಎಸ್‌ಕೆ ಆಟಗಾರ ನೀಡುತ್ತಿರುವ ಸ್ಥಿರ ಪ್ರದರ್ಶನವು, ಸೂರ್ಯಕುಮಾರ್ ಯಾದವ್ ಮತ್ತು ರಿಷಭ್ ಪಂತ್ ಸೇರಿದಂತೆ ಭಾರತದ ಇತರ ಮಧ್ಯಮ ಕ್ರಮಾಂಕದ ಆಟಗಾರರ ಮೇಲೆ ಸಾಕಷ್ಟು ಒತ್ತಡವನ್ನುಂಟು ಮಾಡಿದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ಐಸಿಸಿ ಪಂದ್ಯಾವಳಿಗೆ ದುಬೆ ಆಯ್ಕೆಯನ್ನು ಸಮರ್ಥಿಸಿದ್ದಾರೆ.

“ಶಿವಂ ದುಬೆ ಆಡುತ್ತಿರುವ ರೀತಿಯನ್ನು ಗಮನಿಸಿದರೆ, ಟಿ20 ವಿಶ್ವಕಪ್‌ಗೆ ಅವರ ಆಯ್ಕೆ ಖಚಿತಪಡಿಸಬೇಕು ಎಂದು ನಾನು ಪಂದ್ಯದ ಮೊದಲು ಹೇಳಿದ್ದೆ. ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ ಅವರಂಥ ಆಟಗಾರರ ಮೇಲೆ ದುಬೆ ಸಾಕಷ್ಟು ಒತ್ತಡ ಹೇರಿದ್ದಾರೆ. ಈಗ ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಸ್ಥಿರವಾಗಿ ರನ್ ಗಳಿಸಬೇಕಾಗಿದೆ. ಹೀಗಾಗಿ ಫಾರ್ಮ್‌ನಲ್ಲಿರುವ ಆಟಗಾರರನ್ನು ಆಯ್ಕೆ ಮಾಡಿ,” ಎಂದು ವೀರು ಹೇಳಿದ್ದಾರೆ.

IPL_Entry_Point