Karnataka Exit poll result 2024: ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ, ಹೊರ ಬಿತ್ತು ಮತಗಟ್ಟೆ ಫಲಿತಾಂಶ‌
ಕನ್ನಡ ಸುದ್ದಿ  /  ಚುನಾವಣೆಗಳು  /  Karnataka Exit Poll Result 2024: ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ, ಹೊರ ಬಿತ್ತು ಮತಗಟ್ಟೆ ಫಲಿತಾಂಶ‌

Karnataka Exit poll result 2024: ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ, ಹೊರ ಬಿತ್ತು ಮತಗಟ್ಟೆ ಫಲಿತಾಂಶ‌

lok Sabha Elections exit poll ಕರ್ನಾಟಕದಲ್ಲಿ ನಡೆದಿರುವ ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಯ ಮೊದಲ ವರದಿಗಳು ಬರುತ್ತಿವೆ.

ಕರ್ನಾಟಕದಲ್ಲಿ ಮತಗಟ್ಟೆ ಸಮೀಕ್ಷೆ ಲೆಕ್ಕಾಚಾರ ಹೇಗಿದೆ.
ಕರ್ನಾಟಕದಲ್ಲಿ ಮತಗಟ್ಟೆ ಸಮೀಕ್ಷೆ ಲೆಕ್ಕಾಚಾರ ಹೇಗಿದೆ.

ಬೆಂಗಳೂರು: ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಭಾರೀ ಗೆಲುವಿನ ನಗೆ ಬೀರಿದ್ದ ಬಿಜೆಪಿ ಈ ಬಾರಿ ಎಷ್ಟು ಸ್ಥಾನವನ್ನು ಪಡೆದುಕೊಳ್ಳಲಿದೆ. ಹಿಂದಿನ ಚುನಾವಣೆಯಲ್ಲಿ ಒಂದೇ ಸ್ಥಾನಕ್ಕೆ ಕುಸಿತ ಕಂಡಿದ್ದ ಕಾಂಗ್ರೆಸ್‌ ಚೇತರಿಕೆ ಕಾಣಲಿದೆಯೇ, ಈ ಬಾರಿ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪ್ರಮುಖ ರಾಜ್ಯವೇ ಆಗಿರುವ ಇಲ್ಲಿ ಸವಾಲು ಇದೆ.

ಕರ್ನಾಟಕದಲ್ಲಿ ಬಿಜೆಪಿ 20-22, ಜೆಡಿಎಸ್ 2-3, ಕಾಂಗ್ರೆಸ್ 3-5, ಇತರರು 0 ಸ್ಥಾನಗಳನ್ನು ಗಳಿಸಬಹುದು ಎಂದು ಇಂಡಿಯಾ ಟುಡೇ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಮುನ್ಸೂಚನೆಯಲ್ಲಿ ಅಂದಾಜಿಸಿದೆ. ಈ ಸಮೀಕ್ಷೆ ನೀಡಿರುವ ವಿವರಗಳ ಪ್ರಕಾರ ಮತಗಳಿಕೆಯಲ್ಲಿಯೂ ಬಿಜೆಪಿಯೇ ಮುಂದಿದೆ. ಬಿಜೆಪಿ ಶೇ 48, ಇತರರು ಶೇ 4, ಜೆಡಿಎಸ್ ಶೇ 7, ಕಾಂಗ್ರೆಸ್ ಶೇ 41 ರಷ್ಟು ಮತ ಪಡೆಯಬಹುದು ಎಂದು ಸಮೀಕ್ಷೆ ತಿಳಿಸಿದೆ.

ಟಿವಿ 9 ನೀಡಿರುವ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಕರ್ನಾಟಕದಲ್ಲಿ ಬಿಜೆಪಿಗೆ 18, ಜೆಡಿಎಸ್‌ ಗೆ 2 ಸೇರಿ ಎನ್‌ಡಿಗೆ 20 ಸ್ಥಾನ ಬರಬಹುದು ಹಾಗೂ ಆಡಳಿತಾರೂಢ ಕಾಂಗ್ರೆಸ್‌ ಗೆ 8 ಸ್ಥಾನ ಬರಬಹುದು ಎನ್ನುವ ಮತಗಟ್ಟೆ ಸಮೀಕ್ಷೆಯನ್ನು ನೀಡಲಾಗಿದೆ.

ಕರ್ನಾಟಕ ರಿಪಬ್ಲಿಕ್‌ ಟಿವಿ- ಜನ್‌ ಕಿ ಬಾತ್‌ ಎಕ್ಸಿಟ್‌ ಪೋಲ್‌ ಫಲಿತಾಂಶದಲ್ಲಿಎನ್‌ಡಿಎ 21ರಿಂದ 23 ಸ್ಥಾನ, ಕಾಂಗ್ರೆಸ್– 5ರಿಂದ 7 ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಿದೆ.

ಕರ್ನಾಟಕ: ಇಂಡಿಯಾ ಟಿವಿ ಸಿಎನ್‌ಎಕ್ಸ್‌ ಮತಗಟ್ಟೆ ಸಮೀಕ್ಷೆಯಲ್ಲಿ ಎನ್‌ಡಿಎ 19 ರಿಂದ 25 ಹಾಗೂ ಕಾಂಗ್ರೆಸ್‌ 4 ರಿಂದ 5 ಸ್ಥಾನ ಗಳಿಸಬಹುದು ಎಂದು ತಿಳಿಸಲಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವ ಕಾರಣದಿಂದ ಹಿಂದಿನ ಚುನಾವಣೆಗಿಂತ ಕೊಂಚ ಚೇತರಿಕೆ ಕಾಣಬಹುದು. ಬಿಜೆಪಿ ಸ್ಥಾನಗಳಲ್ಲಿ ಕುಸಿತ ಕಂಡರೂ ಜೆಡಿಎಸ್‌ ಮೈತ್ರಿಯಿಂದ ಸ್ಥಾನವನ್ನು ಹೆಚ್ಚಿಸಿಕೊಂಡಿರಬಹುದು ಎನ್ನುವ ಲೆಕ್ಕಾಚಾರಗಳು ಮತಗಟ್ಟೆ ಸಮೀಕ್ಷೆಗಳಿಂದ ಗೋಚರಿಸುತ್ತಿವೆ.

ಚುನಾವಣೆ ನೆಲೆಯಲ್ಲಿ ಕರ್ನಾಟಕವನ್ನು ಆರು ಭಾಗಗಳಾಗಿ ನೋಡಲಾಗುತ್ತದೆ. ಇದರಲ್ಲಿ ಬೆಂಗಳೂರು, ಹಳೆ ಮೈಸೂರು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಹಾಗೂ ಮಲೆನಾಡು- ಮಧ್ಯ ಕರ್ನಾಟಕವಾಗಿ ನೋಡಲಾಗುತ್ತದೆ. ಇದರಲ್ಲಿ ಬೆಂಗಳೂರು ಭಾಗದಲ್ಲಿ ನಾಲ್ಕು ಕ್ಷೇತ್ರಗಳು, ಹಳೆ ಮೈಸೂರು ಭಾಗದ ಏಳು, ಕರಾವಳಿಯ ಮೂರು, ಮಧ್ಯ ಕರ್ನಾಟಕ ಮಲೆನಾಡಿನ ಮೂರು, ಕಲ್ಯಾಣ ಕರ್ನಾಟಕದ ಐದು ಹಾಗೂ ಕಿತ್ತೂರು ಕರ್ನಾಟಕದ ಆರು ಕ್ಷೇತ್ರಗಳಿವೆ. ಇದರಲ್ಲಿ ಹಳೆ ಮೈಸೂರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಬಹುದು ಎನ್ನುವ ಲೆಕ್ಕಾಚಾರಗಳಿವೆ.

ಇದರಲ್ಲಿ ಬೆಂಗಳೂರು ಭಾಗದಲ್ಲಿ ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ ಹಾಗೂ ಗ್ರಾಮೀಣ, ಹಳೆ ಮೈಸೂರು ಭಾಗದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಧ್ಯ ಮಲೆನಾಡು ಕರ್ನಾಟಕ ಭಾಗದಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕರಾವಳಿ ಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಿತ್ತೂರು ಕರ್ನಾಟಕದಲ್ಲಿ ಚಿಕ್ಕೋಡಿ, ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಯಪುರ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಬೀದರ್‌, ಕಲಬುರಗಿ, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಕ್ಷೇತ್ರಗಳಿವೆ.

ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೂ ಕಾಂಗ್ರೆಸ್‌ ಕಲ್ಯಾಣ ಕರ್ನಾಟಕ. ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸುತ್ತಿತ್ತು. 2014 ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ 17 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದರೂ ಕಾಂಗ್ರೆಸ್‌ 9 ಪಡೆದಿತ್ತು. ಆಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವೇ ಇತ್ತು. ಜೆಡಿಎಸ್‌ಗೂ 2 ಸ್ಥಾನ ಬಂದಿದ್ದವು. 2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25, ತಲಾ ಒಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಡೆದರೆ, ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪರವಾಗಿತ್ತು. ಆಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿತ್ತು.

ಹತ್ತು ವರ್ಷ ಹಿಂದೆ ಕಾಂಗ್ರೆಸ್‌ ಹಾಗೂ ಬಿಜೆಪಿ ಪಡೆದಂತಹ ಫಲಿತಾಂಶವನ್ನು ಪಡೆಯಬಹುದು ಎನ್ನುವ ಸೂಚನೆಗಳು ಸಿಗುತ್ತಿವೆ.

ಲೋಕಸಭೆ ಚುನಾವಣೆಯ ಕರ್ನಾಟಕದ ಮತಗಟ್ಟೆ ಸಮೀಕ್ಷೆ ಕುರಿತು ಲೈವ್ ಅಪ್ಡೇಟ್ಸ್ ಅನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲೂ ಕ್ಷಣ ಕ್ಷಣಕ್ಕೂ ಒದಗಿಸಲಾಗುತ್ತಿದ್ದು, ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಬಹುದು.

 

(ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು)

 

 

Whats_app_banner