ಬಿಗ್ ಬಾಸ್ ಕನ್ನಡ ಸೀಸನ್ 11: ಸ್ವರ್ಗದ ಬಾಗಿಲು ತೆರೆದ ಉಗ್ರಂ ಮಂಜು; ನರಕವೇ ಬೇಕೆಂದ ಮೋಕ್ಷಿತಾ, ರಂಜಿತ್
Bigg boss Kannada Season 11 contestants List: ಬಿಗ್‌ಬಾಸ್ ಕನ್ನಡ ಸೀಸನ್ 11ರ ಕೊನೆಯ ಮೂರು ಸ್ಪರ್ಧಿಗಳಾಗಿ ಮೂವರು ನಟರು ಮನೆ ಪ್ರವೇಶಿಸಿದ್ದಾರೆ. ಚಿತ್ರನಟ ಉಗ್ರಂ ಮಂಜು ಸ್ವರ್ಗದ ಬಾಗಿಲು ಬಡಿದರೆ, ಕುರುತೆರೆಯ ಜನಪ್ರಿಯ ನಟರಾದ ಮೋಕ್ಷಿತಾ ಪೈ ಹಾಗೂ ರಂಜಿತ್ ನರಕಕ್ಕೆ ಹೋಗಿದ್ದಾರೆ.
ಉಗ್ರಂ ಮಂಜು, ಮೋಕ್ಷಿತಾ ಪೈ, ರಂಜಿತ್: ಬಿಗ್ ಬಾಸ್ ವೇದಿಕೆಗೆ ಉಗ್ರಂ ನಟ ಮಂಜು 15ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಉಗ್ರಂ ಮಂಜು, ಕರ್ನಾಟಕದ ಉತ್ತಮ ಕಲಾವಿದರಲ್ಲಿ ಒಬ್ಬರು. ಸೀಸನ್ 10ರ ಯಶಸ್ಸಿನ ಬಳಿಕ, ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 11 ಶುರುವಾಗಿದೆ. ಹೊಸ ಆವೃತ್ತಿಯಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂಬ ಅಚ್ಚರಿಗೆ ಇಂದು ಉತ್ತರ ಸಿಕ್ಕಿದೆ. ಒಟ್ಟು 17 ಮಂದಿ ಸ್ಪರ್ಧಿಗಳು ಮನೆಯೊಳಗೆ ಲಾಕ್ ಆಗಿದ್ದಾರೆ. ಶನಿವಾರವೇ (ಸೆ 28) ನಾಲ್ಕು ಸ್ಪರ್ಧಿಗಳ ಹೆಸರನ್ನು ರಾಜಾ ರಾಣಿ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ರಿವೀಲ್ ಮಾಡಲಾಗಿತ್ತು. ಗೌತಮಿ ಜಾಧವ್, ಲಾಯರ್ ಕೆಎನ್ ಜಗದೀಶ್, ಹಿಂದುತ್ವದ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಅವರೊಂದಿಗೆ ಗೋಲ್ಡ್ ಸುರೇಶ್ ಮನೆಗೆ ಕಾಲಿಡುವುದು ಖಚಿತವಾಗಿತ್ತು. ಇಂದು ಅವರ ಹೊರತಾಗಿ 13 ಸ್ಪರ್ಧಿಗಳು ದೊಡ್ಡ ಮನೆಗೆ ಅದೃಷ್ಟ ಪರೀಕ್ಷೆಗೆ ಪ್ರವೇಶ ಪಡೆದಿದ್ದಾರೆ.
ಮೂರನೇ ಕೃಷ್ಣಪ್ಪ, ರಂಗಸಮುದ್ರ, ರಾನಿ, ಮಾರಕಾಸ್ತ್ರ, ಬೆಂಕಿ, ಕಿರಿಕ್ ಪಾರ್ಟಿ, ಸಿಪಾಯಿ ಸೇರಿದಂತೆ ಹಲವು ಚಿತ್ರಗಳಲ್ಲಿ ಉಗ್ರಂ ಮಂಜು ಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಇವರಿಗೆ ಹೆಚ್ಚು ಜನಪ್ರಿಯತೆ ಕೊಟ್ಟಿದ್ದು 2014ರ ಉಗ್ರಂ ಚಿತ್ರ. ಇವರು ಬಿಗ್ ಬಾಸ್ ಮನೆಯ 15ನೇ ಸ್ಪರ್ಧಿ.
ಮಂಜು ಅವರ ಜೊತೆಗೆ ಕಿರುತೆರೆ ನಟಿ, ಪಾರು ಧಾರಾವಾಹಿಯ ಜನಪ್ರಿಯ ನಾಯಕಿ ನಟಿ ಮೋಕ್ಷಿತಾ ಪೈ 16ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು ಹಾಗೂ ತೆಲುಗು ಧಾರಾವಾಹಿಗಳಲ್ಲಿಯೂ ಮೋಕ್ಷಿತಾ ನಟಿಸಿದ್ದಾರೆ. ಇದಲ್ಲದೆ ಇವರು ನಿರ್ಣಯಾ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್‌ಬಾಸ್ ಮನೆಗೆ 17ನೇ ಹಾಗೂ ಕೊನೆಯ ಸ್ಪರ್ಧಿಯಾಗಿ ಕಿರುತೆರೆ ನಟ ರಂಜಿತ್ ಬಾಗಿಲು ಬಡಿದಿದ್ದಾರೆ. ಜನಪ್ರಿಯ ಧಾರಾವಾಹಿ ಶನಿಯಲ್ಲಿ ಇವರು ನಟಿಸಿದ್ದರು. ಕೊನೆಯದಾಗಿ ಮನೆಗೆ ಕಾಲಿಡುವ ಮೂರು ಸ್ಪರ್ಧಿಗಳಲ್ಲಿ ಮಂಜು ಸ್ವರ್ಗಕ್ಕೆ ಪ್ರವೇಶಿಸಿದ್ದಾರೆ. ಉಳಿದ ಇಬ್ಬರು ನೇರವಾಗಿ ನರಕಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿಂದ ಮನೆಯಲ್ಲಿ ಎಲ್ಲಾ 17 ಸ್ಪರ್ಧಿಗಳ ಅದೃಷ್ಟ ಪರೀಕ್ಷೆ ಆರಂಭವಾಗಲಿದೆ. ಸದ್ಯ 10 ಸ್ಪರ್ಧಿಗಳು ಸ್ವರ್ಗ ಹಾಗೂ ಉಳಿದ 7 ಸ್ಪರ್ಧಿಗಳು ನರಕಕ್ಕೆ ಪ್ರವೇಶಿಸಿದ್ದಾರೆ. ನಾಳೆಯಿಂದ ದೊಡ್ಮನೆಯಲ್ಲಿ ಅಸಲಿ ಆಟ ಶುರುವಾಗಲಿದೆ.
ಪ್ರಬಲ ಸ್ಪರ್ಧಿಗಳು ಮನೆ ಪ್ರವೇಶ
ಬಿಗ್ ಬಾಸ್ 11ನೇ ಸೀಸನ್‌ನಲ್ಲಿ ಗೀತಾ ಧಾರಾವಾಹಿ ನಟಿ ಭವ್ಯಾ ಗೌಡ ಮೊದಲ ಸ್ಪರ್ಧಿಯಾಗಿ ಮನೆಗೆ ಪ್ರವೇಶಿಸಿದರು. ಆ ಬಳಿಕ ಹಿರಿಯ ನಟಿ ಯಮುನಾ ಶ್ರೀನಿಧಿ ಅವರು ಎರಡನೇ ಸ್ಪರ್ಧಿಯಾಗಿ ಕಾಲಿಟ್ಟರು. ಈ ಇಬ್ಬರೂ ಸ್ವರ್ಗಕ್ಕೆ ಬರುವ ಮೂಲಕ ನಂತರ ಬರುವ ಸ್ಪರ್ಧಿಗಳನ್ನು ಸ್ವರ್ಗ-ಅಥವಾ ನರಕಕ್ಕೆ ಕಳುಹಿಸುವ ವಿಶೇಷ ಅಧಿಕಾರ ಪಡೆದರು. ಆ ಪೈಕಿ ಮೂರನೇ ಸ್ಪರ್ಧಿಯಾಗಿ ಬಂದ ಧನರಾಜ್ ಆಚಾರ್ ಅವರನ್ನು ಸ್ವರ್ಗಕ್ಕೆ ಕರೆಸಿಕೊಂಡಿದ್ದಾರೆ. ಆ ಬಳಿಕ ನಟಿ ಗೌತಮಿ ಜಾಧವ್ ಅವರು ಜನರ ವೋಟಿಂಗ್ ಆಧಾರದ ಮೇಲೆ ಸ್ವರ್ಗಕ್ಕೆ ಪ್ರವೇಶಿಸಿದರು.
ಐದು ಹಾಗೂ ಆರನೇ ಸ್ಪರ್ಧಿಯಾಗಿ ನಟಿ ಅನುಷಾ ಹಾಗೂ ಧರ್ಮ ಕೀರ್ತಿರಾಜ್ ಕಾಲಿಟ್ಟರು. ಇವರಲ್ಲಿ ಅನುಷಾ ನರಕಕ್ಕೆ ಎಂಟ್ರಿ ಕೊಟ್ಟರೆ, ಧರ್ಮ ಅವರಿಗೆ ಸ್ವರ್ಗದ ಬಾಗಿಲು ತೆರೆಯಿತು. ಲಾಯರ್ ಜಗದೀಶ್ ಏಳನೇ ಸ್ಪರ್ಧಿಯಾಗಿ ಸ್ವರ್ಗಕ್ಕೆ ಕಾಲಿಟ್ಟಿದ್ದಾರೆ. ಎಂಟನೇ ಸ್ಪರ್ಧಿ ಶಿಶಿರ್ ನರಕಕ್ಕೆ ಹೋದರೆ, ತ್ರಿವಿಕ್ರಮ್ ಅವರನ್ನು ಸ್ವರ್ಗಕ್ಕೆ ಕರೆಸಿಕೊಳ್ಳಲಾಯ್ತು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನಟಿ ಹಂಸ ನಾರಾಯಣಸ್ವಾಮಿ ಹತ್ತನೇ ಸ್ಪರ್ಧಿಯಾಗಿ ಸ್ವರ್ಗಕ್ಕೆ ಪ್ರವೇಶಿಸಿದರು. ಆ ಬಳಿಕ ಬಿಗ್‌ಬಾಸ್ ಮಾಜಿ ಸ್ಪರ್ಧಿ ತುಕಾಲಿ ಸಂತೋಷ್ ಪತ್ನಿ ಮಾನಸಾ ಹನ್ನೊಂದನೇ ಸ್ಪರ್ಧಿಯಾಗಿ ನರಕಕ್ಕೆ ಎಂಟ್ರಿ ಕೊಟ್ಟರು. ಮೈಮೇಲೆ ಕೆಜಿಗಟ್ಟಲೆ ಚಿನ್ನ ಧರಿಸಿ ಬಂದಿರುವ ಸ್ಪರ್ಧಿ ಗೋಲ್ಡ್ ಸುರೇಶ್ ಇವರು ಬಿಗ್ ಬಾಸ್ ವೇದಿಕೆಗೆ 12ನೇ ಸ್ಪರ್ಧಿಯಾಗಿ ನರಕಕ್ಕೆ ಕಾಲಿಟ್ಟರು. 13ನೇ ಸ್ಪರ್ಧಿಯಾಗಿ ಬಂದ ಐಶ್ವರ್ಯ ಅವರನ್ನು ಗೌತಮಿ ಹಾಗೂ ಲಾಯರ್ ಜಗದೀಶ್ ಸ್ವರ್ಗಕ್ಕೆ ಕರೆಸಿಕೊಂಡರು. ಅವರ ಬೆನ್ನಲ್ಲೇ 14ನೇ ಸ್ಪರ್ಧಿಯಾಗಿ ಬಂದ ಚೈತ್ರ ಕುಂದಾಪುರ ಕೂಡಾ ನರಕದ ಬಾಗಿಲು ತೆರೆದರು.
ಬಿಗ್ ಬಾಸ್ ಕನ್ನಡ11ನೇ ಸೀಸನ್ ತಾಜಾ ಮಾಹಿತಿ ಎಲ್ಲಿ ಸಿಗುತ್ತೆ?
ಕಲರ್ಸ್ ಕನ್ನಡ ನಡೆಸುತ್ತಿರುವ 'ಬಿಗ್ ಬಾಸ್ ಕನ್ನಡ ಸೀಸನ್ 11' ರಿಯಾಲಿಟಿ ಶೋ ಕುರಿತ ಸಮಗ್ರ ಮಾಹಿತಿಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನೋಡಬಹುದು. ದೊಡ್ಮನೆ ಎಂದೇ ಪ್ರಖ್ಯಾತವಾಗಿರುವ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಹೇಗೆ ಆಡುತ್ತಿದ್ದಾರೆ? ಜನರು ಅವರ ಬಗ್ಗೆ ಏನು ಯೋಚಿಸುತ್ತಿದ್ದಾರೆ? ಕುತೂಹಲಕಾರಿ ತಿರುವುಗಳೇನು ಎನ್ನುವ ವಿವರ ತಿಳಿಯಲು ಇಲ್ಲಿ ಕ್ಕಿಕ್ ಮಾಡಿ.