ಶ್ರೀ ಕ್ಷೇತ್ರ ಕುತ್ತಾರು ಆದಿಸ್ಥಳದಲ್ಲಿ ಕೊರಗಜ್ಜನ ಕೋಲದಲ್ಲಿ ಭಾಗಿಯಾದ ನಟಿ ಕತ್ರಿನಾ ಕೈಫ್, ಕೆಎಲ್ ರಾಹುಲ್, ಅಹಾನ್, ಅಥಿಯಾ ಶೆಟ್ಟಿ
ಶ್ರೀ ಕ್ಷೇತ್ರ ಕುತ್ತಾರು ಆದಿಸ್ಥಳದಲ್ಲಿ ಕೊರಗಜ್ಜನ ಹರಕೆಯ ಕೋಲದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್, ಸುನಿಲ್ ಶೆಟ್ಟಿ, ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತಿತರರು ಭಾಗಿಯಾಗಿದ್ದಾರೆ. ವಿಕಿ ಕೌಶಲ್ ಹೊರತುಪಡಿಸಿ ಹೆಸರು ಬರೆಸಿದ ಎಲ್ಲರೂ ಆಗಮಿಸಿ ಕೊರಗಜ್ಜನ ಆಶೀರ್ವಾದ ಪಡೆದಿದ್ದಾರೆ.
ಬೆಂಗಳೂರು: ಬೇಡಿದೆಲ್ಲ ಈಡೇರಿಸುವ ಕೊರಗಜ್ಜನ ಮೇಲೆ ಸ್ಥಳೀಯರಿಗೆ ಮಾತ್ರವಲ್ಲದೆ ಸಿನಿಮಾ ಕಲಾವಿದರಿಗೂ ಭಯಭಕ್ತಿ, ನಂಬಿಕೆ. ಈ ನಂಬಿಕೆಗೆ ಇಂಬು ನೀಡುವಂತೆ ಬಾಲಿವುಡ್ ನಟಿ ಕತ್ರಿನಾ ಕೈಫ್, ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತಿತರರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶ್ರೀ ಕ್ಷೇತ್ರ ಕುತ್ತಾರು ಆದಿಸ್ಥಳದಲ್ಲಿ ಕೊರಗಜ್ಜನ ಹರಕೆಯ ಕೋಲದಲ್ಲಿ ಭಾಗಿಯಾಗಿದ್ದಾರೆ. ಉಳ್ಳಾಲದ ಕುತ್ತೂರು ಕೊರಗ್ಗಜ್ಜನ ಕಟ್ಟೆಯಲ್ಲಿ ನಿನ್ನೆ ಅಂದರೆ ಭಾನುವಾರ ನಡೆದ ಹರಕೆಯ ಕೋಲದಲ್ಲಿ ಹಿಂದಿ ನಟಿ ಕತ್ರಿನಾ ಕೈಫ್, ನಟ ಸುನಿಲ್ ಶೆಟ್ಟಿ ಮತ್ತು ಕುಟುಂಬ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್ ಭಾಗವಹಿಸಿದ್ದಾರೆ.
ಯಾರೆಲ್ಲ ಬಂದಿದ್ರು?
ವರದಿಗಳ ಪ್ರಕಾರ ಶ್ರೀ ಕ್ಷೇತ್ರ ಕುತ್ತಾರು ಆದಿಸ್ಥಳದಲ್ಲಿ ಕೊರಗಜ್ಜನ ಕಟ್ಟೆಯಲ್ಲಿ ನಡೆದ ಹರಕೆಯ ಕೋಲದಲ್ಲಿ ಕತ್ರಿನಾ ಕೈಫ್ ಸೇರಿದಂತೆ ಹಲವು ಜನರು ಭಾಗಿಯಾಗಿದ್ದಾರೆ. ಈ ಕೋಲದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ತಿಳಿಸಿದ್ದರು. ಹೀಗಾಗಿ, ಇವರೆಲ್ಲ ಭಾಗಿಯಾದ ವಿಚಾರ ಮಾಧ್ಯಮಗಳಿಗೆ ತಿಳಿಯಲಿಲ್ಲ. ಸುನಿಲ್ ಶೆಟ್ಟಿ ಮಕ್ಕಳಾದ ಅಹಾನ್ ಶೆಟ್ಟಿ ಮತ್ತು ಪುತ್ರಿ ಅಥಿಯಾ ಶೆಟ್ಟಿ ಕೂಡ ಕೋಲಕ್ಕೆ ಆಗಮಿಸಿದ್ದರು. ಇನ್ನುಳಿದಂತೆ ಮ್ಯಾಟ್ರಿಕ್ಸ್ ಎಂಟರ್‌ಟೈನ್‌ಮೆಂಟ್‌ನ ರೇಷ್ಮಾ ಶೆಟ್ಟಿ ಆಗಮಿಸಿದದ್ದರು. ವಿಎಂ ಕಾಮತ್ ಕೂಡ ಬಂದಿದ್ದರು. ಎರಡು ತಿಂಗಳ ಹಿಂದೆ ಒಂಬತ್ತು ಜನರ ಹೆಸರಿನಲ್ಲಿ ಕೋಲವನ್ನು ಬರೆಸಲಾಗಿತ್ತು. ವಿಕಿ ಕೌಶಲ್ ಹೊರತುಪಡಿಸಿ ಹೆಸರು ಬರೆಸಿದ ಎಲ್ಲರೂ ಆಗಮಿಸಿ ಕೊರಗಜ್ಜನ ಆಶೀರ್ವಾದ ಪಡೆದಿದ್ದಾರೆ.
ಕೊರಗಜ್ಜನ ಸನ್ನಿಧಾನದಲ್ಲಿ ಅನೇಕ ಕಟ್ಟುಪಾಡುಗಳಿವೆ. ಕಟ್ಟೆಯ ಒಳಗೆ ಮಹಿಳೆಯರಿಗೆ ರಾತ್ರಿ ವೇಳೆ ಪ್ರವೇಶ ಇರುವುದಿಲ್ಲ. ಈ ಕಾರಣದಿಂದ ಶ್ರೀ ಕ್ಷೇತ್ರ ಕುತ್ತಾರು ಆದಿಸ್ಥಳದಲ್ಲಿ ಕೊರಗಜ್ಜನ ಕೋಲಕ್ಕೆ ಆಗಮಿಸಿದ್ದ ಕತ್ರಿನಾ ಕೈಫ್, ಅಥಿಯಾ ಮತ್ತು ರೇಷ್ಮಾ ಶೆಟ್ಟಿ ದೇಗುಲದ ಹೊರಗಡೆಯಿಂದ ಕೊರಗಜ್ಜನ ಕೋಲವನ್ನು ವೀಕ್ಷಿಸಿದ್ದಾರೆ. ಇವರೆಲ್ಲ ಸಂಜೆ ಆರು ಗಂಟೆಗೆ ಕೋಲ ನಡೆಯುವ ಸ್ಥಳಕ್ಕೆ ಆಗಮಿಸಿದ್ದರು. ಕೋಲ ಮುಗಿದ ಬಳಿಕ ವಾಪಸ್ ಆಗಿದ್ದಾರೆ.
ಕ್ರಿಕೆಟಿಗ ಕೆಎಲ್ ರಾಹುಲ್ ಕೂಡ ಕೊರಗಜ್ಜನ ಆಶೀರ್ವಾದ ಪಡೆದಿದ್ದರು. ಇದಕ್ಕೂ ಮೊದಲು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಮೂಲತಃ ಕರಾವಳಿಗರಾದ ಸುನಿಲ್ ಶೆಟ್ಟಿ, ಶಿಲ್ಪ ಶೆಟ್ಟಿ ಮುಂತಾದವರು ಕರಾವಳಿ ದೈವಗಳ ಮೇಲೆ ವಿಶೇಷ ಭಕ್ತಿ ಹೊಂದಿದ್ದಾರೆ. ಇದೇ ಕಾರಣಕ್ಕೆ ಬಾಲಿವುಡ್‌ನ ಇತರರಿಗೂ ಇಲ್ಲಿನ ನಂಬಿಕೆ, ಆಚರಣೆಗಳ ಕುರಿತು ವಿಶೇಷ ಆಸಕ್ತಿ ಇದೆ. ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನೆಮಾ ಬಿಡುಗಡೆಯಾದ ಬಳಿಕ ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್‌ಗೂ ಭೂತಾರಾಧನೆಯ ಮಾಹಿತಿ ತಲುಪಿದೆ.
ಹಿಂದಿನಿಂದಲೂ ಕೊರಗಜ್ಜನ ಕ್ಷೇತ್ರದಲ್ಲಿ ಫೋಟೋ, ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಸೆಲೆಬ್ರಿಟಿಗಳು ಬಂದಾಗ ದ್ವಾರದ ಮುಂಭಾಗ ಮತ್ತು ಕಚೇರಿ ಒಳಗೆ ಅವಕಾಶ ನೀಡಲಾಗುತ್ತಿದೆ.
ವಿಭಾಗ