ಜೋರಾಮ್ ಸಿನಿಮಾ ವಿಮರ್ಶೆ: ಆದಿವಾಸಿಗಳ ಕಥೆ ಹೇಳುವ ಸರ್ವೈವಲ್ ಥ್ರಿಲ್ಲರ್, ನಟನೆ ಮರೆತು ಪಾತ್ರದಲ್ಲಿ ಜೀವಿಸಿದ ಮನೋಜ್ ಬಾಜಪೇಯಿ
Joram Movie review: ಜಾರ್ಖಾಂಡ್ ಆದಿವಾಸಿ ಕುಟುಂಬದ ವ್ಯಕ್ತಿಯಾಗಿ ಜೋರಂ ಸಿನಿಮಾದಲ್ಲಿ ಮನೋಜ್ ಬಾಜಪೇಯಿ ಅವರು ಅದ್ಭುತವಾಗಿ ನಟಿಸಿದ್ದಾರೆ. ಜೋರಂ (ಅಥವಾ ಜೋರಾಮ್) ಸಿನಿಮಾದ ವಿಮರ್ಶೆಯನ್ನು ಹಿಂದೂಸ್ತಾನ್ ಟೈಮ್ಸ್‌ನ ಮೋನಿಕಾ ರಾವಲ್ ಕುಕ್ರೆಜಾ ಇಲ್ಲಿ ನೀಡಿದ್ದಾರೆ.
Joram Movie review: ಜೋರಾಮ್ ಸಿನಿಮಾ ವೀಕ್ಷಿಸುವಾಗ ಹೆಚ್ಚಿನ ಸಂದರ್ಭ ನನ್ನ ಕಣ್ಣುಗಳು ಪಾತ್ರಗಳ ಮೇಲೆಯೇ ಕೇಂದ್ರೀಕರಿಸಿತ್ತು. ಆದಿವಾಸಿ ಪಾತ್ರಗಳು ಧರಿಸಿರುವ ಹಲವು ಕಿವಿಯೋಲೆಗಳು, ಮೂರು ಮೂಗಿನ ಉಂಗುರಗಳು, ಹೇರ್‌ಪಿನ್‌ಗಳು... ನಿರ್ದೇಶಕ ದೇವಶಿಶ್ ಮಖಿಜಾ ಅವರು ತಮ್ಮ ಸಿನಿಮಾದಲ್ಲಿ ಪಾತ್ರಗಳನ್ನು ನೈಜವಾಗಿ ಕಾಣಿಸುವಂತೆ ಮಾಡಿರುವ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ಜೋರಾಮ್ ಎನ್ನುವುದು ವಾಣಿಜ್ಯವಾಗಿ ಯಶಸ್ಸು ಪಡೆಯುವ ಸಿನಿಮಾ ಆಗದೆ ಇರಬಹುದು. ಆದರೆ, ಈ ಸಿನಿಮಾ ನಿಮ್ಮ ಹೃದಯ ತಟ್ಟದೆ ಇರದು. ದಸ್ರು ಕರ್ಕೆಟ್ಟ ಅಕಾ ಬಾಲಾ (ಮನೋಜ್ ಬಾಜಪೇಯಿ) ಮತ್ತು ಅವರ ಪತ್ನಿ ವಾನೊ (ತನ್ನಿಷ್ಠ ಚಟರ್ಜಿ) ಅವರು ಹಗ್ಗದ ಉಯ್ಯಾಲೆಯನ್ನು ತೂಗಾಡುತ್ತಿರುವಾಗ ಸಂತೋಷದಿಂದ ಜನಪದ ಹಾಡು ಹಾಡುವ ರೀತಿ ನನಗೆ ಇಷ್ಟವಾಯಿತು. ಮುಂಬೈನ ಕತ್ತಲಕೋಣೆಯಂತಹ ಕೋಣೆಯಲ್ಲಿ ವಲಸಿಗರಾಗಿ ಜೀವನ ಸಾಗಿಸಬೇಕಾದ ಸಂದರ್ಭ ಬಂದಾಗ ಈ ಹಾಡು ಹಾಡುತ್ತಾರೆ. ಜೋಗುಳದೊಳಗೆ ಅವರ ಮೂರು ವರ್ಷದ ಮಗಳು ಜೋರಾಮ್ ಮಲಗಿದ್ದಾಳೆ.
ಮನುಷ್ಯ ಮತ್ತು ಪ್ರಕೃತಿಯ ಕಥೆ
ಇದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಹೋರಾಟ ಕಥೆ. ತಮ್ಮ ಉಳಿವಿಗಾಗಿ ಹೋರಾಡುವ, ಅಭಿವೃದ್ಧಿಯ ವಿಷಯದಲ್ಲಿ ಬಲಿಪಶುಗಳಾಗುತ್ತಿರುವ ಜಾರ್ಖಂಡ್‌ನ ಬುಡಕಟ್ಟು ಜನಾಂಗದವರ ಕಥೆಯನ್ನು ಜೋರಾಮ್ ಸಿನಿಮಾ ಬಿಚ್ಚಿಡುತ್ತದೆ. ಕಬ್ಭಿಣದ ಗಣಿಗಾರಿಕೆಗಾಗಿ ಜಾರ್ಖಾಂಡ್‌ನ ಭೂಮಿಯನ್ನು ಪ್ರಗತಿ ಸ್ಟೀಲ್ ಹೆಸರಿನ ಪ್ರಮುಖ ಕಂಪನಿಗೆ ಮಾರಾಟ ಮಾಡಿದ ಘಟನೆ ಇಲ್ಲಿದೆ. ಈ ಸಂದರ್ಭದಲ್ಲಿ ಸಾವಿರಾರು ಮರಗಳನ್ನು ಕಡಿಯಲಾಯಿತು. ನದಿಗಳ ನೀರು ಕೂಡ ಖಾಲಿಯಾಯಿತು. ಆದಿವಾಸಿಗಳು ಸುಮಾರು 2 ಸಾವಿರ ವರ್ಷಗಳಿಂದ ವಾಸಿಸುತ್ತಿರುವ ಭೂಮಿಯನ್ನು ಬಿಟ್ಟು ಹೋಗುವಂತೆ ಒತ್ತಾಯಿಸಲಾಗುತ್ತದೆ. ಆದಿವಾಸಿ ಸಮುದಾಯದ ನಾಯಕಿ ಫುಲೋ ಕರ್ಮ (ಸ್ಮಿತಾ ತಾಂಬೆ) ಈ ಡೀಲ್‌ನ ಹಿಂದೆ ಇದ್ದಾಳೆ. ಆಕೆಯ ಪಾತ್ರಕ್ಕೆ ಹಲವು ಮಜಲುಗಳೂ ಇವೆ.
ದಸ್ರು (ದಸ್ರು ಕರ್ಕೆಟ್ಟ ಅಕಾ ಬಾಲಾ) ಮುಂಬೈಗೆ ಸ್ಥಳಾಂತರಗೊಂಡಾಗ ಹಲವು ಘಟನೆಗಳನ್ನು ನೋಡಬೇಕಾಗುತ್ತದೆ. ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ತೆ ಮಾಡಿರುವುದನ್ನು ನೋಡಿದಾಗ ದಸ್ರುವಿನ ಜಗತ್ತು ಛಿದ್ರವಾಗುತ್ತದೆ. ತನ್ನ ಮಗಳು (ಜೋರಾಮ್)ಳನ್ನು ಜೋಲಿಯಲ್ಲಿ ಕಟ್ಟುಕೊಂಡು ಪ್ರಾಣ ಉಳಿಸಲು ಓಡಲು ಆರಂಭಿಸುತ್ತಾನೆ. ದಸ್ರುವನ್ನು ಸೆರೆಹಿಡಿಯಲು ಸಬ್ ಇನ್ಸ್‌ಪೆಕ್ಟರ್ ರತ್ನಾಕರ್ (ಮೊಹಮ್ಮದ್ ಜೀಶನ್ ಅಯ್ಯೂಬ್) ಅವರನ್ನು ಕಳುಹಿಸಲಾಗುತ್ತದೆ. ಕೆಲವೊಂದು ಕಾರಣಗಳಿಗಾಗಿ "ಆತನನ್ನು ಜೀವಂತವಾಗಿ ಸೆರೆಹಿಡಿಯಬೇಕು" ಎಂದು ಈ ಇನ್‌ಸ್ಪೆಕ್ಟರ್ ಹೇಳುತ್ತಾ ಇರುತ್ತಾರೆ.
ಹೇಗಿದೆ ಜೋರಾಮ್ ಸಿನಿಮಾ?
119 ನಿಮಿಷದ ಈ ಸಿನಿಮಾವು ಸೀಟಿನ ಅಂಚಿಗೆ ಬಂದು ಕೂರುವಂತೆ ಮಾಡುವ ಸರ್ವೈವಲ್ ಡ್ರಾಮಾದಂತೆ ಕಾಣಿಸುವುದಿಲ್ಲ. ಕೆಲವೊಂದು ಕಡೆ ಊಹಿಸಬಹುದಾದ ತಿರುವುಗಳು ಎದುರಾಗುತ್ತವೆ. ಒಂದು ಕಡೆ 20 ಶಸ್ತ್ರಸಜ್ಜಿತರು ದಸ್ರು ಮೇಲೆ ಗುಂಡಿನ ಮಳೆಗೆರೆಯುವ ದೃಶ್ಯವಿದೆ. ಆದರೆ, ಇಷ್ಟು ಗುಂಡುಗಳ ನಡುವೆಯೂ ದಸ್ರು ತಪ್ಪಿಸಿಕೊಳ್ಳಲು ಯಶಸ್ವಿಯಾಗುತ್ತಾನೆ. ಈ ರೀತಿಯ ಅವಾಸ್ತವಿಕ ಸಂಗತಿಗಳು ಸಾಕಷ್ಟು ಇವೆ. ಚಿತ್ರದಲ್ಲಿ ನನ್ನ ಗಮನಕ್ಕೆ ಬಂದ ಇನ್ನೊಂದು ಅಂಶ "ಸಂಭಾಷಣೆಯಲ್ಲಿ ಸ್ಪಷ್ಟತೆಯ ಕೊರತೆ". ಬುಡಕಟ್ಟು ಉಪಭಾಷೆಗಳನ್ನು ಅರ್ಥಮಾಡಿಕೊಳ್ಳಲು ನಾನು ಹಲವು ಬಾರಿ ಪ್ರಯತ್ನಿಸಿದೆ. ಎಲ್ಲಾ ಕಡೆ ಯಶಸ್ವಿಯಾಗಲಿಲ್ಲ.
ಚಿತ್ರದ ಸಕಾರಾತ್ಮಕ ಅಂಶಗಳು
ಈ ಚಿತ್ರದಲ್ಲಿ ದಸ್ರು ಅವರನ್ನು ಹಳ್ಳಿಯಲ್ಲಿ ಮಾವೋವಾದಿಯಾಗಿ ಮತ್ತು ಮುಂಬೈನಲ್ಲಿ ಕಟ್ಟಡ ನಿರ್ಮಾಣ ಕೆಲಸಗಾರನಾಗಿ ತೋರಿಸುತ್ತದೆ. ಜೋರಾಮ್ ಸಿನಿಮಾವು ಹಲವು ಕಡೆ ನಮ್ಮನ್ನು ಸಾಮಾಜಿಕ ಚಿಂತನೆಗೆ ಹಚ್ಚುತ್ತದೆ. ಮುಂಬೈನಲ್ಲಿ ದಸ್ರುವನ್ನು ಬಹಾರಿ (ಹೊರಗಿನವರು) ಎಂದು ಉಲ್ಲೇಖಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಜಾರ್ಖಂಡ್‌ನಲ್ಲಿಯೂ ಹೊರಗಿನವರು ಎಂದೇ ಕರೆಯಲಾಗುತ್ತದೆ. ವಲಸಿಗರ ದುಸ್ಥಿತಿಯನ್ನು ಇದು ಪ್ರತಿಬಿಂಬಿಸುತ್ತದೆ.
ಈ ಚಿತ್ರದ ರೈಲಿನ ದೃಶ್ಯವು ಸಿನಿಮಾ ವಿದ್ಯಾರ್ಥಿಗೆ ಕಲಿಕಾ ಯೋಗ್ಯವಾಗಿದೆ. ಜೋರಾಮ್‌ನಲ್ಲಿ ಕೆಲವು ಅಸ್ಥಿರ ದೃಶ್ಯಗಳಿವೆ. ಮುಖಿಜ ಅದನ್ನು ಕಡಿಮೆ ಮಾಡಲು ಯತ್ನಿಸುವುದಿಲ್ಲ. ಸಿನಿಮಾದಲ್ಲಿ ಕಚ್ಚಾ ಫೀಲಿಂಗ್ ಹೆಚ್ಚಿದೆ.
ಗಮನಸೆಳೆಯುವ ಬಾಜಪೇಯಿ ನಟನೆ
ಈ ಚಿತ್ರದಲ್ಲಿ ಸಂಪೂರ್ಣವಾಗಿ ಬಾಜಪೇಯಿ ಆವರಿಸಿಕೊಂಡಿದ್ದಾರೆ. ಅವರು ಈ ಚಿತ್ರದಲ್ಲಿ ಸಂಪೂರ್ಣವಾಗಿ ದಸ್ರು ಆಗಿದ್ದಾರೆ. ಚಿತ್ರದ ಪ್ರತಿಯೊಂದು ಚೌಕಟ್ಟಿನಲ್ಲೂ ಇದು ಸ್ಪಷ್ಟವಾಗುತ್ತದೆ. ‘ಗಾಂವ್ ಸೇ ನಹೀಂ ಭಾಗಾ, ಬಂದೂಕ್ ಸೇ ಭಾಗಾ’ ಎಂಬ ಅವರ ಸಂಭಾಷಣೆ ಹೃದಯಸ್ಪರ್ಶಿ. ಮತ್ತು ನಿರ್ದಯ ಎಂಎಲ್ಎಯಾಗಿ ತಾಂಬೆ ನಟನೆ ಭಯ ಹುಟ್ಟಿಸುತ್ತದೆ. ತಾಕಲಾಟದಲ್ಲಿರುವ ಪೊಲೀಸ್ ಅಧಿಕಾರಿಯಾಗಿ ಜೀಶನ್ ಅಯೂಬ್ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಒಟ್ಟಾರೆ ನಿಧಾನಗತಿಯ ಬದುಕಿ ಉಳಿಯುವ ಹೋರಾಟದ ಸಿನಿಮಾವನ್ನು ಮನೋಜ್ ಬಾಜಪೇಯಿ ತನ್ನ ರಟ್ಟೆಯಲ್ಲಿ (ಜೋರಾಮ್ ಎಂಬ ಮಗುವನ್ನು ಹಿಡಿದುಕೊಂಡಂತೆ) ಇಟ್ಟುಕೊಂಡು ದಡ ಮಟ್ಟಿಸಿದ್ದಾರೆ. ಇವರು ನಟಿಸೋದನ್ನು ಮರೆತು ಪಾತ್ರದಲ್ಲಿಯೇ ಜೀವಿಸಿದ್ದಾರೆ.
ಸದ್ಯ ಭಾರತದಲ್ಲಿ ಬಾಯಿಮಾತಿನಲ್ಲಿಯೇ ಪ್ರಚಾರ ಪಡೆಯುತ್ತಿರುವ ಒಳ್ಳೆಯ ಕಥಾ ಹಂದರ ಹೊಂದಿರುವ ಜೋರಾಮ್ ಸಿನಿಮಾ ಬೆಂಗಳೂರಿನ ಕೆಲವು ಥಿಯೇಟರ್‌ಗಳಲ್ಲಿಯೂ ಪ್ರದರ್ಶನಗೊಳ್ಳುತ್ತಿದೆ. ಸಿನಿಪೊಲೀಸ್ ರಾಯಲ್ ಮೀನಾಕ್ಷಿ ಮಾಲ್, ಐನಾಕ್ಸ್ ಗರುಡಾ ಮಾಲ್, ಪಿವಿಆರ್ ನೆಕ್ಸಸ್, ಪಿವಿಆರ್ ವೆಗಾ ಸಿಟಿ ಮುಂತಾದ ಥಿಯೇಟರ್‌ಗಳಲ್ಲಿ ನೋಡಬಹುದು.
ವಿಮರ್ಶೆ: ಮೋನಿಕಾ ರಾವಲ್ ಕುಕ್ರೆಜಾ, ಹಿಂದೂಸ್ತಾನ್ ಟೈಮ್ಸ್