ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 26th March 2024 Episode Bhagya Knows The Truth Rsm

Bhagyalakshmi Serial: ತನ್ನನ್ನು ಕೆಣಕಿದ ತಾಂಡವ್‌, ಕನ್ನಿಕಾಗೆ ಸರಿಯಾದ ಉತ್ತರ ಕೊಡಲು ಮುಂದಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 25ರ ಸಂಚಿಕೆ. ಭಾಗ್ಯಾ, ತನ್ವಿ ಮೇಲೆ ಎಕ್ಸಾಂ ಹಾಲ್‌ನಲ್ಲಿ ಕಾಪಿ ಮಾಡಿರುವ ಆರೋಪ ಬಂದಿದೆ. ಇದೇ ನೆಪ ಬಳಸಿಕೊಂಡು ತಾಂಡವ್‌, ಭಾಗ್ಯಾ ಮೇಲೆ ಕಿಡಿ ಕಾರುತ್ತಿದ್ದಾನೆ. ಪದೇ ಪದೇ ನನ್ನನ್ನು ಹಂಗಿಸುವ ಗಂಡನಿಗೆ, ತೊಂದರೆ ಕೊಡುವ ಕನ್ನಿಕಾಗೆ ಭಾಗ್ಯಾ ಸರಿಯಾಗಿ ಬುದ್ಧಿ ಕಲಿಸಲು ಮುಂದಾಗಿದ್ದಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 26 ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 26 ಎಪಿಸೋಡ್‌ (PC: Colors Kannada)

Bhagyalakshmi Serial: ಶಾಲೆಯಲ್ಲಿ ಡೊನೇಷನ್‌ ಸೀಟ್‌ ಕಳೆದುಕೊಂಡು ಹಣ ಮಾಡಲಾಗಲಿಲ್ಲ ಎಂಬ ಕಾರಣಕ್ಕೆ ಕನ್ನಿಕಾ ಕಾಮತ್‌, ಮೊದಲ ದಿನದಿಂದಲೂ ಭಾಗ್ಯಾಗೆ ಸಮಸ್ಯೆ ಮಾಡುತ್ತಲೇ ಬಂದಿದ್ದಾಳೆ. ಮಹಿಳಾ ದಿನಾಚರಣೆಯಂದು ಭಾಗ್ಯಾ, ಕುಸುಮಾಗೆ ಅವಮಾನ ಮಾಡಲು ಹೋಗಿ ಕನ್ನಿಕಾಗೆ ಮುಖಭಂಗವಾಗಿತ್ತು. ಅದೇ ದ್ವೇಷದಿಂದ ಕನ್ನಿಕಾ ಭಾಗ್ಯಾಗೆ ಪರೀಕ್ಷೆ ಬರೆಯಲು ಕೂಡಾ ಅಡ್ಡಿಯಾಗುತ್ತಿದ್ದಾಳೆ.

ಭಾಗ್ಯಾ ಹಾಗೂ ತನ್ವಿ ಎಕ್ಸಾಂ ಬರೆಯುವ ಡೆಸ್ಕ್‌ ಮೇಲೆ ಗಣಿತದ ಲೆಕ್ಕ ಬರೆಯುವಂತೆ ಕನ್ನಿಕಾ, ಹಣ ಕೊಟ್ಟು ಅಟೆಂಡರ್‌ಗೆ ಹೇಳಿರುತ್ತಾಳೆ. ಅದರಂತೆ ಆತ ಹಣದ ಆಸೆಗೆ ಗಣಿತ ಲೆಕ್ಕ ಬರೆದಿರುತ್ತಾನೆ. ಆದರೆ ಇದ್ಯಾವುದೂ ಗೊತ್ತಿಲ್ಲದ ಭಾಗ್ಯಾ ಹಾಗೂ ತನ್ವಿ ಗೋಳಾಡುತ್ತಾರೆ. ಇಬ್ಬರನ್ನೂ ಎಕ್ಸಾಂ ಹಾಲ್‌ನಿಂದ ಹೊರಗೆ ಕಳಿಸಿದ್ದಾರೆ ಎಂದು ಗೊತ್ತಾದ ನಂತರ ತಾಂಡವ್‌ ಸ್ಕೂಲ್‌ ಬಳಿ ಬರುತ್ತಾನೆ. ತನ್ವಿಗೆ ಇಂದು ಈ ಸ್ಥಿತಿ ಬರಲು ನೀನೇ ಕಾರಣ. ನೀನು ಓದಬೇಕೆಂಬ ಕಾರಣಕ್ಕೆ, ತನ್ವಿಗಿಂತ ಹೆಚ್ಚು ಅಂಕ ತೆಗೆಯಬೇಕೆಂಬ ಕಾರಣಕ್ಕೆ ಈ ರೀತಿ ಕಾಪಿ ಮಾಡಿದ್ದೀಯ. ನೀನು ಮೊದಲಿನಿಂದಲೂ ಹೀಗೆ ಕಾಪಿ ಮಾಡಿಕೊಂಡೇ ಬಂದಿರಬೇಕು ಎಂದು ಹಂಗಿಸುತ್ತಾನೆ. ತಾಂಡವ್‌ ಮಾತುಗಳಿಂದ ತನ್ವಿ, ಭಾಗ್ಯಾ ಇಬ್ಬರೂ ಬೇಸರಗೊಳ್ಳುತ್ತಾರೆ.

ಪ್ರತಿ ತಪ್ಪಿಗೂ ಭಾಗ್ಯಾಳನ್ನೇ ದೂರುತ್ತಿರುವ ತಾಂಡವ್‌

ಭಾಗ್ಯಾ ಆ ರೀತಿ ನಾನೇ ಮೊದಲು ಬರಬೇಕು, ಮಗಳಿಗಿಂತ ಹೆಚ್ಚಿನ ಅಂಕ ತೆಗೆಯಬೇಕು ಎಂದುಕೊಂಡಿದ್ದರೆ ಆಕೆಯ ಡೆಸ್ಕ್‌ ಮೇಲೆ ಲೆಕ್ಕ ಇರಬೇಕಿತ್ತು. ಆದರೆ ತನ್ವಿ ಡೆಸ್ಕ್‌ ಮೇಲೆ ಕೂಡಾ ಏಕೆ ಲೆಕ್ಕ ಇರಬೇಕಿತ್ತು. ವಿನಾ ಕಾರಣ ಭಾಗ್ಯಾ ಮೇಲೆ ಅಪವಾದ ಹೊರಿಸಬೇಡ ಎಂದು ಕುಸುಮಾ, ಸೊಸೆ ಪರ ನಿಲ್ಲುತ್ತಾಳೆ. ಇದೆಲ್ಲಾ ಕನ್ನಿಕಾ ಮೇಡಂದೇ ಕೆಲಸ ಎಂದು ತನ್ವಿ ಹೇಳುತ್ತಾಳೆ. ಇದ್ದರೂ ಇರಬಹುದು ನೀನು ಬೀದಿಯಲ್ಲಿ ಎಲ್ಲರ ಜೊತೆ ಜಗಳ ಮಾಡಿದ ಕಾರಣ ಅವರು ಹೀಗೆ ಸಮಸ್ಯೆ ತಂದೊಡ್ಡುತ್ತಿದ್ದಾರೆ. ನಿನ್ನಿಂದ ನಿನ್ನ ಮಗಳ ಜೀವನ ಹಾಳಾಗುತ್ತಿದೆ. ನೀನು ಎಂಥಾ ತಾಯಿ ಎಂದು ತಾಂಡವ್‌ ಮತ್ತೆ ಮತ್ತೆ ಭಾಗ್ಯಾಳನ್ನು ದೂರುತ್ತಾನೆ. ತಾಂಡವ್‌ ಮಾತನ್ನು ಕೇಳಿದ ತನ್ವಿ ಕೂಡಾ, ಹೌದು ನಿನ್ನಿಂದ ನಾನೂ ಎಕ್ಸಾಂ ಬರೆಯದಂತೆ ಆಗಿದೆ ಎನ್ನುತ್ತಾಳೆ.

ಗಂಡನ ಅಪವಾದ, ಚುಚ್ಚು ಮಾತುಗಳನ್ನು ತಾಳದೆ ಭಾಗ್ಯಾ, ಹಾಲ್‌ ಟಿಕೆಟ್‌ ನಂಬರ್‌ ಬರೆದ ವ್ಯಕ್ತಿಯ ಬಳಿ ಹೋಗುತ್ತಾಳೆ. ನೀವೇ ತಾನೇ ಹಾಲ್‌ ಟಿಕೆಟ್‌ ನಂಬರ್‌ ಬರೆದದ್ದು ಡೆಸ್ಕ್‌ ಮೇಲೆ ಏನಾದರೂ ಇದ್ದರೆ ನೋಡಿಕೊಳ್ಳಬೇಕು ತಾನೇ? ನನಗೆ ಈಗ ಸತ್ಯ ತಿಳಿಯಬೇಕು ಎಂದು ಗದರುತ್ತಾಳೆ. ನೀವು ಮಾಡಿದ ತಪ್ಪಿಗೆ ನನ್ನನ್ನು ಏಕೆ ದೂರುತ್ತಿದ್ದೀರಿ ಎಂದು ಆ ವ್ಯಕ್ತಿ ಕೇಳುತ್ತಾನೆ. ಅಷ್ಟರಲ್ಲಿ ಆತನ ಮೊಬೈಲ್‌ಗೆ ಕನ್ನಿಕಾ ಕರೆ ಬರುತ್ತದೆ. ಅವನಿಂದ ಮೊಬೈಲ್‌ ಕಸಿದುಕೊಂಡ ಭಾಗ್ಯಾ ಫೋನ್‌ ರಿಸೀವ್‌ ಮಾಡುತ್ತಾಳೆ. ಆ ಕಡೆಯಿಂದ ಕನ್ನಿಕಾ, ಎಲ್ಲಾ ಕೆಲಸ ಆಯ್ತಾ ಎಂದು ಕೇಳುತ್ತಾಳೆ. ಇದು ಆಕೆಯದ್ದೇ ಕೆಲಸ ಎಂದು ಆಗ ಭಾಗ್ಯಾಗೆ ಅರ್ಥವಾಗುತ್ತದೆ. ಕೂಡಲೇ ಸ್ಕೂಲ್‌ ಸಿಬ್ಬಂದಿ ಆ ಮೊಬೈಲ್‌ ಕಸಿದುಕೊಂಡು ಅಲ್ಲಿಂದ ಓಡುತ್ತಾನೆ. ತನ್ನನ್ನು ಕೆಣಕಿದ ಕನ್ನಿಕಾ, ತಾಂಡವ್‌ಗೆ ಭಾಗ್ಯಾ ತಕ್ಕ ಉತ್ತರ ಕೊಡಲು ಸಿದ್ಧಳಾಗುತ್ತಾಳೆ.

ಕನ್ನಿಕಾ ಮಾಡುತ್ತಿರುವ ಕಿರಿಕ್‌ ಬಗ್ಗೆ ಭಾಗ್ಯಾ ಎಲ್ಲರಿಗೂ ತಿಳಿಸಿ ಎಕ್ಸಾಂ ಬರೆಯಲಿದ್ದಾಳಾ? ಈಗಲಾದರೂ ತಾಂಡವ್‌ ಗಪ್‌ ಚುಪ್‌ ಆಗುತ್ತಾನಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.